Mysore
22
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಅಂಗನವಾಡಿಗಳಿಗೆ ೬ ತಿಂಗಳಿಂದ ಬಾರದ ಮೊಟ್ಟೆ ಹಣ!

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ ಬಿಡುಗಡೆಯಾಗಿಲ್ಲ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಮೊಟ್ಟೆ ಬಿಲ್ ಆಗುವವರೆಗೆ ಸ್ವಂತ ಹಣ ಬಳಸಿ ಇಲ್ಲವೇ ಸರಬರಾಜು ಮಾಡುವವರಿಂದಲೇ ಮೊಟ್ಟೆಯನ್ನು ಸಾಲದ ರೂಪದಲ್ಲಿ ಪಡೆದು ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವಿತರಣೆ ಮಾಡುತ್ತಾ ಬಂದಿದ್ದಾರೆ.

ಮೂರರಿಂದ ಆರು ವರ್ಷಗಳ ಮಕ್ಕಳಿಗೆ ವಾರದಲ್ಲಿ ಎರಡು ದಿನ ಅಂದರೆ ಬುಧವಾರ, ಶುಕ್ರವಾರ ಬೇಯಿಸಿದ ಮೊಟ್ಟೆಯನ್ನು ಮಕ್ಕಳಿಗೆ ವಿತರಿಸಲಾಗುತ್ತದೆ. ಅದೇ ರೀತಿ ಒಂದೂವರೆ ತಿಂಗಳ ಮೇಲ್ಪಟ್ಟ ಗರಿಷ್ಟ ೯ತಿಂಗಳವರೆಗಿನ ಗರ್ಭಿಣಿಯರು ಮತ್ತು ಬಾಣಂತಿಯರಿಗೆ (ಮಗುವಿಗೆ ೬ತಿಂಗಳು ಆಗುವ ತನಕ) ಮೊಟ್ಟೆ ಯನ್ನು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ವಿತರಿಸಲಾಗುತ್ತದೆ.ಮೊಟ್ಟೆ ನೀಡಿಕೆ ಮೂಲ ಉದ್ದೇಶ ಅಪೌಷ್ಟಿಕತೆಯನ್ನು ಹೋಗಲಾಡಿಸುವುದಾಗಿದೆ.

ಗರ್ಭಿಣಿ ಮತ್ತು ಬಾಣಂತಿಯರಿಗೆ ತಿಂಗಳಲ್ಲಿ ಕೆಲಸದ ದಿನಗಳು ಎಷ್ಟು ಬರುತ್ತವೆ ಅದರ ಆಧಾರದ ಮೇಲೆ ಅಷ್ಟೂ ದಿನಗಳ ಮೊಟ್ಟೆಯನ್ನು ಒಟ್ಟಿಗೆ ವಿತರಣೆ ಮಾಡಲಾಗುತ್ತದೆ.ಪ್ರತಿ ಮೊಟ್ಟೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ೬ರೂ.ನಿಗದಿ ಮಾಡಿದೆ.

