Mysore
22
haze

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಕೈ ಒಳಗುದಿಗೆ ನೀರೆರೆದ ಬಿಜೆಪಿ

ST Somashekhar Shivaram Hebbar

ಆರ್.ಟಿ.ವಿಠ್ಠಲಮೂರ್ತಿ

ಎಸ್.ಟಿ.ಸೋಮಶೇಖರ್, ಹೆಬ್ಬಾರ್ ಉಚ್ಚಾಟನೆ

ಡಿಕೆಶಿ ಪಾಳೆಯದ ಬೆಂಬಲ ಹೆಚ್ಚಿಸಿದ ಬಿಜೆಪಿ ವರಿಷ್ಠರ ಕ್ರಮ

ಬೆಂಗಳೂರು: ಬಿಜೆಪಿ ಶಾಸಕರಾದ ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ ವರಿಷ್ಠರ ಕ್ರಮ ಮಹಾವಿಪ್ಲವದ ಮುನ್ಸೂಚನೆ ಎಂದು ರಾಜಕೀಯ ವಲಯಗಳು ವಿಶ್ಲೇಷಿಸುತ್ತಿವೆ.

ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಹೆಬ್ಬಾರ್ ಮತ್ತು ಸೋಮಶೇಖರ್ ಅವರ ವಿರುದ್ದ ಬಹು ಹಿಂದೆಯೇ ಕ್ರಮ ಕೈಗೊಳ್ಳಬೇಕಿದ್ದ ಬಿಜೆಪಿ ವರಿಷ್ಠರು, ಈ ಕಾಲವನ್ನು ಆಯ್ದು ಕೊಂಡಿದ್ದೇಕೆ? ಎಂಬ ಪ್ರಶ್ನೆಯನ್ನು ಕೇಂದ್ರವಾಗಿಟ್ಟುಕೊಂಡು ಇಂತಹ ಲೆಕ್ಕಾಚಾರ ಹಾಕಲಾಗುತ್ತಿದೆ.

ವಾಸ್ತವವಾಗಿ ಪಕ್ಷದಿಂದ ಉಚ್ಚಾಟಿಸುವುದು ಎಂದರೆ ಅನುಕೂಲ ಮಾಡಿಕೊಡುವುದು ಎಂದರ್ಥ. ಏಕೆಂದರೆ ಉಚ್ಚಾಟಿತರು ಯಾವ ಚಿಂತೆಯೂ ಇಲ್ಲದೆ ಬೇರೆ ಪಕ್ಷಗಳಿಗೆ ಸೇರಬಹುದು.

ಹೀಗೆ ಈ ಇಬ್ಬರೂ ಶಾಸಕರ ರಾಜಕೀಯ ದಾರಿಗೆ ಯಾವುದೇ ತೊಂದರೆಯಾಗದಂತೆ ಬಿಜೆಪಿ ವರಿಷ್ಠರು ನೋಡಿಕೊಂಡಿದ್ದೇಕೆ? ಎಂದು ಪ್ರಶ್ನಿಸುವ ರಾಜಕೀಯ ವಲಯಗಳು ರಾಜ್ಯ ರಾಜಕಾರಣ ಸದ್ಯದಲ್ಲೇ ಕಾಣಲಿರುವ ಮಹಾವಿಪ್ಲವವೊಂದರ ಮುನ್ಸೂಚನೆ ಇದು ಎಂದು ಬಣ್ಣಿಸುತ್ತಿವೆ.

ಅವುಗಳ ಪ್ರಕಾರ, ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಜಟಾಪಟಿ ಶುರುವಾಗಲಿದೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಿಶ್ಚಿತವಾಗಿ ಅಧಿಕಾರ ಬಿಟ್ಟುಕೊಡುವುದಿಲ್ಲ. ಹೀಗಾಗಿ ಡಿಕೆಶಿ ಕನಲುತ್ತಾರೆ. ಹೀಗೆ ಕನಲುವ ಡಿಕೆಶಿ ಪರ್ಯಾಯ ಮಾರ್ಗದ ಕಡೆ ನೋಡಬಹುದು

ಅದರೆ ಅವರ ಜತೆ ಸಾಲಿಡ್ಡು ಸಂಖ್ಯೆಯ ಶಾಸಕರಿಲ್ಲ. ಮೂಲಗಳ ಪ್ರಕಾರ ಸದ್ಯ ಡಿಕೆಶಿ ಜತೆ ಇರುವ ಶಾಸಕರ ಸಂಖ್ಯೆ ಹದಿನೈದರಷ್ಟಿರ ಬಹುದು. ಹೀಗಾಗಿ ಈ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಡಿಕೆಶಿ ಮುಂದಿರುವ ಸವಾಲು. ಆದ್ದರಿಂದ ತಮ್ಮ ಬೆಂಬಲಿಗ ಶಾಸಕರ ಪಡೆಯನ್ನು ಅವರು ಹಿಗ್ಗಿಸಿಕೊಳ್ಳಲು ಯತ್ನಿಸುತ್ತಲೇ ಇದ್ದಾರೆ.

