ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ. ಶನಿವಾರ ನಡೆದ ದಾಳಿಯಲ್ಲಿ ಎಂಬತ್ತಾರು ವರ್ಷದ ಖಮೇನಿ ಸಾವನ್ನಪ್ಪಿದ್ದರಿಂದಾಗಿ ೩೭ ವರ್ಷಗಳ ‘ನಿರಂಕುಶ ಆಡಳಿತ’ ಅಂತ್ಯಗೊಂಡಂತಾಗಿದೆ. ಈ ಬೆಳವಣಿಗೆಯಿಂದಾಗಿ ‘ಮದ್ಯ ಪ್ರಾಚ್ಯದಲ್ಲೀಗ ಯುದ್ಧದ ಕಾರ್ಮೋಡ ಕರಗಿ ಹೋಯಿತು’ ಎಂದು ಹೇಳುವುದು ಅಸಾಧ್ಯ.
ಅಮೆರಿಕ ಹಾಗೂ ಇಸ್ರೇಲ್‌ನ ಈ ದಾಳಿಗೆ ಇರಾನ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ? ಮುಂದೆ ಇರಾನ್ ಆಡಳಿತ ನಡೆಸು ವವರು ಯಾರು? ಅಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಂಡು ಅಮೆರಿಕ-ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಇರಾನ್ ಸಿದ್ಧವಾಗುತ್ತದೆಯೋ ಅಥವಾ ತನ್ನ ಇಚ್ಛೆಯಂತೆ ನಡೆಯುವ ಕೈಗೊಂಬೆ ಸರ್ಕಾರ ವನ್ನು ಇರಾನ್‌ನಲ್ಲಿ ಸ್ಥಾಪನೆ ಮಾಡಲು ಅಮೆರಿಕ ಯಶಸ್ಸಿಯಾಗುತ್ತದೆಯೋ? ಎಂಬುದನ್ನು ಈಗಲೇ ಹೇಳಲಾಗದು. ಸುಪ್ರೀಂ ಲೀಡರ್ ಹತ್ಯೆಯ ನಂತರವೂ ಅಮೆರಿಕದ ಈ ದಾದಾಗಿರಿಗೆ ತಲೆಬಾಗದೇ ಇರಾನ್ ಸೆಟೆದು ನಿಲ್ಲುವ ಲಕ್ಷಣಗಳೇ ಹೆಚ್ಚಾಗಿವೆ.
ಇತಿಹಾಸದಲ್ಲಿ ದಾಖಲಾಗುವಂಥ ಅತ್ಯಂತ ಭೀಕರ ದಾಳಿಯನ್ನು ಅಮೆರಿಕ ಮತ್ತು ಇಸ್ರೇಲ್ ಮೇಲೆ ಮಾಡುವುದಾಗಿ ಇರಾನ್ ಮಿಲಿಟರಿ ಅಧಿಕಾರಿಗಳು ಹೂಂಕರಿಸಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದರೆ ಸಹಿಸಲ ಸಾಧ್ಯವಾದ ದಾಳಿಯನ್ನು ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯಕ್ಕಂತೂ ಇರಾನ್‌ನಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಉಂಟಾಗಿದೆ.
ಪುಟಿದೇಳುವುದೇ ಇರಾನ್?: ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡುವ ಅಮೆರಿಕ- ಇಸ್ರೇಲ್ ಉದ್ದೇಶ ಈಡೇರಿದೆ. ಆದರೆ, ಆ ದೇಶದಲ್ಲಿ ಪ್ರಭುತ್ವ ಬದಲಾವಣೆ ಮಾಡುವ ಉದ್ದೇಶವಿನ್ನೂ ಸಫಲವಾಗಿಲ್ಲ ಎಂದು ಲಂಡನ್ ಯುನಿವರ್ಸಿಟಿಯ ವಿದ್ವಾಂಸ ಅಲಿ ಹಾಶಿಮ್ ಅಭಿಪ್ರಾಯಪಟ್ಟಿದ್ದಾರೆ. ‘ಫಾರಿನ್ ಪಾಲಿಸಿ’ ಮ್ಯಾಗಝೀನ್‌ಗೆ ಬರೆದಿರುವ ಲೇಖನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರದ ಸ್ಥಿತಿಯಲ್ಲಿ ತಮ್ಮ ಲೇಖನದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ.