ಈ ದರಕ್ಕೆ ಸದ್ಯ ಮೊಟ್ಟೆ ಸಿಗದಿರುವುದು ಮತ್ತು ೬ ತಿಂಗಳಿಂದ ಮೊಟ್ಟೆ ವಿತರಣೆ ಹಣ ಅಂಗನವಾಡಿ ಕೇಂದ್ರಗಳ ಬಾಲ ವಿಕಾಸ ಸಮಿತಿಗೆ ಬಿಡುಗಡೆ ಯಾಗದಿರುವುದು ನಮಗೆ ಬಹಳ ಸಮಸ್ಯೆ ತಂದೊಡ್ಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಿದರು. ಬಜೆಟ್ ಕೊರತೆಯಿಂದ ಅನುದಾನ ನೀಡಿಕೆ ವಿಳಂಬವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಮೊಟ್ಟೆ ಧಾರಣೆ ಹೆಚ್ಚಳ: ಕ್ರಿಸ್‌ಮಸ್ ಕಾರಣಕ್ಕೆ ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರ ಹೆಚ್ಚಾಗಿದೆ. ಚಳಿಗಾಲದಲ್ಲಿ ಮೊಟ್ಟೆಗೆ ಹೆಚ್ಚು ಬೇಡಿಕೆಯೂ ಉಂಟು. ಇಳುವರಿಯೂ ಕಡಿಮೆ. ಇದರಿಂದ ಸಹಜವಾಗಿಯೇಮೊಟ್ಟೆ ದರ ೮ ರೂ. ತಲುಪಿದ್ದು ಕ್ರಿಸ್ ಮಸ್ ತನಕ ಇನ್ನೂಬೆಲೆ ಏರಿಕೆಯಾಗಲೂ ಬಹುದು. ಕ್ರಿಸ್‌ಮಸ್ ಸಂದರ್ಭದಲ್ಲಿ ಕೇಕ್ ತಯಾರಿಸಲು ಮೊಟ್ಟೆಯನ್ನು ಅಧಿಕವಾಗಿ ಬಳಸಲಾಗುತ್ತದೆ. ಮೊಟ್ಟೆ ದರ ಏರಿಕೆ ಸಮಸ್ಯೆ ಡಿಸೆಂಬರ್‌ನಲ್ಲಿ ಯಾವಾಗಲೂ ಇರುತ್ತದೆ. ಉಳಿದ ತಿಂಗಳಲ್ಲಿ ನಾವು ಕೊಡುವ ೬ ರೂ. ಅಥವಾ ಅದಕ್ಕಿಂತ ತುಸು ಕಡಿಮೆ ಇರುತ್ತದೆ. ಹಾಗಾಗಿ ವ್ಯತ್ಯಾಸದ ಹಣ ಸರಿದೂಗಿಸಿಕೊಂಡು ಮೊಟ್ಟೆ ವಿತರಣೆ ಮಾಡಲು ಅಂಗನವಾಡಿಯವರಿಗೆ ತಿಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು

ಇಲಾಖೆ ನೀಡುವುದಕ್ಕಿಂತ ೨ ರೂ. ಜಾಸ್ತಿ!:  ಪ್ರತಿ ಕೋಳಿ ಮೊಟ್ಟೆಗೆ ಇಲಾಖೆ ೬ ರೂ. ನೀಡುತ್ತದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಇದರ ಬೆಲೆ ೮ ರೂ ಇದೆ. ಇದು ಕೂಡ ದೊಡ್ಡ ಸಮಸ್ಯೆಯಾಗಿದೆ. ಈ ವಿಚಾರವನ್ನು ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕಾರ್ಯಕರ್ತೆಯರು ಮನವರಿಕೆ ಮಾಡಿ ತಿಂಗಳಿಗೆ ನೀಡುವ ಮೊಟ್ಟೆಗಳ ಸಂಖ್ಯೆಯನ್ನು ಅವರವರ ಹಂತದಲ್ಲಿ ಕಡಿತ ಮಾಡಿಕೊಂಡಿದ್ದಾರೆ. ಫಲಾನುಭವಿಗಳ ಸಂಖ್ಯೆ ಕಡಿಮೆ ಇರುವ ಕಡೆ ಹೆಚ್ಚುವರಿ ಹಣವನ್ನು ಕೈಯಿಂದ ಹಾಕಿ ವಿತರಣೆ ಮಾಡಿರುವ ಉದಾ ಹರಣೆ ಗಳೂ ಇವೆ ಎಂದು ನೌಕರರೊಬ್ಬರು ತಿಳಿಸಿದರು.

” ೨೦ ಲಕ್ಷ ರೂ. ಅನುದಾನ ಬಂದಿದ್ದು ಇನ್ನೊಂದು ವಾರದಲ್ಲಿ ಕೋಳಿಮೊಟ್ಟೆ ವಿತರಣೆಯ ಬಾಕಿ ಹಣವನ್ನು ಸಂಬಂಧಿಸಿದ ಅಂಗನವಾಡಿ ಕೇಂದ್ರಗಳಿಗೆ ಜಮೆ ಮಾಡಲಾಗುವುದು.”

-ನಾಗೇಶ್, ಸಿಡಿಪಿಒ, ಚಾ.ನಗರ 

Tags:
error: Content is protected !!