• ಸಿರಿ ಮೈಸೂರು
ನಿದ್ದೆಯೇ ಇರದ ಇತರ ಮಹಾನಗರಗಳಂತಲ್ಲ ನಮ್ಮ ಮೈಸೂರು, ರಾತ್ರಿಯಾಗುತ್ತಿದ್ದಂತೆ ಗೌಣವಾಗಿಬಿಡುತ್ತದೆ. ದಿನವೆಲ್ಲಾ ಗಿಜಿಗುಡುತ್ತಿದ್ದ ರಸ್ತೆಗಳು ಖಾಲಿಯಾಗಿ ನಿಶ್ಶಬ್ದತೆ ಆವರಿಸಿಬಿಡುತ್ತದೆ. ಹೀಗೆ ಎಲ್ಲರೂ ದಿನದ ದಣಿವು ಮುಗಿಸಿ ಮಲಗಿರುವಾಗ ಹೊರಡುತ್ತದೆ ಮಂಜುನಾಥ್ ಅವರ ಬಂಡಿ. ಇದು ಒಂದು ರೀತಿಯಲ್ಲಿ ಅವರ ಜೀವನ ಚಕ್ರವಾದರೆ ಇನ್ನೊಂದು ರೀತಿಯಲ್ಲಿ ರಾತ್ರಿ ಸಂಚರಿಸುವವರಿಗೆ ಸಂಜೀವಿನಿ, ಎಲ್ಲ ಅಂಗಡಿ-ಮುಂಗಟ್ಟುಗಳು ಬಾಗಿಲು ಹಾಕಿರುವ ಸಂದರ್ಭದಲ್ಲಿ ಟೀ-ಕಾಫಿ, ಬನ್ ಮತ್ತಿತರ ತಿಂಡಿಗಳನ್ನು ಮಾರಾಟ ಮಾಡುತ್ತಾ ಓಡಾಡುವ ಇವರು ಅದೆಷ್ಟೋ ಜನರ ಪೈಕಿ ‘ಬನ್ ಅಂಕಲ್’ ಎಂದೇ ಪ್ರಸಿದ್ದಿ ಪಡೆದಿದ್ದಾರೆ. ಮಂಜುನಾಥ್ ಅವರ ಜೀವನ ಯಾವ ಸಾಹಸಗಾಥೆಗೂ ಕಡಿಮೆ ಇಲ್ಲ. ಒಬ್ಬ ಮನುಷ್ಯ ತನ್ನ ಕುಟುಂಬಕ್ಕಾಗಿ, ಕುಟುಂಬದ ಸುಖ-ಸೌಖ್ಯಕ್ಕಾಗಿ ಯಾವೆಲ್ಲಾ ಕೆಲಸಗಳನ್ನು ಮಾಡಬಹುದು ಎಂಬುದಕ್ಕೊಂದು ನಿದರ್ಶನ ಮಂಜುನಾಥ್ ಅವರ ಜೀವನ.
