Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಓದುಗರ ಪತ್ರ: ಯುವ ಸಮೂಹ ನೋಡಬೇಕಾದ ಸಿನಿಮಾ ‘ಭೀಮ’

‘ದುನಿಯಾ’ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ನಟ ವಿಜಯ್ ಕುಮಾರ್ ಸ್ಯಾಂಡಲ್‌ವುಡ್ ಸಲಗ ಎದ್ದೇ ಖ್ಯಾತಿ ಪಡೆದ ನಟ. ಅನೇಕ ಜನಪ್ರಿಯ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ವಿಜಯ್ ‘ಸಲಗ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ತಮ್ಮ ಛಾಪು ಮೂಡಿಸಿದ್ದು, ಅವರು ನಿರ್ದೇಶಕನಾಗಿ ಹಾಗೂ ನಟನಾಗಿ ಅಭಿನಯಿಸಿ ಇತ್ತೀಚೆಗೆ ತೆರೆಕಂಡ ‘ಭೀಮ’ ಸಾಮಾಜಿಕ ಕಳಕಳಿಯ ಒಂದು ಅದ್ಭುತ ಸಿನಿಮಾ ಜತೆಗೆ ಯುವ ಸಮೂಹ ನೋಡಲೇ ಬೇಕಾದ ಸಿನಿಮಾ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದೆ. ಗಾಂಜಾ, ಡ್ರಗ್ಸ್, ಬೀಡಿ, ಸಿಗರೇಟುಗಳು ಸಿಗುವಷ್ಟೇ ಸುಲಭವಾಗಿ ಯುವ ಸಮೂಹದ ಅದರಲ್ಲಿಯೂ ವಿದ್ಯಾರ್ಥಿಗಳ ಕೈ ಸೇರುತ್ತಿವೆ. ಇವುಗಳ ಚಟಕ್ಕೆ ಬಿದ್ದು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಈ ವಿಚಾರವನ್ನೇ ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಅಪಾಯಕಾರಿ ಡ್ರಗ್ಸ್ ಹೇಗೆ ಯುವ ಸಮೂಹವನ್ನು ತಲುಪುತ್ತಿವೆ, ಇದನ್ನು ನಿಯಂತ್ರಿಸಬೇಕಾದ ಆಡಳಿತ ವ್ಯವಸ್ಥೆ ಕಂಡೂ ಕಾಣದಂತೆ ವರ್ತಿಸುತ್ತಿರುವ ಬಗ್ಗೆ ಭೀಮ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಈ ಸಿನಿಮಾ ಒಂದು ಕಥೆ ಎನ್ನುವುದಕ್ಕಿಂತಲೂ ನಮ್ಮ ನಿಜ ಜೀವನದಲ್ಲಿ ನಡೆಯುವ ಒಂದು ಭಾಗ ಎನ್ನುವಂತಿದೆ.

ಇಂತಹ ಅದ್ಭುತ ಸಿನಿಮಾವನ್ನು ಯುವ ಸಮೂಹ ವೀಕ್ಷಿಸಬೇಕು. ಇದಕ್ಕಾಗಿ ಭೀಮ ಚಿತ್ರದ ನಿರ್ಮಾಪಕ, ನಿರ್ದೇಶಕ, ನಟ ವಿಜಯ್ ಕುಮಾರ್ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರದ ಅನುಮತಿ ಪಡೆದು ಕನಿಷ್ಠ ಒಂದು ದಿನದ ಮಟ್ಟಿಗಾದರೂ ಕಾಲೇಜು ವಿದ್ಯಾರ್ಥಿಗಳಿಗೆ ಈ ಸಿನಿಮಾದ ಉಚಿತ ಪ್ರದರ್ಶನ ಏರ್ಪಡಿಸಬೇಕು. ಸಾಧ್ಯವಾದರೆ ಬೇರೆ ಬೇರೆ ಭಾಷೆಗಳಿಗೂ ಡಬ್ಬಿಂಗ್ ಮಾಡಿ ಇತರೆ ರಾಜ್ಯಗಳಲ್ಲಿಯೂ ಬಿಡುಗಡೆ ಮಾಡಬೇಕು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು.

Tags: