ಕೆ.ಬಿ.ರಮೇಶನಾಯಕ
೨೦ ಲಕ್ಷ ದಾಟಿದ ವಸ್ತು ಪ್ರದರ್ಶನ ವೀಕ್ಷಕರ ಸಂಖ್ಯೆ; ಡಿಸೆಂಬರ್ ವೇಳೆಗೆ ಪ್ರೇಕ್ಷಕರ ಸಂಖ್ಯೆ ೫೦ ಲಕ್ಷ ಮೀರುವ ನಿರೀಕ್ಷೆ
ಮೈಸೂರು: ನಗರದ ದೊಡ್ಡಕೆರೆ ಮೈದಾನದಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ಆಯೋಜಿಸಿರುವ ದಸರಾ ವಸ್ತು ಪ್ರದರ್ಶನವನ್ನು ಈವರೆಗೆ ಅಂದಾಜು ೨೦ ಲಕ್ಷ ಮಂದಿ ವೀಕ್ಷಿಸಿದ್ದು, ಡಿಸೆಂಬರ್ ಹೊತ್ತಿಗೆ ೫೦ ಲಕ್ಷ ದಾಟುವ ನಿರೀಕ್ಷೆ ಇದೆ.
ಸಾಮಾನ್ಯವಾಗಿ ವಸ್ತು ಪ್ರದರ್ಶನದಲ್ಲಿ ದಸರಾ ಉದ್ಘಾಟನೆಯ ನಂತರ ಕೆಲ ದಿನಗಳ ಬಳಿಕ ಆರಂಭವಾಗುತ್ತಿದ್ದ ಸರ್ಕಾರಿ ಮಳಿಗೆಗಳು ಈ ಬಾರಿ ಶೀಘ್ರವಾಗಿಯೇ ಶುರುವಾಗಿವೆ. ಜತೆಗೆ ಮಕ್ಕಳ ಮನರಂಜನೆಗಾಗಿ ಹತ್ತಾರು ಅಮ್ಯೂಸ್‌ಮೆಂಟ್ ಆಟಿಕೆಗಳು ಇರುವುದರಿಂದ ವಸ್ತು ಪ್ರದರ್ಶನ ಹೆಚ್ಚು ಜನಾಕರ್ಷಣೆಯಾಗಿದೆ. ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ ೯೦ ದಿನಗಳ ಕಾಲ ದಸರಾ ವಸ್ತು ಪ್ರದರ್ಶನವನ್ನು ಆಯೋಜಿಸ ಲಾಗುತ್ತದೆ.
ಈ ವರ್ಷ ದಸರಾ ಹಬ್ಬವನ್ನು ಸೆ, ೨೨ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತಿತರರ ಉಪಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸಿದರು.
ನಂತರದ ನವರಾತ್ರಿಯ ದಿನಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಮೈಸೂರಿಗೆ ಸಾಗರೋಪಾದಿ ಯಲ್ಲಿ ಹರಿದು ಬಂದಿದ್ದರು. ದಸರಾ ಮುಗಿದ ಮೇಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಭೇಟಿ ನೀಡುತ್ತಿರುವುದು ವಿಶೇಷ. ಕಳೆದ ಮೂರ‍್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪ್ರೇಕ್ಷಕರ ಸಂಖ್ಯೆ ಜಾಸ್ತಿಯಾಗಿದೆ ಎಂದು ಹೇಳಲಾಗಿದೆ.