ರಾತ್ರಿ ಹನ್ನೊಂದರ ಸುಮಾರಿಗೆ ಟೀ-ಕಾಫಿ, ತಿಂಡಿಗಳನ್ನು ತಯಾರಿಸಿಕೊಂಡು ಟಿ.ಕೆ.ಲೇಔಟ್‌ನಲ್ಲಿರುವ ತಮ್ಮ ಮನೆಯಿಂದ ಹೊರಡುವ ಮಂಜುನಾಥ್ ಅವರು ನಿಜ ಅರ್ಥದಲ್ಲಿ ಸ್ಫೂರ್ತಿಯ ಚಿಲುಮೆ. ತಮ್ಮ ಮನೆಯಿಂದ ಹೊರಟು ಗಂಗೋತ್ರಿ ಬಡಾವಣೆ, ಸರಸ್ವತಿಪುರಂ ಮಾರ್ಗವಾಗಿ ಸಂಚರಿಸುವ ಇವರಿಗೆ ಮಾರ್ಗದ ತುಂಬೆಲ್ಲಾ ರಾತ್ರಿ ಪಾಳಿ ಕೆಲಸ ಮಾಡುವ ಜನರು, ವಿದ್ಯಾರ್ಥಿಗಳು ಹಾಗೂ ಆ ಹೊತ್ತಿನಲ್ಲಿ ಸಂಚರಿಸುವ ಜನರು ಖಾಯಂ ಗ್ರಾಹಕರಾಗಿದ್ದಾರೆ. ಬೆಳಿಗ್ಗೆ ಮೂರರ ಸುಮಾರಿಗೆ ರೈಲ್ವೆ ನಿಲ್ದಾಣದ ಬಳಿ ಬಂದು ತಲುಪುವ ಇವರ ಟೀ ಬಂಡಿ ಬೆಳಕು ಹರಿದು ಗಂಟೆ ಏಳಾಗುವವರೆಗೆ ಅಲ್ಲೇ ಇರುತ್ತದೆ. ಕೆ.ಆರ್. ಆಸ್ಪತ್ರೆ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ರಾತ್ರಿ ಪಾಳಿ ಕೆಲಸ ಮಾಡುವವರು, ರೋಗಿಗಳ ಸಂಬಂಧಿಕರು, ಸರಿರಾತ್ರಿಯಲ್ಲಿ ರೈಲು ಇಳಿಯುವವರು, ರೈಲು ಹತ್ತಲು ಬರುವವರು, ಕಾರ್ಮಿಕರು, ಇಲ್ಲಿ ಸಂಚರಿಸುವವರು, ನಸುಕಿನ ಜಾವದಲ್ಲೇ ವ್ಯಾಪಾರ ಆರಂಭಿಸಲು ಬರುವವರು… ಹೀಗೆ ಎಲ್ಲರೂ ಮಂಜುನಾಥ್ ಅವರ ಬಳಿ ಬಂದು ಟೀ-ಕಾಫಿ ಕುಡಿದೇ ಹೋಗುತ್ತಾರೆ. ಆದ್ದರಿಂದ ಅವರೆಲ್ಲರಿಗೂ ಇವರು ಚಿರಪರಿಚಿತ. ಹೀಗೆ ರಾತ್ರಿಯಿಡೀ ನಡೆಯುತ್ತದೆ ಇವರ ಕೆಲಸ.
ರಾತ್ರಿಯೆಲ್ಲಾ ಟೀ ಮಾರುತ್ತಾರೆ ಎಂದ ಮಾತ್ರಕ್ಕೆ ಮಂಜುನಾಥ್ ಅವರು ಬೆಳಿಗ್ಗೆ ಮಲಗಿರುತ್ತಾರೆ ಎಂದೇನಲ್ಲ! 61 ವರ್ಷ ತುಂಬಿರುವ ಇವರು 1978ರಿಂದ, ಅಂದರೆ ಬರೋಬ್ಬರಿ 46 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಬೆಳಗಿನ ಸಮಯದಲ್ಲಿ ಅಂಗಡಿಯಲ್ಲಿ ಲೆಕ್ಕ ಬರೆಯುತ್ತಿದ್ದ ಇವರು ಸಂಸ್ಕೃತವನ್ನೂ ಕಲಿತಿದ್ದಾರೆ! ಆದರೆ ಈ ಕೆಲಸಗಳಿಂದ ಜೀವನ ಸಾಗಿಸುವುದು ದುಸ್ತರ ಎನಿಸಿದಾಗ ಅವರ ಕೈಹಿಡಿದದ್ದೇ ಕಾಫಿ-ಟೀ ವ್ಯಾಪಾರ. ‘ಆಗೆಲ್ಲಾ ರಾತ್ರಿ 11ಕ್ಕೆ ಸರಿಯಾಗಿ ಮನೆ ಬಿಟ್ಟು ಬೆಳಿಗ್ಗೆ ಬೆಳಕು ಹರಿಯುವವರೆಗೂ ವ್ಯಾಪಾರ ಮಾಡುತ್ತಿದ್ದೆ. ಆಗೆಲ್ಲಾ ನನ್ನ ಬಳಿ ಸ್ಕೂಟರ್ ಇರಲಿಲ್ಲ. ಸೈಕಲ್‌ನಲ್ಲೇ ನನ್ನ ವ್ಯಾಪಾರ-ವಹಿವಾಟು ಸಾಗುತ್ತಿತ್ತು. ಆಗಿನಿಂದಲೂ ಖಾಯಂ ಆಗಿ ನನ್ನ ಬಳಿ ಬಂದು ಟೀ- ಕಾಫಿ ಕುಡಿಯುವ ಅದೆಷ್ಟೋ ಜನರಿದ್ದಾರೆ. 1 ರೂ.ಗೆ ಒಂದು ಟೀ ಮಾರಾಟ ಮಾಡಲು ಆರಂಭಿಸಿದ ನೆನಪು ನನ್ನ ಮನಸ್ಸಿನಲ್ಲಿನ್ನೂ ಹಸಿರಾಗಿದೆ. ಬೆಳಿಗ್ಗೆ ಏಳರ ಹೊತ್ತಿಗೆ ವ್ಯಾಪಾರ ಮುಗಿಸಿ ಮನೆಗೆ ಹೊರಟು ಕೆಲಕಾಲ ಮಲಗಿದರೆ ಮತ್ತೆ ಎದ್ದು ಕೆಲಸಕ್ಕೆ ಹೋಗುತ್ತಿದ್ದೆ. ಇದೇ ನನ್ನ ದಿನಚರಿಯಾಗಿತ್ತು’ ಎನ್ನುತ್ತಾ ತಮ್ಮ ಕೆಲಸದ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ ಮಂಜುನಾಥ್, ಮನೆ ನಡೆಸಲು, ಮುಖ್ಯವಾಗಿ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಲು ಈ ರೀತಿ ಅಹರ್ನಿಶಿ ದುಡಿಯಲು ಆರಂಭಿಸಿದ ಮಂಜುನಾಥ್ ಅವರಿಗೆ ಬರುಬರುತ್ತಾ ಅದೇ ಜೀವನಶೈಲಿ ಅಭ್ಯಾಸವಾಗಿಬಿಟ್ಟಿತು. ‘ಒಂದು ದಿನ ಮನೇಲಿ ಕೂತ್ತೂ ಮನ್ನು ಕೇಳಲ್ಲ ನೋಡಿ, ಹೊರ್ಗಡೆ ಹೋಗಿ ಕೆಲ್ಲ ಮಾಡಿದ್ರೆ ಮಾತ್ರ ನೆಮ್ಮಿ’ ಎನ್ನುತ್ತಾ ಮನತುಂಬಾ ನಗುವ ಇವರು ಪ್ರತಿ ಮಾತಿನಲ್ಲೂ ಪರಿಶ್ರಮ, ಕೆಲಸದ ಮೇಲಿನ ಆಸಕ್ತಿಯ ಪ್ರಾಮುಖ್ಯತೆಯನ್ನು ತಿಳಿಸುತ್ತಾರೆ.
ಇವರು ಟೀ ಮಾತ್ರವಲ್ಲದೆ ವಿವಿಧ ರೀತಿಯ ಬನ್‌ಗಳು, ಕೋಡುಬಳೆ, ಚಕ್ಕುಲಿಗಳನ್ನು ಮಾರಾಟ ಮಾಡುತ್ತಾರೆ. ವಿಶೇಷವೆಂದರೆ, ಇವುಗಳನ್ನೆಲ್ಲಾ ತಯಾರಿಸುವುದು ಖುದ್ದು ಅವರೇ. ಅದೂ ಅವರ ಮನೆಯಲ್ಲೇ!