‘ಇರಾನ್ ಆಡಳಿತ ವ್ಯವಸ್ಥೆ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ, ಆಡಳಿತದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಚೆಕ್ ಆಂಡ್ ಬ್ಯಾಲೆನ್ಸ್ ಪದ್ಧತಿ ಹೊಂದಿರುವ ವ್ಯವಸ್ಥೆ ಅದು. ಖಮೇನಿ ಹತ್ಯೆಯಿಂದ ಈ ವ್ಯವಸ್ಥೆ ಸಂಪೂರ್ಣವಾಗಿ ಧ್ವಂಸವಾಗುವುದಿಲ್ಲ. ಬದಲಿಗೆ ಮತ್ತೆ ಪುಟಿದೆದ್ದರೂ ಆಶ್ಚರ್ಯವೇನಿಲ್ಲ’ ಎಂದು ಹಾಶಿಮ್ ಅಲಿ ವಿಶ್ಲೇಷಿಸಿದ್ದಾರೆ. ೧೯೭೯ರ ಕ್ರಾಂತಿಯ ನಂತರ ರಚನೆಯಾದ ಇರಾನ್‌ನ ಹೊಸ ಸಂವಿಧಾನವನ್ನು ಇಂಥ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ. ಸಂವಿಧಾನದ ಆರ್ಟಿಕಲ್ ೧೧೧ ಪ್ರಕಾರ, ಯಾವುದೋ ಪರಿಸ್ಥಿತಿಯಲ್ಲಿ ಸುಪ್ರೀಂ ಲೀಡರ್ ಸಾವು ಸಂಭವಿಸಿದರೆ ತಕ್ಷಣವೇ ಆಡಳಿತದ ಜವಾಬ್ದಾರಿ ಒಂದು ಮಧ್ಯಂತರ ಸಮಿತಿ ಅಥವಾ ಮಧ್ಯಂತರ ಪರಿಷತ್ ಕೈಗೆ ಹೋಗುತ್ತದೆ. ಈ ಸಮಿತಿಯಲ್ಲಿ ರಾಷ್ಟ್ರಪತಿ, ನ್ಯಾಯಾಂಗದ ಮುಖ್ಯಸ್ಥರು ಮತ್ತು ಒಬ್ಬ ವರಿಷ್ಠ ಮೌಲ್ವಿ ಇರುತ್ತಾರೆ. ಹೊಸ ಸುಪ್ರೀಂ ಲೀಡರ್ ಆಯ್ಕೆಯಾಗುವ ತನಕ ಈ ಸಮಿತಿಯೇ ದೇಶದ ಆಡಳಿತವನ್ನು ನಡೆಸಬೇಕು. ಯುದ್ಧದಂತಹ ಪರಿಸ್ಥಿತಿ ಯಲ್ಲಿ ಈ ಮಧ್ಯಂತರ ವ್ಯವಸ್ಥೆಯೇ ದೀರ್ಘಕಾಲದವರೆಗೂ ಮುಂದುವರಿಯಬಹುದು. ಬಿಕ್ಕಟ್ಟಿನ ಸಂದರ್ಭದಲ್ಲಿ ಆಡಳಿತವು ಕೇವಲ ಒಬ್ಬ ವ್ಯಕ್ತಿಯ ಕೈಯಲ್ಲಿ ಇರಕೂಡದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ.
ಹೊಸ ಸಂವಿಧಾನದ ಪ್ರಕಾರ ರಚನೆಯಾಗಿರುವ ವಿವಿಧ ಸಂಸ್ಥೆಗಳು ಆಡಳಿತದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಮತ್ತು ಇಡೀ ವ್ಯವಸ್ಥೆ ಕೇವಲ ಒಬ್ಬ ಸುಪ್ರೀಂ ಲೀಡರ್ ಮೇಲೆ ಅವಲಂಬಿತವಾಗದಂತೆ ಎಚ್ಚರವಹಿಸಲಾಗಿದೆ ಎಂದೂ ಲೇಖನದಲ್ಲಿ ವಿವರಿಸಲಾಗಿದೆ.
