Mysore
13
scattered clouds

Social Media

ಗುರುವಾರ, 08 ಜನವರಿ 2026
Light
Dark

ವಾರಾಂತ್ಯಕ್ಕೆ ಮತ್ತೊಂದು ವಾಯುಭಾರ ಕುಸಿತ

ಗಿರೀಶ್‌ ಹುಣಸೂರು

ಮೈಸೂರು: ಫೆಂಗಲ್ ಚಂಡಮಾರುತದ ಹೊಡೆತದಿಂದ ತತ್ತರಿಸಿ ಹೋಗಿರುವ ಜನತೆ ವಾರಾಂತ್ಯದ ವೇಳೆಗೆ ಪ್ರಕೃತಿಯ ಮತ್ತೊಂದು ಹೊಡೆತಕ್ಕೆ ಸಿದ್ಧರಾಗಬೇಕಾಗಿದೆ.

ಫೆಂಗಲ್ ಚಂಡಮಾರುತವು ಈಗಾಗಲೇ ದುರ್ಬಲಗೊಂಡು ಅರಬ್ಬಿ ಸಮುದ್ರ ಪ್ರವೇಶಿಸಿದ್ದು, ಮುಂದೆ ಪಶ್ಚಿಮಾಭಿಮುಖವಾಗಿ ಚಲಿಸು ತ್ತಿದ್ದಂತೆಯೇ ರಾಜ್ಯದಲ್ಲಿ ಅದರ ಪ್ರಭಾವ ಕಡಿಮೆಯಾಗಲಿದೆ. ಆದರೆ, ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿಯ ಪರಿಣಾಮದಿಂದ ಅಲ್ಲಲ್ಲಿ ಹಿಂಗಾರು ರೀತಿಯ ಗುಡುಗು ಸಹಿತ ಮಳೆಯಾಗುವ ಲಕ್ಷಣಗಳಿವೆ.

ಈಗಿನ ವಿದ್ಯಮಾನಗಳ ಪ್ರಕಾರ ಡಿ.೭ರ ವೇಳೆಗೆ ಬಂಗಾಳಕೊಲ್ಲಿಯ ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಇನ್ನೊಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ. ಆದರೆ, ಆ ವೇಳೆ ಗಾಳಿಯ ಒತ್ತಡದ ಮೇಲೆ ವಾಯುಭಾರ ಕುಸಿತದ ಪರಿಣಾಮವನ್ನು ಅಂದಾಜಿಸಬಹುದಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡಿ.೪ರಂದು ಬೆಳಿಗ್ಗೆ ೮ ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಪ್ರಕಾರ ಕೇರಳದ ಕಾಸರಗೋಡು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಈಗಿನ ಮಳೆಯ ವಾತಾವರಣವು ಮಧ್ಯಾಹ್ನದ ನಂತರ ಕಡಿಮೆ ಯಾಗುವ ಮುನ್ಸೂಚನೆ ಇದೆ. ಈಗಿನಂತೆ ಡಿ.೪ರಿಂದ ೨ ದಿನಗಳವರೆಗೆ ಉತ್ತರ ಕನ್ನಡ ಜಿಯ ಅಲ್ಲಲ್ಲಿ ಮಳೆ ಮುನ್ಸೂಚನೆ ಇದ್ದು, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಗಳಲ್ಲಿ ಮೋಡ ಹಾಗೂ ಒಳನಾಡು ಕಡೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಡಿ.೮ರವರೆಗೆ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.

ಕೊಡಗು ಜಿಯಲ್ಲಿ ಮಳೆ ಕಡಿಮೆಯಾಗಿ ಮೋಡದ ವಾತಾವರಣ ಮುಂದುವರಿಯಲಿದ್ದು, ಕರಾವಳಿ ಜಿಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಲೆನಾಡು ಭಾಗದ ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಗಳಲ್ಲಿ ಮೋಡ ಆವರಿಸಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಡಿ.೬ರಿಂದ ಮತ್ತೆ ಮಳೆಯ ಮುನ್ಸೂಚನೆ ಇದೆ.

ಉತ್ತರ ಒಳನಾಡಿನ ಹಾವೇರಿ-ದಾವಣಗೆರೆ ಗಡಿ ಭಾಗಗಳ ಸುತ್ತಮುತ್ತ ಮಳೆಯ ಮುನ್ಸೂಚನೆ ಇದೆ. ಉಳಿದಂತೆ ಹಾವೇರಿ, ಧಾರವಾಡ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡಿನ ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ, ತುಮಕೂರು(ಪಾವಗಡ ಸಹಿತ), ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ. ಸುಮಂತ್ ಕುಮಾರ್ ತಿಳಿಸಿದ್ದಾರೆ.

Tags:
error: Content is protected !!