Mysore
18
scattered clouds

Social Media

ಸೋಮವಾರ, 12 ಜನವರಿ 2026
Light
Dark

ಬಿಎಂಸಿಸಿ ರಚನೆ: ಅಭಿವೃದ್ಧಿಗೆ ಹಸಿರು ನಿಶಾನೆ

ಕೆ.ಬಿ.ರಮೇಶನಾಯಕ

ಮೈಸೂರು: ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ನಡೆಸಿದ ದೀರ್ಘಾವಧಿ ಆಡಳಿತವನ್ನು ಹಿಂದಿಕ್ಕಿ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಶಕಗಳ ಕನಸನ್ನು ನನಸು ಮಾಡುವ ಮೂಲಕ ತವರು ಜಿಲ್ಲೆಗೆ ಬೃಹತ್ ಮೈಸೂರು ನಗರಪಾಲಿಕೆ (ಬಿಎಂಸಿಸಿ) ರಚನೆ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ.

ಬಿಎಂಸಿಸಿ ಕಾರಣದಿಂದ ಸಾಂಸ್ಕೃತಿಕ ನಗರಿ ಮೈಸೂರಿನ ಬದಲಾವಣೆಯ ಬಾಗಿಲು ತೆರೆದಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸ್ಥಾಪಿತವಾದ ಪ್ರಜಾಪ್ರತಿನಿಧಿ ವ್ಯವಸ್ಥೆ ಬದಲಾದ ಕಾಲಕ್ಕೆ ತಕ್ಕಂತೆ ಹೊಸ ರೂಪ ಪಡೆದುಕೊಂಡು ಈಗ ಬೆಂಗಳೂರು ನಂತರ ಮೈಸೂರು ಎರಡನೇ ಬೃಹತ್ ನಗರಪಾಲಿಕೆಯಾಗಿದೆ.

ಬೃಹತ್ ನಗರಪಾಲಿಕೆ ಅನುಷ್ಠಾನ ಹಿನ್ನೆಲೆಯಲ್ಲಿ ಮೈಸೂರಿನ ಹೊರವಲಯದ ಗ್ರಾಮಗಳು, ಬಡಾವಣೆಗಳಲ್ಲೂ ಅಭಿವೃದ್ಧಿ ಪರ್ವದ ಲಕ್ಷಣಗಳು ಗೋಚರಿಸಿವೆ. ನಗರಪಾಲಿಕೆಯ ಇತಿಹಾಸದಲ್ಲೇ ದೊಡ್ಡ ಮೈಲಿಗಲ್ಲಾಗಿದೆ.

ಇದೇ ವಿಚಾರವು ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ಪಕ್ಷ ಅಽಕಾರದ ಗದ್ದಿಗೆ ಹಿಡಿಯಲು ಸಹಕಾರಿ ಆಗಬಹುದು. ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ವರ್ಷದಿಂದ ವರ್ಷಕ್ಕೆ ತನ್ನ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಸಾವಿರಾರು ಖಾಸಗಿ ಬಡಾವಣೆಗಳು ರಚನೆಯಾಗಿದ್ದು, ಪಾಲಿಕೆ ವ್ಯಾಪ್ತಿಗೆ ಸೇರಿಸಬೇಕೆಂಬ ಒತ್ತಡ ಇತ್ತು. ಹೀಗಾಗಿ ಗ್ರೇಟರ್ ಮೈಸೂರು ಅಥವಾ ಗ್ರೇಡ್-೧ ಮೈಸೂರು ರಚನೆ ಮಾಡುವ ಕುರಿತು ಸಿದ್ದರಾಮಯ್ಯ ಅವರೇ ಮೈಸೂರಿನಲ್ಲಿ ಸಭೆ ನಡೆಸಿದ್ದರಿಂದ ಗ್ರೇಡ್-೧ ಮೈಸೂರು ರಚನೆಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈಗ ಸದ್ದಿಲ್ಲದೆ ಬಿಎಂಸಿಸಿ ರಚನೆಗೆ ಅಧಿಸೂಚನೆ ಹೊರಡಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಮೈಸೂರಿಗರಿಗೆ ಔತಣವನ್ನೇ ಉಣಬಡಿಸಿದ್ದಾರೆ.

ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ: ರಾಜ್ಯ ನಗರಾಭಿವೃದ್ಧಿ ಇಲಾಖೆಯು ಮತ್ತೊಂದು ರಾಜ್ಯಪತ್ರ ದಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಬೃಹತ್ ಮೈಸೂರು ನಗರಪಾಲಿಕೆಯು ಯಾವ ರೀತಿ ಕಾರ್ಯ ನಿರ್ವಹಿಸಲಿದೆ ಎನ್ನುವುದು ಪ್ರಕಟಿಸುತ್ತದೆ. ಮಹಾಪೌರರ ಹುದ್ದೆ ಇಲ್ಲದಿದ್ದಾಗ ಪ್ರಾದೇಶಿಕ ಆಯುಕ್ತರು ಆಡಳಿತಾಧಿಕಾರಿಯಾಗಿರುತ್ತಾರೆ. ಆದರೆ, ಬಿಎಂಸಿಸಿ ರಚನೆಯಾದ ಮೇಲೆ ಆರ್‌ಸಿ ಬದಲಿಗೆ ಹಿರಿಯ ಐಎಎಸ್ ಅಧಿಕಾರಿ ನೇಮಕಕ್ಕೆ ಅವಕಾಶ ಮಾಡಿಕೊಡುವುದೇ ಅಥವಾ ಅವರನ್ನೇ ಪ್ರಭಾರ ಹುದ್ದೆಯಲ್ಲಿ ಮುಂದುವರಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಅದೇ ರೀತಿ ಆಯುಕ್ತರು,ಉಪ ಆಯುಕ್ತರು,ಅಧೀಕ್ಷಕ ಅಭಿಯಂತರರ ಹುದ್ದೆಗಳ ಗ್ರೇಡ್ ಕೂಡ ಬದಲಾದರೆ, ವಲಯ ಕಚೇರಿಗಳಲ್ಲಿರುವ ಸಹಾಯಕ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳ ನೇಮಕದಲ್ಲೂ ಸ್ವಲ್ಪ ಬದಲಾವಣೆ ಮಾಡಬಹುದು.

ಒಂದು ನಗರಸಭೆ, ಕೆಲ ಪಟ್ಟಣ ಪಂಚಾಯಿತಿಗಳು ಪಾಲಿಕೆಗೆ ಸೇರ್ಪಡೆಗೊಳ್ಳುತ್ತವೆ. ಅದರಿಂದ ವಲಯ ಕಚೇರಿಗಳನ್ನು ವಿಸ್ತರಿಸುವುದು ಅನಿವಾರ್ಯ. ಇದೇ ಅಧಿಕಾರಿಗಳನ್ನು ವಲಯ ಕಚೇರಿಗಳಲ್ಲಿ ಮುಂದುವರಿಸುವ ಅವಕಾಶ ಇದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರನ್ನು ಮಾತೃಸಂಸ್ಥೆಗೆ ಕಳುಹಿಸಿ ನಗರಾಭಿವೃದ್ಧಿ ಮತ್ತು ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಬಹುದಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಹಳ್ಳಿಗಳಿಗೆ ಅಭಿವೃದ್ಧಿಯ ದೆಸೆ: ನಗರದ ಕೂಗಳತೆ ಪ್ರದೇಶದಲ್ಲಿದ್ದರೂ ಅಭಿವೃದ್ಧಿ ಕಾಣದೆ, ಮೂಲ ಸೌಕರ್ಯದ ಕೊರತೆ ಎದುರಿಸುತ್ತಿದ್ದ ಬಡಾವಣೆಗಳು, ಹಳ್ಳಿಗಳಿಗೆ ಅಭಿವೃದ್ಧಿಯ ಮಹಾಪೂರವೇ ಹರಿದುಬರಲಿದೆ. ಲಲಿತಾದ್ರಿಪುರ, ಸಿದ್ಧಲಿಂಗಪುರ, ರಮಾಬಾಯಿನಗರ, ಗೊರೂರು, ಮುನಿಸ್ವಾಮಿನಗರ, ಕಡಕೊಳ, ಶ್ರೀರಾಂಪುರ… ಹೀಗೆ ಹತ್ತಾರು ಹಳ್ಳಿಗಳು, ಬಡಾವಣೆಗಳಿಗೆ ನಗರಪಾಲಿಕೆ ವತಿಯಿಂದ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿಪಡಿಸುವುದಕ್ಕೆ ಅವಕಾಶ ದೊರೆತಿದೆ.

