ಕುರುಬನದೊಡ್ಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಸಿಎಂ, ಶಾಸಕರಿಗೆ ಪತ್ರ
ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಡೆ ಕುರುಬನದೊಡ್ಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳು ಸಮರ್ಪಕ ವಾಹನದ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿನಿತ್ಯ ೫ ಕಿ.ಮೀ. ನಡೆದುಕೊಂಡು ಹೋಗಬೇಕಿರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.
ತಾಲ್ಲೂಕಿನ ಅಂಡೆ ಕುರುಬನದೊಡ್ಡಿ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಹನೂರು, ಒಡೆಯರಪಾಳ್ಯ, ಹನೂರು ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಗೆ ತೆರಳಲು ಸಮರ್ಪಕ ರಸ್ತೆ ಹಾಗೂ ವಾಹನ ವ್ಯವಸ್ಥೆ ಇಲ್ಲದೆ ಇರುವುದರಿಂದ ಪ್ರತಿನಿತ್ಯ ಶಾಲೆಗೆ ಹೋಗಲು ೫ ಕಿ.ಮೀ., ವಾಪಸ್ ಗ್ರಾಮಕ್ಕೆ ತೆರಳಲು ೫ ಕಿ.ಮೀ. ನಡೆದುಕೊಂಡು ಹೋಗಬೇಕಿದೆ. ಒಟ್ಟಾರೆ ಪ್ರತಿನಿತ್ಯ ೧೦ ಕಿ.ಮೀ. ನಡೆದುಕೊಂಡು ಹೋಗುತ್ತಿರುವುದರಿಂದ ಶಾಲಾ ಅವಧಿಗೆ ಹೋಗಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪಾಠ ಪ್ರವಚನಗಳಿಂದ ವಂಚಿತರಾಗುತ್ತಿದ್ದಾರೆ.
ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣ ಪಡೆದುಕೊಂಡು ತಮ್ಮ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಭಾಷಣ ಮಾಡುತ್ತಾರೆ. ಆದರೆ ಒಂದು ಗ್ರಾಮದ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುತ್ತಿಲ್ಲ. ಹೀಗಾದರೆ ಅಭಿವೃದ್ಧಿ ಹೊಂದುವುದಾದರೂ ಹೇಗೆ ಎಂದು ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ವಾಹನ ವ್ಯವಸ್ಥೆಗೆ ಮನವಿ: ಅಂಡೆ ಕುರುಬರದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ತಾಲ್ಲೂಕಿನ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಹೋಗಬೇಕಾಗಿರುವುದರಿಂದ ಪ್ರತಿನಿತ್ಯ ೫ ಕಿ.ಮೀ. ನಡೆದುಕೊಂಡು ಹೋಗಬೇಕಿದೆ.
ಇದರಿಂದ ೨-೩ ಗಂಟೆ ವ್ಯರ್ಥವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವ್ಯಾನ್ ಅಥವಾ ಮಿನಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್‌ರವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ?: ನಮ್ಮ ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲದೆ ವಾಹನದ ವ್ಯವಸ್ಥೆ ಇಲ್ಲದಂತಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಆದ್ದರಿಂದ ವಾಹನ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಾದ ಗೋಪಾಲ್ ನಾಯ್ಕ, ಚಂದ್ರ ನಾಯ್ಕ, ನಾಗೇಶ್ ನಾಯ್ಕ, ಚಂದ್ರ, ಆನಂದ ನಾಯ್ಕ, ನಾಗುನಾಯ್ಕ, ಹಲವು ವಿದ್ಯಾರ್ಥಿಗಳು ಸಹಿ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
” ಅಂಡೆ ಕುರುಬನದೊಡ್ಡಿ ಗ್ರಾಮಕ್ಕೆ ಸಾರಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಗ್ರಾಮಸ್ಥರು ಮನವಿ ಕೊಟ್ಟ ಬಳಿಕ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಬಸ್ ವ್ಯವಸ್ಥೆ ಮಾಡಿಸಲು ಕ್ರಮ ಕೈಗೊಳ್ಳುತ್ತೇವೆ.”
-ಭೋಗನಾಯ್ಕ, ವ್ಯವಸ್ಥಾಪಕರು, ಕೊಳ್ಳೇಗಾಲ ಬಸ್ ಡಿಪೋ
” ಪ್ರತಿನಿತ್ಯ ಶಾಲೆಗೆ ನಡೆದುಕೊಂಡು ಹೋಗಬೇಕಾಗಿರುವುದರಿಂದ ಶಾಲೆಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ೨ ಗಂಟೆ ನಡೆದುಕೊಂಡು ಹೋಗುವುದರಲ್ಲಿ ಕಳೆದು ಹೋಗುತ್ತಿದೆ. ಮುಖ್ಯಮಂತ್ರಿಗಳು ನಮ್ಮ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಮಾಡಿ ವಾಹನ ವ್ಯವಸ್ಥೆ ಕಲ್ಪಿಸಬೇಕು. ಕಾಡು ಪ್ರಾಣಿಗಳಿಂದ ಯಾವುದಾದರೂ ತೊಂದರೆ ಆದರೆ ಯಾರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ?”
-ಮೇಘನಾ, ೧೦ನೇ ತರಗತಿ ವಿದ್ಯಾರ್ಥಿನಿ





