Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವರ್ಷವಾದರೂ ಉದ್ಘಾಟನೆಯಾಗದ ಅಂಗನವಾಡಿ ಕೇಂದ್ರ

ಮಂಜು ಕೋಟೆ

ಶಿಥಿಲ ಕಟ್ಟಡದಲ್ಲೇ ಮಕ್ಕಳಿಗೆ ಆಟ-ಪಾಠ, ಪೋಷಕರ ಆತಂಕ

ಎಚ್‌.ಡಿ.ಕೋಟೆ: ಪಟ್ಟಣದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ವರ್ಷ ಕಳೆದರೂ ಅಧಿಕಾರಿಗಳ, ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆ ಆಗದೆ ಮಕ್ಕಳು ಶಿಥಿಲವಾದ ಅಂಗನವಾಡಿ ಕಟ್ಟಡದಲ್ಲೇ ಪಾಠ ಕೇಳುವ ಪರಿಸ್ಥಿತಿ ಮುಂದುವರಿದಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಹತ್ತನೇ ವಾರ್ಡಿನ ಚಂದ್ರ ಲೇಔಟ್‌ನಲ್ಲಿ ಒಂದು ವರ್ಷದ ಹಿಂದೆ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದ್ದು, ಇನ್ನೂ ಲೋಕಾರ್ಪಣೆಯಾಗಿಲ್ಲ.

2 ವರ್ಷಗಳ ಹಿಂದೆ ಕಾಳಿದಾಸ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಅಂಗನವಾಡಿ ಕೇಂದ್ರವನ್ನು ಪಟ್ಟಣದ ಮೊದಲ ಮುಖ್ಯ ರಸ್ತೆಯಲ್ಲಿರುವ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಒಂದು ಹಳೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು.

ಪ್ರಾರಂಭದಲ್ಲಿ ಸುಮಾರು 10-15 ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರುತ್ತಿದ್ದರು. ಅಂಗನವಾಡಿ ಕೇಂದ್ರ ದೂರವಿದೆ ಎಂಬ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಕಳಿಸದೇ ಇದ್ದುದರಿಂದ 2 ವರ್ಷಗಳಿಂದ ಜಾಗ ಬದಲಾವಣೆಯಾದ ಬಳಿಕ ಏಳೆಂಟು ಮಕ್ಕಳು ಮಾತ್ರ ಬರುತ್ತಿದ್ದಾರೆ

ಈ ಹಿನ್ನೆಲೆಯಲ್ಲಿ ವಾರ್ಡಿನ ಸದಸ್ಯ ಮಿಲ್ ನಾಗರಾಜು ಅವರ ನಿರಂತರ ಪ್ರಯತ್ನದ ಫಲವಾಗಿ ವಾರ್ಡ್‌ನಲ್ಲಿ ನೂತನ ಲೇಔಟ್ ನಿರ್ಮಾಣ ಆದ ನಂತರ ಸಿಎ ನಿವೇಶನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಒತ್ತಡ ಹಾಕಿ ಜಾಗವನ್ನು ಇಲಾಖೆಗೆ ಹಸ್ತಾಂತರ ಮಾಡಿಸಿದರು. ನಂತರ ಈ ಹಿಂದೆ ಸಿಡಿಪಿಒ ಆಗಿದ್ದ ಆಶಾ ಅವರು ಸರ್ಕಾರದಿಂದ ಸುಮಾರು 17 ಲಕ್ಷ ರೂ. ಬಿಡುಗಡೆ ಮಾಡಿಸಿ ಸುಸಜ್ಜಿತ ಕೇಂದ್ರ ನಿರ್ಮಾಣ ಆಗಲು ಶ್ರಮಿಸಿದರು. ಕಟ್ಟಡ ನಿರ್ಮಾಣವಾಗಿ ವರ್ಷ ಕಳೆದಿದ್ದರೂ ಶಾಸಕ ಅನಿಲ್ ಚಿಕ್ಕಮಾದು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಕಟ್ಟಡವನ್ನು ಉದ್ಘಾಟನೆ ಮಾಡಲು ಮುಂದಾಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ.

ಈಗಿರುವ ಅಂಗನವಾಡಿ ಕಟ್ಟಡ ತುಂಬಾ ಹಳೆಯದಾಗಿದ್ದು, ಚಾವಣಿಯ ಗಾರೆ ಕಿತ್ತು ಬೀಳುತ್ತಿದೆ. ಅಂಗನವಾಡಿ ಕೇಂದ್ರದ ನೌಕರರು ದಿನನಿತ್ಯ ಭಯದಲ್ಲೇ ಕಾಲ ದೂಡುತ್ತಿದ್ದಾರೆ. ಇನ್ನಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.

ಒಂದು ವರ್ಷದಿಂದ ಕಟ್ಟಡ ಉದ್ಘಾಟನೆ ಮಾಡಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರಂತರವಾಗಿ ಒತ್ತಡ ಹಾಕಿದರೂ ಇನ್ನೂ ಕೂಡ ಉದ್ಘಾಟನೆ ಮಾಡಲು ಮುಂದಾಗಿಲ್ಲ. ಇದು ತಾಲ್ಲೂಕಿನ ಆಡಳಿತದ ದುಸ್ಥಿತಿಗೆ ಸಾಕ್ಷಿಯಾಗಿದೆ.

ಮಿಲ್ ನಾಗರಾಜು, ಹತ್ತನೇ ವಾರ್ಡ್ ಪುರಸಭೆ ಸದಸ್ಯ.

ಇತ್ತೀಚೆಗೆ ವರ್ಗವಾಗಿ ಬಂದು ಅಧಿಕಾರ ಸ್ವೀಕರಿಸಿದ್ದೇನೆ. ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಏಕೆ ಆಗಿಲ್ಲ ಎಂಬ ಬಗ್ಗೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಶಾಸಕರ
ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇನೆ.
-ದೀಪಾ, ಸಿಡಿಪಿಒ, ಎಚ್.ಡಿ.ಕೋಟೆ.

 

Tags: