ಉಳುಮೆ ಪ್ರತಿಷ್ಠಾನದ ವತಿಯಿಂದ ನಡೆದ ಅರಿವಿನ ಚಾವಡಿಯ ಶಿಬಿರ ಸಂಪನ್ನ
ಮೈಸೂರು: ಯುವ ಜನತೆಗೆ ಸತ್ಯದ ಅರಿವಾಗಲಿ ಎಂಬ ಉದ್ದೇಶದಿಂದ ಉಳುಮೆ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ನಡೆದ ಅರಿವಿನ ಚಾವಡಿಯ ಶಿಬಿರ ಭಾನುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.
ನಗರದ ಬೋಗಾದಿ-ಗದ್ದಿಗೆ ಮುಖ್ಯ ರಸ್ತೆಯ ಬನವಾಸಿ ತೋಟದಲ್ಲಿ ನಡೆದ ಅರಿವಿನ ಚಾವಡಿ ಕಾರ್ಯಾಗಾರವು ರೈತ, ದಲಿತ, ಕಾರ್ಮಿಕ, ಮಹಿಳಾ ಚಳವಳಿಗಳ ಒಳನೋಟ, ಪರಿಸರ ಸಂರಕ್ಷಣೆ, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಬೆಳಕು ಚೆಲ್ಲಿತು.
ಮೂರು ದಿನಗಳ ಕಾಲವೂ ಪ್ರಗತಿಪರ ಚಿಂತಕರು, ದಲಿತ ಹೋರಾಟಗಾರರು, ಯುವ ಹೋರಾಟಗಾರರು, ವಿಚಾರವಾದಿಗಳು, ಬುದ್ಧಿಜೀವಿಗಳು, ಸಾಹಿತಿಗಳು ಭಾಗವಹಿಸಿ ತಮ್ಮ ಅಭಿಪ್ರಾಯ ಮತ್ತು ವಿಚಾರಗಳನ್ನು ಹಂಚಿಕೊಂಡರು. ನಿತ್ಯವೂ ನೂರಾರು ಸಂಖ್ಯೆ ಯಲ್ಲಿ ಸಂವೇದನಾಶೀಲ ಮನಸ್ಸುಗಳು ಆಗಮಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಾಗಾರಕ್ಕೆ ಆಯ್ದ ೫೦ ಮಂದಿ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದರ ಜೊತೆಗೆ ಹಲವು ಸಂಘಟನೆಗಳು ಕೈಜೋಡಿಸಿದ್ದವು. ದಲಿತ ಸಂಘರ್ಷ ಸಮಿತಿ, ರೈತ ಸಂಘ ಹಾಗೂ ಬೇರೆ ಬೇರೆ ಸಂಘಟನೆಗಳು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.
ಕಾರ್ಯಾಗಾರದ ಮೊದಲ ದಿನ ಪ್ರಸ್ತುತ ರಾಜಕೀಯ ಮತ್ತು ನಮ್ಮ ನಿಲುವು ಎಂಬ ವಿಚಾರದ ಬಗ್ಗೆ ಪತ್ರಕರ್ತ ಡಾ.ಎಚ್.ವಿ. ವಾಸು ಅವರು ವಿಷಯ ಮಂಡನೆ ಮಾಡಿದರು. ಭಾರತದಲ್ಲಿ ಹಣವಂತರಿಗೆ ರಾಜಕೀಯ ಬೇಡವಾಗಿದೆ. ಆದರೆ, ಬಡ ಮತ್ತು ಮಧ್ಯಮ ವರ್ಗದ ಜನತೆಗೆ ರಾಜಕೀಯ ಅತ್ಯಂತ ಅನಿವಾರ್ಯವಾಗಿದೆ. ಬೆಂಗಳೂರಿನ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯದ ಮುಖ್ಯಮಂತ್ರಿ ಯಾರೆಂದು ಗೊತ್ತಿಲ್ಲ. ಇದನ್ನು ಹೊಗಲಾಡಿಸಬೇಕು. ಹೀಗಾಗಿ ಮೊದಲು ಯುವ ಜನರಲ್ಲಿನ ರಾಜಕೀಯ ನಿಲುವು ಏನು ಎಂಬುದನ್ನು ತಿಳಿಯಬೇಕು. ಏಕೆಂದರೆ ರಾಜಕೀಯ ಎಲ್ಲವನ್ನು ತೀರ್ಮಾನ ಮಾಡುತ್ತದೆ. ಆದ್ದರಿಂದ ಒಂದನೇ ತರಗತಿಯಿಂದ ರಾಜಕೀಯದ ಕುರಿತು ತಿಳಿಸಬೇಕು. ರಾಜಕೀಯ ದೇಶದ ಪ್ರತಿಯೊಬ್ಬನಿಗೂ ಅಗತ್ಯವಾದದ್ದು ಎಂದರು.
