Mysore
28
few clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಅಮೃತ್ ೨.೦ ಯೋಜನೆ ಕಾಮಗಾರಿ ಚುರುಕು

ಎಸ್.ಎ. ಹುಸೇನ್

ಶೀಘ್ರದಲ್ಲೇ ಹೊಸ ಪೈಪ್‌ಲೈನ್ ಮೂಲಕ ನೀರು ಸರಬರಾಜು

೪೭.೪೧ ಕೋಟಿ ರೂ. ವೆಚ್ಚದ ೨ ಹಂತಗಳ ಕಾಮಗಾರಿ ಬಹುತೇಕ ಪೂರ್ಣ

ಮಡಿಕೇರಿ: ನಗರದ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಅಮೃತ್ ೨.೦ ಯೋಜನೆಯ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಹೊಸ ಪೈಪ್ ಲೈನ್ ಮೂಲಕ ನೀರು ಸರಬರಾಜಾಗಲಿದೆ.

ಅಮೃತ್ ೨.೦ ಯೋಜನೆಯಡಿ ಮಡಿಕೇರಿ ನಗರದ ಹಾಲಿ ನೀರಿನ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಪ್ರತಿ ಮನೆಗೆ ಕೊಳವೆ ಸಂಪರ್ಕ ಕಲ್ಪಿಸುವ ೪೭.೪೧ ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿತ್ತು. ೨ ಹಂತಗಳ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ.

ಮೊದಲ ಹಂತದಲ್ಲಿ ೫೭.೮೭ ಕಿ.ಮೀ ಮತ್ತು ೨ನೇ ಹಂತದಲ್ಲಿ ೭೦.೦೭ ಕಿ.ಮೀ. ಸೇರಿದಂತೆ ಒಟ್ಟು ೧೨೧.೯೪ ಕಿ.ಮೀ. ಪೈಪ್‌ಲೈನ್ ಅಳವಡಿಕೆಯ ಗುರಿಯಲ್ಲಿ ೧೦೦ ಕಿ. ಮೀ. ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದ್ದು, ಇನ್ನು ೨೦ ಕಿ.ಮೀ. ಕಾಮಗಾರಿಯಷ್ಟೇ ಬಾಕಿ ಇದೆ.

ನಗರದಲ್ಲಿ ೭,೯೧೧ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆಯಲ್ಲಿ ಸದ್ಯ ೭೦೦ ಮನೆಗಳಿಗಷ್ಟೇ ನಲ್ಲಿ ಸಂಪರ್ಕ ಮತ್ತು ಮೀಟರ್ ಅಳವಡಿಕೆ ಮಾಡಲಾಗಿದ್ದು, ಉಳಿದ ಮನೆಗಳಿಗೆ ಮೀಟರ್ ಅಳವಡಿಕೆ ಕಾರ್ಯವನ್ನು ಚುರುಕುಗೊಳಿಸಲಾಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿರುವ ನೀರು ಸರಬರಾಜು ಜಾಲ ಹಳೆಯದಾಗಿದ್ದು, ಬಹುತೇಕ ತುಕ್ಕು ಹಿಡಿದಿದೆ. ಪೈಪ್ ಲೈನ್‌ಗೆ ಹಾನಿಯಾದಾಗ ಅಲ್ಲಲ್ಲಿ ಬದಲಿಸಿ ಹೊಸ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ ಪ್ರಮುಖ ಲೈನ್ ಹಳೆಯದಾಗಿರುವುದರಿಂದ ಪ್ರತಿ ದಿನ ಒಂದಲ್ಲ ಒಂದು ಕಡೆ ಪೈಪ್ ಒಡೆದು ನೀರಿನ ಸೋರಿಕೆಯಾಗುತ್ತಿದೆ. ಹೀಗೆ ಬರೀ ಸೋರಿಕೆಯಿಂದಲೇ ದಿನಕ್ಕೆ ಬರೋಬ್ಬರಿ ೧೫ ಲಕ್ಷ ಲೀ.ನೀರು ಪೋಲಾಗುತ್ತಿದೆ. ಹೊಸ ಪೈಪ್ ಲೈನ್ ಅಳವಡಿಕೆಯಿಂದ ಪೈಪ್ ಒಡೆದು ಸಂಪರ್ಕ ಕಡಿತವಾಗುವ ಸಮಸ್ಯೆಗೆ ಮುಕ್ತಿ ಸಿಗಲಿದ್ದು, ನೀರಿನ ಸೋರಿಕೆಯನ್ನು ತಡೆಯಬಹುದಾಗಿದೆ.

