Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಾವು ಬರೆಯದೇ ಹೋದರೆ ಯಾರಿಗೂ ಲುಕ್ಸಾನಿಲ್ಲ. ಆದರೆ ಓದದೇ ಇದ್ದರೆ ನಮಗೇ ಲುಕ್ಸಾನು

ಕಥೆಗಾರ, ಕವಿ, ಸಿನೆಮಾ, ಹಾಡುಗಳ ರಚನೆಗಾರ, ಜಯಂತ್‌ ಕಾಯ್ಕಿಣಿ, ಜೊತೆ ಕಥೆಗಾರ್ತಿ ಪೂರ್ಣಿಮಾ ಭಟ್ಟ ಸಣ್ಣಕೇರಿ ನಡೆಸಿದ ಮಾತುಕತೆ

ಕವಿ ಜಯಂತ್, ಕತೆಗಾರ ಜಯಂತ್, ಸಿನಿಮಾ ಹಾಡುಗಳ ಸರದಾರ ಜಯಂತ್ – ಈ ಮೂವರಲ್ಲಿ ನಿಮಗೆ ಅತೀ ಹತ್ತಿರವಾದ ಜಯಂತ್ ಯಾರು? (ಸಾದಾ-ಸೀದಾ ಮನುಷ್ಯ ಜಯಂತ್ ಅಂತ ಉತ್ತರ ಕೊಡುವಂತಿಲ್ಲ. ಅದು ನಮಗೆ ಗೊತ್ತಿರುವ ವಿಷಯ).

ಜಯಂತ್: ಅವರೆಲ್ಲ ಅಭಿನ್ನ. ಅದೊಂದು ಸಂಯುಕ್ತ ಹುಡುಕಾಟ. ಎಂದೋ ಒಂದು ಪ್ರಸಂಗ ಓದಿದ್ದೆ. ಒಂದು ರಾತ್ರಿ ಒಬ್ಬ ಮಹಿಳೆ ಮನೆ ಎದುರಿನ ದೀಪದ ಕಂಬದ ಬೆಳಕಿನಲ್ಲಿ ಏನನ್ನೋ ಹುಡುಕುತ್ತಿರುತ್ತಾಳೆ. ಹಾದಿಹೋಕನೊಬ್ಬ ಕಾಳಜಿಯಿಂದ ‘ಏನನ್ನು ಹುಡುಕುತ್ತಿದ್ದೀಯಮ್ಮಾ’ ಎಂದು ಕೇಳುತ್ತಾನೆ. ಅದಕವಳು ‘ಮನೆಯಲ್ಲಿ ಹೊಲಿಯುತ್ತಿದ್ದಾಗ ಸೂಜಿ ಬಿದ್ದು ಹೋಯಿತು. ಅದನ್ನು ಹುಡುಕುತ್ತಿದ್ದೇನೆ’ ಅಂತಾಳೆ. ಅವನು ನಗುತ್ತ ‘ಸೂಜಿ ಕಳೆದಿದ್ದು ಅಲ್ಲಿ. ಇಲ್ಲಿ ಹೇಗೆ ಸಿಕ್ಕೀತು? ’ ಎಂದು ಕೇಳುತ್ತಾನೆ. ಅವಳು ‘ಮನೆಯಲ್ಲಿ ಕತ್ತಲು. ಇಲ್ಲಿ ಬೆಳಕಿದೆ. ಇಲ್ಲಿ ಸಿಕ್ಕೀತು’ ಎಂದು ಹುಡುಕಾಟ ಮುಂದುವ ರಿಸುತ್ತಾಳೆ. ಅವಳ ಈ ಸಾಲು ನನಗೆ ಯಾವತ್ತೂ ಇಷ್ಟ. ಏಕೆಂದರೆ ಬರವಣಿಗೆಯ ಬೆಳಕಿನಲ್ಲಿ ಏನೆಲ್ಲ ಕಾಣಲು ಸಾಧ್ಯ.