ದೇಶದ ಕಾನೂನುಗಳು ಇಸ್ಲಾಂ ತತ್ವಗಳಡಿಯಲ್ಲಿಯೇ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಗಾರ್ಡಿಯನ್ ಕೌನ್ಸಿಲ್ ನಿರ್ವಹಿಸಬೇಕು. ಸುಪ್ರೀಂ ಲೀಡರ್ ಆಯ್ಕೆ ಮಾಡುವ ಅಧಿಕಾರ ವಿರುವುದು ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಸಂಸ್ಥೆಗೆ.
ವಿವಿಧ ಸಂಸ್ಥೆಗಳ ನಡುವೆ ಸಂಘರ್ಷ ಅಥವಾ ಅಧಿಕಾರ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾದರೆ ಅಂಥದ್ದನ್ನುಬಗೆಹರಿಸುವ ಜವಾಬ್ದಾರಿಯನ್ನು ಎಕ್ಸಪಿಡಿಯೆನ್ಸಿ ಕೌನ್ಸಿಲ್ ನಿರ್ವಹಿಸಬೇಕು. ಜೊತೆಗೆ, ಇರಾನ್ ಮಿಲಿಟರಿಯ ಹೊರತಾಗಿ ಪ್ರತ್ಯೇಕ ಭೂಸೇನೆ, ನೌಕಾ ಸೇನೆ ಮತ್ತು ವಾಯುಸೇನಾ ಪಡೆಗಳನ್ನು ಹೊಂದಿರುವ ಇಸ್ಲಾಮಿಕ್ ರೆವುಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ( ಐಆರ್‌ಜಿಸಿ) ಪಡೆಗೆ ದೇಶವನ್ನು ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ರಕ್ಷಿಸುವ ಟಾಸ್ಕ್ ನೀಡಲಾಗಿದೆ. ಈ ಐಆರ್‌ಜಿಸಿ ಅನ್ನು ೧೯೮೦ರಲ್ಲಿ ಅಯತೊಲ್ಲಾ ರೊಹಲ್ಲಾ ಖಮೇನಿ ‘ಸುಪ್ರೀಂ ಲೀಡರ್’ ಆಗಿ ಆಯ್ಕೆಯಾದ ನಂತರ ಸ್ಥಾಪನೆ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ಯಾವುದೋ ಒಂದು ಸಂಸ್ಥೆ ವಿಫಲವಾದರೂ ಉಳಿದ ಸಂಸ್ಥೆಗಳು ದೇಶದ ಆಡಳಿತವನ್ನು ನಿರ್ವಹಣೆ ಮಾಡಬೇಕು ಎಂಬುದು ಸಂವಿಧಾನದ ಆಶಯವೆಂದು ಹಾಶಿಮ್ ಅಲಿ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ೧೯೭೯ರ ಕ್ರಾಂತಿ
೧೯೭೯ರ ಕ್ರಾಂತಿಯಲ್ಲಿ ಮೊಹಮ್ಮದ್ ರೇಝಾ ಶಾಹ್ ಸರ್ಕಾರ ಪತನವಾದ ನಂತರ ಅಯತೊಲ್ಲಾ ರೊಹಲ್ಲಾ ಖಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪನೆಯಾಯಿತು. ಶಾಹ್ ತಮ್ಮ ಸುರಕ್ಷತೆ ಮತ್ತು ಭದ್ರತೆಗೆ ಇರಾನ್‌ನ ಪಾರಂಪರಿಕ ಸೈನ್ಯದ ಮೇಲೆ ಅವಲಂಬಿತರಾಗಿದ್ದರು. ಆದರೆ, ಹೊಸ ಸುಪ್ರೀಂ ಲೀಡರ್‌ಗೆ ಆ ಸೈನ್ಯದ ಮೇಲೆ ನಂಬಿಕೆ ಇರಲಿಲ್ಲ. ದೇಶರಕ್ಷಣೆ ಮಾತ್ರವಲ್ಲದೇ ಧರ್ಮ ಜಾಗೃತಿ ಮತ್ತು ಇಸ್ಲಾಂ ಕ್ರಾಂತಿಗೆ ನಿಷ್ಠರಾಗಿರುವ ಸೈನ್ಯವೊಂದರ ಅಗತ್ಯವಿದೆ ಎಂಬುದು ಖಮೇನಿವಾದವಾಗಿತ್ತು. ಅದಕ್ಕಾಗಿ ಅವರು ಇಸ್ಲಾಮಿಕ್ ರೆವುಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ)ಹೆಸರಿನ ಒಂದು ಹೊಸ ಸೈನ್ಯ ಪಡೆಯನ್ನು ಸ್ಥಾಪನೆ ಮಾಡಿದರು. ಹೊಸ ಸಂವಿಧಾನದ ರಚನೆಯೂ ಆಗಲೇ ಆಯಿತು. ಆ ನಂತರದ ಬಿಕ್ಕಟ್ಟುಗಳನ್ನು ಈ ಹೊಸ ವ್ಯವಸ್ಥೆ ಯಶಸ್ವಿಯಾಗಿ ನಿರ್ವಹಿಸಿದೆ.
೧೯೮೦ರ ದಶಕದಲ್ಲಿ ಇರಾನ್‌ನ ಬಹುತೇಕ ದೊಡ್ಡ ನಾಯಕರೆಲ್ಲರನ್ನೂ ಹತ್ಯೆಗೈದ ನಂತರ ಕೇವಲ ೫೦ ದಿನಗಳ ನಂತರ ಖಮೇನಿ ರಾಷ್ಟ್ರಪತಿ ಆಗಿದ್ದರು. ೧೯೮೯ರಲ್ಲಿ ಅವರ ನಿಧಾನ ನಂತರ ಖಮೇನಿ ಕೈಗೆ ಅತ್ಯಂತ ಸಹಜವಾಗಿ ಆಡಳಿತದ ಹಸ್ತಾಂತರ ಆಗಿತ್ತು. ೨೦೨೪ರಲ್ಲಿ ರಾಷ್ಟ್ರಪತಿ ಇಬ್ರಾಹಿಂ ರಹಿಶಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನಾನಂತರವೂ ಹೊಸ ರಾಷ್ಟ್ರಪತಿಯ ಆಯ್ಕೆ ಸುಲಭವಾಗಿ ನಡೆದಿತ್ತು.
ಅರಾಜಕತೆಯ ಆತಂಕ: ೯ ಕೋಟಿ ಜನಸಂಖ್ಯೆ ಹೊಂದಿರುವ ಇರಾನ್‌ನಲ್ಲಿ ಷಿಯಾ ಮುಸ್ಲೀಮರೇ ಬಹುಸಂಖ್ಯಾತರು. ಅಲ್ಪಸಂಖ್ಯಾತ ಖುರ್ದ್, ಬಲೂಚ್ ಸಮುದಾಯದವರೂ ಇದ್ದಾರೆ. ಶೀಘ್ರವೇ ಇರಾನ್ನಲ್ಲಿ ಸ್ಥಿರತೆ ಸ್ಥಾಪನೆಯಾಗದಿದ್ದರೆ ಆಡಳಿತ ಯಂತ್ರ ದುರ್ಬಲವಾಗುವ, ಷಿಯಾ ಮುಸ್ಲೀಮರಲ್ಲಿರುವ ಮೂಲಭೂತವಾದಿಗಳು, ಅಲ್ಪಸಂಖ್ಯಾತ ಖುರ್ದ್ ಮತ್ತು ಬಲೂಚ್ ಸಮುದಾಯದವರು ಶಸ್ತ್ರಾಸ್ತ್ರ ಕೈಗೆ ಎತ್ತಿಕೊಂಡರೆ ಅರಾಜಕತೆ ಉಂಟಾಗುವ ಆತಂಕವಿದೆ. ಜೊತೆಗೆ, ಇರಾನ್ ಸೈನ್ಯದ ಆಧುನಿಕ ಶಸ್ತ್ರಾಸ್ತ್ರಗಳು ಯಾರ ಕೈಗೆ ಸಿಗುತ್ತವೆ? ಪರಮಾಣು ಬಾಂಬ್ ತಯಾರಿಗೆ ಅಗತ್ಯವಿರುವ ಶುದ್ಧೀಕರಿಸಿದ ಯೂರೇನಿಯಂ ಹೇರಳವಾಗಿದ್ದು, ಅದು ಯಾರ ಕೈಗೆ ಸಿಗುತ್ತದೆ. ಈ ಎಲ್ಲವೂ ಮೂಲಭೂತವಾದಿಗಳ ಕೈಗೆ ಸಿಕ್ಕರೆ ಜಗತ್ತಿನ ಸುರಕ್ಷತೆಗೆ ಅಪಾಯ ಕಾದಿದೆ ಎಂಬ ವಿಶ್ಲೇಷಣೆಗಳೂ ಇವೆ.