ಸಂಜೆಯಾಗುತ್ತಿದ್ದಂತೆ ಮನೆಯಲ್ಲಿ ಹಿಟ್ಟು ಹದಮಾಡಿಕೊಳ್ಳುವ ತಿಂಡಿಗಳನ್ನು ಕರಿಯುವ ಕೆಲಸ ಶುರುವಾಗುತ್ತದೆ. ಜೊತೆಗೆ ಟೀ, ಕಾಫಿ, ಶುಂಠಿ ಟೀ ಮುಂತಾದ ಪದಾರ್ಥಗಳು ತಯಾರಾಗುತ್ತವೆ ಎಲ್ಲವನ್ನೂ ದೊಡ್ಡ ದೊಡ್ಡ ಚೀಲ, ಪಾತ್ರೆ, ಪ್ಲಾಸ್ಟ್‌ಗಳಿಗೆ ಹಾಕಿಕೊಂಡು ಹೊರಡುವ ಇವರ ಬಳಿ ಈಗ ಸೈಕಲ್ ಬದಲು ಸ್ಕೂಟರ್ ಇದೆ. ಇಷ್ಟೂ ಪದಾರ್ಥಗಳನ್ನು ಹಾಗೂ ಅದರ ಜೊತೆಗೆ ಒಂದೆರಡು ಪ್ಲಾಸ್ಟಿಕ್ ಚೇರ್‌ಗಳನ್ನೂ ಗಾಡಿಯೊಂದಿಗೆ ಹಾಕಿಕೊಂಡು ಹೊರಡುವ ಇವರದ್ದು ಅಕ್ಷರಶಃ ಸಂಚಾರ ಟೀ ಅಂಗಡಿ! ಪ್ರತಿದಿನ ಹತ್ತಾರು ಲೀಟರ್‌ಗಳಷ್ಟು ಟೀ ಹಾಗೂ ಕಾಫಿ ಮಾರಾಟ ಮಾಡುತ್ತಾರೆ. ಮಧ್ಯೆ ಟೀ ಖಾಲಿಯಾದರೆ ಹಾಲು ತರಿಸಿಕೊಂಡು ನಿಂತಲ್ಲೇ ಟೀ ಕಾಯಿಸುತ್ತಾರೆ. ಎಲ್ಲಕ್ಕಿಂತ ವಿಶೇಷ ವಿಷಯ ಎಂದರೆ ಇವರ ಬಳಿ ಬರುವವರು 5 ರೂ.. 10 ರೂ… ಹೀಗೆ ತಮಗೆ ಶಕ್ತಿಯಿದ್ದಷ್ಟು ಹಣ ಕೊಟ್ಟು ಅದಕ್ಕೆ ತಕ್ಕ ಅಳತೆಯ ಟೀ-ಕಾಫಿ ಕುಡಿಯಬಹುದು.
ತುಂಬಾ ವರ್ಷಗಳಿಂದ ಇದೇ ಕೆಲಸ ಮಾಡುತ್ತಾ ಬಂದ ಮಂಜುನಾಥ್ ಅವರಿಗೆ ಸವಾಲು ಎದುರಾಗಿದ್ದು ಕೋವಿಡ್ ಸಂದರ್ಭದಲ್ಲಿ. ಆಗ ಪ್ರಪಂಚವೇ ಸ್ತಬ್ದವಾಗಿತ್ತು, ಯಾವ ಕೆಲಸಗಳೂ ನಡೆಯುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕೆಲಕಾಲ ಮನೆಯಲ್ಲೇ ಉಳಿದ ಇವರಿಗೆ ಬರುಬರುತ್ತಿದ್ದಂತೆ ನಾಲ್ಕು ಗೋಡೆಗಳಿಂದ ಹೊರಹೋಗಿ ದುಡಿಯುವ ತುಡಿತ ಹೆಚ್ಚಾಯಿತು. ಮನೆಯಲ್ಲೇ ಇದ್ದು ಆರೋಗ್ಯವೂ ಕೊಂಚ ಹಾಳಾಯಿತು. ‘ಡಾಕ್ಟರ್‌ಗೆ ತೋರಿಸಿದರೆ ಹೆಚ್ಚೇನೂ ಸಮಸ್ಯೆಯಿಲ್ಲ, ಹೊರಹೋಗಿ ಓಡಾಡಿದರೆ ಸರಿಹೋಗುತ್ತದೆ ಎಂದುಬಿಟ್ಟರು. ಆಗ ಪೊಲೀಸರ ಬಳಿ ಅನುಮತಿ ಪಡೆದು ಕೆ.