—-

ಬರಹಗಾರರು, ಕತೆಗಾರರು, ಕವಿಗಳು ಸಮೃದ್ಧವಾಗಿರುವ (ಅಬಂಡನ್ಸ್ ಅಂತೀವಲ್ಲ ಅದು) ಈ ದಿನಮಾನದಲ್ಲಿ ಓದುಗರು ದಿಗಿಲಾಗಿದ್ದಾರೆ – ಯಾವುದನ್ನು ಹೆಕ್ಕಿಕೊಳ್ಳುವುದು ಅಂತ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಜಯಂತ್: ಒಬ್ಬ ಓದುಗ ಹುಟ್ಟಿಕೊಳ್ಳುವ ಕ್ಷಣ ಯಾವಾ ಗಲೂ ವಿಲಕ್ಷಣ. ಅಂದುಕೊಂಡಂತೆಲ್ಲ ಆಗುವಂಥದಲ್ಲ ಅದು. ಅದು ಚಲಿಸುವ ಬಸ್ಸಲ್ಲಿ, ಆಸ್ಪತ್ರೆಯ ಬೆಂಚಿನಲ್ಲಿ, ಮಳೆ, ಮಧ್ಯಾಹ್ನದ ನಿರ್ಜನ ನೀರವದಲ್ಲಿ ಅಥವಾ ದಟ್ಟಣೆಯಲ್ಲಿ ಎಲ್ಲೂ ಆಗಬಹುದು. ಪರಾಗ ಸ್ಪರ್ಶದಂತೆ ಅದು. ಪ್ರೇಮದ ಹುಟ್ಟಿನಂತೆ. ಆಮೇಲೆ ಅಲ್ಲಿಂದಲೇ ದಾರಿ ತೆರೆಯುತ್ತದೆ. ನೀವು ಹೆಕ್ಕಿಕೊಳ್ಳುವ ಪ್ರಶ್ನೆಯೇ ಇಲ್ಲ, ಪುಸ್ತಕಗಳೇ ನಿಮ್ಮನ್ನು ಹೆಕ್ಕಿಕೊಳ್ಳುತ್ತವೆ.

—-

ತಮ್ಮ ನೆಚ್ಚಿನ ಬರಹಗಾರರ ಜೀವನದ ಬಗ್ಗೆ ಓದುಗರ ಕುತೂಹಲ ಯಾವತ್ತೂ ತಣಿಯುವಂಥದ್ದಲ್ಲ. ನಿಮ್ಮ ಮದುವೆಯ ಪ್ರಸಂಗದ ಬಗ್ಗೆ ಹೇಳಿ.

ಜಯಂತ್: ಅಂಥದೇನೂ ವಿಶೇಷವಿಲ್ಲ ಅದರಲ್ಲಿ. ನಾನು ಮತ್ತು ಸ್ಮಿತಾ ಮುಂಬಯಿಯ ವಿಕ್ಸ್ ವೆಪೋರಬ್ ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಗಳಾಗಿದ್ದೆವು. ನಾನು ಪ್ರೊಡಕ್ಷನ್ ಕೆಮಿಸ್ಟ್ ಆಗಿದ್ದೆ. ಅವಳು ಕ್ವಾಲಿಟಿ ಕಂಟ್ರೋಲ್ ಲ್ಯಾಬಿನಲ್ಲಿದ್ದಳು. ತಯಾರಾದ ವಿಕ್ಸ್ ಸ್ಯಾಂಪಲ್ಲನ್ನು ನಾನು ಆ ವಿಭಾಗಕ್ಕೆ ತೆಗೆದುಕೊಂಡು ಹೋಗಿ ಅವಳಿಂದ ಪರೀಕ್ಷೆ ಮಾಡಿಸಿ ‘ಓಕೆ’ ಪಡೆದ ಮೇಲೆ ಅದು ಪ್ಯಾಕಿಂಗಿಗೆ ರಿಲೀಸ್ ಆಗುತ್ತಿತ್ತು. ನಾನು ತುಂಬಾ ವಾಚಾಳಿ. ಜನರನ್ನು ನಗಿಸೋಕೆ ಬಹಳ ಪ್ರಯತ್ನ ಪಡ್ತಿದ್ದೆ. ನನ್ನ ಜೋಕಿಗೆ ಎಲ್ಲರೂ ನಕ್ಕರೂ ಇವಳು ಮಾತ್ರ ನಗುತ್ತಿರಲಿಲ್ಲ. ಒಂದಿನ “ಇವನು ತನ್ನನ್ನು ಮಹಾ ಜೋಕರ್ ಅಂದುಕೊಂಡಿದ್ದಾನೆ” ಅಂದಳು. ಎಲ್ಲರೂ ನಕ್ಕರು. ನಾನು ಪೆಚ್ಚಾದೆ. ಆದರೆ ಆ ಕ್ಷಣದಲ್ಲಿ ನನಗೆ ನನ್ನ ಪ್ರಯಾಣದ ಕ್ವಾಲಿಟಿ- ಕಂಟ್ರೋಲಿಗೆ ಇವಳೇ ಸರಿ ಎಂದು ಅನಿಸಿಹೋಯಿತು. ಹಿಂದಿಯಲ್ಲಿ ‘ರಬ್ ನೇ ಬನಾ ದೀ ಜೋಡಿ’ ಅಂತಾರಲ್ಲ, ನಮ್ಮದು ‘ವೆಪೋರಬ್ ನೇ ಬನಾ ದೀ ಜೋಡಿ’ – ಅಷ್ಟೇ

