ವಸ್ತು ಪ್ರದರ್ಶನದಲ್ಲಿ ಗಣಿ – ಭೂ ವಿಜ್ಞಾನ ಇಲಾಖೆಯ ಆಕರ್ಷಣೆ
ಕೆ.ಪಿ.ಮದನ್
ಮೈಸೂರು: ಅಲ್ಲಿ ಪ್ರಾಚೀನ ಕಾಲದ ಶಿಲೆಗಳನ್ನು ಮುಟ್ಟಿ ನೋಡಬಹುದು! ಖನಿಜಗಳು ಮನುಷ್ಯನ ದಿನನಿತ್ಯದ ಜೀವನಕ್ಕೆ ಎಷ್ಟು ಮುಖ್ಯ? ಹಿಮಾಲಯದಲ್ಲಿ ಏಕೆ ಭೂಕಂಪಗಳು ಜಾಸ್ತಿಯಾಗುತ್ತವೆ ಎಂಬ ಪ್ರಶ್ನೆಗಳಿಗೆ ಉತ್ತರವೂ ಅಲ್ಲಿ ಲಭ್ಯ… ಹೀಗೆ ಹಲವು ಕುತೂಹಲಕಾರಿ ಅಂಶಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಾರ್ವಜನಿಕರಿಗೆ ಕಲ್ಪಿಸಿಕೊಟ್ಟಿದೆ.
ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಏರ್ಪಡಿಸಿರುವ ವಸ್ತು ಪ್ರದರ್ಶನದಲ್ಲಿ ಸರ್ಕಾರದ ಇಲಾಖೆಗಳು ತಮ್ಮ ಮಳಿಗೆಗಳನ್ನು ತೆರೆದು ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ ಮಾಹಿತಿಗಳನ್ನೂ ಒದಗಿಸುತ್ತಿವೆ.
ಇದೇ ರೀತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೂ ಮಳಿಗೆಯನ್ನು ತೆರೆದಿದೆ. ಇದು ಕೇವಲ ಮಳಿಗೆಯಲ್ಲ, ಜ್ಞಾನದ ಗಣಿಯೇ ಆಗಿದೆ. ಮಳಿಗೆಯ ಮುಂದೆ ನಿರ್ಮಿಸಿರುವ ಭೂಮಿಯ ಗೋಳಾಕಾರ ಮಾದರಿಯನ್ನು ಕತ್ತರಿಸಿ, ಅದರಲ್ಲಿ ಶಿಲಾ ಗೋಳ, ವಾಯು ಗೋಳ ಮತ್ತು ಜಲಗೋಳವನ್ನು ರಚನೆ ಮಾಡಲಾಗಿದೆ. ಭೂಮಿಯ ಸುರಕ್ಷತೆಗಾಗಿ ನಾವು ಏನು ಮಾಡಬೇಕು ಎಂಬ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಇನ್ನು ಮಳಿಗೆಯ ಒಳಭಾಗದಲ್ಲಿ ಅತೀ ಪ್ರಾಚೀನ ಶಿಲಾ ವಲಯಗಳು ಯಾವುವು ಎಂಬುದನ್ನೂ ಪ್ರದರ್ಶಿಸಲಾಗಿದೆ.
ಮೈಸೂರು ಜಿಲ್ಲೆಯ ಸರಗೂರಿನ ವಲಯವು ಮೂರುವರೆ ಸಾವಿರ ಮಿಲಿಯನ್ ವರ್ಷಗಳ ಹಿಂದಿನ ವಲಯವಾಗಿದೆ. ಇದರೊಂದಿಗೆ ಹಾಸನ ಜಿಲ್ಲೆಯ ಹೊಳೆನರಸೀಪುರ,ಬಳ್ಳಾರಿಯ ಸಂಡೂರು, ಮಂಡ್ಯದ ಕರಿಘಟ್ಟ ವಲಯಗಳ ಬಗ್ಗೆ ಜನರಿಗೆ ಅಪೂರ್ವ ಅನಿಸುವಂತಹ ವಿವರಗಳು ದೊರೆಯುತ್ತವೆ.
ಶಿಲೆಯ ಮಾದರಿಗಳು: ಭೂಮಿಯ ಒಡಲಿನಲ್ಲಿ ಹಲವಾರು ವಿಸ್ಮಯಗಳು ಅಡಗಿವೆ. ಇವುಗಳಲ್ಲಿ ಶಿಲೆಗಳು ಕೂಡ ಇವೆ. ಭೂಮಿಯ ಒಳಗೆ ಸಿಗುವ ಅಗ್ನಿಶಿಲೆ, ಜಲದ ಶಿಲೆ, ರೂಪಾಂತರಗೊಂಡ ಶಿಲೆ, ಜಲಜಾ ಶಿಲೆಗಳ ತುಣುಕುಗಳನ್ನು ಇಲ್ಲಿ ನೋಡ ಬಹುದಾಗಿದೆ. ಇದಲ್ಲದೇ ಚಿನ್ನ, ಕಬ್ಬಿಣ, ತಾಮ್ರ ಮುಂತಾದ ಖನಿಜಗಳು ಮೂಲದಲ್ಲಿ ಹೇಗೆ ಇರುತ್ತವೆ ಎನ್ನುವುದನ್ನು ಕೂಡ ಪ್ರದರ್ಶನದಲ್ಲಿ ಕಾಣಬಹುದಾಗಿದೆ.
