Mysore
25
scattered clouds
Light
Dark

ಸುಗ್ಗನಹಳ್ಳಿಯ ಬಂಡಿ ಉತ್ಸವಕ್ಕೆ ಸಕಲ ಸಿದ್ಧತೆ

ಭೇರ್ಯ: ಕೆ.ಆರ್.ನಗರ ತಾಲ್ಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಮೇ 24ರ ಶುಕ್ರವಾರ ರಾತ್ರಿ ನಡೆಯಲಿರುವ ಬಂಡಿ ಉತ್ಸವದ ಹಬ್ಬಕ್ಕೆ ಸಕಲ ಸಿದ್ಧತೆ ನಡೆದಿದೆ. ಗ್ರಾಮೀಣ ಸಂಪ್ರದಾಯದಂತೆ ಗ್ರಾಮ ದೇವತೆಯ ಹೆಸರಿನಲ್ಲಿ ನಡೆಸುವ ಈ ಹಬ್ಬವನ್ನು ಕೆಲವು ಕಡೆ ಹಸಿರುಬಂಡಿ ಎನ್ನುತ್ತಾರೆ. ಸುಗ್ಗನಹಳ್ಳಿ ಗ್ರಾಮದಲ್ಲಿ 1950ರಿಂದಲೂ ಈ ಗ್ರಾಮದ ಪೂರ್ವಿಕರು, ಹಿರಿಯರು ಸಾಂಪ್ರದಾಯಿಕವಾಗಿ ಬಂಡಿಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

ಇದೇ ಮೇ 24ರ ಶುಕ್ರವಾರ ಗ್ರಾಮದ ತುಂಬೆಲ್ಲ ಹಸಿರೆಲೆಯ ತೋರಣ, ತೆಂಗಿನ ಗರಿ, ಅಡಕೆ, ಹೊಂಬಾಳೆ ಇವುಗಳಿಂದ ಅಲಂಕರಿಸಿ, ಜೊತೆಗೆ ಕಲ್ಲಿನ ಚಕ್ರದಿಂದ ನಿರ್ಮಾಣ ಮಾಡಿರುವ ಬಂಡಿಯನ್ನು ವಿಶೇಷವಾಗಿ ವಿವಿಧ ಬಣ್ಣಗಳಿಂದ ಅಲಂಕರಿಸಿ, ಬಾಳೆ ಗೊನೆ ಕಟ್ಟಿ, ತಮಟೆ, ಡೊಳ್ಳು, ನಗಾರಿಯೊಂದಿಗೆ ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆಯವರೆಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಂಡಿ ಎಳೆಯುತ್ತಾರೆ.

ಇದಕ್ಕೂ ಮೊದಲು ಯುವತಿಯರು, ಮುತ್ತೈದೆಯರು ತಂಬಿಟ್ಟು ಆರತಿ ಬೆಳಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ಹಬ್ಬಕ್ಕೂ ಮೊದಲು ಕನ್ನಂಬಾಡಿ ಅಮ್ಮನವರ ಹಬ್ಬ ಹರಿಸೇವೆ ಜೊತೆಗೆ ಅನ್ನದಾನ, ಮುನಿಯಪ್ಪನ ಹಬ್ಬ ಆಚರಣೆ ಮಾಡಿದ ನಂತರ ಬಹಳ ವಿಶಿಷ್ಟವಾಗಿ ಬಂಡಿ ಹಬ್ಬ ಆಚರಣೆ ಮಾಡಲಾಗುವುದು ಎಂದು ಮುಖಂಡ ಬಂಡೆಕುಮಾರ್ ತಿಳಿಸಿದರು.

ಗ್ರಾಮದೇವತೆ ಪಟ್ಟಲದಮ್ಮದೇವಿಗೆ ಹರಕೆ, ಮುಡಿಪು ಕಾಣಿಕೆ ಒಪ್ಪಿಸುವ ಸಲುವಾಗಿ ಗ್ರಾಮದ ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಿಂದ ಬಂಡಿ ಚಕ್ರವನ್ನು ಎಳೆಯುವ ಸಂದರ್ಭದಲ್ಲಿ ದೂಳ್‌ಮರಿ ಹೊಡೆಯಲಾಗುತ್ತದೆ.

ಈ ಹಬ್ಬವನ್ನು ಸಾಮರಸ್ಯದಿಂದ ಯಾವುದೇ ಜಾತಿ-ಭೇದವಿಲ್ಲದೆ ಎಲ್ಲಾ ಸಮುದಾಯದವರು ಒಟ್ಟಾಗಿ ಸೇರಿ ಆಚರಿಸುವುದು ವಿಶೇಷ. ಮುಖಂಡರಾದ ಡೇರಿ ಅಧ್ಯಕ್ಷ ರಾಜು, ವಿಜಯ್, ರಾಜಶೆಟ್ಟಿ, ರಾಜಶೇಖರ್, ತಿಮ್ಮೇಗೌಡ, ಧರಣಿ, ವೀರಭದ್ರಶೆಟ್ಟಿ, ವೆಂಕಟೇಶ್, ಮೂರ್ತಿ, ಪುನೀತ್, ರವೀಶ್, ಅಮರ್, ಬಾಂಡ್ ರವಿ, ವಿಜಿ, ಮಹದೇವ ಸೇರಿದಂತೆ ಗ್ರಾಮದ ಅನೇಕ ಯುವಕರು ಗ್ರಾಮದಲ್ಲಿ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಬಂಡಿ ಹಬ್ಬವನ್ನು ಗ್ರಾಮದಲ್ಲಿ ಸಾಮರಸ್ಯದಿಂದ ಯಾವುದೇ ಜಾತಿ-ಭೇದವಿಲ್ಲದೆ ನಮ್ಮ ಪೂರ್ವಿಕರ ಕಾಲದಿಂದಲೂ ಆಚರಣೆ ಮಾಡುತ್ತಾ ಬಂದಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಜನಪದ ಸೊಗಡು ಇಂದಿಗೂ ಉಳಿದಿದೆ. – ಬಂಡೆ ಕುಮಾರ್, ಹಿರಿಯ ಮುಖಂಡ, ಸುಗ್ಗನಹಳ್ಳಿ.

Tags: