Mysore
26
overcast clouds

Social Media

ಗುರುವಾರ, 02 ಜನವರಿ 2025
Light
Dark

ಕ್ಯಾನ್ಸರ್‌ಗೆ ಅತ್ಯಾಧುನಿಕ ತಂತ್ರಜ್ಞಾನ

ರೋಬಾಟಿಕ್ಸ್‌ ಶಸ್ತ್ರಚಿಕಿತ್ಸೆ

ಮೈಸೂರು: ಕ್ಯಾನ್ಸರ್ ಚಿಕಿತ್ಸೆಯಿಂದ ರೋಗಿಗಳ ಮೇಲೆ ಉಂಟಾಗುವ ಅಡ್ಡಪರಿಣಾಮಗಳನ್ನು ನಿಯಂತ್ರಿಸುವ ರೋಬಾಟಿಕ್ಸ್ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಶಸಚಿಕಿತ್ಸೆ ಈಗ ಮೈಸೂರಿನಲ್ಲಿ ಲಭ್ಯವಿದೆ.

ನಗರದ ಪ್ರತಿಷ್ಠಿತ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಈ ರೋಬಾಟಿಕ್ಸ್ ಶಸಚಿಕಿತ್ಸೆಯನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಚಿಕಿತ್ಸೆ ನೀಡಲು ಆಸ್ಪತ್ರೆ ಸಜ್ಜಾಗಿದೆ.

‘ಆಂದೋಲನ’ ದಿನಪತ್ರಿಕೆ ಕಚೇರಿಯಲ್ಲಿ ಶನಿವಾರ ನಡೆದ -ನ್ ಇನ್ ಕಾರ್ಯಕ್ರಮದಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ರೋಗ ಚಿಕಿತ್ಸಕ ತಜ್ಞ ವೈದ್ಯರಾದ ಡಾ. ವಿನಯಕುಮಾರ್ ಮುತ್ತಗಿ ಮತ್ತು ಡಾ.ಆರ್.ರಕ್ಷಿತ್ ಶೃಂಗೇರಿ ರೋಬಾಟಿಕ್ಸ್ ತಂತ್ರಜ್ಞಾನದ ಚಿಕಿತ್ಸಾ ವಿಧಾನ ಸೇರಿದಂತೆ ಕ್ಯಾನ್ಸರ್ ಕುರಿತು ಜನರ ಪ್ರಶ್ನೆಗಳು, ಗೊಂದಲಗಳು ಹಾಗೂ ಸಂದೇಹಗಳಿಗೆ ಪರಿಹಾರ ಮಾರ್ಗಗಳನ್ನು ತಿಳಿಸಿದರು. ನಂತರ ಅವರು, ಕ್ಯಾನ್ಸರ್ ಕಾಯಿಲೆ ಮತ್ತು ಚಿಕಿತ್ಸೆ ಬಗ್ಗೆ ‘ಆಂದೋಲನ’ದೊಂದಿಗೆ ವಿವರಗಳನ್ನು ಹಂಚಿಕೊಂಡರು.

