Mysore
28
clear sky

Social Media

ಗುರುವಾರ, 05 ಮಾರ್ಚ್ 2026
Light
Dark

ಸ್ಥಳೀಯ ಸಂಸ್ಥೆ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ: ಭೋಸರಾಜು

ನವೀನ್ ಡಿಸೋಜ

ಖಾಲಿ ಹುದ್ದೆಗಳ ಭರ್ತಿ ಸಂಬಂಧ ಚರ್ಚೆ

ಸ್ಥಳೀಯ ಸಂಸ್ಥೆಗಳ ಸಮಸ್ಯೆ ಹಿಂದಿನಿಂದಲೂ ಇದೆ

ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ

ಆಂದೋಲನ’ ಸಂದರ್ಶನದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ 

ಮಡಿಕೇರಿ: ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿರುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಹೇಳಿದ್ದಾರೆ.

ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇರುವ ಸಂಬಂಧ ‘ಆಂದೋಲನ’ ದಿನಪತ್ರಿಕೆಯಲ್ಲಿ ಲೇಖನ ಪ್ರಕಟವಾದ ಹಿನ್ನೆಲೆಯಲ್ಲಿ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆಂದೋಲನ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುಮಾರು ೨ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೀರಿ. ಯಶಸ್ವಿಯಾಗಿದ್ದೀರಿ ಅನ್ನಿಸುತ್ತಿದೆಯೇ?

ಭೋಸರಾಜು: ಯಾವುದೇ ಒಂದು ರಾಜಕೀಯ ಪಕ್ಷ ಚುನಾವಣಾ ಪ್ರಣಾಳಿಕೆ ಮಾಡುವುದು ಸಹಜ, ಆದರೆ, ೨೦೨೩ರ ವಿಧಾನಸಭಾ ಚುನಾವಣೆ ಮೊದಲು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ೫ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರು. ಅಧಿಕಾರಕ್ಕೆ ಬಂದ ತಕ್ಷಣ ಜಾರಿ ಮಾಡುವುದಾಗಿ ಹೇಳಿದ್ದರು. ಅದರಂತೆ ಜನರು ಆಶೀರ್ವಾದ ಮಾಡಿದ್ದರು. ಅಽಕಾರಕ್ಕೆ ಬಂದ ತಕ್ಷಣ ಮೊದಲ ಸಂಪುಟ ಸಭೆಯಲ್ಲೇ ಅನುಮೋದನೆ ಮಾಡಿ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಈ ಎಲ್ಲಾ ಸೌಲಭ್ಯಗಳು ಕೊಡಗಿನ ಜನತೆಗೂ ದೊರೆತಿವೆ. ಜೊತೆಗೆ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ೬೧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಾರ್ಥಕತೆ ಇದೆ.

ಆಂದೋಲನ: ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವ ಆರೋಪಗಳಿವೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?

ಭೋಸರಾಜು: ಗ್ಯಾರಂಟಿ ಯೋಜನೆಗಳಿಗೆ ಮೊದಲನೇ ವರ್ಷದಲ್ಲಿ ೫೬,೦೦೦ ಕೋಟಿ ರೂ. ಮೀಸಲಿಟ್ಟಿದ್ದೆವು. ೨ನೇ ಬಜೆಟ್‌ನಲ್ಲಿಯೂ ೫೨ ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ೫ ಕೆ.ಜಿ. ಅಕ್ಕಿಯೊಂದಿಗೆ ೩೪ ರೂ.ಗಳಂತೆ ಉಳಿದ ೫ ಕೆಜಿ ಅಕ್ಕಿಗೆ ೧೭೦ ರೂ. ಕೊಡುವ ಕೆಲಸವನ್ನೂ ಮಾಡಿದ್ದೇವೆ. ಈಗ ಅಕ್ಕಿ ಖರೀದಿ ೨೨ ರೂ. ಆಗಿರುವುದರಿಂದ ೧,೦೦೦ ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ. ಬಜೆಟ್‌ನಲ್ಲಿ ಕಳೆದ ಬಾರಿಯೂ ಅನುದಾನ ಕಾಯ್ದಿರಿಸಲಾಗಿತ್ತು. ಈ ಬಾರಿಯೂ ಇಡಲಾಗಿದೆ. ಹೀಗಾಗಿ ಈ ಯಶಸ್ವಿ ಕಾರ್ಯಕ್ರಮಗಳು ಸ್ಥಗಿತಗೊಳ್ಳುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ.

ಆಂದೋಲನ: ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿದಂತೆ ಉಳಿದ ಅಭಿವೃದ್ಧಿ ಕಾರ್ಯ ನಡೆಯುತ್ತಿವೆಯೇ?

ಭೋಸರಾಜು: ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಹೊರತಾಗಿಯೂ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ಮೀಸಲಿಟ್ಟಿದೆ. ಎಲ್ಲ ಇಲಾಖೆಗಳಿಗೂ ಅನುದಾನ ಮೀಸಲಿಡಲಾಗಿದೆ. ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಮಳೆ ಯಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳಿಗೆಕ್ಕೆ ಆದ್ಯತೆ ನೀಡಲಾಗಿದೆ. ಗ್ಯಾರಂಟಿಯಲ್ಲದೆ ಬಜೆಟ್‌ನಲ್ಲಿ ಘೋಷಿಸಿದ ಇತರ ಯೋಜನೆಗಳನ್ನೂ ಯಶಸ್ವಿಯಾಗಿ ಜಾರಿಗೊಳಿಸು ತ್ತಿದ್ದೇವೆ.

ಆಂದೋಲನ: ಸ್ಥಳೀಯ ಸಂಸ್ಥೆಗಳಲ್ಲಿ ಶೇ.೫೦ರಷ್ಟು ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲವೆನ್ನುವ ಆರೋಪವಿದೆಯಲ್ಲ?

ಭೋಸರಾಜು: ಈ ಸಮಸ್ಯೆ ಈ ಸರ್ಕಾರ ಬಂದ ಮೇಲೆ ಆರಂಭವಾಗಿದ್ದಲ್ಲ ಹಿಂದಿನಿಂದಲೂ ಇದೆ. ಹಿಂದಿನ ಆಡಳಿತ ಅವಧಿಯಲ್ಲಿಯೇ ನೇಮಕ ಮಾಡಿದ್ದಲ್ಲಿ ಇಷ್ಟು ಸಮಸ್ಯೆ ಹೆಚ್ಚುತ್ತಿರಲಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಈ ಸಮಸ್ಯೆ ಇರುವುದರಿಂದ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ.

ಪ್ರಶ್ನೆ: ಸ್ಥಳೀಯ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತದೆಯೇ?

ಬೋಸರಾಜು: ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಮಸ್ಯೆಯುಂಟಾಗುತ್ತಿದೆ. ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದೆ. ಪರ್ಯಾಯ ಕ್ರಮದ ಬಗ್ಗೆಯೂ ಚಿಂತನೆಗಳು ನಡೆದಿವೆ. ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ಪೆಂಡಿಂಗ್‌ನಲ್ಲಿದೆ.

Tags:
error: Content is protected !!