ಮೂಲಗಳ ಪ್ರಕಾರ, ಇಂತಹ ಸಂದರ್ಭವನ್ನು ಬಳಸಿಕೊಳ್ಳಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದು ಕಾಂಗ್ರೆಸ್ ಪಾಳಯದಲ್ಲಿ ಮಹಾವಿಪ್ಲವ ನಡೆಯಲಿ ಎಂದು ಕಾತರಿಸುತ್ತಿದ್ದಾರೆ. ಇಂತಹ ಕಾತರದ ಹಿನ್ನೆಲೆಯಲ್ಲಿಯೇ ಡಿಕೆಶಿ ಬೆಂಬಲಿಗರ ಸಂಖ್ಯೆ ಹೆಚ್ಚಲಿ ಅಂತ ನಿರ್ಧರಿಸಿರುವ ಅವರು ಹೆಬ್ಬಾರ್ ಮತ್ತು ಸೋಮಶೇಖರ್ ಅವರನ್ನು ಉಚ್ಚಾಟಿಸಿದ್ದಾರೆ. ಹೀಗೆ ಉಚ್ಚಾಟನೆಯಾಗಿರುವುದರಿಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದು. ಮತ್ತು ಡಿಕೆಶಿ ಬೆಂಬಲಕ್ಕೆ ನಿಲ್ಲಬಹುದು.

ಹೀಗೆ ಕೈ ಪಾಳಯ ಸೇರುವ ಈ ನಾಯಕರಿಬ್ಬರ ದಾರಿಯನ್ನು ಸಾಫ್ ಮಾಡಿರುವ ಬಿಜೆಪಿ ವರಿಷ್ಠರು ಕರ್ನಾಟಕದ ರಾಜಕಾರಣದಲ್ಲಿ ಮಹಾವಿಪ್ಲವವೊಂದಕ್ಕೆ ನಾಂದಿ ಹಾಡಿದ್ದಾರೆ ಎಂಬುದು ರಾಜಕೀಯ ವಲಯಗಳ ಲೆಕ್ಕಾಚಾರ.

ಅದರ ಪ್ರಕಾರ ,ಮುಂದಿನ ದಿನಗಳಲ್ಲಿ ಡಿಕೆಶಿ ಬಲ ಹೆಚ್ಚಿಸುವ ಇನ್ನಷ್ಟು ಪ್ರಯತ್ನಗಳು ನಡೆಯಲಿವೆಯಲ್ಲದೆ, ಅಧಿಕಾರ ದಕ್ಕದೆ ಹೋದರೆ ನಲವತ್ತರಷ್ಟು ಶಾಸಕರನ್ನು ಕರೆದುಕೊಂಡು ಡಿಕೆಶಿ ವಿಧಾನಸಭೆಯಲ್ಲಿ ಪ್ರತ್ಯೇಕ ಗುಂಪು ಮಾಡಿಕೊಂಡು ಕೂರಲು ದಾರಿ ಮಾಡಿಕೊಡಬಹುದು ಎಂಬುದು ರಾಜಕೀಯ ವಲಯಗಳ ಮಾತು.

ಕುತೂಹಲದ ಸಂಗತಿ ಎಂದರೆ ಇಂತಹ ಸಾಧ್ಯತೆಯನ್ನು ಊಹಿಸಿದ ವರಿಷ್ಠರು ನೆನ್ನೆ ಮಧ್ಯರಾತ್ರಿ ಡಿಕೆಶಿ ಅವರಿಗೆ ರಹಸ್ಯ ಸಂದೇಶ ರವಾನಿಸಿದ್ದು, ಅದೇ ರೀತಿ ಬುಧವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಅವರಿಗೂಸಂದೇಶ ರವಾನಿಸಿದ್ದಾರೆ.

ಎಂತಹ ಸಂದರ್ಭದಲ್ಲೂ ಸರ್ಕಾರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಈ ಇಬ್ಬರೂ ನಾಯಕರಿಗೆ ಸಂದೇಶ ರವಾನಿಸಲಾಗಿದ್ದು, ಸರ್ಕಾರವನ್ನು ಅಲುಗಾಡಿಸಲು ಬಿಜೆಪಿ ವರಿಷ್ಠರು ಯಾವುದೇ ಕ್ಷಣದಲ್ಲಿ ರಣಾಂಗಣಕ್ಕಿಳಿಯಬಹುದು ಎಂಬ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ.

Tags:
error: Content is protected !!