ಸರ್ಕಾರಗಳನ್ನು ಕಟ್ಟು ವುದು ಒಂದು ರಾಜಕೀಯ ಕಲೆ. ಹೂಟಗಳ್ಳಿಯ ಭಾಗದಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಮಾಡುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಒಂದು ವೇಳೆ ಸ್ಟೇಡಿಯಂ ನಿರ್ಮಾಣವಾದರೆ ಮುಂದಿನ ಹದಿನೈದು ವರ್ಷಗಳಲ್ಲಿ ಗಾಳಿ ಕಲುಷಿತವಾಗಲಿದೆ ಎಂದು ಅವರು ರಾಜಕೀಯ ಆಯ್ಕೆಗಳ ಕುರಿತು ವಿವರಿಸಿದರು.
ಜಾಗತೀಕರವೋ ಮರು ವಸಾಹತೀಕರಣವೋ ಜಾಗತೀಕರಣದಿಂದಾಗುವ ಅನಾಹುತಗಳು, ಪರಿಸರದ ಮೇಲಿನ ಸರ್ಕಾರದ ಕೆಲವು ನಿಯಮಗಳು, ದಿನನಿತ್ಯದಲ್ಲಿ ಮಾರಕವಾಗುವ ವಿಚಾರಗಳು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ವಿಚಾರವಾದಿ ಎಚ್.ಎಸ್.ಶಿವಸುಂದರ್ ಅವರು ವಿಚಾರ ಮಂಡಿಸಿದರು.
ದೇಶದಲ್ಲಿ ಸಂಪತ್ತಿನ ರಾಷ್ಟ್ರೀಕರಣವಾಗಬೇಕು. ಊಳಿಗಮಾನ್ಯ ಪದ್ಧತಿಯ ಮೇಲೆ ಜಾತಿ ನಿಂತಿದೆ. ಇದು ಹೊಗಬೇಕೆಂದರೆ ಭೂಮಿ ಒಡೆತನ ಸಂಪೂರ್ಣ ಬದಲಾಗ ಬೇಕು. ಬೇರೆ ದೇಶಗಳಲ್ಲಿ ದುಡಿಮೆಯ ಮೂಲಕ ಬಂಧುತ್ವ ಬೆಳೆಸಲಾಗುತ್ತದೆ. ಆದರೆ, ನಮ್ಮಲ್ಲಿ ಎಲ್ಲದಕ್ಕೂ ಒಂದೊಂದು ಕೇರಿಗಳು ಇರುವುದರಿಂದ ಬಂಧುತ್ವ ಬೆಳೆಯುವುದಿಲ್ಲ. ಬಂಧುತ್ವ ಬೆಳೆಯದಿದ್ದರೆ ದೇಶ ಬೆಳೆಯುವುದಿಲ್ಲ. ಹೀಗಾಗಿ ಸಂಪತ್ತು ಹಂಚಿಕೆ ಅತ್ಯಂತ ಅಗತ್ಯ ಎಂದು ಹೇಳಿದರು.
ಭಾರತದ ಸಂವಿಧಾನದ ಮಹತ್ವವನ್ನು ಅಕ್ಕ ಐಎಎಸ್ ಅಕಾಡೆಮಿಯ ಡಾ.ಶಿವಕುಮಾರ್ ಅವರು ಆಳವಾಗಿ ಪರಿಚಯಿಸಿಕೊಟ್ಟರು. ತಮ್ಮ ಭಾಷಣದಲ್ಲಿ ಅವರು ಸಂವಿಧಾನದ ಮೂಲವನ್ನು ೧೭೭೩ರ ರೆಗ್ಯುಲೇಟಿಂಗ್ ಆಕ್ಟ್ನಿಂದ ಪ್ರಾರಂಭವಾಗುತ್ತದೆ ಎಂದು ಉಲ್ಲೇಖಿಸಿ, ಅದಕ್ಕೂ ಮುನ್ನ ಭಾರತದಲ್ಲಿ ಅಸ್ತಿತ್ವ ದಲ್ಲಿದ್ದ ಆಡಳಿತ ವ್ಯವಸ್ಥೆಗಳು ಮತ್ತು ಮನುಸ್ಮೃತಿಯಂತಹ ಗ್ರಂಥಗಳ ಸಾಮಾಜಿಕ ಪ್ರಭಾವವನ್ನು ವಿವರಿಸಿದರು.
