Mysore
28
few clouds

Social Media

ಶನಿವಾರ, 10 ಜನವರಿ 2026
Light
Dark

ಚುನಾವಣಾ ರಾಜಕೀಯ ಬಿಟ್ಟ ಬಿಜೆಪಿ ಕಟ್ಟಾಳು!

ಕೆ.ಬಿ.ರಮೇಶನಾಯಕ

ಮೈಸೂರು: ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ -ಜನತಾ ಪರಿವಾರದ ಭದ್ರಕೋಟೆಯ ನಡುವೆಯೂ ಕೃಷ್ಣರಾಜ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನ್ನುವಂತೆ ಮಾಡಿದ್ದ ಮಾಜಿ ಸಚಿವ, ಬಿಜೆಪಿಯ ಕಟ್ಟಾಳು ಎಸ್.ಎ.ರಾಮದಾಸ್ ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದು, ಹೊಸ ವರ್ಷಕ್ಕೆ ಕಾಲಿಟ್ಟ ಹೊತ್ತಲ್ಲೇ ಬಿಜೆಪಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಮೌನಕ್ಕೆ ಶರಣಾಗಿದ್ದ ರಾಮದಾಸ್ ದಿಢೀರನೇ ಇಂತಹ ನಿರ್ಧಾರದ ಮಾತುಗಳನ್ನು ಹೊರಹಾಕಿರುವುದು ಬಿಜೆಪಿ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡು ಮಾಡಿದೆ. ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದರೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದ ಮಾಜಿ ಸಚಿವರನ್ನು ಪಕ್ಷದ ಹಿರಿಯ ನಾಯಕರು ಸರಿಯಾಗಿ ನಡೆಸಿಕೊಳ್ಳಲು ಮುಂದಾಗದೇ ಇರುವುದಕ್ಕೆ ಬೇಸರಗೊಂಡು ಈ ತೀರ್ಮಾನ ಮಾಡಿದರೇ ಎನ್ನುವ ಅನುಮಾನ ಉಂಟಾಗಿದೆ.

ರಾಮದಾಸ್ ಬಿಜೆಪಿಯ ಕಟ್ಟಾಳು. ಜನಸಂಘದ ಕಾಲದಿಂದಲೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರಾಗಿರುವ ರಾಮದಾಸ್, ಜನತಾದಳ, ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಕಾಲಘಟ್ಟ ೧೯೯೪ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಅನಂತಕುಮಾರ್, ಬಿ.ಬಿ.ಶಿವಪ್ಪ, ಬಿ.ಎಸ್.ಯಡಿಯೂರಪ್ಪ, ಎಂ.ಆರ್.ತಂಗಾ, ರಾಮಚಂದ್ರೇಗೌಡ, ಡಿ.ಎಚ್.ಶಂಕರಮೂರ್ತಿ ಅವರಂತಹ ನಾಯಕರ ಸಂಪರ್ಕ ಹೊಂದಿದ್ದರಿಂದ ಮೈಸೂರು ಭಾಗದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದರು. ಎಚ್.ಎಸ್. ಶಂಕರಲಿಂಗೇಗೌಡ ಅವರ ಜತೆಜತೆಗೆ ಬಿಜೆಪಿಯ ಶಾಸಕರಾಗಿ ಕೆಲಸ ಮಾಡುತ್ತಾ, ಪಕ್ಷ ಸಂಘಟನೆಯನ್ನೂ ಮಾಡಿದರು.

ಕೃಷ್ಣರಾಜ ಕ್ಷೇತ್ರದಿಂದ ೧೯೯೪ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ರಾಮದಾಸ್, ೧೯೯೯ರಲ್ಲಿ ಎರಡನೇ ಬಾರಿಗೆ ಗೆದ್ದಿದ್ದರು. ೨೦೦೪ರಲ್ಲಿ ಎಂ.ಕೆ.ಸೋಮಶೇಖರ್ ವಿರುದ್ಧ ಸೋಲು ಕಂಡಿದ್ದರು. ೨೦೦೮ರಲ್ಲಿ ಮತ್ತೆ ಆಯ್ಕೆಯಾದ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಕೊಡದೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.

