ಭೇರ್ಯ ಮಹೇಶ್
ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು; ೨೪ ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಭತ್ತದ ನಾಟಿ
ಕೆ.ಆರ್.ನಗರ: ಭತ್ತದನಾಡು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಭತ್ತದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತರು ಭತ್ತದ ಸಸಿ ಮಡಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಭತ್ತದ ಸಸಿ ಮಡಿ ಸಿದ್ಧಗೊಳಿಸುತ್ತಿರುವ ದೃಶ್ಯಗಳು ಕಾಣುತ್ತಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಜೋರಾಗಿ ಸುರಿಯುತ್ತಿದ್ದು ಈ ಬಾರಿ ಜೂನ್ ತಿಂಗಳಲ್ಲಿಯೇ ಕಾವೇರಿ ನದಿ ಮೈದುಂಬಿತ್ತು. ಈ ಹಿನ್ನೆಲೆಯಲ್ಲಿ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅವಳಿ ತಾಲ್ಲೂಕುಗಳ ರೈತರಿಗಾಗಿ, ಬಳ್ಳೂರು ಮತ್ತು ಸಕ್ಕರೆ ಬಳಿಯ ಚಾಮರಾಜ ಅಣೆಕಟ್ಟೆಯಿಂದ ಶಾಸಕ ಡಿ.ರವಿಶಂಕರ್ ನಾಲೆಗಳಿಗೆ ನೀರು ಹರಿಸಿದ್ದಾರೆ. ರೈತರು ತಮ್ಮ ಜಮೀನುಗಳಿಗೆ ನೀರು ಹರಿಯುತ್ತಿದ್ದಂತೆ ಭತ್ತದ ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಎರಡೂ ತಾಲ್ಲೂಕುಗಳಲ್ಲಿ ಅಂದಾಜು ೨೪ ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಕಾವೇರಿ, ಹಾರಂಗಿ ಮತ್ತು ಹೇಮಾವತಿ ನದಿಗಳ ನಾಲೆಗಳ ಮೂಲಕ ನೀರು ಒದಗಿಸಲಾಗುತ್ತದೆ.
ಕೊನೆಯ ಹಂತದವರೆಗೂ ನಾಲೆಗೆ ನೀರು ಹರಿಸುವ ಉದ್ದೇಶದಿಂದ ೨೦೧೪-೧೫ನೇ ಸಾಲಿನಲ್ಲಿ ನಾಲೆಗಳ ಆಧುನೀಕರಣ ಮಾಡಲಾಗಿದೆ. ಈ ಬಾರಿ ನೀರು ಸರಾಗವಾಗಿ ಹರಿಯಲು ನಾಲೆಗಳಲ್ಲಿ ತುಂಬಿದ್ದ ಹೂಳು, ಜಂಗಲ್‌ಗಳನ್ನು ತೆರವು ಮಾಡಲಾಗಿದೆ.
ಭತ್ತದ ಬಿತ್ತನೆ ಬೀಜ ಪೂರೈಕೆ: ಈಗಾಗಲೇ ಕೃಷಿ ಇಲಾಖೆಯಿಂದ ಅವಳಿ ತಾಲ್ಲೂಕುಗಳ ೬ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ತಳಿಗಳಾದ ಐ.ಆರ್.೬೪, ಎಂಟಿಯು ೧೦೦೧, ಜ್ಯೋತಿ, ಬಿ.ಆರ್.೨೬೫೫, ಆರ್.ಎನ್. ಆರ್., ೧೫೦೮೨, ಭತ್ತದ ಬಿತ್ತನೆ ಬೀಜವನ್ನು ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಲಾಗಿದೆ. ರೈತರು ತಮ್ಮ ಜಮೀನಿಗೆ ಹೊಂದುವ ತಳಿಯನ್ನು ಆಯ್ಕೆ ಮಾಡಿ ಬಿತ್ತನೆ ಮಾಡುವಲ್ಲಿ ನಿರತರಾಗಿದ್ದಾರೆ.
ಅಲ್ಲದೇ ರಾಗಿಯ ಬಿತ್ತನೆಗೆ ವಿವಿಧ ತಳಿಗಳಾದ ಎಂ.ಎಲ್.೩೬೫, ಜೋಳ, ಕಾವೇರಿ ಕಂಪೆನಿಯ ಶಿಂಷಾ ೫೧೭, ಕೆಎಂಹೆಚ್ ೨೪೪, ಪ್ರೊಲೈಲ್ ಕಂಪೆನಿಯ ಪಿಸಿಎಸ್ ೧೦೫, ಮಾರಾಟ ಮಾಡಲಾಗುತ್ತಿದೆ.