ಈಗಾಗಲೇ ಕುಡಿಯುವ ನೀರು, ಸ್ವಚ್ಛತೆ ಹೊಣೆ ಹೊತ್ತಿದ್ದ ಪಾಲಿಕೆಯು ಮುಂದೆ ರಸ್ತೆ, ಯುಜಿಡಿ ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಇದರಿಂದಾಗಿ ಮೂಲ ಸೌಕರ್ಯ ಇಲ್ಲದೆ ಪರಿತಪಿಸುತ್ತಿದ್ದ ಬಡಾವಣೆಗಳಿಗೂ ಅನುಕೂಲವಾಗಿದೆ.

ಆಕಾಂಕ್ಷಿಗಳಿಗೆ ನಿರಾಸೆ: ಕಳೆದ ಎರಡು ವರ್ಷಗಳಿಂದ ಚುನಾವಣೆ ನಡೆಯುವ ನಿರೀಕ್ಷೆಯಲ್ಲಿದ್ದ ಕೆಲ ನಗರಪಾಲಿಕೆ ಮಾಜಿ ಸದಸ್ಯರಿಗೆ ನಿರಾಸೆಯಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜಾತ್ಯತೀತ ಜನತಾದಳದ ಮಾಜಿ ಪಾಲಿಕೆ ಸದಸ್ಯರು ಬಿಎಂಸಿಸಿ ರಚನೆ ಮಾಡದೆ ಚುನಾವಣೆ ನಡೆಸಬಹುದೆಂದು ಭಾವಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಸಭೆ ನಡೆಸಿದ ಒಂದು ತಿಂಗಳಲ್ಲೇ ಬಿಎಂಸಿಸಿ ರಚನೆ ಕುರಿತು ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸುವ ಮೂಲಕ ಎಲ್ಲ ಗೊಂದಲ, ಜಿಜ್ಞಾಸೆಗಳಿಗೂ ತೆರೆ ಎಳೆಯಲಾಗಿದೆ.

ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ೩೦ ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದು, ಇದನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಕಡಿಮೆ. ಹೀಗಾಗಿ, ಫೆಬ್ರವರಿ ತಿಂಗಳಲ್ಲಿ ನಗರಾಭಿವೃದ್ಧಿ ಇಲಾಖೆಯು ಮತ್ತೊಂದು ರಾಜ್ಯಪತ್ರ ಹೊರಡಿಸಿದ ಬಳಿಕ ಇಡೀ ಆಡಳಿತದ ಸ್ವರೂಪ ಬದಲಾಗಲಿದೆ.

ಮುಂದಿನ ದಿನಗಳಲ್ಲಿ ವಾರ್ಡು ರಚನೆ, ಮೀಸಲಾತಿ ನಿಗದಿ, ಆಕ್ಷೇಪಣೆಗೆ ಸಮಯಾವಕಾಶ ಹೀಗೆ ಹತ್ತಾರು ಪ್ರಕ್ರಿಯೆಗಳು ನಡೆಯಬೇಕಿರುವ ಕಾರಣ ಸದ್ಯಕ್ಕಂತೂ ಚುನಾವಣೆ ನಡೆಯುವುದು ಅನುಮಾನ.

Tags:
error: Content is protected !!