ಇರಾನ್ ಹದಿಮೂರು ರಾಷ್ಟ್ರಗಳ ಜೊತೆಗೆ ಗಡಿ ಹಂಚಿಕೊಂಡಿದೆ. ಏಳು ದೇಶಗಳ ಜೊತೆಗೆ ಭೂ ಗಡಿ ಮತ್ತು ಆರು ಕೊಲ್ಲಿ ರಾಷ್ಟ್ರಗಳ ಜೊತೆಗೆ ಜಲ ಗಡಿಗಳನ್ನು ಇರಾನ್ ಹೊಂದಿದೆ. ಇರಾನ್‌ನಲ್ಲಿ ಅರಾಜಕತೆ ಉಂಟಾದರೆ ಈ ಎಲ್ಲ ದೇಶಗಳಿಗೂ ಇರಾನಿಯರು ಪಲಾಯನ ಮಾಡಬಹುದು. ೨೦೦೩ರಲ್ಲಿ ಸದ್ದಾಂ ಹುಸೇನ್ ಹತ್ಯೆಯ ನಂತರ ಇರಾಕ್‌ನಲ್ಲಿ ಉಂಟಾಗಿದ್ದ ಅರಾಜಕತೆ ಈಗಲೂ ಕೊನೆಗೊಂಡಿಲ್ಲ. ಇರಾಕ್‌ಗಿಂತ ನಾಲ್ಕು ಪಟ್ಟು ದೊಡ್ಡದಾಗಿರುವ ಇರಾನ್‌ನಲ್ಲಿ ಅರಾಜಕತೆ ಉಂಟಾದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಿರಾಶ್ರಿತರ ಸಮಸ್ಯೆ ಉಲ್ಭಣಗೊಳ್ಳಬಹುದು. ಶಾಂತಿ, ಸುವ್ಯವಸ್ಥೆ ಗಗನ ಕುಸುಮವಾಗಬಹುದು ಎಂದು ಅಂತಾರಾಷ್ಟ್ರೀಯ ವಿಷಯಗಳ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಉತ್ತರಾಧಿಕಾರಿ ಆಯ್ಕೆ ಹೇಗೆ ?: ಯುದ್ಧದ ನಡುವೆಯೇ ಅಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಈಗ ಇರಾನ್ ಎದುರಿಗಿದೆ. ಇರಾನ್‌ನಲ್ಲಿ ‘ಸುಪ್ರೀಂ ಲೀಡರ್’ ಆಯ್ಕೆಯನ್ನು ಧರ್ಮಗುರುಗಳ ಸಮಿತಿಯೊಂದು ಮಾಡುತ್ತದೆ. ಅಸೆಂಬ್ಲಿ ಆಫ್ ಎಕ್ ಪರ್ಟ್ಸ್ ಎಂದು ಆ ಸಮಿತಿಯನ್ನು ಕರೆಯುತ್ತಾರೆ. ಇರಾನ್‌ನ ರಾಷ್ಟ್ರಪತಿ, ನ್ಯಾಯಾಂಗದ ಮುಖ್ಯಸ್ಥ ಮತ್ತು ವರಿಷ್ಠ ಮೌಲ್ವಿಯೊಬ್ಬರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ದೇಶದ ಹೊಸ ಸುಪ್ರೀಂ ಲೀಡರ್ ಆಯ್ಕೆ ಮಾಡುವ ಹೊಣೆಗಾರಿಕೆ ಈ ಸಮಿತಿಗಿದೆ.
