ಮಂಜು ಕೋಟೆ
ಕೋಟೆ: ರೈತ, ಗುತ್ತಿಗೆದಾರ ದೊರೆದಾಸ್‌ರಿಂದ ಹಲವರ ಜಮೀನುಗಳಿಗೆ ಜಾಲರಿ ತಂತಿಬೇಲಿ ಅಳವಡಿಕೆ
ಎಚ್.ಡಿ.ಕೋಟೆ: ರೈತರು ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ಬೆಳೆಯನ್ನು ಉಳಿಸಿಕೊಳ್ಳಲು ಹೊಸ ರೀತಿಯ ತಂತಿ ಬೇಲಿಗೆ ಮೊರೆ ಹೋಗುತ್ತಿದ್ದಾರೆ.
ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಕಾಡುಪ್ರಾಣಿಗಳ ಹಾವಳಿ ಇದೆ. ರೈತರ ಜಮೀನುಗಳಿಗೆ ಒಂದಲ್ಲ ಒಂದು ಪ್ರಾಣಿಗಳು ಬಂದು ಬೆಳೆ ತಿಂದು ನಾಶಪಡಿಸುತ್ತಿವೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಸೋಲಾರ್ ಹಾಗೂ ಇನ್ನಿತರ ತಂತಿ ಬೇಲಿಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಅಳವಡಿಸಲಾಗುತ್ತಿತ್ತು. ಆದರೆ, ಜಿಂಕೆ, ಹಂದಿ ಇನ್ನಿತರ ಪ್ರಾಣಿಗಳು ಬುದ್ಧಿವಂತಿಕೆಯಿಂದ ಜಮೀನಿಗೆ ಲಗ್ಗೆ ಇಟ್ಟು ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಅರಣ್ಯ ಇಲಾಖೆಯವರು ಕೋಟ್ಯಂತರ ರೂ. ವೆಚ್ಚದಲ್ಲಿ ಕಾಡಂಚಿನಲ್ಲಿ ಅಳವಡಿಸಿರುವ ರೈಲ್ವೆ ಕಂಬಿ ತಡೆಗೋಡೆಗಳನ್ನೂ ದಾಟಿ ಕೆಲವೊಂದು ಪ್ರಾಣಿಗಳು ಗ್ರಾಮ ಮತ್ತು ಜಮೀನಿಗೆ ಬರುತ್ತಿವೆ.
ಸಾಲ ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶ ಮಾಡಿದರೆ ರೈತರ ಬದುಕು ಚಿಂತಾಜನಕವಾಗಲಿದೆ. ಹೀಗಾಗಿ ರೈತರು ಮತ್ತು ಗ್ರಾಮಸ್ಥರು ರೈಲ್ವೆ ಕಂಬಿಗೆ ಮತ್ತು ಪ್ರತ್ಯೇಕವಾಗಿ ಜಾಲರಿಯ ರೀತಿಯ ತಂತಿ ಬೇಲಿಯನ್ನು ಕೆಲವು ಭಾಗಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಇಂತಹ ಸ್ಥಳದಲ್ಲಿ ವನ್ಯಪ್ರಾಣಿಗಳ ಹಾವಳಿ ಕಡಿಮೆಯಾಗಿದೆ.
ರೈತ ಮತ್ತು ಗುತ್ತಿಗೆದಾರರಾಗಿರುವ ದಾಸನಪುರದ ದೊರೆದಾಸ್ ಮತ್ತಿತರರು ರೈತರ ಜಮೀನು ಗಳಿಗೆ ಜಾಲರಿಯ ತಂತಿ ಬೇಲಿಯನ್ನು ಅಳವಡಿಸಿದ್ದು, ಅನೇಕ ರೈತರು ಇಂತಹ ಯೋಜನೆಯ ಮೂಲಕ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳಿಗೆ ಸಹಾಯಧನ ನೀಡಲು ಮುಂದಾಗುತ್ತಿವೆ.
ಅದೇ ರೀತಿ ರೈತರು ತಮ್ಮ ಜಮೀನುಗಳಲ್ಲಿ ಇತ್ತೀಚೆಗೆ ಅಳವಡಿಸಿಕೊಳ್ಳು ತ್ತಿರುವ ಇಂತಹ ಜಾಲರಿಯ ತಂತಿಬೇಲಿಗೆ ಕೂಡ ಸಹಾಯಧನ ನೀಡಿದರೆ ಮತ್ತಷ್ಟು ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಲಿದೆ ಎನ್ನುವುದು ಸ್ಥಳೀಯರ ಆಶಯವಾಗಿದೆ.
” ಕಾಡಂಚಿನಲ್ಲಿ ನಮ್ಮ ಗ್ರಾಮ ಮತ್ತು ಜಮೀನುಗಳಿರು ವುದರಿಂದ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ನಿರಂತರವಾಗಿ ಬೆಳೆ ನಾಶ ಮಾಡುತ್ತಿದ್ದರಿಂದ ನಾವು ಕಂಗಾಲಾಗಿದ್ದೆವು. ಈಗ ಹೊಸ ರೀತಿಯ ಜಾಲರಿಯುಳ್ಳ ತಂತಿ ಬೇಲಿ ಅಳವಡಿಸುತ್ತಿದ್ದು, ಪ್ರಾಣಿಗಳ ಹಾವಳಿ ಕಡಿಮೆ ಯಾಗಿದೆ. ಇದನ್ನು ರೈತರಿಗೆ ಕಡಿಮೆ ದರದಲ್ಲಿ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.”
–ದೊರೆದಾಸ್, ರೈತ ಮುಖಂಡ, ಗುತ್ತಿಗೆದಾರ
” ಅನೇಕ ಜಮೀನುಗಳಲ್ಲಿ ಸೋಲಾರ್ ತಂತಿ ಬೇಲಿ ಅಳವಡಿಸಿದ್ದರೂ ಕೆಲವೊಂದು ಪ್ರಾಣಿಗಳು ನುಗ್ಗಿ ಬೆಳೆಗಳನ್ನು ಸಂಪೂರ್ಣ ನಾಶ ಮಾಡುತ್ತಿವೆ. ಅದಕ್ಕಾಗಿ ಹೊಸ ರೀತಿಯ ಜಾಲರಿಯ ತಂತಿ ಬೇಲಿಯನ್ನು ದೊರೆದಾಸ್ ಅವರ ಮೂಲಕ ಅಳವಡಿಸಿಕೊಂಡಿದ್ದೇವೆ. ಇದರಿಂದ ಕೆಲವೊಂದು ಪ್ರಾಣಿಗಳ ಹಾವಳಿ ಕಡಿಮೆಯಾಗಿದೆ.”
–ವೆಂಕಟೇಶ್, ರೈತ, ಬಡಗಲಪುರ




