Mysore
20
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಜಂಬೂಸವಾರಿಗೆ ಕಳೆ ತಂದ ಕಲಾ ತಂಡಗಳು

ಎಚ್. ಎಸ್.ದಿನೇಶ್ ಕುಮಾರ್

೮೦ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿ; ಮೆರವಣಿಗೆಯಲ್ಲಿ ನಾಡು, ನುಡಿ, ಕಲೆ, ಸಂಸ್ಕೃತಿ ಅನಾವರಣ

ಮೈಸೂರು: ವೀರಭದ್ರ ಕುಣಿತ.., ನಂದಿ ಕಂಬ.., ಜಗ್ಗಲಿಗೆ ಮೇಳ.., ಕಂಗೀಲು ಕುಣಿತ.., ಹುಲಿ ವೇಷ.., ಪಟ ಕುಣಿತ.., ತಮಿಳುನಾಡಿನ ಕರಗ ತಪ್ಪಟಂ.., ದೊಣ್ಣೆ ವರಸೆ.., ಕರಡಿ, ಮಹಿಷ ವೇಷ… ಹೀಗೆ ೮೦ಕ್ಕೂ ಹೆಚ್ಚು ಕಲಾ ತಂಡಗಳು ದಸರಾ ಮಹೋತ್ಸವದ ಅಂತಿಮ ದಿನವಾದ ಗುರುವಾರ ನಡೆದ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಮನಸೂರೆಗೊಂಡವು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮೈಸೂರು ಅರಮನೆ ಮುಂಭಾಗದಿಂದ ಜಂಬೂ ಸವಾರಿ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಕಲಾ ತಂಡಗಳು ಸಾಗಿದವು.

ಪ್ರತಿಯೊಂದು ಕಲಾ ತಂಡವೂ ಆಯಾಯ ಜಿಲ್ಲೆಯ ಕಲೆ, ಸಂಸ್ಕೃತಿ ಹಾಗೂ ವಿಶೇಷತೆಗಳನ್ನು ಬಿಂಬಿಸಿದವು. ಮೊದಲಿಗೆ ಉಡಿಗಾಲ ಮಹದೇವಪ್ಪ ತಂಡದವರು ನಂದಿ ಧ್ವಜ ಕುಣಿತ, ಕೆ.ಆರ್.ಮೊಹಲ್ಲಾ ನಿವಾಸಿಗಳು ಹಾಗೂ ಆಕಾಶವಾಣಿ ಕಲಾವಿದರ ತಂಡದಿಂದ ವೀರಭದ್ರ ಕುಣಿತ, ಬೆಂಗಳೂರು ಹಾಗೂ ಮಂಡ್ಯ ಕಲಾವಿದರು ಕೊಂಬು-ಕಹಳೆ, ಉಡುಪಿಯ ಕಲಾವಿದರಿಂದ ಕುಡುಬಿ ಗುಮಟೆ ನೃತ್ಯ, ಬೆಳಗಾವಿ ಕಲಾವಿದರ ಕರಪಾಲ ನೃತ್ಯ, ಚಿಕ್ಕಬಳ್ಳಾಪುರ ಕಲಾವಿದರ ಗಾರುಡಿ ಗೊಂಬೆ ನೃತ್ಯ, ದಕ್ಷಿಣ ಕನ್ನಡ ಜಿಲ್ಲೆಯ ಕಂಗೀಲು ಕುಣಿತ, ತಮಿಳುನಾಡಿನ ಕರಗ ತಪ್ಪಟಂ, ಉತ್ತರ ಕನ್ನಡ ಜಿಲ್ಲೆಯ ಢಕ್ಕೆ ಕುಣಿತ, ಹಾವೇರಿ, ಶಿವಮೊಗ್ಗ ಹಾಗೂ ದಾವಣಗೆರೆಯ ಡೊಳ್ಳು ಕುಣಿತಗಳು ಸಾರ್ವಜನಿಕರ ಗಮನ  ಸೆಳೆದವು.

ಬಳ್ಳಾರಿಯ ಬುಡಕಟ್ಟು ಜನರ ಹಕ್ಕಿಪಿಕ್ಕಿ ನೃತ್ಯ, ಮಹರ್ಷಿ ವಾಲ್ಮೀಕಿ ತಂಡದವರ ಮರಗಾಲು ಕುಣಿತ, ಪದ್ಮಶ್ರೀ ಪ್ರಸನ್ನಕುಮಾರ್ ಹಾಗೂ ನಾಡೋಜ ಮುನಿವೆಂಕಟಪ್ಪ ಅವರ ತಮಟೆ ವಾದನ, ಶಹನಾಯಿ ವಾದನ, ಗಣಿ ವಾದನ, ಗುಜರಾತ್‌ನ ಗರ್ಭಾ ಬುಡಕಟ್ಟು ನೃತ್ಯ, ನಾದಸ್ವರ, ಲೇಂಗಿ ನೃತ್ಯ, ಬೇಡರ ವೇಷ, ಚಂಡೆ ವಾದನ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ತಂದವು.

ಬಸವಳಿದ ಕಲಾವಿದರು: ಅರಮನೆ ಆವರಣದಲ್ಲಿ ಆರಂಭವಾದ ಜಂಬೂಸವಾರಿ ಮೆರವಣಿಗೆಯಲ್ಲಿ ಅದ್ಭುತವಾಗಿ ಹೆಜ್ಜೆ ಹಾಕಿದ ಕಲಾವಿದರು. ಆಯುರ್ವೇದ ಆಸ್ಪತ್ರೆ ಬಳಿ ಬರುತ್ತಿದ್ದಂತೆ ಮಂಕಾದಂತೆ ಕಂಡುಬಂದರು. ಈ ವೇಳೆ ಬಿಸಿಲು ಇಲ್ಲದ ಕಾರಣ ಸಮಾಧಾನಚಿತ್ತದಿಂದಲೇ ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನೀರು, ಮಜ್ಜಿಗೆ ವಿತರಣೆ: ದಾರಿಯುದ್ದಕ್ಕೂ ಕಲಾವಿದರಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳವರು ಹಾಗೂ ದಸರಾ ಸಮಿತಿ ವತಿಯಿಂದ ನೀರು, ಮಜ್ಜಿಗೆ ವಿತರಿಸಲಾಯಿತು.

Tags:
error: Content is protected !!