ವಸ್ತು ಪ್ರದರ್ಶನದಲ್ಲಿ ಹಲವು ವರ್ಷಗಳಿಂದ ಇದ್ದ ಮಳಿಗೆಗಳನ್ನು ತೆರವುಗೊಳಿಸಿ ಬೇಲೂರು- ಹಳೇಬೀಡು ಮಾದರಿಯಲ್ಲಿ ನಿರ್ಮಿಸಿರುವ ಮಳಿಗೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವುದು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಅಲ್ಲಿಗೆ ಭೇಟಿ ನೀಡುವ ಸ್ಥಳೀಯರು, ಹೊರ ಜಿಲ್ಲೆ, ಹೊರ ರಾಜ್ಯಗಳ ಪ್ರವಾಸಿಗರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸುವ ಜತೆಗೆ, ಮಳಿಗೆಗಳನ್ನು ನೋಡಿ ಖುಷಿಪಡುತ್ತಿದ್ದಾರೆ. ವಸ್ತು ಪ್ರದರ್ಶನದಲ್ಲಿ ಅಳವಡಿಸಿರುವ ಸಂಗೀತ ಕಾರಂಜಿಯು ಹೊಸತನದಿಂದ ಮೂಡಿ ಬಂದಿದ್ದು, ವೀಕ್ಷಕರಿಗೆ ಚೇತೋಹಾರಿಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಲು ವಿದೇಶಿ ಆಕರ್ಷಣೆ ಮಾದರಿಯೊಂದನ್ನು ಪ್ರಾಧಿಕಾರ ರೂಪಿಸಿದೆ. ಪ್ರಾಧಿಕಾರದ ಆವರಣದಲ್ಲಿನ ಒಂದು ಎಕರೆ ಪ್ರದೇಶದಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ಡ್ರ್ಯಾಗನ್ ಬೋಟಿಂಗ್ಪಾ ಯಿಂಟ್‌ಅನ್ನು ನಿರ್ಮಿಸಲಾಗುತ್ತಿದೆ. ಇನ್ನೆರಡು ವಾರಗಳಲ್ಲಿ ಪ್ರವಾಸಿಗರಿಗೆ ಮನರಂಜನೆ ನೀಡಲು ಸಿದ್ಧವಾಗಲಿದೆ. ಅಂದಾಜು ೫.೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಪಾಯಿಂಟ್‌ನಲ್ಲಿ ಪ್ರವಾಸಿಗರಿಗೆ ದೋಣಿ ವಿಹಾರಕ್ಕೆ ಅವಕಾಶವಾಗುವಂತಹ ಬೃಹತ್ ಕೊಳವನ್ನು ನಿರ್ಮಿಸ ಲಾಗುತ್ತಿದೆ. ಕೊಳದಲ್ಲಿ ಪ್ರವಾಸಿಗರು ಸೈಕ್ಲಿಂಗ್ ಮಾಡುವುದರೊಂದಿಗೆ. ಕಿರು ಬೋಟಿಂಗ್‌ನಲ್ಲಿ ಸಂಚಾರ ಕೂಡ ನಡೆಸಬಹುದಾಗಿದೆ.
ದೋಣಿ ವಿಹಾರಕ್ಕೆ ಪ್ರವಾಸಿಗರನ್ನು ಸೆಳೆಯಲು ಕೊಳದ ಮಧ್ಯೆ ಬೃಹತ್ ಡ್ರ್ಯಾಗನ್ ಮಾದರಿ ನಿರ್ಮಿಸಲಾಗುತ್ತಿದೆ. ಇದು ವಸ್ತು ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. ಪ್ರಾಧಿಕಾರವೇ ಈ ಪಾಯಿಂಟ್‌ಅನ್ನು ನಿರ್ಮಿಸುತ್ತಿದ್ದು, ಅದೇ ನಿರ್ವಹಣೆ ಮಾಡಲಿದೆ. ಇನ್ನೆರಡು ವಾರಗಳಲ್ಲಿ ಪ್ರವಾಸಿಗರ ಮನರಂಜನೆಗೆ ಮುಕ್ತವಾಗಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.
ಫೈರ್ ಶೋ ಆಕರ್ಷಣೆ: ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಶೀಘ್ರದಲ್ಲೇ ನಿತ್ಯ ಫೈರ್ ಶೋ ಮತ್ತು ಲೇಸರ್ ಶೋ ಆರಂಭಿಸುವ ಸಾಧ್ಯತೆ ಇದೆ. ಜತೆಗೆ ವಿಶಾಲವಾದ ಕೊಳದಲ್ಲಿ ದೋಣಿ ವಿಹಾರ ನಡೆಸಬಹುದು. ಹಾಗೆಯೇ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಜಗಜಗಿಸುವ ಲೋಕದ ಮಾದರಿಯನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ನಿರ್ಮಿಸುತ್ತಿದೆ.
” ಚೀನಾ ಸೇರಿದಂತೆ ಪ್ರವಾಸಕ್ಕೆ ಹೆಚ್ಚು ಆದ್ಯತೆ ನೀಡಿರುವ ವಿದೇಶಗಳಲ್ಲಿ ಈ ಡ್ರ್ಯಾಗನ್ ಬೋಟಿಂಗ್ ಪಾಯಿಂಟ್‌ಗಳನ್ನು ನಿರ್ಮಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಪ್ರಯತ್ನ ದಕ್ಷಿಣ ಭಾರತದಲ್ಲಿಯೇ ಮೊದಲನೆಯದಾಗಿದೆ.”
-ಅಯೂಬ್ ಖಾನ್, ಅಧ್ಯಕ್ಷ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ





