Mysore
28
few clouds

Social Media

ಶನಿವಾರ, 10 ಜನವರಿ 2026
Light
Dark

ಹುಣಸಮ್ಮ ತಾಯಿ ಸಿಡಿ ಉತ್ಸವಕ್ಕೆ ಸಕಲ ಸಿದ್ಧತೆ

ಮಿರ್ಲೆ ಗ್ರಾಮದಲ್ಲಿ ಮಾ.7ಕ್ಕೆ ಸಿಡಿ ಉತ್ಸವ, 8ರಂದು ಜಾತ್ರಾ ಮಹೋತ್ಸವ ಆಚರಣೆ

ಕೆ. ಟಿ. ಮೋಹನ್ ಕುಮಾರ್

ಸಾಲಿಗ್ರಾಮ: ತಾಲ್ಲೂಕಿನ ಮಿರ್ಲೆ ಗ್ರಾಮದ ನವಗ್ರಾಮದೇವತೆ ಶ್ರೀ ಹುಣಸಮ್ಮ ತಾಯಿ ದೇವರ ಸಿಡಿ ಉತ್ಸವ ಮಾ. ೭ರಂದು ಹಾಗೂ ಮಾ. ೮ರಂದು ಜಾತ್ರಾ ಮಹೋತ್ಸವವು ಸಾವಿರಾರು ಜನರ ನಡುವೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಈಗಾಗಲೇ ಭರದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಶ್ರೀ ಹುಣಸಮ್ಮ ತಾಯಿಯ ಹಬ್ಬದ ಅಂಗವಾಗಿ ದೇವಸ್ಥಾನ, ಮಿರ್ಲೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ನವ ವಧುವಿನಂತೆ ಸಿಂಗಾರಗೊಳ್ಳುತ್ತಿವೆ.

ದೇವಾಲಯದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಹಾಗೂ ದೇವಸ್ಥಾನಕ್ಕೆ ಬಣ್ಣದ ಲೇಪನ ಕಾರ್ಯ ಭರದಿಂದ ಸಾಗುತ್ತಿದೆ. ಮಾ. ೭ರಂದು ಶ್ರೀ ಹುಣಸಮ್ಮ ತಾಯಿಯ ರಥೋತ್ಸವದ ಅಂಗವಾಗಿ ನವಗ್ರಾಮಗಳಲ್ಲಿ ಹಬ್ಬವು ನಡೆಯಲಿದ್ದು, ಈ ಹಬ್ಬಕ್ಕೆ ತವರಿಗೆ ಆಗಮಿಸುವ ಹೆಣ್ಣುಮಕ್ಕಳು ದೇವಸ್ಥಾನಕ್ಕೆ ತೆರಳಿ ದೇವರಿಗೆ ಮಡಿಲು ತುಂಬಿಸುವ ಶಾಸ್ತ್ರ, ತಂಬಿಟ್ಟಿನ ಆರತಿ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುವುದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದೆ.

ಇಷ್ಟೇ ಅಲ್ಲದೆ ದೇವರಿಗೆ ವಿವಿಧ ರೀತಿಯ ಆರತಿಗಳನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಮಾ. ೮ರಂದು ನಡೆಯುವ ಶ್ರೀ ಹುಣಸಮ್ಮ ತಾಯಿಯ ರಥೋತ್ಸವಕ್ಕೆ ನವಗ್ರಾಮಗಳಾದ ಮಿರ್ಲೆ, ಶಾಬಾಳು, ನಾಟನಹಳ್ಳಿ, ಹಳೇ ಮಿರ್ಲೆ, ಕೊಡಿಯಾಲ, ಹನುಮನಹಳ್ಳಿ, ಬೀಚನಹಳ್ಳಿ, ನರಚನಹಳ್ಳಿ, ಬೀಚನಹಳ್ಳಿ ಕೊಪ್ಪಲು, ಮಾಳನಾಯಕನಹಳ್ಳಿ, ಮಾಳನಾಯಕನಹಳ್ಳಿ ಕೊಪ್ಪಲು ಗ್ರಾಮಗಳಿಂದ ಐದು ಸಿಡಿಗಳು ಮತ್ತು ನಾಲ್ಕು ರಥಗಳು ಆಗಮಿಸಲಿದ್ದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ನಂತರ ಮಿರ್ಲೆ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆಯು ಸಾಗಲಿದೆ. ಶ್ರೀ ಹುಣಸಮ್ಮ ತಾಯಿ ದೇವಾಲಯದ ಆವರಣಕ್ಕೆ ರಥವನ್ನು ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಎಳೆದು ತರಲಿದ್ದಾರೆ. ರಥೋತ್ಸವದ ದಿನದಂದು ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.

ಜಾತ್ರಾ ಮಹೋತ್ಸವ ಮುಗಿದ ನಂತರ ಗ್ರಾಮದ ದೇವಸ್ಥಾನದ ಮುಂಭಾಗ ಇರುವ ಉಯ್ಯಾಲೆಯಲ್ಲಿ ಶ್ರೀ ಹುಣಸಮ್ಮ ತಾಯಿ ಆಟವಾಡುತ್ತಾಳೆ ಎಂಬ ನಂಬಿಕೆಯಿಂದ ರಾತ್ರಿ ೮ ಗಂಟೆಯ ನಂತರ ಈ ದೇವಸ್ಥಾನದ ಕಡೆಗೆ ಯಾರೂ ಹೋಗುವುದಿಲ್ಲ. ಇದು ಹಿಂದಿ ನಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದೆ.

 

Tags:
error: Content is protected !!