ಆರ್.ಆಸ್ಪತ್ರೆಯ ಬಳಿ ಟೀ ಮಾರಲು ಆರಂಭಿಸಿದೆ. ದಿನವೂ ಅಲ್ಲಿನ ರೋಗಿಗಳ ಸಂಬಂಧಿಕರು ಹಾಗೂ ಅಲ್ಲಿನ ಸಿಬ್ಬಂದಿಗೆ ಹತ್ತಾರು ಲೀಟರ್‌ಗಳಷ್ಟು ಟೀ-ಕಾಫಿ ಕೊಡುತ್ತಿದ್ದೆ. ಮನೆಗೆ ಬಂದೊಡನೆ ಸ್ನಾನ ಮಾಡುತ್ತಿದ್ದೆ. ದೇವರ ದಯೆಯಿಂದ ನನಗೆ ಸೋಂಕು ತಗುಲಲಿಲ್ಲ. ಆ ಸಮಯದಲ್ಲಿ ಆ ಜನರಿಗೆ ನನ್ನ ಕೈಲಾದ ಸೇವೆ ಮಾಡಿದ ಸಾರ್ಥಕ ಮನೋಭಾವವಂತೂ ನನಗಿದೆ’ ಎನ್ನುತ್ತಾ ಕಷ್ಟದ ದಿನಗಳನ್ನು ನೆನೆಯುತ್ತಾರೆ ಮಂಜುನಾಥ್. ಕೆಲವೊಮ್ಮೆ ಯಾವುದಾದರೂ ಮನೆಯಲ್ಲಿ ಸಾವು ಸಂಭವಿಸಿದ್ದರೆ ರಾತ್ರಿ ಇವರಿಂದ ಕಾಫಿ-ಟೀ ತರಿಸಿಕೊಳ್ಳುತ್ತಾರೆ. ಇನ್ನು ಕೆಲವರು ಇವರಿಗೆ ಕರೆ ಮಾಡಿ ಇವರು ಇರುವ ಕಡೆಗೇ ಹೋಗಿ ಕುಡಿದು ಬರುತ್ತಾರೆ. ಒಟ್ಟಿನಲ್ಲಿ ಇಡೀ ಮೈಸೂರೇ ಇವರಿಗೆ ಚಿರಪರಿಚಿತ.
ಮಂಜುನಾಥ್ ಅವರು ಇಷ್ಟೆಲ್ಲಾ ಶ್ರಮವಹಿಸಿ ಕೆಲಸ ಮಾಡಲು ಆರಂಭಿಸಿದ್ದೇ ಮುಖ್ಯವಾಗಿ ಮಗನ ಶಿಕ್ಷಣಕ್ಕಾಗಿ ಇವರ ದಶಕಗಳ ಪರಿಶ್ರಮದ ಫಲವಾಗಿ ಇವರ ಮಗ ಈಗ ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವನನ್ನು ನೋಡಿದಾಗೆಲ್ಲಾ ನಾ ಪಟ್ಟ ಶ್ರಮವೆಲ್ಲಾ ಸಾರ್ಥಕ ಅನಿಸುತ್ತೆ, ಅವನು ಈಗಲೂ ಈ ಕೆಲಸವೆಲ್ಲಾ ಬಿಟ್ಟು ಆರಾಮಾಗಿ ಮನೆಯಲ್ಲಿರಲು ಹೇಳುತ್ತಾನೆ. ಆದರೆ ನನಗೆ ಮನಸ್ಸು ಒಪ್ಪೋದಿಲ್ಲ. ಕೆಲಸ ಮಾಡಿಲ್ಲ ಅಂದ್ರೆ ಮನಸ್ಸು, ದೇಹ ಎರಡಕ್ಕೂ ಸಮಾಧಾನ ಇರೋದಿಲ್ಲ. ಆದ್ದರಿಂದ ಈ ಕೆಲಸವನ್ನು ಮಾಡುತ್ತಲೇ ಇದ್ದೇನೆ’ ಎಂಬುದು ಮಂಜುನಾಥ್ ಅವರ ಮಾತು. ಮೊದಲಿನಷ್ಟು ಚುರುಕಾಗಿ ಈಗ ಕೆಲಸ ಮಾಡಲು ಸಾಧ್ಯವಾಗದ ಕಾರಣ ಈಗ ಇವರು ಕೆಲಸ ಆರಂಭಿಸುವುದೇ ಮಧ್ಯರಾತ್ರಿ 1-2 ಗಂಟೆಗೆ ಆಗಿನಿಂದ ಬೆಳಕು ಹರಿಯುವವರೆಗೂ ಇವರ ಬಂಡಿ ಸಾಗುತ್ತಲೇ ಇರುತ್ತದೆ. ‘ಅರೆ ಯಾರೀ ಸೂಪರ್ ಕಾಫಿ-ಟೀ, ಕಾಫಿ-ಟೀ’ ಎನ್ನುತ್ತಾ ತಮ್ಮ ಸ್ಕೂಟರ್ ಮುಂದೆ ನಿಂತು ವ್ಯಾಪಾರ ಮಾಡುವ ಇವರು ಬಂದವರ ಕೈಗೆ ಟೀ ಲೋಟ ಕೊಟ್ಟು ಫಿಲ್ಟರ್‌ನಿಂದ ಟೀ ತೆಗೆದುಕೊಳ್ಳಲು ಹೇಳುತ್ತಾರೆ.
ಹಣೆಯಲ್ಲಿ ವಿಭೂತಿ, ಕಪ್ಪು ಕನ್ನಡಕ, ನಗು ತುಂಬಿದ ಮುಗ್ಧ ಮುಖ ಮಂಜುನಾಥ್ ಅವರ ಚಹರ ಮನತುಂಬಿ ನಗುವಾಗ ಇವರ ಮುಖದಲ್ಲಿ ಮೂಡುವ ನೆರಿಗೆಗಳು ಇವರ ಅಗಾಧ ಜೀವನಾನುಭವವನ್ನು ಸಾರಿ ಹೇಳುತ್ತವೆ. ಇತ್ತ ಮುಗ್ಧವಾಗಿಯೂ ಅತ್ತ ಬಹಳ ಆಳವಾಗಿಯೂ ಕಾಣುವ ಇವರ ನಗು ಇಷ್ಟು ವರ್ಷಗಳ ಪರಿಶ್ರಮದ ಫಲ. ಬದುಕನ್ನು ನಡೆಸುವ ರೀತಿ, ಅಚಲ ಮನೋಭಾವ, ಪರಿಶ್ರಮದ ಪ್ರಾಮುಖ್ಯತೆ, ಬೇಕಾದಂತಹ ಜೀವನ ಕಟ್ಟಿಕೊಳ್ಳಲು ಅವಶ್ಯವಾದ ಛಲ, ಕುಟುಂಬದೆಡೆಗಿನ ಅಗಾಧ ಜವಾಬ್ದಾರಿ… ಹೀಗೆ ಇವರಿಂದ ಕಲಿಯುತ್ತಿದ್ದರೆ ಮುಗಿಯಲಾರದ ಸಾಕಷ್ಟು ಸಂಗತಿಗಳಿವೆ. ಒಟ್ಟಾರೆ ಬದುಕನ್ನು ಬಂದಂತೆ ಸ್ವೀಕರಿಸಿ ಪರಿಶ್ರಮದಿಂದ ಗೆದ್ದು ಬೀಗಿರುವ ಮಂಜುನಾಥ್ ಅವರು ನಿಜಕ್ಕೂ ಸಾಮಾನ್ಯರ ನಡುವೆ ಇರುವ ಅಸಾಮಾನ್ಯರು.
