Mysore
21
overcast clouds

Social Media

ಶನಿವಾರ, 03 ಜನವರಿ 2026
Light
Dark

ಆಬಲವಾಡಿ ತೋಪಿನ ತಿಮ್ಮಪ್ಪ ದೇವರಿಗೆ ಹರಿಸೇವೆ

ಎಂ.ಆರ್.ಚಕ್ರಪಾಣಿ

ಸಹಸ್ರಾರು ಜನರಿಗೆ ತಾವರೆ ಎಲೆಯಲ್ಲಿ ಪಂಕ್ತಿ ಊಟ

ಮದ್ದೂರು: ಶ್ರೀ ಮಹಾವಿಷ್ಣು ಲಕ್ಷ್ಮಿದೇವಿಯನ್ನು ಅರಸಿಕೊಂಡು ಬಂದ ಪುಣ್ಯ ಕ್ಷೇತ್ರ ತಾಲ್ಲೂಕಿನ ಆಬಲವಾಡಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ತೋಪಿನ ತಿಮ್ಮಪ್ಪ ಸ್ವಾಮಿ ದೇಗುಲಕ್ಕೆ ಸುಮಾರು ೮೨೩ ವರ್ಷಗಳ ಇತಿಹಾಸವಿದ್ದು, ಇಷ್ಟಾರ್ಥಗಳನ್ನು ಈಡೇರಿಸುವ ದೈವವೆಂದು ಜನರಲ್ಲಿ ನಂಬಿಕೆ ನೆಲೆಸಿದೆ.

ದೇಗುಲಕ್ಕೆ ಆಗಮಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ  ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಅಪಾರ ನಂಬಿಕೆ ಜನರಲ್ಲಿದೆ. ಮಂಡ್ಯ, ಬೆಂಗಳೂರು, ಮೈಸೂರು, ರಾಮನಗರ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ  ತಿಮ್ಮಪ್ಪ ನಿಗೆ ಅಪಾರವಾದ ಭಕ್ತರು ಇದ್ದಾರೆ. ಶನಿವಾರ ಮತ್ತು ಬುಧವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತವೆ.ಪ್ರತಿ ವರ್ಷದ ಆಷಾಢ ಮಾಸದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಹಾಗೂ ಕಾರ್ತಿಕ ಮಾಸದ ಕಡೆಯ ಸೋಮವಾರ ದೀಪೋತ್ಸವ, ವೈಕುಂಠ ಏಕಾದಶಿ, ರಥ ಸಪ್ತಮಿ ಸೇರಿದಂತೆ ವಿಶೇಷ ದಿನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ದೇಗುಲದಲ್ಲಿ ಹಮ್ಮಿಕೊಳ್ಳುವುದು ವಿಶೇಷವಾಗಿದೆ. ಇಂತಹ ವಿಶೇಷ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜನರು ಆಗಮಿಸಿ ಹರಕೆ ಸಲ್ಲಿಸುವುದು ವಾಡಿಕೆ.

ತಾವರೆ ಎಲೆ ಊಟ ಇಲ್ಲಿನ ವಿಶೇಷ: ಸಾಮಾನ್ಯವಾಗಿ ದೇವರ ಹರಿ ಸೇವೆಗೆ ಇಸ್ತ್ರಿ ಎಲೆಯಲ್ಲಿ ಊಟ ಕೊಡುವುದು ವಿಶೇಷ. ಆಬಲವಾಡಿ ತೋಪಿನ ದೇವಸ್ಥಾನದಲ್ಲಿ ನಡೆಯುವ ಹರಿ ಸೇವೆಯಲ್ಲಿ ಲಕ್ಷ್ಮಿದೇವಿಗೆ ತಾವರೆ ಎಲೆಯಲ್ಲಿ ನೈವೇದ್ಯ ನೆರವೇರಿಸಿ, ಹರಿಸೇವೆಗೆ ಆಗಮಿಸುವ ಸಹಸ್ರಾರು ಜನರಿಗೂ ತಾವರೆ ಎಲೆಯಲ್ಲಿ ಊಟ ಬಡಿಸಲಾಗುತ್ತದೆ. ತಾವರೆ ಎಲೆಯನ್ನು ಮದ್ದೂರು ಮುಂತಾದ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿರುವ ಕೆರೆಗಳಿಗೆ ಹೋಗಿ ಸಂಗ್ರಹಿಸಲಾಗುತ್ತದೆ. ಹರಿಸೇವೆಗೆ ಗ್ರಾಮಸ್ಥರು, ದಾನಿಗಳು ತಾವರೆಎಲೆ, ಅಕ್ಕಿ, ಬೇಳೆ, ಸೌದೆ, ಬೆಲ್ಲ, ತುಪ್ಪ ಇನ್ನಿತರ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ನೀಡುವುದಲ್ಲದೆ, ದೇವರ ಆರ್ಥಿಕ ಸಹಾಯವನ್ನೂ ಮಾಡುತ್ತಾರೆ. ಹರಿಸೇವೆಯಲ್ಲಿ ಆಬಲವಾಡಿ ಗ್ರಾಮಸ್ಥರು ಒಟ್ಟಾಗಿ ಸೇರಿ ಸಹಸ್ರಾರು ಜನರಿಗೆ ಊಟ ಉಣಬಡಿಸುವುದನ್ನು ನೋಡುವುದೇ ಚೆಂದ.

