Mysore
27
few clouds

Social Media

ಬುಧವಾರ, 14 ಜನವರಿ 2026
Light
Dark

ಬಡರೋಗಿಗಳ ನೆರವಿಗಾಗಿ ಬಿರಿಯಾನಿ ಚಾಲೆಂಜ್‌

ಯುವಕರ ತಂಡದಿಂದ ವಿಭಿನ್ನ ಯೋಜನೆ; ಉಚಿತ ಡಯಾಲಿಸಿಸ್ ಸೇವೆಗೆ ಸಹಕಾರ

ಕೃಷ್ಣ ಸಿದ್ದಾಪುರ

ಸಿದ್ದಾಪುರ: ಬಡ ರೋಗಿಗಳಿಗೆ ಡಯಾಲಿಸಿಸ್ ಸೇವೆಯನ್ನು ಒದಗಿಸುತ್ತಿದ್ದ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಯುವಕರ ತಂಡವೊಂದು ‘ಬಿರಿಯಾನಿ ಚಾಲೆಂಜ್’ ಎನ್ನುವ ವಿಭಿನ್ನ ಚಿಂತನೆಯೊಂದಿಗೆ ಆರ್ಥಿಕವಾಗಿ ನೆರವಾಗಲು ಸಿದ್ಧತೆ ನಡೆಸಿದೆ.

ಹೌದು..! ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಸೇವೆ ನೀಡಿ ಬಡ ರೋಗಿಗಳ ಪಾಲಿನ ಆಶಾಕಿರಣ ಎನಿಸಿರುವ ‘ದಯಾ ರಿಯಾಬ್ಲಿಟೇಷನ್ ಟ್ರಸ್ಟ್ ತಣಲ್’ ಸಂಸ್ಥೆಯ ಸಹ ಯೋಗದೊಂದಿಗೆ ಪ್ರಾರಂಭಿಸಲಾದ ಡಯಾಲಿಸಿಸ್ ಕೇಂದ್ರವು ಆರ್ಥಿಕ ಸಂಕಷ್ಟದ ನಡುವೆಯೂ ತನ್ನ ಸೇವೆಯನ್ನು ೭ನೇ ವರ್ಷವೂ ಮುಂದುವರಿಸಲು ಇಚ್ಛಿಸಿದೆ. ದಾನಿಗಳ ಸಹಕಾರದೊಂದಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೇವೆಯನ್ನು ನೀಡುತ್ತಿರುವ ಈ ಸಂಸ್ಥೆ ನಿರ್ಗತಿಕರಿಗೆ ಉಚಿತ ಚಿಕಿತ್ಸೆಯನ್ನೂ ಒದಗಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಈಗ ಈ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿದೆ.

ದಯಾ ರಿಯಾಬ್ಲಿಟೇಷನ್ ಟ್ರಸ್ಟ್ ಕಳೆದ ೬ ವರ್ಷಗಳಲ್ಲಿ ಸುಮಾರು ೩೪ ರೋಗಿಗಳಿಗೆ ೮,೨೦೮ ಡಯಾಲಿಸಿಸ್ ಸೇವೆಯನ್ನು ನೀಡಿದ್ದು, ೭ ಮಂದಿ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆಯನ್ನು ನೀಡುತ್ತಿದೆ. ಸಾಲದ ಸುಳಿಗೆ ಸಿಲುಕಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂಸ್ಥೆಗೆ ಸಹಕರಿಸಲು ಯುವಕರ ತಂಡವು ‘ ಬಿರಿಯಾನಿ ಚಾಲೆಂಜ್’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು, ಆರ್ಥಿಕ ನೆರವಿಗೆ ನಿಲ್ಲುವ ಮೂಲಕ ಕಳೆದ ಎರಡು ವರ್ಷಗಳಿಂದ ಡಯಾಲಿಸಿಸ್ ಕೇಂದ್ರದ ಉಳಿವಿಗೆ ಕೈ ಜೋಡಿಸಿದೆ.

