Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸಾರ್ವಜನಿಕ ಶೌಚಾಲಯ ‘ಎರಡೂ’ ಬಂದ್!

ಚಾ.ನಗರದ ತರಕಾರಿ ಮಾರುಕಟ್ಟೆ, ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಮುಚ್ಚಿದ ಶೌಚಾಲಯಗಳು; ಜನರಿಗೆ ಸಮಸ್ಯೆ

ಚಾಮರಾಜನಗರ: ನಗರದಲ್ಲಿನ ಎರಡು ಸಾರ್ವಜನಿಕ ಶೌಚಾಲಯಗಳು ಏಕಾಏಕಿ ಬಂದ್ ಆಗಿವೆ. ಜನನಿಬಿಡ ಸ್ಥಳದಲ್ಲಿನ ಇವು ಬಂದ್ ಆಗಿರುವುದು ಸಾರ್ವಜನಿಕರಿಗೆ ಅದರಲ್ಲೂ ಮಹಿಳೆಯರಿಗೆ ತುಂಬಾ ತೊಂದರೆ ಉಂಟು ಮಾಡಿದೆ.

ಇಲ್ಲಿನ ತರಕಾರಿ ಮಾರುಕಟ್ಟೆ ಬಳಿಯಲ್ಲಿರುವ ಮತ್ತು ಹಳೇ ಖಾಸಗಿ ಬಸ್ ನಿಲ್ದಾಣದ ಸನಿಹ ದಲ್ಲಿನ ಈ ಸಾರ್ವಜನಿಕ ಶೌಚಾಲಯಗಳು ಇತ್ತೀಚೆಗೆ ಬಾಗಿಲು ಮುಚ್ಚಿವೆ. ಹತ್ತಿರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯಗಳು ಇಲ್ಲದೇ ಇರುವ ಕಾರಣ ತರಕಾರಿ ಮಾರುಕಟ್ಟೆ ವ್ಯಾಪಾರಿಗಳು, ಗ್ರಾಹಕರು, ಆಟೋ, ಕಾರು ಚಾಲಕರು, ತಳ್ಳುಗಾಡಿ, ಬೀದಿ ಬದಿ ವ್ಯಾಪಾರಿಗಳು ಹೀಗೆ ಎಲ್ಲರೂ ಪ್ರಕೃತಿ ಕರೆ-ದೇಹಬಾಧೆ ತೀರಿಸಬೇಕೆಂದರೆ ಹತ್ತಿರದಲ್ಲಿ ಗಲ್ಲಿ ಅಥವಾ ಯಾವುದಾದರೂ ಮರೆಯಾದ ಸ್ಥಳಗಳು ಇವೆಯೇ ಎಂದು ಹುಡುಕಾಡುವ ಸ್ಥಿತಿ ಎದುರಾಗಿದೆ!

ಮಹಿಳೆಯರಂತೂ ಚಾಮರಾಜನಗರ ಆಡಳಿತ ವ್ಯವಸ್ಥೆ ಬಗ್ಗೆ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಬಂದ್ ಆಗಿರುವ ಎರಡೂ ಸಾರ್ವಜನಿಕ ಶೌಚಾಲಯಗಳಲ್ಲಿಯೂ ಮೂತ್ರ ವಿಸರ್ಜನೆಗೆ ಯಾವುದೇ ಶುಲ್ಕ ಇರಲಿಲ್ಲ. ಮಲ ವಿಸರ್ಜನೆಗೆ ೫ ರೂ.ಶುಲ್ಕ ನಿಗದಿಪಡಿಸಲಾಗಿತ್ತು. ಅದರಲ್ಲೂ ಹಳೇ ಖಾಸಗಿ ಬಸ್ ನಿಲ್ದಾಣದ ಶೌಚಗೃಹವನ್ನು ನೂರಾರು ಜನ ವ್ಯಾಪಾರಿಗಳು ಅವಲಂಬಿಸಿದ್ದರು. ಟೆಂಡರ್ ಪಡೆದವರು ನಗರಸಭೆಗೆ ಹಣ ಕಟ್ಟದಿರುವುದು ಈ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ನಗರದಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆಯೇ ಬೆರಳೆಣಿಕೆಯಷ್ಟು. ಅವನ್ನೂ ಸರಿಯಾಗಿ ನಿರ್ವಹಣೆ ಮಾಡದೆ ಹೀಗೆಯೇ ಒಂದೊಂದಾಗಿ ವಿವಿಧ ಕಾರಣ ನೀಡಿ ಮುಚ್ಚುತ್ತಿರುವುದು ಹೇಸಿಗೆಯ ವಿಚಾರ.