ಆದರೆ, ಅಧಿಕಾರ ವಹಿಸಿಕೊಳ್ಳದೆ ದೂರ ಉಳಿದಿದ್ದರು. ನಂತರ ಡಿ.ವಿ.ಸದಾನಂದಗೌಡ ಅವರ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ೨೦೧೩ರಲ್ಲಿ ಎಂ.ಕೆ.ಸೋಮಶೇಖರ್ ವಿರುದ್ಧ ಮತ್ತೆ ಸೋಲು ಕಂಡ ರಾಮದಾಸ್, ೨೦೧೮ರಲ್ಲಿ ಪುಟಿದೆದ್ದು ಗೆಲುವು ಸಾಧಿಸಿದ್ದರು.

೨೦೧೯ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರೂ ರಾಮದಾಸ್‌ಗೆ ಮಂತ್ರಿ ಸ್ಥಾನ ದೊರೆಯಲಿಲ್ಲ. ಜಿಲ್ಲೆಗೆ ಪ್ರಾತಿನಿಧ್ಯ ಸಿಗದ ಕಾರಣ ವಿ.ಸೋಮಣ್ಣ ಹಾಗೂ ಎಸ್.ಟಿ.ಸೋಮಶೇಖರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಕೆಲಸ ಮಾಡಿದ್ದರು. ನಂತರದ ದಿನಗಳಲ್ಲಿ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ರಾಮದಾಸ್, ಹೀಗಿದ್ದರೂ, ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಯತ್ನಿಸಿದ್ದ ರಾಮದಾಸ್ ಈಗ ಚುನಾವಣಾ ರಾಜಕೀಯದಿಂದ ದೂರ ಉಳಿಯುವಂತಹ ನಿರ್ಧಾರ ಮಾಡಿರುವುದು ಅಚ್ಚರಿ ಮೂಡಿಸಿದೆ.

ರಾಮದಾಸ್ ಕೈಗೊಂಡ ನಿರ್ಧಾರ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಯಾವುದೇ ಹುದ್ದೆಗಳನ್ನು ನೀಡಿರಲಿಲ್ಲ. ಸ್ಥಳೀಯವಾಗಿಯೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ಪ್ರಯತ್ನ ನಡೆದಿರಲಿಲ್ಲ. ಹೀಗಾಗಿಯೇ, ಬಿಜೆಪಿಯಲ್ಲಿ ಇದ್ದರೂ ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಹೆಜ್ಜೆ ಇಟ್ಟಿರುವುದಂತೂ ಬಿಜೆಪಿ ಪಾಲಿಗೆ ದೊಡ್ಡ ನಷ್ಟವಾಗುವುದು ಗ್ಯಾರಂಟಿ.

ಕೊನೆ ಕ್ಷಣದಲ್ಲಿ ಕೈ ತಪ್ಪಿದ ಟಿಕೆಟ್:  ೨೦೨೩ರ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಕೊನೆಯ ಕ್ಷಣದ ತನಕ ಪೈಪೋಟಿ ನೀಡಿದ್ದರೂ ಅಂತಿಮವಾಗಿ ಟಿ.ಎಸ್. ಶ್ರೀವತ್ಸ ಪಾಲಾಯಿತು. ಹೀಗಾಗಿ, ತಟಸ್ಥವಾಗಿ ಉಳಿದಿದ್ದ ರಾಮದಾಸ್ ಅವರನ್ನು ಮನವೊಲಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಬೆಂಬಲಿಗರ ಪಾಳೆಯದಲ್ಲಿ ಆತಂಕ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಎಸ್.ಎ.ರಾಮದಾಸ್ ನಿರ್ಧಾರ ಬೆಂಬಲಿಗರ ಪಾಳೆಯದಲ್ಲಿ ಆತಂಕ ಮೂಡಿಸಿದೆ. ಕೆ.ಆರ್.ಕ್ಷೇತ್ರದಲ್ಲಿ ಪಕ್ಷದ ಜತೆಗೆ, ವೈಯಕ್ತಿಕವಾಗಿಯೂ ತಮ್ಮದೇ ಆದ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದರು. ಕ್ಷೇತ್ರದಲ್ಲಿ ಆಯ್ಕೆಯಾಗಿದ್ದ ನಗರಪಾಲಿಕೆ ಸದಸ್ಯರಲ್ಲಿ ಬಹುತೇಕರು ರಾಮದಾಸ್ ಬೆಂಬಲಿಸುವಂತಹವರಾಗಿದ್ದರು. ಹೀಗಾಗಿಯೇ, ಟಿಕೆಟ್ ಕೈತಪ್ಪಿದಾಗ ಅನೇಕರು ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.

Tags:
error: Content is protected !!