ಬೌದ್ಧ ಮತ್ತು ಜೈನ ಧರ್ಮಗಳು ಪುರೋಹಿತ ಶಾಹಿ ವ್ಯವಸ್ಥೆಗೆ ನೀಡಿದ ಸವಾಲು, ಅಶೋಕನ ಕಾಲದ ಬದಲಾವಣೆಗಳು, ಮತ್ತು ಮೌರ್ಯ ಸಾಮ್ರಾಜ್ಯದ ನಂತರ ಉದ್ಭವಿಸಿದ ವರ್ಣವ್ಯವಸ್ಥೆಯ ಪಿತೂರಿ ಗಳನ್ನು ಅವರು ಚರ್ಚಿಸಿದರು.
ಕಾರ್ಯಾಗಾರದ ಎರಡನೇ ದಿನ ರಹಮತ್ ತರೀಕೆರೆ ಅವರು ನಾಗರಿಕತೆ, ಸಂಸ್ಕ ತಿ ಮತ್ತು ಸಾಂಸ್ಕ ತಿಕ ಹೋರಾಟದ ಬಗೆಗಿನ ಇತಿಹಾಸದ ಕುರಿತು ಮಾತನಾಡಿ, ಒಂದು ಸಮುದಾಯದ ಜೀವನ ವಿವರಗಳನ್ನು ಸಂಸ್ಕೃತಿ ಎನ್ನುತ್ತಾರೆ. ನಮ್ಮ ಸುತ್ತಮುತ್ತಲಿನ ಬದುಕನ್ನು ಭೌತಿಕ ಪರಿಸರವೇ ನಮ್ಮ ಸಂಸ್ಕೃತಿಯನ್ನು ರೂಪಿಸುತ್ತದೆ. ಅಲೋಚನ ಕ್ರಮದ ಮೂಲಕ ಬದುಕು ನಿರ್ಧರಿಸಲಿದೆ. ಹೀಗಾಗಿ ನಮ್ಮ ಸುತ್ತಲಿನ ಪರಿಸರವನ್ನು ಬದಲಾಯಿಸುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ದಸಂಸ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ ಎಂಬ ವಿಚಾರದ ಬಗ್ಗೆ ಹಿರಿಯ ದಲಿತ ಹೋರಾಟ ಇಂದೂಧರ ಹೊನ್ನಾಪುರ ಅವರು, ತಿಳಿಸಿ ಕೊಟ್ಟರು.
ಜೊತೆಗೆ ನಮ್ಮ ಮುಂದಿನ ದಿನಗಳಲ್ಲಿ ಹೇಗೆ ಸಂಘಟನೆ ಮಾಡಬೇಕು, ಯಾ ವ ಕಾರಣಕ್ಕೆ ಸಂಘಟನೆ ನಡೆಸಬೇಕು. ಸಂಘಟನೆ ಎಷ್ಟು ಮುಖ್ಯ, ಈ ನಡುವೆ ಸರಿ ತಪ್ಪುಗಳಾವುವು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ರೈತ ಸಂಘ ನಡೆದು ಬಂದ ಹಾದಿ ಹಾಗೂ ಮುಂದಿನ ನಡೆ ಎಂಬ ವಿಚಾರದ ಬಗ್ಗೆ, ಕೃಷಿ ಹಾಗೂ ರೈತರ ವೈಯಕ್ತಿಕ ವಿಚಾರಗಳ ಬಗ್ಗೆ ಸರ್ಕಾರದಿಂದ ರೈತರಿಗೆ ದೊರಕುತ್ತಿರುವ ಸವಲತ್ತುಗಳ ಬಗ್ಗೆ ರೈತ ಮುಖಂಡರಾದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮತ್ತು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅವರು ಚರ್ಚೆ ಮಾಡಿ ಯುವಕರಿಗೆ ವಿಚಾರಗಳನ್ನು ತಿಳಿಸಿಕೊಟ್ಟರು.
ಹಿರಿಯ ಚಿಂತಕ ಬಿ.ಶ್ರೀಪಾದ ಭಟ್ ಅವರು, ಯುವಕರು ಉದ್ಯಮ ಸೃಷ್ಟಿಯಲ್ಲಿ ಯಾವ ಕನಸನ್ನು ಹೊಂದಬೇಕು, ಯಾವ ಮಾರ್ಗ ಅನುಸರಿಸಬೇಕು ಎಂಬ ಬಗ್ಗೆ ಸವಿವರವಾಗಿ ಯುವ ಜನತೆಗೆ ತಿಳಿಸಿಕೊಟ್ಟರು.
