ಪ್ರಶಾಂತ್ ಎಸ್.
ಆಳೆತ್ತರ ಬೆಳೆದು ನಿಂತಿರುವ ಜಾಲಿ, ಪಾರ್ಥೇನಿಯಂ, ಎಲ್ಲೆಂದರಲ್ಲಿ ಬಿದ್ದಿರುವ ಕಸ
ಸಮಸ್ಯೆ ಬಿಚ್ಚಿಟ್ಟು ಅಳಲು ತೋಡಿಕೊಂಡ ನಿವಾಸಿಗಳು
ಮೈಸೂರು:ನಗರದ ಅಶೋಕಪುರಂ ಶಾಂತಿಧಾಮ ಕತ್ತಲಾಗುತ್ತಿದ್ದಂತೆ ಪುಂಡ- ಪೋಕರಿಗಳ ತಾಣವಾಗಿ ಮಾರ್ಪಾಡಾಗಿದ್ದು, ಸಮಾಧಿಗಳ ಮೇಲೆಯೇ ಮದ್ಯ, ಮಾದಕ ಪದಾರ್ಥಗಳನ್ನು ಸೇವನೆ ಮಾಡುವ ‘ಕತ್ತಲ ಲೋಕ’ ಉದಯವಾಗಿರುವ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಾರೆ.
ಪರಿಶಿಷ್ಟ ಸಮುದಾಯದವರ ಈ ಶಾಂತಿಧಾಮದಲ್ಲಿ ವಿದ್ಯುತ್, ನೀರಿನ ವ್ಯವಸ್ಥೆಯೂ ಇಲ್ಲ. ಆದರೆ, ಶಾಂತಿಧಾಮಕ್ಕೆ ಸುತ್ತಲೂ ಕಾಂಪೌಂಡ್, ಆಳೆತ್ತರದ ಕಬ್ಬಿಣದ ಗೇಟ್ ಅಳವಡಿಸಲಾಗಿದೆ. ಸಂಜೆ ಸೂರ್ಯ ಮುಳುಗುತ್ತಲೇ ಸಾರ್ವಜನಿಕರು ಇತ್ತ ಬಾರದಿರುವುದರಿಂದ ಪುಂಡರ ಕತ್ತಲ ಲೋಕ ತೆರೆದುಕೊಳ್ಳುತ್ತದೆ. ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಒಡೆದ ಗಾಜಿನ ಲೋಟ, ಪ್ಲಾಸ್ಟಿಕ್, ಬೀಡಿ ಹಾಗೂ ಸಿಗರೇಟು ತುಂಡುಗಳು ಕಣ್ಣಿಗೆ ರಾಚುತ್ತಿವೆ.
ಸಂಬಂಧಪಟ್ಟ ಅಧಿಕಾರಿ ವರ್ಗ, ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಬರುವವರಿಗೆ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸುವುದಿರಲಿ, ಕನಿಷ್ಠ ಸ್ವಚ್ಛತೆ ಕಡೆಗೂ ಗಮನಹರಿಸುತ್ತಿಲ್ಲ. ಮೂಲ ಸೌಲಭ್ಯವೇ ಇಲ್ಲದಿರುವಾಗ ಇಲ್ಲಿ ಶವ ಸಂಸ್ಕಾರ ನಡೆಸುವುದಾದರೂ ಹೇಗೆ ಎಂದು ಅಶೋಕಪುರಂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಎರಡು ಎಕರೆ ಪ್ರದೇಶದಲ್ಲಿರುವ ಶಾಂತಿಧಾಮ: ಅಶೋಕಪುರಂ ೧ನೇ ಕ್ರಾಸ್ ನಿಂದ ೧೩ನೇ ಕ್ರಾಸ್ ಒಳಗೊಂಡು ಒಟ್ಟು ೬ ವಾರ್ಡ್‌ಗಳಲ್ಲಿನ ನಿವಾಸಿಗಳು ಈ ಸ್ಮಶಾನವನ್ನು ಬಳಕೆ ಮಾಡುತ್ತಾರೆ. ಎರಡು ಎಕರೆಗೂ ಹೆಚ್ಚು ವಿಸ್ತೀರ್ಣದ ಈ ಸ್ಮಶಾನದಲ್ಲಿ ಸ್ವಚ್ಛತೆಯ ಕೊರತೆಯೂ ಇದೆ. ಶವ ದಹನದ ನಂತರ ಉಳಿಯುವ ಅರೆ ಸುಟ್ಟ ಕಟ್ಟಿಗೆ, ಬಂಬುಗಳು ಸುತ್ತಲೂ ಬಿದ್ದಿರುತ್ತವೆ. ಇನ್ನು ಸ್ಮಶಾನದ ತುಂಬಾ ಜಾಲಿ ಮುಳ್ಳು ಗಿಡಗಳು, ಪಾರ್ಥೇನಿಯಂ ಬೆಳೆದು ನಿಂತಿದೆ. ಇದರ ನಡುವೆಯೇ ಶವ ಸಂಸ್ಕಾರ ನಡೆಸಬೇಕಾದ ಪರಿಸ್ಥಿತಿ ಇಲ್ಲಿದೆ.