—-

ಕತೆಯೊಂದನ್ನು ಬರೆದು, ಅಲ್ಲಿನ ಸಂಗತಿಯ ಬಗ್ಗೆ ಸಂಬಂಧಿಕರ ನಡುವೆ- ಪರಿಚಯಸ್ಥರ ನಡುವೆ ಪ್ರಶ್ನಾವಳಿಗೆ ಸಿಲುಕಿ ಕೊಂಡ ಕ್ಯಾಂಡೀಡ್ ಸಂದರ್ಭವೊಂದನ್ನು ಹೇಳುವಿರಾ?

ಜಯಂತ್: ‘ಅಮೃತಬಳ್ಳಿ ಕಷಾಯ’ ಅಂತ ನನ್ನದೊಂದು ಕಥಾಸಂಗ್ರಹ ಇದೆ. ೧೯೯೬ರಲ್ಲಿ ಅದಕ್ಕೆ ಒಂದು ಪ್ರಶಸ್ತಿ ಬಂದ ಸುದ್ದಿ ಪತ್ರಿಕೆಗಳಲ್ಲಿ ಬಂದಿತ್ತು. ಆ ಸುದ್ದಿ ಓದಿದ ಕೆಲವು ಸಂಬಂಧಿಕರು, ಊರಿನ ಹಿರಿಯರು ಸಿಕ್ಕಿದಾಗಲೆಲ್ಲ ಖುಷಿಯಿಂದ ನನ್ನ ಕೈಕುಲುಕಿ “ನೀನು ಅಮೃತಬಳ್ಳಿ ಕಷಾಯ ಹೇಗೆ ಮಾಡುವುದು ಎನ್ನುವುದರ ಬಗ್ಗೆ ಮತ್ತದರ ಮೆಡಿಕಲ್ ಪರಿಣಾಮದ ಬಗ್ಗೆ ಪುಸ್ತಕ ಬರೆದಿದ್ದೀಯಂತಲ್ಲ. ಅದು ಹೆಂಗೆ ಮಾಡುದು? ಬಗೇಲಿ ಹೇಳು” ಎಂದು ತ್ರಾಸು ಕೊಡತೊಡಗಿದರು. ಆಮೇಲೆ ಅಂಥವರನ್ನು ನಿರಾಸೆಗೊಳಿಸಬಾರದೆಂದು ಬಲ್ಲವರಿಂದ ಕೇಳಿ ತಿಳಿದುಕೊಂಡು ತಯಾರಿ ಮಾಡಿಕೊಂಡೆ.

—-

ಎರಡು ಸಾವಿರದ ಇಸ್ವಿಯ ಈಚೆಗಿನ ಕನ್ನಡ ಸಾಹಿತ್ಯ – ಒಂದು ವಾಕ್ಯದಲ್ಲಿ ಹೇಳುವುದಾದರೆ.

ಜಯಂತ್: ಇಂಥ ಪಕ್ಷಿನೋಟದ ಖಾನೇಸುಮಾರಿ ಮಾಡುವ ಅರ್ಹತೆ ಮತ್ತು ಉಮೇದಿ ಎರಡೂ ನನಗಿಲ್ಲ. ಮೂವತ್ತರ ವಯಸ್ಸಿನಲ್ಲಿ ನೀವು ರಚಿಸಿದ ಸಾಹಿತ್ಯ, ನಲವತ್ತರ ಆಸುಪಾಸಲ್ಲಿ ಬರೆದ ಕತೆ, ಕವಿತೆಗಳು, ಇತ್ತೀಚೆಗಿನ ಸೃಜನಶೀಲ ಕೃತಿಗಳು – ಇವುಗಳನ್ನು ಬೇರೆಬೇರೆಯಾಗಿ ನೋಡಿದಾಗ ಶೈಲಿಯಲ್ಲಿ, ವಿಷಯದಲ್ಲಿ, ಅನುಸಂಧಾನದಲ್ಲಿ, ಕತೆಗಳ ವಾತಾವರಣಗಳಲ್ಲಿ ಬದಲಾವಣೆಯನ್ನು/ ಶಿಫ್ಟ್‌ಅನ್ನು ಪಡೆದುಕೊಂಡಿದೆಯಾ? ಹೇಗೆ, ಏಕೆ ಹೇಳುವಿರಾ?

ಜಯಂತ್: ನನ್ನದು ಅಂತಲ್ಲ, ಯಾವುದೇ ಲೇಖಕರ ಕೃತಿಗಳು ಕಾಲಾನುಕ್ರಮದಲ್ಲಿ ಅವರವರ ಜೀವನದೃಷ್ಟಿಯ ಮತ್ತು ಮನುಷ್ಯಲೋಕದೊಡನೆಯ ಸಂಬಂಧದ ವಿಕಾಸಪಥವೇ ಆಗಿರುತ್ತದೆ. ಬರೆಯುವಾಗ ಮಾತ್ರ ನಾವು ಒಳಗಿಂದ ಕಿಂಚಿತ್ ವಿಕಾಸ ಹೊಂದುತ್ತೇವೆ. ಬರವಣಿಗೆಯ ಖುಷಿ ಅಥವಾ ಚಡಪಡಿಕೆ ಅಥವಾ ಉದ್ವಿಗ್ನತೆ ಈ ವಿಕಾಸದ ಆವರಣಕ್ಕೆ ಸಂಬಂಧಿಸಿದ್ದು. ನಾನು ನನ್ನ ಕೃತಿಗಳನ್ನು ಮತ್ತೆ ಓದುವುದಿಲ್ಲ. ಆದರೆ ಪುನರ್‌ಮುದ್ರಣದ ಪ್ರೂಫ್ ನೋಡುವಾಗ ವಿಚಿತ್ರ ಅನಿಸುತ್ತದೆ. ಪ್ರಾರಂಭಿಕ ಕತೆಗಳು ಶಾಲಾ ಮಕ್ಕಳ ಗ್ಯಾದರಿಂಗ್ ನಾಟಕದಲ್ಲಿ ಮೀಸೆ ಹಚ್ಚಿಕೊಂಡು ಬಂದಂತೆ ಕಾಣುತ್ತವೆ. ಓವರ್ ರೈಟಿಂಗ್ ಕಾಣುತ್ತದೆ. ಕ್ರಮೇಣ ತೊಗಟೆ ಉದುರುತ್ತ ಉದುರುತ್ತ ಮನಸಿನ ಬೊಜ್ಜು ಕೊಬ್ಬು ಎರಡೂ ಕರಗಿದ್ದು ಕಾಣುತ್ತದೆ. ಕೊನೆಗೂ ಈ ಪದಗಳ ಪಯಣ ಪದಗಳೇ ಇಲ್ಲದ ನಿರಾಕಾರದ ಕಡೆಗೆ.

—-

ಸೋಷಿಯಲ್ ಮೀಡಿಯಾದ ಈ ಜಮಾನಾದಲ್ಲಿ, ರೀಲು – ಶಾರ್ಟುಗಳ ಇಂದಿನ ಕಾಲದಲ್ಲಿ ಬರೆಯಾಣ ಓದಾಣ ಎರಡೂ ನಡೆಯುತ್ತಿಲ್ಲ ಎನ್ನುವ ದೂರಿದೆ. ಈ ಬಗ್ಗೆ ಏನೆನ್ನುವಿರಿ?

ಜಯಂತ್: ನಾವು ಬರೆಯದೇ ಹೋದರೆ ಯಾರಿಗೂ ಲುಕ್ಸಾನಿಲ್ಲ. ಆದರೆ ಓದದೇ ಇದ್ದರೆ ನಮಗೇ ಲುಕ್ಸಾನು. ಓದಿದಾಗಲೇ ನಾವು ಅನಾಮಿಕರಾಗೋದು. ಮನುಷ್ಯ ಕಲೆ ಸಾಹಿತ್ಯ ಸಂಗೀತ ಸಿನಿಮಾ ನಾಟಕ ಇತ್ಯಾದಿಗಳನ್ನು ಸೃಷ್ಟಿಸಿದ್ದೇ ಅನಾಮಿಕನಾಗೋದಕ್ಕೆ. ಅನಾಮಿಕರಾದಾಗಲೇ ಜೀವಲೋಕ ಒಂದಾಗುತ್ತದೆ. ಯಾರೋ ಒಬ್ಬನು ನದಿಯ ಮೇಲೆ ಸಿಟ್ಟಾಗಿ “ಹೋಗ್ ನಾನು ಸ್ನಾನಾನೇ ಮಾಡೋದಿಲ್ಲ” ಎಂದನಂತೆ. ಇಲ್ಲಿ ಕಳಕೊಂಡಿದ್ದು ಯಾರು? ನದಿಯಂತೂ ಅಲ್ಲ… ಅದು ಹರಿಯುತ್ತಲೇ ಇರ್ತದೆ.

 

 

 

Tags: