ಆನಂದ್ ತೇಲ್ತುಂಬ್ಡೆ ಅಮ್ಮನೂ ಹೋರಾಟಗಾರರು!
ವಿ.ಎಲ್.ನರಸಿಂಹಮೂರ್ತಿ
ಹೆಸರಾಂತ ಚಿಂತಕ, ಮಾನವ ಮಾನವ ಹಕ್ಕುಗಳ ‘ಹೋರಾಟ ಗಾರ ಡಾ.ಆನಂದ್ ತೇಲ್ತುಂಬ್ಡೆಯವರ ತಾಯಿ ಅನಸೂಯ ತೇಲ್ತುಂಬ್ಡೆ ಅವರು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತೇಲ್ತುಂಬ್ಡೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ತಾಯಿಯವರು ನಿಧನರಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಅವರ ಪೋಸ್ಟ್ ನೋಡಿದ ಕೂಡಲೇ ನನಗೆ ಕಳೆದ ವರ್ಷ ಬಿಡುಗಡೆಯಾಗಿದ್ದ ತೇಲ್ತುಂಬ್ಡೆಯವರ ಜೈಲುವಾಸದ ನೆನಪುಗಳ ಪುಸ್ತಕ ʼThe Cell and the Soul’ನಲ್ಲಿ ತಮ್ಮ ತಾಯಿಯ ಬಗ್ಗೆ ಬರೆದಿರುವುದು ನೆನಪಾಯಿತು.
2020ರಲ್ಲಿ ಕೇಂದ್ರ ಸರ್ಕಾರ ‘ಭೀಮಾ ಕೋರೆಗಾಂವ್ ಪ್ರಕರಣ’ದಲ್ಲಿ ಆನಂದ್ ತೇಲ್ತುಂಬ್ಡೆ ಮತ್ತು ಇತರ ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧನಕ್ಕೊಳಪಡಿಸಿದ್ದು ನಮಗೆಲ್ಲ ನೆನಪಿದೆ. 31 ತಿಂಗಳುಗಳ ಕಾಲ ‘ರಾಜಕೀಯ ಕೈದಿ’ ಯಾಗಿದ್ದ ತೇಲ್ತುಂಬ್ಡೆ ತಮ್ಮ ಬಂಧನ, ಜೈಲುವಾಸ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಕ್ರೌರ್ಯದ ಕುರಿತ ಅನೇಕ ಸೂಕ್ಷ್ಮ ವಿವರಗಳನ್ನು ತಮ್ಮ Prison memoir ನಲ್ಲಿ ಬರೆದಿದ್ದಾರೆ.
ಕೋವಿಡ್ ಕಾಲದಲ್ಲಿ ತೇಲ್ತುಂಬ್ಡೆ ಬಂಧನಕ್ಕೆ ಒಳಗಾದಾಗ ಅವರ ತಾಯಿ ತೊಂಬತ್ತರ ಆಸುಪಾಸಿ ನಲ್ಲಿರುತ್ತಾರೆ. ತಾವು ಬಂಧನಕ್ಕೊಳಗಾಗಿರುವ ವಿಷಯ ವಯಸ್ಸಾಗಿರುವ ತಮ್ಮ ತಾಯಿಗೆ ಗೊತ್ತಾಗುವುದು ಬೇಡ ಎಂದು ತೇಲ್ತುಂಬ್ಡೆ ಮತ್ತವರ ಕುಟುಂಬದವರು ನಿರ್ಧರಿಸುತ್ತಾರೆ.
ತಾವು ಒಂದು ಅಂತಾರಾಷ್ಟ್ರೀಯ ಸೆಮಿನಾರ್‌ನಲ್ಲಿ ಭಾಗವಹಿಸಲು ವಿದೇಶಕ್ಕೆ ಬಂದಿರುವುದಾಗಿಯೂ ಕೋವಿಡ್ ಕಾರಣಕ್ಕೆ ವಿಮಾನಗಳ ಓಡಾಟ ನಿಂತಿರುವುದರಿಂದ, ವಿಮಾನಗಳ ಓಡಾಟ ಮತ್ತೆ ಶುರುವಾದ ಮೇಲೆ ವಾಪಸ್ ಬರುವುದಾಗಿಯೂ ತಿಳಿಸುತ್ತಾರೆ!
ದುರದೃಷ್ಟವಶಾತ್ ತೇಲ್ತುಂಬ್ಡೆ ಜೈಲಿನಲ್ಲಿರುವಾಗಲೇ ಅವರ ತಮ್ಮ ಮಿಲಿಂದ್ ತೇಲ್ತುಂಬ್ಡೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಡುತ್ತಾರೆ. (ಮಿಲಿಂದ್ ತೇಲ್ತುಂಬ್ಡೆ ಮಾವೋವಾದಿ ಪಕ್ಷದ ನಾಯಕ ರಾಗಿದ್ದರು)
ಮಿಲಿಂದ್ ಸಾವಿನ ಸುದ್ದಿಯಿಂದ ತಮ್ಮ ತಾಯಿ ಆಘಾತಕ್ಕೆ ಒಳಗಾಗಬಹುದು ಎಂದು ತೇಲ್ತುಂಬ್ಡೆ ಭಯಪಡುತ್ತಾರೆ. ಆದರೆ ಅವರ ತಾಯಿ ವಿದೇಶದಲ್ಲಿರುವ ತೇಲ್ತುಂಬ್ಡೆಯವರಿಗೆ ಈ ವಿಷಯ ತಿಳಿಸಬಾರದು ಎಂದು ಕುಟುಂಬದವರಿಗೆ ತಾಕೀತು
ಮಾಡುತ್ತಾರೆ. ಇಷ್ಟೇ ಅಲ್ಲದೇ ತಮ್ಮ ಇಬ್ಬರು ಒಡಹುಟ್ಟಿದವರು ತೀರಿಕೊಂಡ ಸುದ್ದಿಯನ್ನೂ ತೇಲ್ತುಂಬ್ಡೆಯವರ ತಾಯಿ, ಮಗನಿಗೆ ತಿಳಿಸಲು ಬಯಸುವುದಿಲ್ಲ. ತೇಲ್ತುಂಬ್ಡೆ ತಮ್ಮ ತಮ್ಮನ ಸಾವಿನ ತುದಿಯಿಂದ ತಾಯಿಯ ಆತ್ಮಸ್ಥೆರ್ಯವನ್ನು ಮೆಚ್ಚಿಕೊಳ್ಳುತ್ತಾರೆ. ಇದರ ಜೊತೆಗೆ ಅವರ ಬಾಲ್ಯದಲ್ಲಿ ತಮ್ಮ ಊರಿನಲ್ಲಿ ನಡೆದ ಒಂದು ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ.
ತೇಲ್ತುಂಬ್ಡೆಯವರ ಕೇರಿಯ ಜನರು ಬಳಸುತ್ತಿದ್ದ ಕುಡಿಯುವ ನೀರಿನ ಬಾವಿಯ ಪಕ್ಕದಲ್ಲಿ ಮರಾಠಿ ಕುಣಬಿ ಸಮುದಾಯದ ಜಮೀನು ಇರುತ್ತದೆ. ಮಹಾರ್ ಸಮುದಾಯದವರು ಆ ಬಾವಿಯ ನೀರಿನ ಬಳಕೆಯನ್ನು ತಪ್ಪಿಸಿದರೆ, ಆ ಬಾವಿಯ ನೀರನ್ನು ವ್ಯವಸಾಯಕ್ಕೆ ಬಳಸಬಹುದು ಎಂದು ಯೋಚಿಸುವ ಜಮೀನಿನ ಮಾಲೀಕರು, ಒಂದು ದಿನ ಆ ಕುಡಿಯುವ ನೀರಿನ ಬಾವಿಗೆ ಸಗಣಿ, ಕಸಕಡ್ಡಿ ಸುರಿದು ಕಲುಷಿತಗೊಳಿಸಿಬಿಡುತ್ತಾರೆ. ಅಂದು ಸಂಜೆ ಆಗ ತಾನೇ ಕೂಲಿ ಕೆಲಸದಿಂದ ವಾಪಸಾಗಿದ್ದ ತೇಲ್ತುಂಬ್ಡೆಯವರ ತಾಯಿಗೆ ಈ ಸುದ್ದಿ ತಿಳಿಯುತ್ತದೆ. ತಮ್ಮ ಸಮುದಾಯಕ್ಕಿದ್ದ ಕುಡಿಯುವ ನೀರಿನ ಬಾವಿ ಹೀಗೆ ಕಲುಷಿತಗೊಂಡಿದ್ದನ್ನು ತಿಳಿದು ಸಿಟ್ಟಿಗೆದ್ದು ನೀರು ಸೇದುವ ಹಗ್ಗ, ಬಕೇಟು, ಕೊಡ ತೆಗೆದುಕೊಂಡು ಸೀದಾ ಕುಣಬಿ ಸಮುದಾಯದವರು ಬಳಸುತ್ತಿದ್ದ ಬಾವಿಗೆ ಹೋಗಿ ನೀರು ಸೇದತೊಡಗುತ್ತಾರೆ. ಆಗ ಅಲ್ಲಿದ್ದ ಕುಣಬಿ ಸಮುದಾಯದ ಯುವಕರು ತಾವು ಇಂದು ತಂಗಿ ಕೊರಕ ಸಯುನಮಗಾಗಿ ಹೇಳುವಾಗೆ ತೇಲ್ತುಂಬ್ಡೆಯವರ ತಾಯಿ ಇದಕ್ಕೆ ಒಪ್ಪುವುದಿಲ್ಲ. ಪ್ರತಿ ಸಲ ತಮ್ಮ ಸಮುದಾಯದವರಿಗೆ ನೀರು ಬೇಕಾದಾಗ ಯಾರಾದರೂ ಮೇಲ್ವಾತಿಯವರು ಬರುವವರೆಗೆ ಕಾಯಲು ಸಾಧ್ಯವಿಲ್ಲ. ಹಾಗಾಗಿ ತಾವೇ ಸೇದಿಕೊಳ್ಳು ತ್ತೇವೆ ಎಂದು ಪ್ರತಿಭಟಿಸುತ್ತಾರೆ. ಆಗ ಅಲ್ಲಿಗೆ ಬಂದ ಮೇಲ್ವಾತಿಯ ಹೆಂಗಸರು ಜಗಳವಾಡಲು ಶುರುಮಾಡುತ್ತಾರೆ. ಎರಡೂ ಕಡೆಯವರ ಕೊಡಗಳು ಒಡೆದುಹೋಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತದೆ.
ಮಹಾರ್ ಮಹಿಳೆಯರು ತಮ್ಮ ಬಾವಿಯನ್ನು ಬಳಸುವ ಮೂಲಕ ನೀರನ್ನು ಮೈಲಿಗೆ ಮಾಡಿದರೆಂದು ಊರಿನ ಮೇಲ್ವಾತಿಯ ಜನರು ಕುಷಿತಗೊಳ್ಳುತ್ತಾರೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಬಹುದೆನ್ನುವ ಆತಂಕದಲ್ಲಿ ಮಹಾರ್ ಸಮುದಾಯದವರೆಲ್ಲ ಸಭೆ ಸೇರಿದಾಗ ಕೆಲವು ಮಹಾರ್ ಸಮುದಾಯದ ಗಂಡಸರೇ, ಏಕಾಏಕಿ ಕುಣಬಿ ಸಮುದಾಯದ ಬಾವಿಯಲ್ಲಿ ನೀರು ಸೇದಿ ಗಲಭೆಯಾಗಲು ತೇಲ್ತುಂಬ್ಡೆಯವರ ತಾಯಿಯೇ ಕಾರಣ ಎಂದು ದೂಷಿಸುತ್ತಾರೆ. ಆಗ ಅದನ್ನು ಪ್ರತಿಭಟಿಸಿ ತಮ್ಮ ಬಾವಿ ಸ್ವಚ್ಛವಾಗುವವರೆಗೆ ಕುಣಬಿ ಸಮುದಾಯವರು ಬಳಸುವ ಬಾವಿಯ ನೀರನ್ನು ಬಳಸಿಯೇ ತೀರುತ್ತೇವೆ ಎಂದು ತೇಲ್ತುಂಬ್ಡೆಯವರ ನೇತೃತ್ವದಲ್ಲಿ ಮಹಾರ್ ಮಹಿಳೆಯರು ಸಜ್ಜಾಗುತ್ತಾರೆ.
ಮುಂದೆ ಆಗಬಹುದಾದ ಹಿಂಸೆಯನು ಊಹಿಸಿ ತೇಲ್ತುಂಬ್ಡೆಯವರ ತಂದೆ, ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಕಲ್ಲಿದ್ದಲು ಕಂಪೆನಿಯ ನೌಕರರ ಬಳಿ ಸಹಾಯ ಕೇಳುತ್ತಾರೆ. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಬಂದು ತೇಲ್ತುಂಬ್ಡೆಯವರ ತಾಯಿಯ ನೇತೃತ್ವದ ಪ್ರತಿಭಟನೆಗೆ ರಕ್ಷಣೆ ನೀಡುತ್ತಾರೆ. ಮೇಲು ಜಾತಿಯವರ ವಿರುದ್ಧ ಕೈ ಮಿಲಾಯಿಸಲು ಕೂಡ ಗಣಿ ಕಾರ್ಮಿಕ ಮಹಿಳೆಯರು ಸಿದ್ಧವಿರುತ್ತಾರೆ.
ಊರಿಗೆ ಬರುವ ಪೊಲೀಸರು ಮತ್ತು ಅಧಿಕಾರಿಗಳು ಸಾರ್ವಜನಿಕ ಆಸ್ತಿಯಾಗಿರುವ ಕುಡಿಯುವ ನೀರಿನ ಬಾವಿಯನ್ನು ಬಳಸದಂತೆ ತಡೆಯುವುದು ಕಾನೂನಿನ ಪ್ರಕಾರ ಅಪರಾಧ ಎಂದು ಊರಿನ ಜನಕ್ಕೆ ಮನವರಿಕೆ ಮಾಡಿಕೊಡುತ್ತಾರೆ. ದಲಿತರಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗುವವರೆಗೂ ಬಾವಿ ಬಳಸುವುದಕ್ಕೆ ಅನುವು ಮಾಡಿಕೊಡುತ್ತಾರೆ. ಕೊನೆಗೆ ಸರ್ಕಾರ ಎಲ್ಲರೂ ಬಳಸಲು ಅನುವಾಗುವಂತೆ ಹೊಸ ಬಾವಿಯನ್ನು ನಿರ್ಮಿಸಿಕೊಡುತ್ತದೆ.
ತೇಲ್ತುಂಬ್ಡೆಯವರ ತಾಯಿ ಧೈರ್ಯದಿಂದ ಮುನ್ನುಗ್ಗಿ ತಮ್ಮ ಸಮುದಾಯದ ಮಹಿಳೆಯರನ್ನು ಸಂಘಟಿಸಿದ ಕಾರಣಕ್ಕೆ ಅವರಿಗೆ ಸಿಗಬೇಕಾದ ಹಕ್ಕು ದಕ್ಕುತ್ತದೆ.
ಎಂದೂ ಶಾಲೆಯ ಮುಖ ನೋಡದ, ಕೃಷಿ ಕೂಲಿಕಾರರಾಗಿದ್ದ ತಮ್ಮ ತಾಯಿ ತಾಯಿ ಯಾವುದೇ ಹೋರಾಟ, ತತ್ವ, ಸಿದ್ಧಾಂತಗಳ ಪರಿಚಯವಿಲ್ಲದಿದ್ದರೂ ತಮ್ಮ ಘನತೆಯನ್ನು ಕುಗ್ಗಿಸುವ ಘಟನೆಯ ವಿರುದ್ಧ ಸಿಡಿದೆದ್ದಿದ್ದನ್ನು ತೇಲುಂಬ್ಳೆ ನೆನಪು ಮಾಡಿಕೊಳ್ಳುತ್ತಾರೆ.
ಯಾವುದೇ ನಾಯಕತ್ವದ ಅಗತ್ಯವೇ ಇಲ್ಲದೆ ತಮಗೆ ಸಿಗಬೇಕಾದ ಹಕ್ಕನ್ನು ಪಡೆಯಲು ಅನಕ್ಷರಸ್ಥ ಮಹಿಳೆಯರು ನಡೆಸಿದ ಇಂತಹ ಹೋರಾಟಗಳು ಇತಿಹಾಸದಲ್ಲಿದಾಖಲಾಗುವುದೇ ಇಲ್ಲ. ದೇಶದಾದ್ಯಂತ ನಡೆಯುತ್ತಲೇ ಇರುವ ಇಂತಹ quiet, local, fierce ಹೋರಾಟಗಳೇ ನಿಜವಾದ ದಲಿತ ಇತಿಹಾಸ ಎಂದು ತೇಲ್ತುಂಬ್ಳೆ ಅಭಿಪ್ರಾಯಪಡುತ್ತಾರೆ.
ಚೌಡಾರ್ ಕೆರೆಯ ನೀರನ್ನು ಮುಟ್ಟುವ, ಕುಡಿಯುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಜಗತ್ತಿನ ಮೊದಲ ಮಾನವ ಹಕ್ಕುಗಳ ಹೋರಾಟವಾಗಿರುವ ‘ಮಹಾಡ್ ಸತ್ಯಾಗ್ರಹ’ವನ್ನು ಶುರು ಮಾಡಿದರು. ಈ ವರ್ಷ ಮಹಾಡ್ ಸತ್ಯಾಗ್ರಹ ನೂರು ವರ್ಷಗಳನ್ನು ಪೂರೈಸಲಿದೆ. ಕುಡಿಯುವ ನೀರಿಗಾಗಿ ನೂರು ವರ್ಷಗಳ ಹಿಂದೆ ಶುರುಮಾಡಿದ ಹೋರಾಟ ಇವತ್ತೂ relevant ಆಗಿಯೇ ಉಳಿದಿದೆ. ಇಂತಹ ಸಂದರ್ಭದಲ್ಲಿ ತೇಲ್ತುಂಬ್ಡೆಯವರ ತಾಯಿಯಂತಹ unrecorded and unsung heroಗಳನ್ನು ನೆನೆಯುವುದೇ ನಿಜವಾದ Dalit History!





