ಸಾವಿರಾರು ಮಂದಿ ಭಕ್ತರು ಭಾಗಿ: ವಿವಿಧ ಸೇವೆಗಳನ್ನು ಸಲ್ಲಿಸಿದ ಭಕ್ತಾದಿಗಳು
ಯಳಂದೂರು: ತಾಲ್ಲೂಕಿನ ಐತಿಹಾಸಿಕ ಪುರಾಣ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಚಿಕ್ಕ ಜಾತ್ರೆಯು ಶುಕ್ರವಾರ ಸಂಭ್ರಮ, ಸಡಗರ ವೈಭೋಗಗಳಿಂದ ಜರುಗಿತು.
ತೇರಿನ ನಿಮಿತ್ತ ರಥವನ್ನು ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಗಿತ್ತು. ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕುಳ್ಳಿರಿ ಸಿದ ಕ್ಷಣ ಕಾಲದಲ್ಲೇ ಭಕ್ತರು ರಂಗಪ್ಪನ ನಾಮಸ್ಮರಣೆ ಮಾಡಿ ತೇರು ಎಳೆದರು. ಇದೇ ಸಂದರ್ಭದಲ್ಲಿ ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿತು. ನೆರೆದಿದ್ದ ರಂಗಪ್ಪನ ಭಕ್ತರು ಶಂಖ, ಜಾಗಟೆ, ನಾದಸ್ವರದ ಸಪ್ಪಳದೊಂದಿಗೆ ಗೋವಿಂದ ನಾಮಾವಳಿಯನ್ನು ಹಾಡಿ ತೇರು ಎಳೆದು ಸಂಭ್ರಮಿಸಿದರು.
ದವಸ ಧಾನ್ಯ, ಚಿಲ್ಲರೆ ಕಾಸು, ಹಣ್ಣು ಜವನ ಎಸೆದು ಪ್ರಾರ್ಥಿಸಿದರು. ದೇಗುಲದ ಒಂದು ಸುತ್ತ ಪ್ರದಕ್ಷಿಣೆ ಹಾಕಿದ ಚಿಕ್ಕತೇರು ಮತ್ತೆ ಸ್ವಸ್ಥಾನಕ್ಕೆ ಸೇರಿತು. ನಂತರ ಚಿನ್ನಾಭರಣಗಳಿಂದ ಅಲಂಕೃತಗೊಂಡ ಉತ್ಸವಮೂರ್ತಿಯನ್ನು ಮಂಟ ಪೋತ್ಸವಕ್ಕೆ ಕರೆದೊಯ್ಯಲಾಯಿತು.
ಇದಾದ ಬಳಿಕ ಭಕ್ತರು ಶ್ರೀ ಬಿಳಿಗಿರಿಂಗನಾಥಸ್ವಾಮಿ, ಅಲಮೇಲು ರಂಗನಾಯಕಿ ಅಮ್ಮನವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿತು. ಅಲ್ಲಲ್ಲಿ ಅರವಟ್ಟಿಗೆಗಳನ್ನು ನಡೆಸಿ ಪ್ರಸಾದ ಹಂಚುತ್ತಿದ್ದ ದೃಶ್ಯ ಕಾಣ ಸಿಕ್ಕಿತು.
ಬ್ಯಾಟೆಮಣೆಸೇವೆ: ರಥೋತ್ಸವದ ಈ ವೇಳೆ ದಾಸಂದಿರು ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮಣೆ ಸೇವೆ ಹಾಕುವ ಸಂಪ್ರದಾಯವಿದೆ. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಹಾ ಪರಾಕ್, ಬೋ ಪರಾಕ್ ಎಂದು ಕೂಗಿ ವಿಶಿಷ್ಟವಾಗಿ ಆಚರಿಸುವ ಈ ಸಂಪ್ರದಾಯಕ್ಕೂ ಚಿಕ್ಕಜಾತ್ರೆ ಸಾಕ್ಷಿಯಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನವನ್ನು ಪಡೆದರು. ದೇವರ ಮೂರ್ತಿಯನ್ನು ಮೈಸೂರಿನ ಮಹಾರಾಜರು ನೀಡಿರುವ ಕಿರೀಟ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ಅಲಂಕರಿಸಲಾಗಿತ್ತು.
ಪಟ್ಟಣದಿಂದ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಮಳೆಯಿಂದ ಮಣ್ಣು ಕುಸಿದಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನೆಪ ಮಾತ್ರಕ್ಕೆ ಕೆಲವೆಡೆ ಮಾತ್ರ ಮಣ್ಣು ಮುಚ್ಚಿದ್ದರು. ಹಾಗಾಗಿ ಬಸ್‌ಗಳು ಹಾಗೂ ಕಾರುಗಳು ಸಾಗಲು ಪ್ರಯಾಸ ಪಟ್ಟವು. ಕೆಲಬಸ್‌ಗಳು ಕೆಟ್ಟು ನಿಂತಿ ದೃಶ್ಯವೂ ಅಲ್ಲಲ್ಲಿ ಗೋಚರಿಸಿತು. ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಜಿ ಶಾಸಕರಾದ ಎನ್. ಮಹೇಶ್, ಎಸ್.ಬಾಲರಾಜು. ಜಿಲ್ಲಾಧಿಕಾರಿ ಶ್ರೀರೂಪಾ, ಉಪವಿಭಾಗಧಿಕಾರಿ ದಿನೇಶ್‌ಕುಮಾರ್ ಮೀನಾ, ತಹಸಿಲ್ದಾರ್ ಎಸ್.ಎಲ್.ನಯನ ಡಿವೈಎಸ್‌ಪಿ ಧರ್ಮೇಂದ್ರ ಸಿಪಿಐ ಸುಬ್ರಹ್ಮಣ್ಯ, ಶಿವಮಾದಯ್ಯ, ಪಿಎಸ್‌ಐ ಆಕಾಶ್, ಕರಿಬಸಪ್ಪ ದೇಗುಲದ ಇಒ ಸುರೇಶ್, ಪಾರುಪತ್ತೇಗಾರ ರಾಜು, ಪ್ರಾಧನ ಅರ್ಚಕ ಎ.ಆರ್.ರವಿಕುಮಾರ್, ಎಸ್. ನಾಗೇಂದ್ರ ಭಟ್, ದೇಗುಲದ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಅನೇಕರು ಉಪಸ್ಥಿತರಿದ್ದರು.
” ನಿಷೇಧವಿದ್ದರೂ ಸಂಚಾರ: ಈ ಬಾರಿಯ ರಥೋತ್ಸವಕ್ಕೆ ಬೆಟ್ಟಕ್ಕೆ ದ್ವಿಚಕ್ರವಾಹನವನ್ನು ನಿಷೇಧಿಸಲಾಗಿತ್ತು. ಗುಂಬಳ್ಳಿ ಚೆಕ್‌ಪೋಸ್ಟ್‌ನಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೂ ಕೂಡ ದ್ವಿಚಕ್ರ ವಾಹನಗಳು ಸಂಚರಿಸಿದ್ದು ಅಚ್ಚರಿ ಮೂಡಿಸಿತು. ಇಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಬೆಟ್ಟದಲ್ಲಿನ ಏಟ್ರಿ ಸಂಸ್ಥೆಯ ಬಳಿ ಹಾಗೂ ರೇಷ್ಮೆ ಇಲಾಖೆಯ ಬಳಿ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಬೆಟ್ಟದ ಕಮರಿ ಮೇಲಿರುವ ದೇಗುಲದಲ್ಲಿ ವಾಹನ ದಟ್ಟಣೆ ಕಡಿಮೆ ಇತ್ತು.”