” ತಮ್ಮ ಪೂರ್ವಜರ ಸಮಾಧಿಗಳ ಮೇಲೆ ಕುಳಿತು ಪುಂಡ- ಪೋಕರಿಗಳು ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆ ಮಾಡುತ್ತಿರುವುದು ಅಶೋಕಪುರಂನ ಬಹುತೇಕರಿಗೆ ನೋವುಂಟು ಮಾಡಿದೆ. ಅಶೋಕಪುರಂ ಶಾಂತಿಧಾಮ ದಲ್ಲಿ ಜಾಗದ ಕೊರತೆ ಇಲ್ಲ. ಆದರೆ, ನಿರ್ವಹಣೆಯಲ್ಲಿ ಮಾತ್ರ ಸುಧಾರಣೆ ಕಾಣುತ್ತಿಲ್ಲ.”
” ಅಶೋಕಪುರಂ ಶಾಂತಿಧಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಿಬ್ಬಂದಿಯನ್ನು ನೇಮಿಸಬೇಕು. ಈ ಹೊಣೆಗಾರಿಕೆ ನಿಭಾಯಿಸುವುದು ನಗರ ಪಾಲಿಕೆ ಅಧಿಕಾರಿಗಳ ಕರ್ತವ್ಯವಾಗಿದ್ದು, ಈ ಕೂಡಲೇ ಇಲ್ಲಿನ ಅವ್ಯ ವಸ್ಥೆ ಸರಿಪಡಿಸಿ ಶಾಂತಿಧಾಮಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.”
– ವಿಶ್ವ ( ವಿಶ್ವೇಶ್ವರಯ್ಯ),ಅಶೋಕಪುರಂ ನಿವಾಸಿ.
” ನಗರಪಾಲಿಕೆ ಅಧಿಕಾರಿಗಳು ನಗರವನ್ನು ಸ್ವಚ್ಛ ಮಾಡಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಶಾಂತಿ ಧಾಮವನ್ನು ಯಾವಾಗ ಸ್ವಚ್ಛ ಮಾಡುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿ ಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಶಾಂತಿಧಾಮದ ಅಸ್ವಚ್ಛತೆಗೆ ಮುಕ್ತಿ ನೀಡಿ, ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಇಲ್ಲದಿದ್ದರೆ ನಗರಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ.”
-ಪುರುಷೋತ್ತಮ್, ಮಾಜಿ ಮಹಾಪೌರ
” ಅಶೋಕಪುರಂ ಸ್ಮಶಾನದಲ್ಲಿ ಪುಂಡರ ಹಾವಳಿ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂಬಂಧ ಸಿಬ್ಬಂದಿಗಳ ಜೊತೆಗೆ ಚರ್ಚಿಸಿ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಅನುಕೂಲ ಮಾಡುತ್ತೇನೆ.”
-ಶೇಕ್ ತನ್ವೀರ್ ಆಸಿಫ್, ನಗರಪಾಲಿಕೆ ಆಯುಕ್ತ