ಮೂರನೇ ದಿನವಾದ ಭಾನುವಾರ ಕಾಡಶೆಟ್ಟಿ ಹಳ್ಳಿ ಸತೀಶ್ ಅವರು ಗ್ರಾಮ ಸಭೆಯ ಮಹತ್ವ ಎಂಬ ವಿಚಾರದ ಬಗ್ಗೆ ತಿಳಿಸಿದರು. ಫೇಸ್‌ಬುಕ್, ವಾಟ್ಸಾಪ್ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನೇ ವೈಭವೀಕರಿಸುವ ಸತ್ಯವನ್ನು ಪ್ರಚಾರ ಮಾಡದೇ ಇರುವುದರ ಬಗ್ಗೆ ಹಾಗೂ ಇತರೆ ವಿಚಾರಗಳ ಬಗ್ಗೆ ರಾಜಕೀಯದ ಜ್ಞಾನದ ಬಗ್ಗೆ, ಮೂಲಭೂತ ಹಕ್ಕುಗಳ ಬಗ್ಗೆ ಪ್ರಶ್ನೆ ಮಾಡುವುದು ಹೇಗೆ? ಎಂಬೆಲ್ಲಾ ಕುರಿತು ಯುವಜನತೆಗೆ ತಿಳಿಸಲಾಯಿತು.
” ಬೌದ್ಧಿಕ ಪರಿಸರ ನಮ್ಮ ಆಲೋಚನೆಗಳನ್ನು ರೂಪಿಸುತ್ತದೆ. ಪ್ರಜ್ಞೆಯನ್ನೇ ಬದಲಾಯಿಸಬೇಕಾದರೆ, ಪರಿಸರವನ್ನೇ ಬದಲಾಯಿಸಿ. ಜಾತಿವಾದಿ ಸಮಾಜದಲ್ಲಿ ಬದುಕುವ ಮಗು ಸಹಜವಾಗಿ ಜಾತೀಯತೆಯನ್ನು ಅಳವಡಿಸಿಕೊಳ್ಳುತ್ತದೆ. ಇಲ್ಲಿ ಮಗುವನ್ನು ತಿದ್ದುವುದಲ್ಲ, ಮಗುವನ್ನು ರೂಪಿಸುವ ಪರಿಸರವನ್ನು ತಿದ್ದುವ ಕೆಲಸ ಆಗಬೇಕು.”
– ಪ್ರೊ.ರಹಮತ್ ತರೀಕೆರೆ, ಹಿರಿಯ ಸಾಹಿತಿ
” ನಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಂಡು ಇರುವ ಚೌಕಟ್ಟಿನಲ್ಲೇ ಮೂರನೇ ಪ್ರಯತ್ನ ಮಾಡಬೇಕು. ಸಂವಿಧಾನದ ಆಶಯದಂತೆ ಹಾಗೂ ಅಂಬೇಡ್ಕರ್ ಅವರ ಕನಸಿನಂತೆ ನಾವೆಲ್ಲರೂ ಜೀವನ ಸಾಗಿಸುವುದು ಒಳ್ಳೆಯದು.”
-ಶಿವಸುಂದರ್, ಹಿರಿಯ ಚಿಂತಕ
” ಭಾರತದ ತಳಸಮುದಾಯದಲ್ಲಿ ಒಂದು ವಿಶೇಷವಾದ ಚೈತನ್ಯ ಅಂದು ಉಂಟುಮಾಡಿತು. ಗರೀಬಿ ಹಠಾವೋ ಘೋಷಣೆ ರಾಜಕೀಯವಾಗಿ ಗೇಲಿಗೆ ಒಳಗಾಗಿತ್ತು. ಆದರೆ ಬಡವರ ಹಾಗೂ ತಳಸಮುದಾಯದ ಮನಸ್ಸಿನಲ್ಲಿ, ದುರ್ಬಲ ವರ್ಗದವರ ಮನಸ್ಸಿನಲ್ಲಿ ಗರೀಬಿ ಹಠಾವೋ ಒಂದು ದೊಡ್ಡ ಚೈತನ್ಯವಾಗಿ ಕೆಲಸ ಮಾಡಿದೆ.”
– ಇಂದೂಧರ ಹೊನ್ನಾಪುರ, ಹಿರಿಯ ದಲಿತ ಹೋರಾಟಗಾರ
” ಹವಾಮಾನ ಬದಲಾವಣೆ ಆಗಿದ್ದು, ಇದಕ್ಕೆ ಶಾಖವರ್ಧಕ ಅನಿಲಗಳ ಅತೀ ಹೆಚ್ಚಿನ ಉತ್ಪಾದನೆಯೇ ಕಾರಣವಾಗಿದೆ. ಇದನ್ನು ಕಡಿಮೆ ಮಾಡದೇ ಹೋದರೆ ಇನ್ನೂ ೬೦-೭೦ ವರ್ಷಗಳಲ್ಲಿ ಈ ಭೂಮಿಯ ಮೇಲೆ ಯಾವ ಜೀವ ಸಂಕುಲವು ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಲಿದೆ.”
– ಟಿಜಿಎಸ್ ಅವಿನಾಶ್