ಕಳೆದ ವರ್ಷ ಹನ್ನೆರಡು ದಿನಗಳ ಕಾಲ ಇರಾನ್- ಇಸ್ರೇಲ್ ಮಧ್ಯೆ ನಡೆದಿದ್ದ ಯುದ್ಧದ ಸಂದರ್ಭದಲ್ಲೇ ಅಯತೊಲ್ಲಾ ಅಲಿ ಖಮೇನಿ ತಮ್ಮ ಉತ್ತರಾಧಿಕಾರಿ ಯಾರಾಗಬೇಕೆಂಬುದನ್ನು ಯೋಚಿಸಿದ್ದರು. ನ್ಯಾಯಾಂಗದ ಮುಖ್ಯಸ್ಥ ಗುಲಾಂ ಹುಸೇನ್ ಮೊಹಸಿನಿ, ತಮ್ಮ ಆಪ್ತ ಅಧಿಕಾರಿ ಅಲಿ ಅಸ್ಘರ್ ಹಜೇರಿ ಹಾಗೂ ಉದಾರವಾದಿ ಧರ್ಮಗುರು ಹುಸೇನ್ ಖಮೇನಿ ಪೈಕಿ ಒಬ್ಬರು ತಮ್ಮ ಉತ್ತರಾಧಿಕಾರಿ ಆಗಬೇಕೆಂಬುದು ಅವರ ಬಯಕೆಯಾಗಿತ್ತು.
ಸರ್ಕಾರದಲ್ಲಿರುವ ತಮ್ಮ ಆಪ್ತರು ಹಾಗೂ ಸೈನ್ಯದ ಅಧಿಕಾರಿಗಳು ಸೇರಿ ಈ ಮೂವರ ಪೈಕಿ ಒಬ್ಬರನ್ನು ‘ಸುಪ್ರೀಂ ಲೀಡರ್’ ಆಗಿ ಆಯ್ಕೆ ಮಾಡಲಿ ಎಂದೂ ಅವರು ಹೇಳಿದ್ದರು. ಅಯತೊಲ್ಲಾ ಖಮೇನಿ ಅವರ ಪುತ್ರ ಮುಜ್ತಬಾ ಖಮೇನಿ ಕೂಡ ಇರಾನ್‌ನ ಬಲಿಷ್ಠ ನಾಯಕ. ಆದರೆ, ದೇಶದ ಆಡಳಿತದ ಚುಕ್ಕಾಣಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದೆಂಬ ಉದ್ದೇಶದಿಂದ ಅಯತೊಲ್ಲಾ ಖಮೇನಿ ತಮ್ಮ ಪುತ್ರನ ಹೆಸರು ಪ್ರಸ್ತಾಪಿಸಲಿಲ್ಲ ಎನ್ನಲಾಗಿದೆ. ಆದರೆ, ಈಗ ಸಂಭವನೀಯ ಸುಪ್ರೀಂ ಲೀಡರ್‌ಗಳ ಹೆಸರಿನಲ್ಲಿ ಮುಜ್ತಬಾ ಖಮೇನಿಯ ಹೆಸರೇ ಮುಂಚೂಣಿಯಲ್ಲಿದೆ. ರಕ್ಷಣಾ ಸಚಿವ ಅಜೀಜ್ ನಾಸಿರ್, ಇಸ್ಲಾಮಿಕ್ ರೆವುಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಕಮಾಂಡರ್ ಮೊಹಮ್ಮದ್ ಪಕ್ಪೋರ್, ಆಯತೊಲ್ಲಾ ಅವರ ಸಲಹೆಗಾರ ಹಾಗೂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ಮುಖ್ಯಸ್ಥ ಅಲಿ ಶಂಖಾನಿ, ಆಪ್ತ ಅಧಿಕಾರಿ ಮೊಹಮ್ಮದರ್ ಶಿರಾಝಿ ಇನ್ನಿತರರು ಖಮೇನಿ ಅವರ ಆಪ್ತರು ಎನ್ನಲಾಗಿದ್ದು, ಈ ಎಲ್ಲರೂ ಇತರ ಸೈನ್ಯ ಅಧಿಕಾರಿಗಳ ಜೊತೆ ಸೇರಿಹೊಸ ಸುಪ್ರೀಂ ಲೀಡರ್ ಆಯ್ಕೆಮಾಡಬೇಕಿದೆ. ಆದರೆ, ಶನಿವಾರದ ಅಮೆರಿಕ-ಇಸ್ರೇಲ್ ದಾಳಿಯ ನಂತರ ಈ ಪೈಕಿ ಎಷ್ಟು ಜನ ಬದುಕುಳಿದಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ





