Mysore
31
few clouds

Social Media

ಗುರುವಾರ, 19 ಫೆಬ್ರವರಿ 2026
Light
Dark

ಸಿಎಂ ತವರಲ್ಲಿ ಮಾರ್ಚ್‌ನಲ್ಲಿ ಅಕ್ಕ ಕೆಫೆ ಶುರು

ಕೆ.ಬಿ.ರಮೇಶನಾಯಕ

ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶ

ಮೈಸೂರು: ಬಡವರ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಿಂಡಿ, ಊಟವನ್ನು ನೀಡುವ ಜತೆಗೆ ಸೀ ಶಕ್ತಿ ಸಂಘಗಳಿಗೆ ಆರ್ಥಿಕ ಬಲ ನೀಡಲು ರೂಪಿಸಿರುವ ಅಕ್ಕ ಕೆಫೆಯನ್ನು (ಒಲವಿನ ಊಟ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಲ್ಲಿ ಮಾರ್ಚ್ ತಿಂಗಳ ಮೊದಲ ವಾರ ಮೂರು ಕಡೆಗಳಲ್ಲಿ ಶುರು ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.

ನಗರದ ಜಿಪಂ ಕಚೇರಿ ಹಿಂಭಾಗ, ತಹಸಿಲ್ದಾರ್ ಕಚೇರಿ ಸಮೀಪ ಹಾಗೂ ಹುಣಸೂರು ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ ಪ್ರಾರಂಭವಾಗಲಿದ್ದು, ಈಗಾಗಲೇ ಭರದ ತಯಾರಿ ನಡೆದಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಅಕ್ಕ ಕೆಫೆಯನ್ನು ಆರಂಭಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಅವಕಾಶ ಮಾಡಿಕೊಡುವುದಕ್ಕೆ ಜಿಪಂ ಮುಂದಾಗಿದೆ.

ರಾಜ್ಯದ ವಿವಿಧ ಕಡೆಗಳಲ್ಲಿ ಈಗಾಗಲೇ ‘ಅಕ್ಕ ಕೆಫೆ’ ಪ್ರಾರಂಭಗೊಂಡು ಜನರ ಮೆಚ್ಚುಗೆ ಪಡೆದುಕೊಂಡಿದ್ದು, ಇದೀಗ ಜಿಲ್ಲೆಯಲ್ಲೂ ನೂರಾರು ನಾಗರಿಕರು, ನೌಕರರು ಸೇರುವಂತಹ ಜನನಿಬಿಡ ಪ್ರದೇಶಗಳಲ್ಲಿ ಒಟ್ಟು ಮೂರು ಕಡೆ ಅಕ್ಕ ಕೆಫೆಗಳು ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿವೆ. ನಂತರ ಬೇಡಿಕೆಗೆ ಅನುಗುಣವಾಗಿ ಸಂಖ್ಯೆಯನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ದುಡಿಯುವ ಮಹಿಳೆಯರಿಗೆ ಕೆಲಸ ನೀಡುವುದರ ಜತೆಗೆ, ಜನರಿಗೆ ಶುಚಿ ರುಚಿಯಾದ ಆಹಾರ ದೊರೆಯಬೇಕು ಎಂಬುದು ಅಕ್ಕ ಕೆಫೆಯ ಉದ್ದೇಶವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಕ್ಕ ಕೆಫೆ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಜತೆಗೂಡಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಹಲವೆಡೆ ಕೆಫೆ ಆರಂಭಿಸಲು ಚಿಂತನೆ: ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬೀಜಗನಹಳ್ಳಿ ಗ್ರಾಪಂನ ಹಾಲ ಗೆರೆ ಗ್ರಾಮದಲ್ಲಿ ರೆಸ್ಟೋರೆಂಟ್ (ಪ್ರೀಮಿ ಯಂ) ಹಾಗೂ ಕಂಪಲಾಪುರ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದ ಬಳಿ, ಬೆಟ್ಟದಪುರದ ಶ್ರೀ ಶಾಂತವೀರಮ್ಮ ದೇವಸ್ಥಾನದ ಬಳಿಯಲ್ಲೂ ಕಿರು ಅಕ್ಕ ಕೆಫೆ (ಕ್ಲಾಸಿಕ್) ತೆರೆಯಲು ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ಜಿಲ್ಲೆಯ ತಿ.ನರಸೀಪುರ, ಬನ್ನೂರು, ಎಚ್.ಡಿ.ಕೋಟೆ, ನಂಜನಗೂಡು ಪಟ್ಟಣದಲ್ಲೂ ಪ್ರೀಮಿಯಂ ರೆಸ್ಟೋರೆಂಟ್ ತೆರೆಯಲು ಚಿಂತನೆ ನಡೆಸಲಾಗಿದೆ.

ಸರ್ಕಾರದ ಅನುದಾನದಲ್ಲಿ ಕೆಫೆ: ಅಕ್ಕ ಕೆಫೆ ಸ್ಥಾಪನೆಗೆ ಆಯ್ಕೆಯಾಗುವ ಸ್ಥಳ ಹಾಗೂ ಸ್ವಸಹಾಯ ಸಂಘಗಳ ನಡುವೆ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಸರ್ಕಾರದ ಅನುದಾನದಲ್ಲೇ ಸಂಪೂರ್ಣ ಮೂಲ ಸೌಕರ್ಯವನ್ನು ಒದಗಿಸಲಾಗುತ್ತದೆ. ಪ್ರೀಮಿಯಂ ರೆಸ್ಟೋರೆಂಟ್‌ಗೆ ಸರ್ಕಾರ ೧೫ ಲಕ್ಷ ರೂ, ಕ್ಲಾಸಿಕ್ ಕಿರು ಅಕ್ಕ ಕೆಫೆಗೆ ೭ ಲಕ್ಷ ರೂ. ನೀಡಲಿದೆ. ಕೆಫೆಯ ನವೀಕರಣ, ನೆಲಹಾಸು, ಗೋಡೆಗಳು ಮತ್ತು ಚಾವಣಿ, ಶೇಖರಣಾ ಕ್ಯಾಬಿನೆಟ್‌ಗಳು, ಕೊಳಾಯಿ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ರಶೀತಿ ಯಂತ್ರ, ಪೀಠೋಪಕರಣಗಳು, ಬ್ರ್ಯಾಂಡಿಂಗ್ ವ್ಯವಸ್ಥೆಗೆ ಸರ್ಕಾರ ಅನುದಾನ ನೀಡಲಿದೆ. ಕೆಫೆಗೆ ಬೇಕಾದ ವಸ್ತುಗಳಾದ ಪಾತ್ರೆಗಳು, ಓವನ್ಸ್, ಗ್ಯಾಸ್ ಸಿಲಿಂಡರ್,ಸ್ಟವ್, ಮಿಕ್ಸಿ, ಗ್ರೈಂಡರ್, ರೆಫ್ರಿಜರೇಟರ್‌ಗಳನ್ನು ಸ್ವ ಸಹಾಯ ಸಂಘದ ಸದಸ್ಯರು ಖರೀದಿಸಬೇಕು.

ಸದಸ್ಯರಿಂದಲೇ ನಿರ್ವಹಣೆ: ಅಕ್ಕ ಕೆಫೆಯು ಗ್ರಾಹಕರಿಗೆ ಬೆಳಿಗ್ಗೆಯಿಂದ ರಾತ್ರಿವರೆಗೆ ಉತ್ತಮ ಗುಣಮಟ್ಟದ ತಿಂಡಿ, ಊಟವನ್ನು ಒದಗಿಸಲಿದ್ದು, ಈ ಕೆಫೆಯನ್ನು ಸಂಪೂರ್ಣ ಮಹಿಳಾ ಸದಸ್ಯರೇ ನಿರ್ವಹಣೆ ಮಾಡಬೇಕು. ಸಂಘದ ಲೇಬಲ್‌ವುಳ್ಳ ಉಡುಪುಗಳನ್ನು ಧರಿಸಿಕೊಂಡು ಅಡುಗೆ ತಯಾರಿಸುವುದು, ಸಪ್ಲೈಯರ್, ಕ್ಲೀನಿಂಗ್ ಮತ್ತಿತರ ಕಾರ್ಯವನ್ನು ನಿರ್ವಹಿಸಬೇಕು. ಸ್ಥಳೀಯ ಬೇಡಿಕೆಯ ಆಹಾರಗಳು, ರುಚಿಗೆ ಅನುಗುಣವಾಗಿ ಆಹಾರ ತಯಾರಿಕೆಯನ್ನು ಮಾಡಬೇಕು. ಬೆಳಿಗ್ಗೆ ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್, ಪೊಂಗಲ್, ಮಧ್ಯಾಹ್ನ ಮಿನಿಮಿಲ್ಸ್, ಚಪಾತಿ, ಮುದ್ದೆ ಊಟದ ಮೆನು ಇರುತ್ತದೆ. ಆಯ್ಕೆಗೊಳ್ಳುವ ಸ್ವ ಸಹಾಯ ಸಂಘಗಳಿಗೆ ಸರ್ಕಾರ ಕಾಲ ಕಾಲಕ್ಕೆ ಅಗತ್ಯ ತರಬೇತಿಯನ್ನು ನೀಡಲಿದೆ. ಗ್ರಾಹಕರಿಗೆ ಶುಚಿ ರುಚಿಯಾದ ಆಹಾರ ನೀಡುವ ಜತೆಗೆ ಸರ್ಕಾರಿ ಸಭೆ, ಸಮಾರಂಭಗಳಿಗೂ ತಿಂಡಿ, ಊಟದ ವಸ್ಥೆಯನ್ನು ಅಕ್ಕ ಕೆಫೆ ಮೂಲಕ ನೀಡಲಾಗುವುದು. ಸರ್ಕಾರ ನಿಗದಿಪಡಿಸಿದ ದರದಂತೆ ಆಹಾರವನ್ನು ಪೂರೈಸಬೇಕಿದೆ.

ಈಗಾಗಲೇ ಎರಡು ಮೂರು ಸಂಘಗಳು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಗೆಆಹಾರ ಪೂರೈಸಿ ಮೆಚ್ಚುಗೆ ಗಳಿಸಿಕೊಂಡಿದೆ. ಹಾಗಾಗಿ, ಶೀಘ್ರದಲ್ಲೇ ಸ್ವಸಹಾಯ ಸಂಘವನ್ನು ಆಯ್ಕೆ ಮಾಡಿ ಅಕ್ಕ ಕೆಫೆಯ ಉಸ್ತುವಾರಿ ನೀಡಲು ಉದ್ದೇಶಿಸಲಾಗಿದೆ.

” ಅಕ್ಕ ಕೆಫೆಯನ್ನು ಶುರು ಮಾಡಲು ಎಲ್ಲಾ ಸಿದ್ಧತೆಗಳು ಅಂತಿಮ ಹಂತಕ್ಕೆ ಬಂದಿವೆ. ಹದಿನೈದು ದಿನಗಳಲ್ಲಿ ಮೂರು ಕಡೆ ಶುರುವಾಗಲಿದೆ. ಜಿಪಂ ಕಚೇರಿಹಿಂಭಾಗದ ಜಾಗದಲ್ಲಿ ಕೆ-ಯನ್ನು ನಿರ್ಮಿಸಲಾಗಿದೆ. ಆ ಜಾಗದಲ್ಲಿವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಪಾರ್ಕಿಂಗ್‌ಗೆ ಬೇರೆ ಸ್ಥಳವನ್ನು ನಿಯೋಜಿಸಲಾಗಿದೆ. ಮೊದಲ ಹಂತದಲ್ಲಿ ಮೂರು ಕೆಫೆಗಳು ಶುರುವಾಗಲಿದ್ದು, ಹಂತ ಹಂತವಾಗಿ ಸಾರ್ವಜನಿಕರು, ಹೆಚ್ಚು ನಾಗರಿಕರು ಸೇರುವ ಸ್ಥಳಗಳಲ್ಲಿ ಆರಂಭಿಸಲಾಗುವುದು.”

ಎಸ್.ಯುಕೇಶ್‌ಕುಮಾರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಪಂ

” ಅಕ್ಕ ಕೆಫೆ ಆರಂಭಿಸಲು ಉದ್ದೇಶಿಸುವ ಮಹಿಳಾ ಸ್ವ ಸಹಾಯ ಸಂಘಗಳು ಕಡ್ಡಾಯವಾಗಿ ಎನ್‌ಆರ್‌ಎಲ್‌ಎಂ/ಎನ್‌ಯುಎಲ್‌ಎಂನಲ್ಲಿ ನೋಂದಾಯಿತ ಸಂಘವಾಗಿರಬೇಕು, ಪಾಕ ಪರಿಣತಿಯಲ್ಲಿ ಆಸಕ್ತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು, ಬಂಡವಾಳ ಹೂಡುವ ಸ್ವ ಸಹಾಯ ಸಂಘಗಳಿಗೆ ಆದ್ಯತೆ ನೀಡಲಾಗುವುದು. ಯಾವುದೇ ಸಂಘ ಹಣಕಾಸು ಸಂಸ್ಥೆಯ ಸಾಲ ಬಾಕಿದಾರರಾಗಿರಬಾರದು, ಗುಂಪಿನಲ್ಲಿ ಕನಿಷ್ಠ ೫ ರಿಂದ ೧೦ ಸದಸ್ಯರು ಇರಬೇಕು.”

 

 

Tags:
error: Content is protected !!