ಅಮೃತ್ ೨.೦ ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ.೫೦ರಷ್ಟನ್ನು ಕೇಂದ್ರ ಸರ್ಕಾರ ಭರಿಸಿದರೆ, ಶೇ.೪೦ರಷ್ಟನ್ನು ರಾಜ್ಯ ಸರ್ಕಾರ, ಉಳಿದ ಶೇ.೧೦ರಷ್ಟನ್ನು ಸ್ಥಳೀಯ ಸಂಸ್ಥೆ ಭರಿಸಲಿದೆ. ಅದರಂತೆ ಮೊದಲ ಹಂತದ ಕಾಮಗಾರಿಯ ೧೯.೯೦ ಕೋಟಿ ರೂ.ಗಳ ಪೈಕಿ ಕೇಂದ್ರ ಸರ್ಕಾರ ೮.೫೫ ಕೋಟಿ ರೂ., ರಾಜ್ಯ ಸರ್ಕಾರ ೬.೮೪ ಕೋಟಿ ರೂ.ಮತ್ತು ನಗರಸಭೆಯಿಂದ ಶೇ.೪.೫೨ ಕೋಟಿ ರೂ. ಭರಿಸಲಾಗುತ್ತದೆ. ೨ನೇ ಹಂತದ ಕಾಮಗಾರಿಯ ಅಂದಾಜು ವೆಚ್ಚ ೨೭.೫೧ ಕೋಟಿ ರೂ. ಆಗಿದ್ದು, ಕೇಂದ್ರ ಸರ್ಕಾರ ೧೨.೭೭ ಕೋಟಿ ರೂ., ರಾಜ್ಯ ಸರ್ಕಾರ ೧೦.೨೨ ಕೋಟಿ ರೂ. ಮತ್ತು ನಗರಸಭೆ ೬.೧೬ ಕೋಟಿ ರೂ. ಭರಿಸಲಿದೆ.

ಮಡಿಕೇರಿಯಲ್ಲಿ ನೀರಿನ ಬೇಡಿಕೆ: 

ಸದ್ಯ ಮಡಿಕೇರಿಯ ಜನಸಂಖ್ಯೆ ೩೯,೦೦೦ದಷ್ಟು ಇದೆಯೆಂದು ಅಂದಾಜಿಸಲಾಗಿದ್ದು, ಪ್ರತಿದಿನ ತಲಾ ೧೩೫ ಲೀ.ನಂತೆ ಶೇ.೧೫ರಷ್ಟು ನಷ್ಟ ಸೇರಿ ೬.೫೦ ಮೆಗಾ ಲೀ. ನೀರಿನ ಬೇಡಿಕೆಯಿದೆ. ೨೦೪೦ರಲ್ಲಿ ಜನಸಂಖ್ಯೆ ೪೬,೧೦೦ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ೭.೬೦ ಮೆಗಾ ಲೀ. ನೀರಿನ ಬೇಡಿಕೆಯಿರಲಿದೆ. ೨೦೫೫ರಲ್ಲಿ ೫೫,೦೦೦ ಜನಸಂಖ್ಯೆಗೆ ಅನುಗುಣವಾಗಿ ೯.೧೦ ಮೆಗಾ ಲೀ. ನೀರಿನ ಬೇಡಿಕೆಯಿರಲಿದೆ ಎಂದು ಅಂದಾಜಿಸಲಾಗಿದೆ.

” ಕೆಲವೆಡೆ ಪೈಪ್ ಲೈನ್ ಅಳವಡಿಕೆ ಕೆಲಸ ಬಾಕಿ ಇದ್ದು, ಮನೆಗಳಿಗೆ ನಲ್ಲಿ, ಮೀಟರ್ ಅಳವಡಿಕೆ ಆಗಬೇಕಿದೆ. ಈಗಾಗಲೇ ಅಳವಡಿಕೆಯಾಗಿರುವ ಮಾರ್ಗಗಳಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ಮುಕ್ತಾಯವಾಗಿದೆ. ಕಾಮಗಾರಿ ಪೂರ್ಣವಾದ ಬಳಿಕ ನೀರಿನ ಸೋರಿಕೆಯನ್ನು ಸಂಪೂರ್ಣ ವಾಗಿ ತಡೆಗಟ್ಟುವ ಜತೆಗೆ ಮೀಟರ್ ಅಳವಡಿಕೆಯಿಂದ ಸ್ಥಳೀಯ ಸಂಸ್ಥೆಗೆ ಆದಾಯವೂ ಹೆಚ್ಚಲಿದೆ.”

-ಪ್ರಸನ್ನ ಕುಮಾರ್ ಎ., ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

 

 

Tags:
error: Content is protected !!