‘ಈ ಸಿಗರೇಟು, ಪಾನ್ ಮಾರಾಟ ಮಾಡೋಕೆ ನನ್ನ ಮನ್ಸು ಒಪ್ಪೋದಿಲ್ಲ. ಏನು ಮಾಡೋದು… ಜನರಿಗೆ ಅದು ಬೇಕೇ ಬೇಕು. ಕೆಲವರಿಗೆ ನಾನೇ ಸಿಗರೇಟು ಸೇದಬೇಡಿ ಎಂದು ಬಯ್ಯುತ್ತೇನೆ’ ಎನ್ನುತ್ತಾರೆ ಮಂಜುನಾಥ್, ಇವರನ್ನು ಮಾತನಾಡಿಸಲೆಂದು ಹೋಗಲು ಒಂದು ದಿನ ಬೆಳಿಗ್ಗೆ 5ಕ್ಕೆ ಏಳುವಷ್ಟರಲ್ಲಾಗಲೇ ಇವರ ಶ್ರಮ ಎಷ್ಟೆಂದು ಭಾಗಶ: ಅರ್ಥವಾಗಿತ್ತು. ಚಳಿ. ಮಳೆ, ಆರೋಗ್ಯ ಲೆಕ್ಕಿಸದೆ ದುಡಿದು ಜೀವನ ಕಟ್ಟಿಕೊಂಡ ಇವರ ಕಥೆ ಕೇಳುವಷ್ಟರಲ್ಲಿ ಕಡಿಮೆ ಎಂದರೂ ನಲವತ್ತರಿಂದ ಐವತ್ತು ಗ್ರಾಹಕರು ಬಂದು ಕಾಫಿ ಕುಡಿದಿದ್ದರು. ‘ಅಯ್ಯೋ… ಟೀ ಸಾಕೆ? ಕಾಫಿ ರುಚಿ ನೋಡಿ? ಎನ್ನುತ್ತಾ ಲೋಟಕ್ಕೆ ಬಿಸಿಬಿಸಿ ಕಾಫಿ ತುಂಬಿಸಿಕೊಟ್ಟ ಇವರ ಕಣ್ಣುಗಳಲ್ಲಿ ಇದ್ದದ್ದು ಅಗಾಧ ಮಮತೆ ಹಾಗೂ ಆತ್ಮೀಯತೆ. ಕಥೆ ಕೇಳಿ ಮುಗಿಸುವಷ್ಟರಲ್ಲಿ ಅದೆಷ್ಟು ಅಪರೂಪದ ವ್ಯಕ್ತಿತ್ವ ಇದು!’ ಎಂದು ಮನಸ್ಸು ಅಚ್ಚರಿಯಲ್ಲಿ ಮುಳುಗಿತ್ತು. ನಾಲಿಗೆಯಲ್ಲಿ ಕಾಫಿಯ ರುಚಿ ಹಾಗೇ ಇತ್ತು. ಇವರ ಬದುಕಿನ ಸಾರ್ಥಕತೆ ನೆನೆದು ಕಣ್ಣಂಚು ಕೊಂಚ ತೇವವಾದಂತೆ ಅನಿಸಿತು. ಅಷ್ಟರಲ್ಲಿ ಸೂರ್ಯ ಹುಟ್ಟಿ ಬೆಳಕು ಹರಿದಿತ್ತು. ಮೈಸೂರು ದಿನದ ಜಂಜಾಟಕ್ಕೆ ಅಣಿಯಾಗುತ್ತಿದ್ದರೆ ಮಂಜುನಾಥ್ ಅವರು ಕೆಲಸ ಮುಗಿಸಿ ಎಲ್ಲವನ್ನೂ ತಮ್ಮ ಪುಟ್ಟ ಸ್ಕೂಟರ್‌ಗೆ ತುಂಬಿಸಿಕೊಂಡು ಬದುಕಿನ ಬಂಡಿ ಹತ್ತಿ ಮನೆಗೆ ಮರಳಲು ಅಣಿಯಾಗುತ್ತಿದ್ದರು.
sirimysuru18@gmail.com