Mysore
28
haze

Social Media

ಬುಧವಾರ, 31 ಡಿಸೆಂಬರ್ 2025
Light
Dark

ಇಂದು ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ, ಧಾರ್ಮಿಕ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾರ್ಚ್ ೨೪ರಂದು ಸೋಮವಾರ ಗೋಪಾಲಸ್ವಾಮಿಯ ಕಲ್ಯಾಣೋತ್ಸವ ಮತ್ತು ಮಂಗಳ ವಾರ ಗೋಪಾಲಸ್ವಾಮಿಯ ದಿವ್ಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ.

ರಥೋತ್ಸವಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಹಿಮವದ್ ಗೋಪಾಸ್ವಾಮಿ ಬೆಟ್ಟ ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಸ್ಥಾನ ಹೊಂದಿದೆ. ಸುಮಾರು ೧,೪೫೦ ಅಡಿಗಳಷ್ಟು ಎತ್ತರವಿದೆ.  ಬೆಟ್ಟ ಎತ್ತರದ ವಿಶಾಲ ಪ್ರದೇಶವನ್ನು ಹೊಂದಿ ತಂಗಾಳಿಯೊಂದಿಗೆ ಮುಂಜಾನೆ ಹಾಗೂ ಸಂಜೆ ಸದಾ ಹಿಮದಿಂದ ಆವೃತವಾಗುವುದರಿಂದ ಮತ್ತು ಗೋಪಾಲಸ್ವಾಮಿ ಇಲ್ಲಿ ನೆಲೆ ನಿಂತಿದ್ದರಿಂದ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.

ಹಿಮವದ್ ಗೋಪಾಲಸ್ವಾಮಿ ದೇಗುಲಕ್ಕೆ ಏಳು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ಇತಿಹಾಸದ ಪ್ರಕಾರ ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದ, ಬಳಿಕ ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿ ಗೊಳಿಸಲಾಯಿತು ಎನ್ನಲಾಗಿದೆ.

ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳನ್ನು ಕಾಣಬಹುದು. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದು ಹೇಳ ಲಾಗುತ್ತದೆ.

ಈ ಬೆಟ್ಟವನ್ನು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳು ಸುತ್ತುವರಿದಿವೆ.

ವಿಶೇಷ ಬಸ್ ಸೌಲಭ್ಯ: ಹಿವಮದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರತಿನಿತ್ಯ ಬಸ್ ವ್ಯವಸ್ಥೆ ಇದೆ. ಆದರೆ ಬ್ರಹ್ಮ ರಥೊತ್ಸವದ ದಿನ ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ಚೆಕ್‌ಪೋಸ್ಟ್ ಬಳಿ ಇರುವ ಅರಣ್ಯ ಇಲಾಖೆ ಆವರಣದಲ್ಲಿ ಪಾರ್ಕಿಂಗ್ ಮಾಡಿ ಬೆಟ್ಟಕ್ಕೆ ಕೆಎಸ್‌ಆರ್ಟಿಸಿ ಬಸ್‌ಗಳ ಮೂಲಕ ದೇವಸ್ಥಾನಕ್ಕೆ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ.

” ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಜಾತ್ರೆಯ ರಥೋತ್ಸವ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇವೆ. ಪ್ರತಿ ವಾರ ಹಿಮವದ್ ಗೋಪಾಲಸ್ವಾಮಿ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ.”

-ಮಂಜುನಾಥ್ ಮತ್ತು ರಾಧಾ ಮಂಜುನಾಥ್, ಬಾಚಹಳ್ಳಿ ಗ್ರಾಮ

Tags:
error: Content is protected !!