ಜಂಬೂ ಸವಾರಿ ಮೆರವಣಿಗೆಯಲ್ಲಿ ೩೫ ಸಿಬ್ಬಂದಿಗಳಿಂದ ಸಾಹಸ
* ೭ ಫಿರಂಗಿ ಬಳಸಿ ತಲಾ ೩ ಸುತ್ತಿನಲ್ಲಿ ೨೧ ಬಾರಿ ಕುಶಾಲುತೋಪು ಸಿಡಿತ
* ಸಿಎಆರ್ ಡಿಸಿಪಿ ಸಿದ್ದನಗೌಡ ಪಾಟೀಲ್ ನೇತೃತ್ವದಲ್ಲಿ ತಯಾರಿ
* ೪ ಫಿರಂಗಿಗಳಿಗೆ ೧ಕೆಜಿ ೮೦೦ ಗ್ರಾಂ ಗನ್ ಪೌಡರ್ ನಿಂದ ತಯಾರಿಸಿದ ಸಿಡಿಮದ್ದು ಬಳಕೆ
* ೩ ಫಿರಂಗಿಗಳಿಗೆ ೧ ಕೆಜಿ ೬೦೦ ಗ್ರಾಂ ಗನ್ ಪೌಡರ್ ಬಳಸಿದ ಸಿಡಿಮದ್ದು ಬಳಕೆ
ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾದ ಜಂಬೂ ಸವಾರಿ ಮೆರವಣಿಗೆಯ ಆರಂಭದಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವಾಗ ಒಂದು ನಿಮಿಷದೊಳಗೆ ೨೧ ಸುತ್ತು ಕುಶಾಲುತೋಪು ಸಿಡಿಸುವುದಕ್ಕೆ ಫಿರಂಗಿ ದಳ ಸಜ್ಜಾಗಿದೆ.
೭ ಫಿರಂಗಿ ಬಳಸಿ ತಲಾ ೩ ಸುತ್ತಿನಲ್ಲಿ ೨೧ ಬಾರಿ ಕುಶಾಲು ತೋಪು ಸಿಡಿಸುವುದಕ್ಕೆ ಸಿಎಆರ್ ಡಿಸಿಪಿ ಸಿದ್ದನಗೌಡ ಪಾಟೀಲ್ ನೇತೃತ್ವದಲ್ಲಿ ಎಸಿಪಿ ಕುಮಾರಸ್ವಾಮಿ ಮಾರ್ಗ ದರ್ಶನದಲ್ಲಿ ೩೬ ಸಿಬ್ಬಂದಿಯನ್ನೊಳಗೊಂಡ ಫಿರಂಗಿ ದಳ ತಮ್ಮ ಪ್ರಾಣ ಲೆಕ್ಕಿಸದೇ ಕುಶಾಲುತೋಪು ಸಿಡಿಸುವುದಕ್ಕೆ ಟೊಂಕ ಕಟ್ಟಿದೆ.
ಈಗಾಗಲೇ ೩ ಬಾರಿ ಕುಶಾಲು ತೋಪು ಸಿಡಿಸುವ ತಾಲೀಮನ್ನು ಯಶಸ್ವಿಯಾಗಿ ನಡೆಸಿರುವ ಫಿರಂಗಿ ದಳ ಇದೀಗ ಅಂತಿಮ ಹಂತದ ಕುಶಾಲುತೋಪು ಸಿಡಿಸುವ ಜವಾಬ್ದಾರಿ ನಿಭಾಯಿಸಲು ಸಂಪೂರ್ಣ ತಯಾರಾಗಿದೆ. ೭ ಫಿರಂಗಿಗಳಲ್ಲಿ ೪ ಫಿರಂಗಿಗಳಿಗೆ ೧ ಕೆಜಿ ೮೦೦ ಗ್ರಾಂ ಗನ್ ಪೌಡರ್‌ನಿಂದ ತಯಾರಿಸಿದ ಸಿಡಿಮದ್ದು ಉಳಿದ ೩ ಫಿರಂಗಿಗಳಿಗೆ ೧ ಕೆಜಿ ೬೦೦ ಗ್ರಾಂ ಗನ್‌ಪೌಡರ್ ಬಳಸಿ ತಯಾರಿಸಿದ ಸಿಡಿಮದ್ದನ್ನು ಬಳಸಿ ಸಿಡಿಸಲಿದ್ದಾರೆ. ಸುಮಾರು ೧೫ ದಿನಗಳು ಒಣ ತಾಲೀಮು ನಡೆಸಿ, ಒಂದೇ ನಿಮಿಷದಲ್ಲಿ ೨೧ ಕುಶಾಲುತೋಪು ಸಿಡಿಸುವ ಚಾಕಚಕ್ಯತೆಯನ್ನು ಫಿರಂಗಿ ದಳ ಮೈಗೂಡಿಸಿ ಕೊಂಡಿದ್ದು, ಇದೀಗ ಜಂಬೂ ಸವಾರಿಯಂದು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ವೇಳೆ ಕರ್ನಾಟಕ ಪೊಲೀಸ್ ವಾದ್ಯವೃಂದ ರಾಷ್ಟ್ರಗೀತೆ ನುಡಿಸುವಾಗ ಒಂದು ನಿಮಿಷದೊಳಗೆ ೨೧ ಬಾರಿ ಕುಶಾಲುತೋಪು ಸಿಡಿಸಲಿದೆ.
ಅಪಾಯಕಾರಿ: ಕುಶಾಲು ತೋಪು ಸಿಡಿಸುವ ಕಾರ್ಯ ಅಪಾಯಕಾರಿಯಾಗಿದ್ದು, ಅಂತಹ ಸವಾಲನ್ನು ಫಿರಂಗಿ ದಳ ಸಮರ್ಥವಾಗಿ ನಿಭಾಯಿಸಲು ಪಣ ತೊಟ್ಟಿದೆ. ಕಿವಿಗಡಚಿಕ್ಕುವ ಭಾರೀ ಪ್ರಮಾಣದ ಶಬ್ದ ದೊಂದಿಗೆ ದಟ್ಟ ಹೊಗೆ ಮತ್ತು ಬೆಂಕಿ ಉಗುಳುವ ಫಿರಂಗಿಯಿಂದ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಸಿಡಿಮದ್ದು ಸಿಡಿಸುವ ಸವಾಲಿನ ಕೆಲಸವನ್ನು ಫಿರಂಗಿ ದಳ ನಿಭಾಯಿಸುತ್ತಿದೆ. ಅ.೨ರಂದು ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ಸಂದರ್ಭದಲ್ಲಿ ಮತ್ತು ಅ.೧ರಂದು ಪಂಜಿನ ಕವಾಯತು ಪೂರ್ವ ತಾಲೀಮಿನ ವೇಳೆ ೨೧ ಬಾರಿ ಕುಶಾಲುತೋಪು ಸಿಡಿಸಲು ಸನ್ನದ್ಧರಾಗಿದ್ದಾರೆ.
ಫಿರಂಗಿ ದಳದ ಸೇನಾನಿಗಳು: ನಗರ ಸಶಸ್ತ್ರ ಮೀಸಲು ಪಡೆಯ ಆರ್‌ಎಸ್‌ಐ ಸಂತೋಷ್ ಕುಮಾರ್, ಎಆರ್‌ಎಸ್‌ಐಗಳಾದ ಸಿದ್ದರಾಜು, ಕೆ.ಕುಮಾರ, ಚನ್ನಬಸವಯ್ಯ, ಜನಾರ್ಧನ ಜೆಟ್ಟಿ, ಎಎಚ್‌ಸಿಗಳಾದ ಆನಂದ ಕುಮಾರ್, ಮೋಹನ್ ಕುಮಾರ್, ಮಂಜು, ಶ್ರೀನಿವಾಸಚಾರಿ, ಚಿಕ್ಕಣ್ಣ, ರವಿ, ಹೊನ್ನಪ್ಪ, ಶಿವಕುಮಾರ್, ಚಿನ್ನಸ್ವಾಮಿ, ಅಣ್ಣೇಗೌಡ, ಕೆಂಡೇಗೌಡ, ಎಪಿಸಿಗಳಾದ ಬಸವರಾಜ, ರತನ್, ಮಲ್ಲಯ್ಯ, ನಾಗರಾಜ, ವಿಷಕಂಠ, ಶಿವಕುಮಾರ್, ರವಿಚಂದ್ರನ್, ಮಹೇಶ, ಮಂಜುನಾಥ್, ರಮೇಶ, ಗ-ರ್, ಮಂಜುನಾಥ, ಮಲ್ಲಪ್ಪ, ಸಂತೋಷ್, ಅಣ್ಣಪ್ಪ, ಪ್ರದೀಪ್, ರವಿಸ್ವಾಮಿ, ಶ್ರೀಕಾಂತ, ರವಿಚಂದ್ರ ಸಿಡಿಮದ್ದು ಸಿಡಿಸಲಿದ್ದಾರೆ.