ಈ ಹಿಂದೆಯೂ ಈ ವಿಭಿನ್ನ ಕಾರ್ಯಕ್ರಮದ ಮೂಲಕ ಸಂಸ್ಥೆಯ ಸಾಲ ತೀರಿಸುವುದರೊಂದಿಗೆ, ರೋಗಿಯೊಬ್ಬರಿಗೆ ಚಿಕಿತ್ಸಾ ವೆಚ್ಚವನ್ನೂ ಕಡಿಮೆ ಮಾಡುವ ಮೂಲಕ ನೆರವಾಗಿದೆ. ಈಬಾರಿ ಸುಮಾರು ೧೨ ಸಾವಿರ ಬಿರಿಯಾನಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಹಣ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಉಚಿತವಾಗಿ ಡಯಾಲಿಸಿಸ್ ಸೇವೆ ನೀಡುವ ಯೋಜನೆಯನ್ನು ರೂಪಿಸಲಾಗಿದ್ದು, ಇದಕ್ಕೆ ಎಲ್ಲ ಸಂಘ ಸಂಸ್ಥೆಗಳ ಸಹಕಾರ ಕೋರಲಾಗಿದೆ.

ಸಿಬ್ಬಂದಿ ವೇತನ, ವಿದ್ಯುತ್ ಶುಲ್ಕ ಭರಿಸುವುದು, ಔಷಧೋಪಚಾರ ಸೇರಿದಂತೆ ಪ್ರತಿ ತಿಂಗಳು ಡಯಾಲಿಸಿಸ್ ಕೇಂದ್ರ ನಿರ್ವಹಣೆಗೆ ೧.೭೫ ಲಕ್ಷ ರೂ.ಗಳಿಂದ ೨ ಲಕ್ಷ ರೂ.ಗಳವರೆಗೆ ವೆಚ್ಚವಾಗುತ್ತಿದೆ. ಸಂಸ್ಥೆ ಪ್ರಸ್ತುತ ೫ ಲಕ್ಷ ರೂ. ಸಾಲವನ್ನು ಹೊಂದಿದೆ. ಬಿರಿಯಾನಿ ಚಾಲೆಂಜ್ ಮೂಲಕ ಈ ಸಾಲ ಪಾವತಿಸುವುದರೊಂದಿಗೆ ನೆರವು ಒದಗಿಸುವ ಪ್ರಯತ್ನವನ್ನು ಯುವಕರ ತಂಡ ಮಾಡುತ್ತಿದೆ.

ಏನಿದು ಬಿರಿಯಾನಿ ಚಾಲೆಂಜ್?: 

ಸಂಸ್ಥೆಯನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ನಿಟ್ಟಿನಲ್ಲಿ ಬಿರಿಯಾನಿ ಚಾಲೆಂಜ್ ಎಂಬ ವಿನೂತನ ಕಾರ್ಯಕ್ರಮವನ್ನು ಯುವಕರ ತಂಡ ಪರಿಚಯಿಸಿದೆ. ದಾನಿಗಳಿಂದ ಬಿರಿಯಾನಿ ತಯಾರಿಕೆಗೆ ಬೇಕಾದ ಅಕ್ಕಿ, ಮಾಂಸ,ಸಂಬಾರ ಪದಾರ್ಥಗಳನ್ನು ಸಂಗ್ರಹಿಸಿ ಬಿರಿಯಾನಿ ತಯಾರಿಸಲಾಗುತ್ತದೆ. ನಂತರ ಇದನ್ನು ಸಂಘ ಸಂಸ್ಥೆಗಳು, ಕಚೇರಿಗಳು, ಮನೆಗಳಿಗೆ ಮಾರಾಟ ಮಾಡಿ, ಬಂದ ಹಣವನ್ನು ಸಂಸ್ಥೆಗೆ ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಗೆ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದ ಕಾರ್ಗಿಲ್ ಬಾಯ್ಸ್, ನೈಮ, ಹಿರಾ, ಚಾಲಿಯಂ ಬಾಯ್ಸ್, ಯೂತ್ ಹೆಲ್ತ್ ಕೇರ್ ಗೂಡುಗದ್ದೆ, ಮಿಮ್ಸ್, ವಿ ಸೆವೆನ್ ಯುವಕ ಸಂಘ, ಸಿದ್ಧಿವಿನಾಯಕ ಮಿತ್ರ ಮಂಡಳಿ, ರಾಯಲ್ಸ್ ಯುವಕ ಸಂಘ, ವಿನಾಯಕ ಮಿತ್ರ ಮಂಡಳಿ, ಕ್ಲಾಸಿಕ್ ಯುವಕ ಸಂಘ, ಸಿಟಿ ಬಾಯ್ಸ್, ಎಸ್‌ಕೆಎಸ್ಎಸ್‌ಎಫ್ ಹಾಗೂ ಎಸ್‌ಎಸ್‌ಎಸ್ ಸಂಘಟನೆಗಳು ಕೈ ಜೋಡಿಸಿವೆ.