ಕಾರ್ಯಕ್ರಮದ ವಿವರ: ಆಬಲವಾಡಿಯ ತೋಪಿನ ತಿಮ್ಮಪ್ಪ ದೇಗುಲದಲ್ಲಿ ಜು.೧೨ರ ಶನಿವಾರ ಹರಿಸೇವೆ ನಡೆದಿದ್ದು, ಜು.೧೩ರ ಭಾನುವಾರ ಕೂಡ ಹರಿಸೇವೆ ಸಡಗರ ಸಂಭ್ರಮದಿಂದ ನಡೆಯಲಿದೆ. ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಹಾಗೂ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಜು.೧೨ರಂದು ಶನಿವಾರ ಮಧ್ಯಾಹ್ನ ಮೀಸಲು ನೀರು ತರುವುದು, ೨ ಗಂಟೆಗೆ ತಲೆ ಮುಡಿ, ಮಹಾ ಮಂಗಳಾರತಿ, ರಾತ್ರಿ ೬ ಗಂಟೆಗೆ ಬಂಡಿ ಮರೆವಣಿಗೆ, ಮಧ್ಯರಾತ್ರಿ ೧೨ ಗಂಟೆಗೆ ಬಾಯಿ ಬೀಗ, ರಾತ್ರಿ ೧ ಗಂಟೆಗೆ ಸೋಮನ ಕುಣಿತ, ಜವಳಿ ಕುಣಿತ, ಮಂಗಳ ವಾದ್ಯ, ಮದ್ದಿನ ತಮಾಷೆ ಮತ್ತು ತಮಟೆಗಳೊಂದಿಗೆ ತಿಮ್ಮಪ್ಪ ದೇವರ ಉತ್ಸವ ಮೂರ್ತಿ ಶ್ರೀಲಕ್ಷ್ಮಿ ದೇವಿ, ಶ್ರೀಬಂಕದ ಘಟ್ಟಮ್ಮ, ಮದ್ದೇನಟ್ಟಮ್ಮ ದೇವರುಗಳ ಭವ್ಯ ಮೆರವಣಿಗೆ ಜರುಗಿತು. ಜು.೧೩ರ ಭಾನುವಾರ ದೇಗುಲದ ಆವರಣದಲ್ಲಿ ಸಹಸ್ರಾರು ಜನರಿಗೆ ಬೆಳಿಗ್ಗೆ ೮ ಯಿಂದ ಮಧ್ಯಾಹ್ನ ೧೨ ಗಂಟೆಯ ವರೆಗೆ ತಾವರೆ ಎಲೆಯಲ್ಲಿ ಅನ್ನಸಂತರ್ಪಣೆ (ಹರಿಸೇವೆ) ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಂದೇ ಬಾರಿ ೨೦ ರಿಂದ ೩೦ ಸಾವಿರ ಜನರಿಗೆ ಊಟ ಬಡಿಸುವುದು ವಿಶೇಷವಾಗಿದ್ದು,ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಬಲವಾಡಿ ಗ್ರಾಮಸ್ಥರು, ಯಜಮಾನರು, ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಟ್ರಸ್ಟಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ

” ತೋಪಿನತಿಮ್ಮಪ್ಪ ನಮ್ಮ ಮನೆ ದೇವರು, ಚಿಕ್ಕವಯಸ್ಸಿನಿಂದಲೂ ದೇಗುಲಕ್ಕೆ ತೆರಳಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತೇವೆ. ದೇಗುಲಕ್ಕೆ ಬಂದು ಶ್ರದ್ಧಾಭಕ್ತಿಯಿಂದಪೂಜಿಸಿದರೆ ಇಷ್ಟಾರ್ಥಗಳು ನೆರೆವೇರುತ್ತವೆ.”

-ಸುರೇಶ್, ಅಧ್ಯಕ್ಷರು, ಆಬಲವಾಡಿ ಗ್ರಾ.ಪಂ.

Tags:
error: Content is protected !!