ಆಳದ ಗಣಿಕಾರಿಕೆ: ರಾಜ್ಯದಲ್ಲಿ ಚಿನ್ನದ ಗಣಿ ಎಂದರೆ ಜ್ಞಾಪಕಕ್ಕೆ ಬರುವುದು ಕೋಲಾರ ಹಾಗೂ ಹಟ್ಟಿ. ಇವು ಆಳದ ಗಣಿಗಾರಿಕೆಗೆ ಹೆಸರುವಾಸಿಯಾಗಿದ್ದು, ಕಣ್ಮುಂದೆ ಪ್ರತ್ಯಕ್ಷ ಸಾಕ್ಷಿಯಾಗಿವೆ. ಆದರೆ, ನಮ್ಮ ರಾಜ್ಯದಲ್ಲಿ ಕ್ರಿಸ್ತ ಪೂರ್ವದಲ್ಲೇ ಆಳದ ಗಣಿಗಾರಿಕೆ ನಡೆಯು ತ್ತಿತ್ತು ಎನ್ನುವುದನ್ನು ಈ ಮಳಿಗೆಯಲ್ಲಿ ಆಧಾರ ಸಹಿತ ನೋಡಬಹುದು. ಅಲ್ಲದೆ, ಚಿನ್ನದ ಗಣಿ ಹೇಗಿರುತ್ತದೆ ಎಂಬ ಸಹಜ ಕುತೂಹಲವನ್ನು ತಣಿಸಲು ಇಲ್ಲಿ ಗಣಿಗಾರಿಕೆಯ ಮಾದರಿಯನ್ನು ನಿರ್ಮಿಸಲಾಗಿದೆ. ಇದರೊಳಗೆ ಪ್ರವೇಶಿಸಿದರೆ ಗಣಿಗಾರಿಕೆಯ ಕಾರ್ಯಾಚರಣೆ ವಿಧಾನಗಳನ್ನು ಖುದ್ದಾಗಿ ನೋಡಿದ ಅನುಭವ ಉಂಟಾಗುತ್ತದೆ.
ಭೂ ಕಂಪನ ಪ್ರದೇಶ: ಭಾರತ ಉಪಖಂಡ ಹಾಗೂ ಟಿಬೆಟಿಯನ್ ಉಪಖಂಡಗಳು ಒಂದಕ್ಕೊಂದು ತಿಕ್ಕಾಟ ನಡೆಸಿದ ಹಿನ್ನೆಲೆಯಲ್ಲಿ ಹಿಮಾಲಯ ಪರ್ವತ ಶ್ರೇಣಿಗಳು ಉದ್ಭವಿಸಿವೆ. ಹೀಗಾಗಿ ಹಿಮಾ ಲಯದ ಪ್ರದೇಶದಲ್ಲಿ ಜಲಜಾ ಶಿಲೆಗಳು ಇರುವುದರಿಂದ ಆಗಾಗ್ಗೆ ಭೂಕಂಪನ ಸಂಭವಿಸುತ್ತಿರುತ್ತದೆ. ಇದನ್ನು ಮಾದರಿಯ ರೂಪದಲ್ಲಿ ನಿರ್ಮಿಸಿ ಇಡಲಾಗಿದೆ. ಇದರೊಂದಿಗೆ ಭೂಕಂಪನವನ್ನು ಅಳೆಯುವ ಮಾಪನವಾದ ಸಿಸ್ಮೋ ಗ್ರಾಫ್ ಯಂತ್ರವನ್ನೂ ಇಲ್ಲಿ ವೀಕ್ಷಿಸಬಹುದು. ಮಳಿಗೆಯಲ್ಲಿ ಕೇವಲ ಭೂಮಿಯ ಬಗ್ಗೆ ಅಲ್ಲದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.
” ಇಲ್ಲಿಗೆ ಬಂದು ನೋಡುವ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮಕ್ಕೆ ಅನುಕೂಲವಾಗುತ್ತದೆ. ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಖನಿಜಗಳ ಮಹತ್ವ, ಅವುಗಳ ಅವಶ್ಯಕತೆಯನ್ನು ವಸ್ತು ಪ್ರದರ್ಶನ ಆವರಣದ ಮಳಿಗೆಯಲ್ಲಿ ಅನಾವರಣ ಮಾಡಲಾಗಿದೆ.”
-ಡಾ.ಲಕ್ಷ್ಮಮ್ಮ, ಜಂಟಿ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮೈಸೂರು





