Mysore
23
scattered clouds

Social Media

ಸೋಮವಾರ, 12 ಜನವರಿ 2026
Light
Dark

ಸಚಿವ ಸ್ಥಾನಕ್ಕೆ ಅನಿಲ್ ಚಿಕ್ಕಮಾದು ಪ್ರಬಲ ಪೈಪೋಟಿ

ಮಂಜು ಕೋಟೆ

ಹಳೇ ಮೈಸೂರು ಭಾಗದ ನಾಯಕ ಸಮುದಾಯದ ಏಕೈಕ ಶಾಸಕರಾಗಿರುವುದು ಪ್ಲಸ್ ಪಾಯಿಂಟ್

ಎಚ್.ಡಿ.ಕೋಟೆ: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ತೆರವಾಗಿರುವ ಎರಡು ಸಚಿವ ಸ್ಥಾನಗಳಿಗೆ ನಾಯಕ ಸಮುದಾಯದ ಮೂವರು ಶಾಸಕರ ನಡುವೆ ನಡೆದಿರುವ ಪೈಪೋಟಿಯಲ್ಲಿ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕಾಂಗ್ರೆಸ್ ಪಕ್ಷದ ಸಚಿವರಾಗಿದ್ದ ನಾಯಕ ಸಮುದಾಯದ ಬಳ್ಳಾರಿ ಶಾಸಕ ಬಿ.ನಾಗೇಂದ್ರ ಹಾಗೂ ಮಧುಗಿರಿಯ ಶಾಸಕ ಕೆ.ಎನ್.ರಾಜಣ್ಣ ಅವರು ಕೆಲವೊಂದು ಕಾರಣಗಳಿಂದ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿರುವುದರಿಂದ ತೆರವಾಗಿರುವ ಆ ಸ್ಥಾನಗಳಿಗೆ ನಾಯಕ ಸಮುದಾಯದ ಪ್ರಭಾವಿ ಕಾಂಗ್ರೆಸ್ ಶಾಸಕರುಗಳಾದ ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಚಳ್ಳಕೆರೆ ಶಾಸಕರಾದ ರಘುಮೂರ್ತಿ ಮತ್ತು ಬಳ್ಳಾರಿ ಶಾಸಕರಾದ ನಾಗೇಂದ್ರರವರ ನಡುವೆ ಪೈಪೋಟಿ ಉಂಟಾಗಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಸೇರಿದಂತೆ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಸಮುದಾಯದ ಏಕೈಕ ಶಾಸಕರಾಗಿರುವ ಕೋಟೆ ಶಾಸಕ ಅನಿಲ್, ಎರಡನೇ ಬಾರಿ ಗೆಲುವು ಸಾಧಿಸುವ ಜೊತೆಗೆ ಯುವಕರಾಗಿದ್ದಾರೆ. ನಾಯಕ ಸಮುದಾಯದ ಮುಖಂಡರಾಗಿದ್ದ ದಿ.ಚಿಕ್ಕಮಾದು ಅವರ ಪುತ್ರರಾಗಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರರವರಿಗೆ ಆಪ್ತರಾಗಿರುವುದರಿಂದ ಸಚಿವ ಸ್ಥಾನಕ್ಕೆ ಅನಿಲ್ ಪ್ರಬಲ ಪೈಪೋಟಿ ನೀಡುತ್ತಿದ್ದು, ಹಲವು ಪ್ರಭಾವಿಗಳು ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಚಳ್ಳಕೆರೆಯ ಶಾಸಕರಾದ ನಾಯಕ ಸಮುದಾಯದ ರಘುಮೂರ್ತಿ ಅವರೂ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿರುವುದರಿಂದ ಈ ಬಾರಿ ನನಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟುಹಿಡಿದು ಅನೇಕರ ಮುಖಾಂತರ ಪ್ರಬಲ ಹೋರಾಟ ನಡೆಸುತ್ತಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಬಳ್ಳಾರಿಯ ನಾಯಕ ಸಮುದಾಯದ ಶಾಸಕರಾದ ನಾಗೇಂದ್ರರವರು ಮತ್ತೆ ಸಚಿವ ಸ್ಥಾನ ಪಡೆಯಲೇಬೇಕೆಂದು ಪಣತೊಟ್ಟು ಅನೇಕ ಪ್ರಭಾವಿಗಳ ಮುಖಾಂತರ ತೀವ್ರ ಕಸರತ್ತು ನೆಡೆಸುತ್ತಿದ್ದಾರೆ.

ಈ ಮೂವರು ಶಾಸಕರ ಪೈಕಿ ಇಬ್ಬರಿಗೆ ಕೆಲವೊಂದು ಆದ್ಯತೆ ಮೇರೆಗೆ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಎದುರಾಗಿರುವುದರಿಂದ ನಾಗೇಂದ್ರ ಮತ್ತು ರಘುಮೂರ್ತಿ ಅವರಿಗಿಂತ ಅನಿಲ್ ಚಿಕ್ಕಮಾದು ಅವರು ಕೆಲವೊಂದು ವಿಚಾರಗಳಲ್ಲಿ ಮುಂದಿರುವುದರಿಂದ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

” ಸಚಿವ ಸ್ಥಾನಕ್ಕೆ ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಎಲ್ಲರ ಸಹಕಾರ ಮತ್ತು ಬೆಂಬಲದೊಂದಿಗೆ ಈ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದೇನೆ. ಜನತೆ ನೀಡಿದ ಅಧಿಕಾರದಿಂದ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ವರಿಷ್ಠರುಗಳು ನೀಡುವ ಯಾವುದೇ ಸ್ಥಾನಮಾನವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ.”

-ಅನಿಲ್ ಚಿಕ್ಕಮಾದು, ಶಾಸಕರು

Tags:
error: Content is protected !!