ಹೈಬ್ರೀಡ್ ಬಿತ್ತನೆ ಭತ್ತ ತಳಿಗೆ ಮೊರೆ: ಅಧಿಕ ಇಳುವರಿ ಪಡೆಯಲು ರೈತರು ಈಗಾಗಲೇ ಹೈಬ್ರೀಡ್ ಭತ್ತದ ತಳಿಯ ಮೊರೆ ಹೋಗಿದ್ದಾರೆ. ಸರ್ಕಾರ ನಿಗದಿಪಡಿಸಿದ ದರಕ್ಕೆ ಹೈಬ್ರೀಡ್ ತಳಿಯನ್ನು ಮಾರಾಟ ಮಾಡದೇ ದುಪ್ಪಟ್ಟು ಹಣ ಪಡೆಯಲಾಗುತ್ತಿದೆ. ಆದರೂ ಕೂಡ ರೈತರು ಹೈಬ್ರೀಡ್ ಭತ್ತದ ತಳಿಯನ್ನು ಕೊಂಡು ಕೊಳ್ಳುತಿ ದ್ದಾರೆ. ಬೀಜೋಪಚಾರ ಮಾಡಿ ಭತ್ತದ ಸಸಿ ಮಡಿ ಮಾಡಬೇಕು ಎಂದು ಸಲಹೆ ಸೂಚನೆ ನೀಡಿರುವ ಕೃಷಿ ಅಧಿಕಾರಿಗಳು, ಒಂದು ವೇಳೆ ರೋಗಬಾಧೆಯಿಂದ ನಷ್ಟವಾದರೆ ಇದಕ್ಕೂ ಮೊದಲು ತಪ್ಪದೇ ಕಡ್ಡಾಯವಾಗಿ ಬೆಳೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
” ಜೂನ್ ಮೊದಲ ವಾರದಲ್ಲೇ ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗಿನಲ್ಲಿ ಮುಂಗಾರು ಮಳೆಯು ಈ ಬಾರಿ ಅನ್ನದಾತನ ಕೈಹಿಡಿದಿದೆ. ತಾಲ್ಲೂಕಿನ ನಾಲೆಗಳಿಗೆ ನೀರು ಹರಿಸಿದ್ದು ನೀರಿಗಾಗಿ ಕಾಯುತ್ತಿದ್ದ ನಮಗೆ ಸಂತಸ ತಂದಿದೆ. ಖುಷಿಯಿಂದ ಭತ್ತದ ಬಿತ್ತನೆ ಕಾರ್ಯ ಮಾಡಿದ್ದೇವೆ.”
-ಗಂಧನಹಳ್ಳಿ ಹೇಮಂತ್, ಪ್ರಗತಿಪರ ರೈತ, ಗಂಧನಹಳ್ಳಿ
” ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕು ಗಳಲ್ಲಿ ೯೭೦ ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ದಾಸ್ತಾನು ಮಾಡಿದ್ದು, ಇದರಲ್ಲಿ ೨೫೦ ಕ್ವಿಂಟಾಲ್‌ನ್ನು ರೈತರಿಗೆ ಸಹಾಯಧನದಡಿ ರೈತ ಸಂಪರ್ಕ ಕೇಂದ್ರದಲ್ಲಿ ಮಾರಾಟ ಮಾಡಲಾಗಿದೆ. ಮುಂದಿನ ಸಾಲಿನಿಂದ ಹೈಬ್ರಿಡ್ ತಳಿಯನ್ನು ವಿತರಿಸಲು ಕ್ರಮವಹಿಸಲಾಗುವುದು. ಈಗಾಗಲೇ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ. ನಿಗದಿತ ದರಕ್ಕೆ ಮಾರಾಟ ಮಾಡುವಂತೆ ಟ್ರೇಡರ್ಸ್ ಮಾಲೀಕರಿಗೆ ಸೂಚಿಸಲಾಗಿದೆ.”
-ಮಲ್ಲಿಕಾರ್ಜುನ್, ಸಹಾಯಕ ಕೃಷಿ ನಿರ್ದೇಶಕ, ಕೆ.ಆರ್.ನಗರ





