ಮಹಾದೇಶ್ ಎಂ.ಗೌಡ
ಏ.೨೪ರಂದು ನಡೆಯಲಿರುವ ಸಭೆಯಲ್ಲಿ ಸಿಎಂ, ಡಿಸಿಎಂ, ಸಚಿವರು ಭಾಗಿ
ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್ ೨೪ರಂದು ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಽಕಾರ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮೂರು ಬಾರಿ ಮುಂದೂಡಲ್ಪಟ್ಟ ಸಂಪುಟ ಸಭೆಯನ್ನು ಏ.೨೪ರಂದು ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡುವಿನ ಮಲೆ ಮಹದೇಶ್ವರ ಪ್ರತಿಮೆ ಸ್ಥಳದಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ತಜ್ಞರು ದೀಪದಗಿರಿ ಒಡ್ಡು ಎತ್ತರದ ಪ್ರದೇಶದಲ್ಲಿ ಇರುವುದರಿಂದ ಸಭೆ ನಡೆಸಲು ಸೂಕ್ತವಾಗಿಲ್ಲ ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ ವಜ್ರಮಲೆ ಭವನ ಮುಂಭಾಗದ ಖಾಲಿ ನಿವೇಶನದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಂಪುಟ ಸಭೆಗೆ ಹಾಜರಾಗುವ ೩೪ ಸಚಿವರು, ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗಾಗಿ ತಜ್ಞರ ಮಾರ್ಗದರ್ಶನದಲ್ಲಿ ಅಗತ್ಯ ಸಿದ್ಧತೆ ಭರದಿಂದ ಸಾಗಿದೆ.
ಸಭೆಗೆ ಸಿಎಂ, ಡಿಸಿಎಂ, ಸಚಿವರುಗಳು, ಹಿರಿಯ ಅಧಿಕಾರಿಗಳು ಆಗಮಿಸುವುದರಿಂದ ಕ್ಯಾಬಿನೆಟ್ ಸಭೆ ನಡೆಯುವ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಕ್ರಮ ವಹಿಸಲಾಗಿದೆ. ಕ್ಯಾಬಿನೆಟ್ ಸಭೆಯ ಆವರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದು ಬಂದೋಬಸ್ತ್ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ: ಸಚಿವರು, ಶಾಸಕರು, ಮುಖ್ಯ ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಲಿರುವುದರಿಂದ ನೂತನ ವಜ್ರಮಲೆ ವಸತಿಗೃಹದಲ್ಲಿರುವ ಕೆಳಹಂತದ ಪಾರ್ಕಿಂಗ್ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ೩೦೦ಕ್ಕೂ ಹೆಚ್ಚು ಕಾರುಗಳನ್ನು ನಿಲುಗಡೆ ಮಾಡಬಹುದು. ಇದಲ್ಲದೆ ಬೇರೆ ಸ್ಥಳದಲ್ಲಿ ೨೦೦ ವಾಹನಗಳನ್ನು ನಿಲ್ಲಿಸಲು ಕ್ರಮವಹಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.
ತಾತ್ಕಾಲಿಕ ಹೆಲಿಪ್ಯಾಡ್ ವ್ಯವಸ್ಥೆ: ಸಿಎಂ, ಡಿಸಿಎಂ, ಸಚಿವರು ಹೆಲಿಕ್ಯಾಪ್ಟರ್ ಮೂಲಕ ಬರುವ ನಿರೀಕ್ಷೆ ಇರುವುದರಿಂದ ಹಾಲಿ ಇರುವ ಹೆಲಿಪ್ಯಾಡ್ ಜೊತೆಗೆ ಹೆಚ್ಚುವರಿ ಹೆಲಿಪ್ಯಾಡ್ಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದು, ಹಳೆಯೂರು ಸಮೀಪ ೩ ಹೆಚ್ಚುವರಿ ಹೆಲಿಪ್ಯಾಡ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ
” ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಸಂತಸದ ವಿಚಾರ. ನಮ್ಮ ಕ್ಷೇತ್ರದಲ್ಲಿಯೇ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿರುವುದರಿಂದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಎಲ್ಲ ಕಾಮಗಾರಿಗಳಿಗೂ ಚಾಲನೆ ಸಿಗಲಿದ್ದು, ಕ್ಷೇತ್ರದ ನೀರಾವರಿ, ರಸ್ತೆ, ಸಾರಿಗೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಬೇಕಾದ ಅನುದಾನ ನೀಡುವ ನಿರೀಕ್ಷೆಯಿದೆ.”
-ಎಂ.ಆರ್.ಮಂಜುನಾಥ್, ಶಾಸಕ
” ಸಚಿವ ಸಂಪುಟ ಸಭೆಯ ಬಂದೋಬಸ್ತ್‌ಗಾಗಿ ೨ ಡಿಐಜಿ, ೨ ಎಸ್‌ಪಿ, ೨ ಎಎಸ್‌ಪಿ, ೧೧ ಡಿವೈಎಸ್ಪಿ, ೩೧ ಇನ್‌ಸ್ಪೆಕ್ಟರ್ ಸೇರಿದಂತೆ ೨,೦೦೦ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.”
-ಧರ್ಮೇಂದ್ರ, ಡಿವೈಎಸ್ಪಿ, ಕೊಳ್ಳೇಗಾಲ ಉಪ ವಿಭಾಗ