ಕ್ಯಾನ್ಸರ್ ಶಸ ಚಿಕಿತ್ಸೆಯ ನಂತರ ರೋಗಿಗಳಲ್ಲಿ ಅಡ್ಡ ಪರಿಣಾಮಗಳನ್ನು ಬೀರುವುದು ಸಹಜ. ಇದನ್ನು ಕಡಿಮೆ ಮಾಡುವುದಕ್ಕಾಗಿ ರೋಬಾಟಿಕ್ಸ್ ವಿಧಾನದ ಮೂಲಕ ಶಸಚಿಕಿತ್ಸೆ ಮಾಡಲಾಗುವುದು. ಇದು ಕಡಿಮೆ ನೋವು, ಕಡಿಮೆ ರಕ್ತದ ನಷ್ಟ, ಆಸ್ಪತ್ರೆಯ ತಂಗುವಿಕೆಯನ್ನು ಕಡಿಮೆಗೊಳಿಸಿ, ರೋಗಿ ಬಹುಬೇಗ ಚೇತರಿಸಿಕೊಳ್ಳಲು ಸಹಕರಿಸುತ್ತದೆ.ಇಲ್ಲಿಯವರೆಗೂ ಬೆಂಗಳೂರು, ಚೆನ್ನೈ, ಮುಂಬೈನಂತಹ ನಗರಗಳಲ್ಲಿ ಮಾತ್ರ ಈ ಶಸಚಿಕಿತ್ಸೆ ಲಭ್ಯ ಇತ್ತು. ಈಗ ಮೈಸೂರು ಜಿಲ್ಲೆಯಲ್ಲೇ ಮೊದಲ ಬಾರಿಗೆ ನಮ್ಮ ಆಸ್ಪತ್ರೆಯಲ್ಲಿ ಆರಂಭವಾಗಲಿದೆ. ಇದು ಕ್ಯಾನ್ಸರ್ ರೋಗಕ್ಕೆ ಅತ್ಯಂತ ಸುಧಾರಿತ ಚಿಕಿತ್ಸಾ ವಿಧಾನ. ರೋಬಾಟಿಕ್ಸ್ ಶಸಚಿಕಿತ್ಸೆಯಲ್ಲಿ ವೈದ್ಯರಿಗೆ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ನಿರ್ವಹಿಸಲು ರೊಬೊಟ್ ಅನ್ನು ಬಳಸುತ್ತಾರೆ ಎಂದರು.

ಕರುಳಿನ ಕ್ಯಾನ್ಸರ್‌, ಗರ್ಭಕೋಶದ ಕ್ಯಾನ್ಸರ್‌, ಗುದನಾಳದ ಕ್ಯಾನ್ಸರ್‌, ಅನ್ನನಾಳದ ಕ್ಯಾನ್ಸರ್‌ ಇತರೆ ಕ್ಯಾನ್ಸರ್‌ ರೋಗಗಳಿಗೆ ರೋಬಾಟಿಕ್ಸ್‌ ಶಸ್ತ್ರಚಿಕಿತ್ಸೆ ಅತ್ಯುತ್ತಮ ವಿಧಾನವಾಗಿದೆ.

ಯಾವಾಗಿನಿಂದ ಆರಂಭ?: ಈಗಾಗಲೇ ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ರೋಬಾಟಿಕ್ಸ್ ಶಸಚಿಕಿತ್ಸಾ ತಂತ್ರಜ್ಞಾನದ ಸಲಕರಣೆ, ಯಂತ್ರಗಳು ಬಂದಿವೆ. ನ.೧ರಂದು ಕನ್ನಡ ರಾಜ್ಯೋತ್ಸವದ ದಿನ ಈ ನೂತನ ತಂತ್ರಜ್ಞಾನದ ಚಿಕಿತ್ಸೆ ವಿಧಾನಕ್ಕೆ
ಚಾಲನೆ ನೀಡಲಾಗುತ್ತದೆ. ಬೆಂಗಳೂರಿಗೆ ಹೋಲಿಸಿದರೆ ನಮ್ಮ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯಲಿದೆ. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್‌ನ ಸರ್ಕಾರಿ ಸೌಲಭ್ಯಗಳಿಗೂ ನಮ್ಮಲ್ಲಿ ಅವಕಾಶ ಇದೆ. ಪ್ರತಿಯೊಬ್ಬರಿಗೂ ಈ ಚಿಕಿತ್ಸೆ ದೊರೆಯಬೇಕು ಎಂಬುದು ಆಸ್ಪತ್ರೆಯ ಧ್ಯೇಯವಾಗಿದೆ ಎಂದು ಡಾ.ಆರ್.ರಕ್ಷಿತ್ ಶೃಂಗೇರಿ ತಿಳಿಸಿದರು.

ಕ್ಯಾನ್ಸರ್ ಎಂದಾಕ್ಷಣ ಭಯ ಪಡುವ ಅಗತ್ಯವಿಲ್ಲ. ದೇಹಕ್ಕೆ ಯಾವುದೇ ಕ್ಯಾನ್ಸರ್ ಆದರೂ ಅದು ತನ್ನ ಲಕ್ಷಣಗಳನ್ನು ತೋರಿಸುತ್ತದೆ. ಅವುಗಳನ್ನು ನಿರ್ಲಕ್ಷ್ಯ ಮಾಡದೆ ತಪಾಸಣೆಗೆ ಒಳಗಾಗ ಬೇಕು. ಪ್ರಾಥಮಿಕ ಹಂತ
ದಲ್ಲಿಯೇ ರೋಗವನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಿದಲ್ಲಿ ರೋಗಿಯು ಗುಣ ಮುಖವಾಗಲಿದ್ದಾರೆ ಎಂದರು.

ತಿಂಗಳಿಗೆ ೩೫೦ ಮಂದಿ ಹೊಸ ರೋಗಿಗಳು: ಪುರುಷರಲ್ಲಿ ಶ್ವಾಸ ಕೋಶ, ಗಂಟಲು-ಬಾಯಿ, ಲಿವರ್ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಂಡರೆ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕೊರಳಿನ ಕ್ಯಾನ್ಸರ್ ಹೆಚ್ಚು ಪತ್ತೆಯಾಗುತ್ತಿದ್ದು, ಮೈಸೂರು ಭಾಗದಲ್ಲಿ ತಿಂಗಳಿಗೆ ೩೫೦ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಡಾ. ವಿನಯ ಕುಮಾರ್ ಮಾಹಿತಿ ನೀಡಿದರು.

೪೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಗುಣಮುಖವಾಗಿಸ ಬಹುದು. ಹೀಗಾಗಿ ಮಹಿಳೆಯರು ತಪಾಸಣೆಗೆ
ಒಳಗಾಗಬೇಕು ಎಂದು ಅವರು ತಿಳಿಸಿದರು.

ಕ್ಯಾನ್ಸರ್‌ನ ರೋಗ ಲಕ್ಷಣಗಳು: ಸಾಮಾನ್ಯವಾಗಿ ಕ್ಯಾನ್ಸರ್ ರೋಗದಲ್ಲಿ ಎರಡು ಮೂಲಭೂತ ಲಕ್ಷಣಗಳು ಕಂಡು ಬರಲಿವೆ. ಊಟದಲ್ಲಿ ವ್ಯತ್ಯಾಸ, ಊಟದ ಇಚ್ಛೆ ತಪ್ಪಿ ಹೋಗುವುದು ಹಾಗೂ ಇದಕ್ಕಿದ್ದಂತೆ ತೂಕ ಕಡಿಮೆಯಾಗು ವುದು. ೩ರಿಂದ ೬ ತಿಂಗಳಲ್ಲಿ ೧೦ ಕೆಜಿ ತೂಕ ಇಳಿಮುಖವಾದರೇ ಕ್ಯಾನ್ಸರ್ ರೋಗದ ಸಾಧ್ಯತೆಗಳು ಇರಲಿವೆ. ಬಾಯಿ-ಗಂಟಲಿನಲ್ಲಿ ಹುಣ್ಣಿನ ಲಕ್ಷಣಗಳು, ತುತ್ತು ನುಂಗುವಾಗ ನೋವು ಕಾಣಿಸಿಕೊಳ್ಳುವುದು. ಕಡಿಮೆ ಯಾಗದ ಒಣ ಕೆಮ್ಮು, ಕೆಮ್ಮಿದಾಗ ರಕ್ತ ಒಸರು ವುದು- ಈ ಲಕ್ಷಣಗಳು. ಇದ್ದವರು ವೈದ್ಯರ ಬಳಿ ತಪಾಸಣೆಗೆ ಒಳಗಾಗಬೇಕು. ಮಹಿಳೆಯರಿಗೆ ಸ್ತನದಲ್ಲಿ ಗಂಟಿನ ಮಾದರಿ ಕಾಣಿಸಿ ಕೊಳ್ಳುವುದು ಕ್ಯಾನ್ಸರ್ ಇರಬಹುದು ಎಂದು ಡಾ.ವಿನಯ ಕುಮಾರ್ ವಿವರಿಸಿದರು. ಕ್ಯಾನ್ಸರ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ರೋಗಿಗಳಿಗೆ ಮನೆಯಲ್ಲಿ ಮನೋಸ್ಥೈರ್ಯ ತುಂಬುವ ಕೆಲಸವಾಗಬೇಕು.

೫೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪಾಸಣೆಗೆ ಒಳಗಾಗುವುದು ಉತ್ತಮ. ಕ್ಯಾನ್ಸರ್ ಬಾರದಂತೆ ತಡೆಯುವ ನಿಟ್ಟಿನಲ್ಲಿ ೯ ರಿಂದ ೨೫ ವರ್ಷದ ಹೆಣ್ಣು ಮಕ್ಕಳಿಗೆ ಸರ್ವೈಕಲ್ ಲಸಿಕೆಯನ್ನು ನೀಡಲಾಗುತ್ತಿದ್ದು, ನಮ್ಮ ಆಸ್ಪತ್ರೆಯಲ್ಲಿಯೂ
ಲಭ್ಯವಿದೆ ಎಂದು ಅವರು ಹೇಳಿದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪ್ರಶ್ನೋತ್ತರ

ಕುಮಾರ್ (ಮೈಸೂರು): ಕ್ಯಾನ್ಸರ್‌ನ ಪ್ರಸ್ತುತ ಚಿಕಿತ್ಸಾ ವಿಧಾನಗಳು, ೩ ಮತ್ತು ೪ನೇ ಹಂತದ ಕ್ಯಾನ್ಸರ್ ಅನ್ನು ಗುಣಪಡಿಸುವುದೇ ಕಷ್ಟ ಅಂತಾರೆ?
ಡಾ.ವಿನಯಕುಮಾರ್ ಮುತ್ತಗಿ: ಮೊದಲು ಕ್ಯಾನ್ಸರ್ ರೋಗಿಗಳಿಗೆ ಹೊಟ್ಟೆ ಕೊಯ್ದು ಶಸಚಿಕಿತ್ಸೆ ಮಾಡಲಾಗುತ್ತಿತ್ತು. ನಂತರ ಮೂರು ವಾರಗಳವರೆಗೆ ನೋವು ಕಡಿಮೆ ಆಗುತ್ತಿರಲಿಲ್ಲ. ಇದರಿಂದ ಕಿಮೋಥೆರಪಿ, ರೇಡಿಯೋ ಥೆರಪಿಯಂತಹ ಚಿಕಿತ್ಸೆ ವಿಧಾನಗಳು ಕೂಡ ತಡವಾಗುವ ಲಕ್ಷಣಗಳು ಇರುತ್ತಿದ್ದವು. ಇದನ್ನು ರೋಬಾಟಿಕ್ಸ್ ಶಸಚಿಕಿತ್ಸೆ ತಡೆಗಟ್ಟಲಿದೆ. ಕಡಿಮೆ ನೋವು, ಕಡಿಮೆ ರಕ್ತದ ನಷ್ಟ, ಆಸ್ಪತ್ರೆಯ ತಂಗುವಿಕೆ ಕಡಿಮೆಗೊಳಿಸಿ ವೇಗವಾಗಿ ಚೇತರಿಕೆ ನೀಡಲಿದೆ. ೩ನೇ ಹಂತದ ಎಲ್ಲಾ ಕ್ಯಾನ್ಸರ್ ಗಳು ಒಂದೇ ರೀತಿಯಾಗಿ ಇರುವುದಿಲ್ಲ. ಕೆಲ ಬಗೆಯ ಕ್ಯಾನ್ಸರ್‌ಗಳನ್ನು ೩ನೇ ಹಂತದಲ್ಲಿದ್ದರೂ ಗುಣಪಡಿಸಬಹುದು. ೩ನೇ ಹಂತದ ಕ್ಯಾನ್ಸರ್ ಇರುವ ರೋಗಿಗಳು ಕಿಮೋಥೆರಪಿಗೆ ಸ್ಪಂದಿಸಿದ ಮೇಲೆ ನಾವು ರೋಬಾಟಿಕ್ಸ್ ಮೂಲಕ ಆಪರೇಟ್ ಮಾಡುವ ಸಾಧ್ಯತೆಗಳು ಇರುತ್ತವೆ.

ನಾಗರಾಜು (ಹುಣಸೂರು): ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ಹೇಗೆ?
ಡಾ.ವಿನಯಕುಮಾರ್ ಮುತ್ತಗಿ: ಮಹಿಳೆಯರಲ್ಲಿ ಸ್ತನ, ಪುರುಷರಲ್ಲಿ ಬಾಯಿ – ಗಂಟಲು, ಶ್ವಾಸಕೋಶದ ಕ್ಯಾನ್ಸರ್‌ಗಳನ್ನು ಮೊದಲ ಹಂತದಲ್ಲಿ ಪತ್ತೆ ಹಚ್ಚಬಹುದು. ತಂಬಾಕು ಸೇವನೆ ಮಾಡುವವರಲ್ಲಿ ಸಾಮಾನ್ಯವಾಗಿ ಬಾಯಿ ಮತ್ತು ಗಂಟಲು, ಶ್ವಾಸಕೋಶದ ಕ್ಯಾನ್ಸರ್‌ಗಳು ಕಂಡುಬರುತ್ತವೆ. ೧೦ ವರ್ಷಗಳಿಗಿಂತ ಮೇಲ್ಟಟ್ಟು ತಂಬಾಕು ಸೇವನೆ ಮಾಡುತ್ತಿರುವರಿಗೆ ಲೋಡೋ ಸಿಟಿ ಸ್ಕ್ಯಾನ್ ಮಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್‌ಗಳನ್ನು ಪತ್ತೆ ಹಚ್ಚಬಹದು. ಅದಲ್ಲದೇ,
ಬಾಯಿ ಮತ್ತು ಗಂಟಲಿನ ಕ್ಯಾನ್ಸರ್‌ಗಳು ವಾಸಿಯಾಗದ ಹುಣ್ಣಿನ ಮಾದರಿಯಲ್ಲಿ ಬಾಯಿಯಲ್ಲಿ ಕಾಣಿಸಿಕೊಳ್ಳಬಹುದು. ತಂಬಾಕು ಸೇವನೆ ಮಾಡುವ ಅಭ್ಯಾಸ ಇರುವವರು ಹೆಚ್ಚಿನ ತಪಾಸಣೆಗೆ ಒಳಗಾಗಿ ಕ್ಯಾನ್ಸರ್ ಇದೆಯೋ?
ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ೫೦ ವರ್ಷ ಮೇಲ್ಪಟ್ಟವರಲ್ಲಿ ಕೂಡ ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪಿಎಸ್‌ಎ ಪರೀಕ್ಷೆಯ ಮೂಲಕ ಈ ಕಾನ್ಸರ್ ಅನ್ನು ಖಚಿತ ಪಡಿಸಿಕೊಳ್ಳಬಹುದು.