” ಕೊರೊನಾ ಬಾಧಿತನಾಗಿದ್ದ ನನಗೆ ಕಿಡ್ನಿ ವೈಫಲ್ಯವಾಗಿದ್ದು, ವಾರದಲ್ಲಿ ಮೂರು ದಿನಗಳು ಡಯಾಲಿಸಿಸ್ ಅಗತ್ಯವಿದೆ. ಕೂಲಿ ಕಾರ್ಮಿಕನಾದ ನನಗೆ ಸಂಸ್ಥೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. ಈ ಯೋಜನೆಯಿಂದ ಸಾಕಷ್ಟು ಉಪಯೋಗವಾಗುತ್ತಿದೆ. ಮುಂದೆಯೂ ಯೋಜನೆ ಮುಂದುವರಿದರೆ ಮತ್ತಷ್ಟು ಅನುಕೂಲವಾಗಲಿದೆ.”

-ಸತೀಶ್, ಚಿಕಿತ್ಸೆ ಪಡೆಯುತ್ತಿರುವವರು

” ೧,೫೦೦ ರೂ.ಗಳಿಂದ ೨,೦೦೦ ರೂ. ವೆಚ್ಚ ತಗಲುವ ಡಯಾಲಿಸಿಸ್ ಸೇವೆಯನ್ನು ನಮ್ಮ ಸಂಸ್ಥೆ ಈ ಹಿಂದೆ ೯೦೦ ರೂ.ಗೆ ನೀಡುತ್ತಿತ್ತು ಇದೀಗ ಬಿರಿಯಾನಿ ಚಾಲೆಂಜ್ ಕಾರ್ಯ ಕ್ರಮದ ಮೂಲಕ ೫೦೦ ರೂ.ಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಮಾಸಿಕ ೨ ಲಕ್ಷ ರೂ. ಗಳಷ್ಟು ನಿರ್ವಹಣೆ ವೆಚ್ಚ ವಾಗುತ್ತಿದೆ. ಇದರಿಂದ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ಬಾರಿ ಬಿರಿಯಾನಿ ಚಾಲೆಂಜ್ ಮೂಲಕ ಹೆಚ್ಚಿನ ಹಣ ಸಂಗ್ರಹವಾದರೆ ಮುಂದಿನ ದಿನಗಳಲ್ಲಿ ಉಚಿತ ಸೇವೆ ನೀಡುವ ಚಿಂತನೆ ಇದೆ.”

-ನಿತೀಶ್, ದಯಾ ರಿಯಾಬ್ಲಿಟೇಷನ್ ಟ್ರಸ್ಟ್‌ನ ವ್ಯವಸ್ಥಾಪಕ 

Tags:
error: Content is protected !!