ಇದನ್ನು ಓದಿ: 30 ಹಾಡಿಗಳಿಗೂ ಅರಣ್ಯ ಹಕ್ಕು ಪತ್ರಗಳನ್ನು ನೀಡಲು ಆಗ್ರಹ

ಜಲ-ಮಲ ಬಾಧೆಗೂ ನಗರದಲ್ಲಿ ತೊಂದರೆ ಎದುರಾಗಿದೆ ಎಂದರೆ ಆಡಳಿತ ನಡೆಸುವ ಅಽಕಾರಿಗಳು ಮತ್ತು ಚುನಾಯಿತರ ಸಹಿತ ಎಲ್ಲರಿಗೂ ಗೌರವ ತರುವ ವಿಚಾರ ಖಂಡಿತಾ ಅಲ್ಲ. ಈಗಾಗಲೇ ನಗರಸಭೆಯ ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯ ಬಂದ್ ಆಗಿದ್ದು ಈ ಯಾದಿಗೆ ಈಗ ಇನ್ನೆರಡು ಸೇರಿರುವುದು ತಲೆತಗ್ಗಿಸುವ ವಿಚಾರ ಎಂದು ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

” ಈಗ ಮುಚ್ಚಲ್ಪಟ್ಟಿರುವ ಎರಡೂ ಸಾರ್ವಜನಿಕ ಶೌಚಾಲಯಗಳು ಮತ್ತು ನಗರಸಭೆಯ ಬಸ್ ನಿಲ್ದಾಣದಲ್ಲಿ ಈ ಹಿಂದೆಯೇ ಬಂದ್ ಆಗಿರುವಂತಹ ಶೌಚಾಲಯದ ಟೆಂಡರ್ ಅನ್ನು ಒಬ್ಬರೇ ಪಡೆದಿದ್ದು ಅವರು ಲಕ್ಷಾಂತರ ರೂ.ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ಇವುಗಳ ನಿರ್ವಹಣೆಯನ್ನು ತಾತ್ಕಾಲಿಕವಾಗಿ ಬೇರೆಯವರಿಗೆ ವಹಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.ಈ ನಿಟ್ಟಿನಲ್ಲಿ ನಗರಸಭೆ ಆಡಳಿತ ಇನ್ನೂ ಯಾಕೆ ಮೌನ ವಹಿಸಿದೆ ಎಂಬುದು ಅರ್ಥವಾಗುತ್ತಿಲ್ಲ.”

-ಸಿ.ಜಿ.ಚಂದ್ರಶೇಖರ್, ನಗರಸಭೆ ಮಾಜಿ ಸದಸ್ಯರು

” ಟೆಂಡರ್‌ದಾರರು ಒಪ್ಪಂದದ ಪ್ರಕಾರ ಹಣ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಕಾರಣ ಅವರ ೧೧ ಲಕ್ಷ ರೂ. ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹೊಸದಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಅಲ್ಲಿಯವರೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿ ಮುಚ್ಚಿರುವ ಎರಡೂ ಶೌಚಾಲಯಗಳ ಬಾಗಿಲು ತೆರೆಸಲು ಕ್ರಮ ವಹಿಸಲಾಗುವುದು.”

-ಪ್ರಕಾಶ್, ನಗರಸಭೆ ಆಯುಕ್ತರು, ಚಾಮರಾಜನಗರ

Tags:
error: Content is protected !!