ಅಶೋಕ್ (ನಂಜನಗೂಡು): ನನ್ನ ಸ್ನೇಹಿತನ ತಾಯಿಗೆ ಸ್ತನ ಕ್ಯಾನ್ಸರ್ ಇದೆ? ಅದನ್ನು ಗುಣಪಡಿಸಬಹುದಾ?
ಡಾ.ಆರ್.ರಕ್ಷಿತ್ ಶೃಂಗೇರಿ: ಗುಣಪಡಿಸಬಹುದು. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್‌ನ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. ಆದಷ್ಟು ಬೇಗ ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ಮಾಡಿ. ರೋಗಿಯನ್ನು ಪರೀಕ್ಷೆ ಮಾಡಿ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುವುದು.

ಯಶ್ವಂತ್ (ಬೆಂಗಳೂರು): ಕೋವಿಡ್ ಮುಗಿದ ಮೇಲೆ ಡೆಂಗ್ಯು ಮತ್ತು ಹೃದಯಾಘಾತಗಳು ಹೆಚ್ಚಾಗುತ್ತಿವೆ. ಕ್ಯಾನ್ಸರ್ ಬಗ್ಗೆ ಏನು ಹೇಳುತ್ತೀರಿ?
ಡಾ.ವಿನಯಕುಮಾರ್ ಮುತ್ತಗಿ: ಕೋವಿಡ್ ನಂತರ ಶ್ವಾಸಕೋಶದ ಕಾನ್ಸರ್‌ಪತ್ತೆ ಹಚ್ಚುವ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಆಧುನಿಕ ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಯಿತು. ಆದರೆ, ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲಿಲ್ಲ. ಕೋವಿಡ್‌ಗೂ ಹೃದಯ ಸಂಬಂಽ ಕಾಯಿಲೆಗಳಿಗೂ ಯಾವುದೇ ನಂಟಿಲ್ಲ.

ಕೃಷ್ಣಪ್ರಸಾದ್ (ಮೈಸೂರು ): ಕ್ಯಾನ್ಸರ್ ತಡೆಗಟ್ಟುವ ವಿಧಾನಗಳಾವವು?
ಡಾ.ವಿನಯಕುಮಾರ್ ಮುತ್ತಗಿ: ಸಕ್ಕರೆಯನ್ನು ಹೆಚ್ಚು ಬಳಸುವುದರಿಂದ, ಮಾಂಸಾಹಾರವನ್ನು ಹೆಚ್ಚು ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಇವೆರಡನ್ನೂ ಸೇವನೆ ಮಾಡದಿದ್ದರೆ ಕ್ಯಾನ್ಸರ್‌ನಿಂದ ಅಂತರ ಕಾಯ್ದುಕೊಳ್ಳಬಹುದು. ತಂಬಾಕು ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ತಂಬಾಕು ಸೇವನೆ ಮಾಡುವವರ ಪಕ್ಕ ದಲ್ಲಿ ನಿಂತಿರುವ ವ್ಯಕ್ತಿಗೂ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹೆಚ್ಚಾಗಿ ನಿಮ್ಮ ಸುತ್ತಮುತ್ತ ಧೂಮಪಾನ ಮಾಡುತ್ತಿದ್ದರೆ ಅವರಿಗೆ ಅರಿವು ಮೂಡಿಸಬೇಕು. ಇದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.

ನಿತ್ಯಾ (ಯಾದವಗಿರಿ, ಮೈಸೂರು): ಸರ್ವೈಕಲ್ ಲಸಿಕೆ ಕುರಿತು ಮಾಹಿತಿ ನೀಡಿ?
ಡಾ.ಆರ್.ರಕ್ಷಿತ್ ಶೃಂಗೇರಿ: ಹ್ಯುಮೆನ್ ಪ್ಯಾಪಿಲೋಮಾ ವೈರಸ್‌ನಿಂದ ಸರ್ವೈಕಲ್ ಕ್ಯಾನ್ಸರ್ ಬರುತ್ತದೆ. ಅದನ್ನು ತಡೆಗಟ್ಟಲು ಎಚ್‌ಪಿವಿ ಲಸಿಕೆಗಳಿವೆ. ಈ ಲಸಿಕೆಯನ್ನು ೧೨ ರಿಂದ ೨೫ ವರ್ಷದವರಿಗೆ ನೀಡಲಾಗುತ್ತಿದೆ. ಸರ್ವೈಕಲ್ ಲಸಿಕೆ
ಈಗಾಗಲೇ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಹೆಣ್ಣು ಮತ್ತು ಗಂಡು ಮಕ್ಕಳಿಗೂ ಇದನ್ನೂ ನೀಡಲಾಗುತ್ತದೆ. ಇದರಿಂದ ಶೇ.೯೦ ರಷ್ಟು ಪ್ರಕರಣಗಳನ್ನು ತಡೆಯಬಹುದಾಗಿದೆ.

ವಿಶ್ವಾಸಾರ್ಹ ಆಸ್ಪತ್ರೆ
ಭಾರತ್ ಕ್ಯಾನ್ಸರ್ ಆಸ್ಪತ್ರೆ ೩೫ ವರ್ಷಗಳ ಹಿಂದೆ ಡಾ.ಅಜಯಕುಮಾರ್ ನೇತೃತ್ವದಲ್ಲಿ ಮೈಸೂರಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಸ್ಥಾಪನೆಯಾಗಿದ್ದು, ಪ್ರಸ್ತುತ ಎಲ್ಲ ಮಾದರಿಯ ಕ್ಯಾನ್ಸರ್‌ಗೆ ಚಿಕಿತ್ಸೆ ಲಭ್ಯವಿದೆ. ನವೀನ ಮಾದರಿಯ ತಂತ್ರಜ್ಞಾನಗಳ ಜೊತೆಗೆ ವಿಶ್ವ ಗುಣಮಟ್ಟದ ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ದೊರೆಯುತ್ತಿವೆ. ಹೀಗಾಗಿ ಆಸ್ಪತ್ರೆಯು ಜನರ ನಂಬಿಕೆ, ವಿಶ್ವಾಸವನ್ನು ಗಳಿಸಿಕೊಂಡು ಸಾಗುತ್ತಿದೆ.
-ಡಾ.ಆರ್.ರಕ್ಷಿತ್ ಶೃಂಗೇರಿ, ಕ್ಯಾನ್ಸರ್ ರೋಗ ಚಿಕಿತ್ಸಕ ತಜ್ಞ ವೈದ್ಯ,
ಭಾರತ್ ಕ್ಯಾನ್ಸರ್ ಆಸ್ಪತ್ರೆ, ಮೈಸೂರು.

ಚಿಕಿತ್ಸೆ ದುಬಾರಿ ಅಲ್ಲ
ಕ್ಯಾನ್ಸರ್ ಎಂದರೆ ಶ್ರೀಮಂತರ ಕಾಯಿಲೆ ಎಂಬ ಮಾತಿದೆ. ಹೀಗಾಗಿ ಇದಕ್ಕೆ ಚಿಕಿತ್ಸೆ ಪಡೆಯುವುದು ದುಬಾರಿ ಎಂದು ಜನರಲ್ಲಿ ತಪ್ಪುಕಲ್ಪನೆ ಮೂಡಿದೆ. ರೋಗಕ್ಕೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ರೋಗಿಯು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬಹುತೇಕ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
– ಡಾ.ವಿನಯ ಕುಮಾರ್ ಮುತ್ತಗಿ, ಕ್ಯಾನ್ಸರ್ ರೋಗ ಚಿಕಿತ್ಸಕ ತಜ್ಞ ವೈದ್ಯ, ಭಾರತ್ ಕ್ಯಾನ್ಸರ್ ಆಸ್ಪತ್ರೆ, ಮೈಸೂರು

Tags: