ಎಸ್.ಎಸ್.ಭಟ್
ಮಹಿಳೆಯರು, ಮಕ್ಕಳಲ್ಲಿ ಆತಂಕ; ಬಾರ್ ಮುಚ್ಚಿಸಲು ಕಸುವಿನಹಳ್ಳಿ ಗ್ರಾಮಸ್ಥರ ಆಗ್ರಹ
ನಂಜನಗೂಡು: ಮದ್ಯಪಾನ, ಧೂಮಪಾನ ರಹಿತ ವ್ಯಾಪಾರಕ್ಕೆ ಅನುಮತಿ ಪಡೆದು, ಅದೇ ಜಾಗದಲ್ಲಿ ಬಾರ್ ಆರಂಭಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಕಸುವಿನಹಳ್ಳಿ ಗ್ರಾಮ ಪಂಚಾಯಿತಿಯಿಂದ ಮದ್ಯಪಾನ, ಧೂಮಪಾನ ರಹಿತ ವ್ಯಾಪಾರಕ್ಕೆ ಅನುಮತಿ ಪಡೆದು ನಂತರ ಸಿಎಲ್ ೭ ಬಾರ್ ಆರಂಭಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಜನವರಿ ಮೊದಲ ವಾರದಲ್ಲಿ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿ ಸದಸ್ಯರ ಹಕ್ಕು ಬಾಧ್ಯತೆಗಳ ಕುರಿತು ಸದಸ್ಯರಿಗೆ ಪಾಠ ಮಾಡಿ ಹೋಗಿದ್ದರು. ನಿಮಗೆ ನೀವೇ ಸುಪ್ರೀಂ, ನಿಮ್ಮ ತೀರ್ಮಾನ ಬದಲಿಸಲು ಯಾರಿಗೂ ಅವಕಾಶವೇ ಇಲ್ಲ ಎಂದಿದ್ದರು.
ಈಗ ಅದೇ ಕಸುವಿನಹಳ್ಳಿ ಗ್ರಾಮ ಪಂಚಾಯಿತಿಯಿಂದ ಮದ್ಯಪಾನ, ಧೂಮಪಾನ ರಹಿತ ವ್ಯಾಪಾರಕ್ಕೆ ಅನುಮತಿ ಪಡೆದು ಬಾರ್ ಆರಂಭಿಸಿರುವುದು ವಿಪರ್ಯಾಸವಾಗಿದೆ. ಕಸುವಿನಹಳ್ಳಿ ವ್ಯಾಪ್ತಿಯ ಎಲಚಗರೆ ಬೋರೆಯ ರಾಷ್ಟ್ರೀಯ ಹೆದ್ದಾರಿ ೭೬೬ಗೆ ತಾಗಿದಂತೆ ಇರುವ ಕಟ್ಟಡದಲ್ಲಿ ಆರಂಭವಾದ ಬಾರ್ ಈಗ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ. ಇಲ್ಲಿ ಹಲವು ಕಾರ್ಖಾನೆಗಳಿದ್ದು, ಐಟಿಸಿ ದಾಸ್ತಾನು ಉಗ್ರಾಣಗಳೂ ಇಲ್ಲಿದ್ದು, ಕಸುವಿನಹಳ್ಳಿ, ಮುದ್ದಳ್ಳಿ, ಮಾಕನಪುರ, ಎಲಚಗರೆ ಕೃಷ್ಣಾಪುರ, ಲಕ್ಷ್ಮಣಾಪುರ ಗ್ರಾಮಗಳ ಮಹಿಳೆಯರು, ವಿದ್ಯಾರ್ಥಿಗಳು ನಿತ್ಯ ಸಂಚರಿಸುವ ಸ್ಥಳವಾಗಿದ್ದು, ಇಲ್ಲಿ ಬಾರ್ ಆರಂಭಿಸಿರುವುದು ಸರಿಯೇ ಎಂದು ಪ್ರಶ್ನಿಸುತ್ತಾರೆ ಕಸುವಿನಹಳ್ಳಿ ಗ್ರಾಮಸ್ಥರು.
” ಮದ್ಯಪಾನ, ಧೂಮಪಾನ ರಹಿತ ವ್ಯಾಪಾರಕ್ಕೆ ಪಂಚಾಯಿತಿಯಿಂದ ಅನುಮತಿ ಪಡೆದು ಈಗ ಮದ್ಯದ ವ್ಯಾಪಾರಕ್ಕೆ ಮುಂದಾಗಿರುವ ಈ ಬಾರ್ ಅನ್ನು ಜಿಲ್ಲಾಧಿಕಾರಿಗಳು ತಕ್ಷಣ ಮುಚ್ಚಿಸಿ ಪಂಚಾಯತ್ ಕಾನೂನು ರಕ್ಷಿಸಬೇಕು.”
-ಸಿದ್ದರಾಜು, ಗ್ರಾಪಂ ಸದಸ್ಯ
” ಈ ಬಾರ್ ವಿರುದ್ಧ ಉಗ್ರ ಹೋರಾಟ ಆರಂಭಿಸುವ ಮೊದಲು ಇದಕ್ಕೆ ಅನುಮತಿ ನೀಡಿದ ಅಧಿಕಾರಿಗಳು ನೀಡಿದ ಅನುಮತಿಯನ್ನು ವಾಪಸ್ ಪಡೆಯಬೇಕು.”
-ಮಹದೇವಮ್ಮ, ಎಲಚಗೆರೆ ನಿವಾಸಿ
” ಈ ಸ್ಥಳದಲ್ಲಿ ಬಾರ್ ಮುಂದುವರಿದರೆ ಮುಂದಾಗಬಹುದಾದ ಅನಾಹುತಕ್ಕೆ ಅಧಿಕಾರಿಗಳೇ ಹೊಣೆ.”
-ಶಿವರುದ್ರಪ್ಪ, ಲಕ್ಷ್ಮಣಾಪುರ





