ಮೈಸೂರು: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ‘ಮುಂಗಾರು ಪೂರ್ವ ಮಳೆಯು ವಾತಾವರಣವನ್ನು ತಂಪಾಗಿಸಿದ್ದರಿಂದ ರಣಬಿಸಿಲ ಬಿಸಿಗಾಳಿಯಿಂದ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದು, ರೈತಾಪಿ ವರ್ಗ ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದೆ. ಉತ್ತಮ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರೈತರು ಟ್ರಾಕ್ಟರ್, ನೇಗಿಲುಗಳ ಮೂಲಕ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ತಂಬಾಕು ಬೆಳೆಗಾರರು ಈಗಾಗಲೇ ಸಸಿ ಮಡಿ ಮಾಡಿದ್ದು, ಕೆಲವರು ಸಸಿ ನಾಟಿಯನ್ನೂ ಮಾಡಿ ದ್ದಾರೆ. ಹತ್ತಿ ಬಿತ್ತನೆ ಕಾರ್ಯ ಮುಂದುವರಿದಿದೆ. ತಂಬಾಕು 64,800 ಹೆಕ್ಟೇರ್ ಪ್ರದೇಶದ ಗುರಿಗೆ ಬದಲಾಗಿ ಈವರೆಗೆ, 59,260 ಹೆಕ್ಟೇರ್ ಪ್ರದೇಶದಲ್ಲಿ ಸಸಿ ನಾಟಿ ಮಾಡಲಾಗಿದೆ.
ಬಿತ್ತನೆ ಬೀಜ ದಾಸ್ತಾನು: ಕೃಷಿ ಇಲಾಖೆಯ ರೈತಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ, ಹೆಸರು ಮತ್ತು ಉದ್ದು ಬೆಳೆಗಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ರೈತರು ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬಹುದು. ಇತರ ಕೃಷಿ ಪರಿಕರಗಳಾದ ಅಪ್ಪೆಣಬು ಬೀಜ ಮತ್ತು ಟರ್ಪಾಲಿನ್‌ಗಳನ್ನು ಸಹಾಯಧನದಡಿ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಾಗಿರುವ ಕಡೆಗಳಲ್ಲಿ ಮಾಗಿ ಉಳುಮೆ ಮಾಡುವುದು. ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ. ತರಕಾರಿ ಬೆಳೆಗಳಾದ ಟೊಮೆಟೊ, ಬೆಂಡೆಕಾಯಿ ಇತ್ಯಾದಿ ಬೆಳೆಗಳ ಬಗ್ಗೆ ಮುಂಜಾಗ್ರತಾ ಕ್ರಮವಹಿಸಿ, ಮೇ ತಿಂಗಳಿನಲ್ಲಿ ಹಸಿರೆಲೆ ಗೊಬ್ಬರಗಳಾದ ಸೆಣಬು ಅಥವಾ ಡಯಾಂಚ ಮತ್ತು ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಅವರೆ, ಹುರುಳಿ, ಉದ್ದು ಇತ್ಯಾದಿ ಬೆಳೆಗಳನ್ನು ಸೂಕ್ತ ಪ್ರದೇಶಗಳಲ್ಲಿ ಬಿತ್ತನೆ ಮಾಡಲು ಬೇಸಾಯಕ್ಕೆ ಪರಿಕರಗಳ ಪೂರಕಗಳನ್ನು ಸಿದ್ಧತೆ ಮಾಡಿಕೊಳ್ಳಿ. ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವಾಗ ರೈತರು ಬೀಜಗಳನ್ನು ಪ್ರತಿ ಕೆಜಿಗೆ 20 ಗ್ರಾಂ ರೈಜೋಬಿಯಂ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಬೇಕು. ಜತೆಗೆ ರೈತರು ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಿತ್ತನೆ ಮಾಡಿರುವ ದ್ವಿದಳ ಧಾನ್ಯಗಳು ( ಹೆಕ್ಟೇರ್‌ಗಳಲ್ಲಿ )
ಅಲಸಂದೆ – 18,490, ಮುಸುಕಿನ ಜೋಳ – 16,545, ಉದ್ದು ಹೆಸರು – 5,996, ಹತ್ತಿ – 19,870, ಸೂರ್ಯಕಾಂತಿ – 2,335, ಜೋಳ – 754, ಕಬ್ಬು (ಹೊಸನಾಟಿ) ತೊಗರಿ ಹುರುಳಿ – 210, ತೊಗರಿ – 60, ಹುರುಳಿ – 60, ಎಳ್ಳು – 200, ನೆಲಗಡಲೆ – 83, ರಾಗಿ – 155, ಅವರೆ – 115.
ಇಂದು ಹಲವು ಜಿಲ್ಲೆಗಳಲ್ಲಿ ಮಳೆ
ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮೇ 24ರಂದು ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಭಾರಿ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
• ಡಾ.ರಾಜವೇಲ್ ಮಾಣಿಕ್ಕಂ, ಮುಖ್ಯಸ್ಥರು, ಹವಾಮಾನ ಕೇಂದ್ರ, ಬೆಂಗಳೂರು
ಮಳೆ ಆಶ್ರಿತ ಪ್ರದೇಶದಲ್ಲಿ ಶೇ.45.62 ರಷ್ಟು ಬಿತ್ತನೆ
ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಮುಸುಕಿನ ಜೋಳ, ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ಅಲಸಂದೆ, ಅವರೆ, ಹತ್ತಿ, ಹೈಬ್ರಿಡ್ ಜೋಳ ಬಿತ್ತನೆ ಮಾಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಮಳೆ ಆಶ್ರಿತ ಪ್ರದೇಶದಲ್ಲಿ ಶೇ.45.62 ರಷ್ಟು ಬಿತ್ತನೆ ಕಾರ್ಯ ನಡೆದಿದೆ.
– ಡಾ.ಬಿ.ಎಸ್.ಚಂದ್ರಶೇಖರ್, ಜಂಟಿ ಕೃಷಿ ನಿರ್ದೇಶಕರು, ಮೈಸೂರು
ಮಾರ್ಚ್‌ನಿಂದ ಈವರೆಗೆ ಬಿದ್ದ ಮಳೆ
ತಾಲೂಕು ವಾಡಿಕೆ ಬಿದ್ದ ಮಳೆ
ಎಚ್.ಡಿ.ಕೋಟೆ 189 217
ಹುಣಸೂರು 178 251
ಕೆ.ಆರ್.ನಗರ 158 132
ಮೈಸೂರು 182 213
ನಂಜನಗೂಡು 168 209
ಪಿರಿಯಾಪಟ್ಟಣ 168 275
ತಿ.ನರಸೀಪುರ 144 195
ಸರಗೂರು 190 235
ಸಾಲಿಗ್ರಾಮ 148 199
(ಮಿ.ಮೀಗಳಲ್ಲಿ)