ಮಂಜು ಕೋಟೆ
ಎಚ್.ಡಿ.ಕೋಟೆ: ಪ್ರಪ್ರಥಮವಾಗಿ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮತ್ತು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಒಂದೇ ವೇದಿಕೆಯಲ್ಲಿ ಭಾಗವಹಿಸಿ ಸಮುದಾಯದ ಮತ್ತು ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ನಡೆಸಿರುವುದು ತಾಲ್ಲೂಕಿನಲ್ಲಿ ಸಂಚಲನ ಮೂಡಿಸಿದೆ.
ಶಾಸಕ ಅನಿಲ್ ಚಿಕ್ಕಮಾದು ಮತ್ತು ಬೀಚನಹಳ್ಳಿ ಚಿಕ್ಕಣ್ಣ ತಮ್ಮದೇ ಆದ ನಾಯಕತ್ವ ಹೊಂದಿದ್ದು, ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಇವರು ಒಂದು ಬಾರಿಯೂ ಕೂಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ.
ಆದರೆ, ಪಟ್ಟಣದ ಆಡಳಿತ ಭವನದಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಮತ್ತು ನಾಯಕ ಸಮುದಾಯದ ಕುಂದುಕುರತೆಯ ಸಭೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಭಾಗವಹಿಸಿ ಪಟ್ಟಣದ ಹೈಟೆಕ್ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸಲು, ಗ್ರಾಮಗಳಲ್ಲಿರುವ ವಾಲ್ಮೀಕಿ ಭವನಗಳ ಕಾಮಗಾರಿ ಪೂರ್ಣ ಮಾಡಲು ಅನುದಾನ ಬಿಡುಗಡೆ ಮಾಡಿಸುವುದು, ಎಸ್‌ಟಿ ಸಮುದಾಯಕ್ಕೆ ಬೇರೆ ಸಮುದಾಯಗಳ ಸೇರ್ಪಡೆಗೆ ವಿರೋಧ, ನಾಯಕ ಸಮುದಾಯದವರು ಸಂಘಟಿತರಾಗುವುದು, ಅ.೭ರಂದು ಪಟ್ಟಣದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥ ಪೂರ್ಣವಾಗಿ, ಒಗ್ಗಟ್ಟಾಗಿ ನಡೆಸುವುದೂ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.
ನಂತರ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಮಗ ಜಯಪ್ರಕಾಶ್ ಚಿಕ್ಕಣ್ಣ ಸ್ಪರ್ಧಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ನಾಯಕ ಸಮುದಾಯದ ಸಂಘಟನೆಯ ವಿಚಾರದಲ್ಲಿ ನಾನು ಮತ್ತು ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಎಲ್ಲರೂ ಒಂದಾಗಿದ್ದೇವೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಸಮಾಜದ ಹಿರಿಯರಾದ, ಮಾಜಿ ಶಾಸಕ ಚಿಕ್ಕಣ್ಣ ಅವರು ತಮ್ಮ ಮಾರ್ಗದರ್ಶನವನ್ನು ನನಗೆ ಮತ್ತು ಸಮಾಜಕ್ಕೆ ನೀಡಬೇಕಾಗಿದೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಸಮಾಜ ವನ್ನು ಬಲಿಷ್ಠಗೊಳಿಸುವ ಕೆಲಸ ಮಾಡೋಣ ಎಂದರು.
ತಾಲ್ಲೂಕಿನ ಜನರ ಪರವಾಗಿ ನಾನು ಸದಾ ಇರುತ್ತೇನೆ. ಭವನಗಳ ಕಾಮಗಾರಿ ಪೂರ್ಣಗೊಳ್ಳಲು ೨ ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳಿಂದ ಶೀಘ್ರವೇ ಬಿಡುಗಡೆ ಮಾಡಿಸಲಾಗುವುದು ಎಂದು ತಿಳಿಸಿದರು.
ನಾಯಕ ಸಮುದಾಯದ ಬಹುತೇಕ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದ ಈ ಸಭೆ ಎಲ್ಲರ ಗಮನ ಸೆಳೆಯಿತು. ಅಲ್ಲದೆ, ಹಾಲಿ ಮತ್ತು ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ತಾಲ್ಲೂಕಿನ ಜನರಲ್ಲಿ ಕುತೂಹಲ ಮೂಡಿಸಿದೆ.
” ನಾಯಕ ಸಮುದಾಯದ ಸಂಘಟನೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಹಿರಿಯರಾಗಿದ್ದು ಅವರ ಮಾರ್ಗ ದರ್ಶನ, ಸಲಹೆ, ಸಹಕಾರ ನಮಗೆ ಮತ್ತು ಸಮುದಾಯಕ್ಕೆ ಮುಖ್ಯವಾಗಿದೆ. ನಮ್ಮಲ್ಲಿ ಮತ್ತು ಅವರಲ್ಲಿ ಯಾವುದೇ ಮನಸ್ತಾಪಗಳಿಲ್ಲ.”
-ಅನಿಲ್ ಚಿಕ್ಕಮಾದು, ಶಾಸಕರು
” ಸಮುದಾಯದ ಹೋರಾಟ ಮತ್ತು ಸಂಘಟನೆ, ವಾಲ್ಮೀಕಿ ಭವನಗಳ ಕಾಮಗಾರಿ ಪೂರ್ಣ ಹಾಗೂ ಇನ್ನಿತರ ಸಮುದಾಯದ ಕೆಲಸ ಕಾರ್ಯಗಳಿಗೆ ನಾವೆಲ್ಲ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಅನಿಲ್ ರವರಿಗೆ ನನ್ನ ಬೆಂಬಲ ಸಹಕಾರ ನೀಡಲಿದ್ದೇನೆ.”
-ಬೀಚನಹಳ್ಳಿ ಚಿಕ್ಕಣ್ಣ, ಮಾಜಿ ಶಾಸಕರು





