Mysore
26
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಜಾತಿವಾದಿ ಮನಸ್ಸುಗಳಿಗೆ ಸಮಾನತೆಯ ದರ್ಶನ

ಸಮಾಜ ಕಲ್ಯಾಣ ಇಲಾಖೆ ನೌಕರರಿಂದ ‘ಮುಟ್ಟಿಸಿಕೊಂಡವನು’ ನಾಟಕ; ಪಿ.ಲಂಕೇಶ್ ರಚನೆಯ ಕಥೆ

ಮೈಸೂರು: ಮುಟ್ಟಬಾರದ ಜಾತಿಯವರು ಎನಿಸಿಕೊಂಡವರೊಬ್ಬರಿಂದ ಮುಟ್ಟಿಸಿಕೊಂಡ ಜಾತಿ ಅಮಲಿನ ವ್ಯಕ್ತಿಯ ತಳಮಳ… ಅದಕ್ಕೆ ಇಂಬು ನೀಡುವ ಜಾತಿವಾದಿ ಮನಸ್ಸುಗಳ ಕಿತಾಪತಿ… ಒಂದು ಕಣ್ಣು ನೋವಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ತಳಜಾತಿಯವರು ಅಂತ ಗೊತ್ತಾಗುತ್ತಿದ್ದಂತೆ ಅವನು ನಲುಗಿ ಹೋಗುತ್ತಾನೆ.

ಆದರೆ, ಇನ್ನೊಂದು ಕಣ್ಣಿನಲ್ಲೂ ನೋವು ಕಾಣಿಸಿಕೊಂಡಾಗ ಅನಿ ವಾರ್ಯವಾಗಿ ಅದೇ ತಳಜಾತಿ ಡಾಕ್ಟರ್ ಬಳಿ ಚಿಕಿತ್ಸೆ ಪಡೆಯುತ್ತಾನೆ. ಕಣ್ಣುಬೇನೆ ಗುಣವಾಗುವ ಜತೆಗೆ ಆತ ಮತ್ತು ಆತನ ಕುಟುಂಬಕ್ಕೆ ಆವರಿಸಿದ್ದ ಮೇಲು – ಕೀಳು ಎಂಬ ಜಾತಿಯ ಅಂಧಕಾರ ಕರಗಿಹೋಗಿ ಬುದ್ಧರ ಕರುಣೆ, ಬಸವಣ್ಣನವರ ಪ್ರೀತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಆಶಯವನ್ನು ಅರಿತು ಮನುಷ್ಯನಾಗುತ್ತಾನೆ…

ಇದು, ನಗರದ ಕಲಾಮಂದಿರದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಾದರಪಡಿಸಿದ ‘ಮುಟ್ಟಿಸಿಕೊಂಡವನು’ ನಾಟಕದ ಸಂಕ್ಷಿಪ್ತ ಸಾರಾಂಶ

ಈ ರಂಗಪ್ರದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯೇ ಪಾತ್ರಧಾರಿಗಳು. ರಂಗ ನಿರ್ದೇಶಕ ಕೀರ್ತಿರಾಜ್ ಅವರ ಸಾರಥ್ಯದಲ್ಲಿ ನಾಟಕ ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿತು. ಅಂತಿಮ ವಾಗಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಆದಿಕವಿ ಪಂಪನ ಮಾತನ್ನು ಎತ್ತಿಹಿಡಿಯಿತು. ಜಾತಿಯನ್ನೂ ಒಂದು ಪಾತ್ರವಾಗಿ ರಂಗದ ಮೇಲೆ ತಂದಿದ್ದು ಉಲ್ಲೇಖಾರ್ಹ. ಸಾಹಿತಿ ಪಿ.ಲಂಕೇಶ್ ಅವರ ‘ಮುಟ್ಟಿಸಿಕೊಂಡವನು’ ಕಥೆಯನ್ನು ಆಧರಿಸಿ ಈ ನಾಟಕವನ್ನು ರಚಿಸಲಾಗಿದೆ.

ತಾವು ಮೇಲ್ಜಾತಿಯವರು ಎಂದು ನಂಬಿದ್ದ ರೈತ ಬಸವಲಿಂಗು. ಜಾತಿಯನ್ನೇ ಹಾಸಿಹೊದ್ದುಕೊಂಡು, ದೇವರು, ಆಚಾರ ವಿಚಾರಗಳಲ್ಲೇ ಮುಳುಗಿಹೋಗುವ ಆತನ ಪತ್ನಿ ಸಿದ್ಲಿಂಗಿ. ಬಸವಲಿಂಗುವಿಗೆ ಎಡಗಣ್ಣಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆತ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ತಿಮ್ಮಯ್ಯ ಎಂಬವರಲ್ಲಿ ಚಿಕಿತ್ಸೆ ಪಡೆಯುತ್ತಾನೆ. ಸುಮಾರು ೨ ವಾರಗಳ ಕಾಲ ತಲೆಗೆ ನೀರು ಹಾಕಬಾರದು ಅಂತ ಡಾಕ್ಟರ್ ಸಲಹೆ ನೀಡಿರುತ್ತಾರೆ. ಆ ಡಾಕ್ಟರ್ ತಳಜಾತಿಯವರು ಅಂತ ಬಸವಲಿಂಗುಗೆ ಗೊತ್ತಿರುವುದಿಲ್ಲ.

ಆದರೆ, ಬಸವಲಿಂಗು ತಳಜಾತಿ ಡಾಕ್ಟರಿಂದ ಚಿಕಿತ್ಸೆ ಪಡೆದು ಬರುತ್ತಿದ್ದಾನೆ ಅಂತ ಸಿದ್ಲಿಂಗಿಗೆ ಜನರು ಕಿವಿ ಕಚ್ಚಿರುತ್ತಾರೆ. ಬೆರಗು ಬಡಿದಂತಾಗುವ ಸಿದ್ಲಿಂಗಿ, ಮನೆಗೆ ಬಂದ ಪತಿಗೆ ತಲೆಗೆ ಸ್ನಾನ ಮಾಡಿಸಿ ಶುದ್ಧೀಕರಿಸುತ್ತಾಳೆ. ಸಹಜವಾಗಿ ಕಣ್ಣಿನ ನೋವು ಹೆಚ್ಚಾಗುತ್ತದೆ. ಆದರೆ, ಬಸವಲಿಂಗು ಜಾತಿಯ ಕಾರಣಕ್ಕಾಗಿ ಡಾ.ತಿಮ್ಮಯ್ಯ ಅವರಲ್ಲಿಗೆಹೋಗುವುದಿಲ್ಲ. ಆದರೆ, ಬಲಗಣ್ಣಿಗೂ ಬೇನೆ ತಗುಲುತ್ತದೆ. ತನ್ನ ಜಾತಿಯವರ ಸಲಹೆ ಮೇರೆಗೆ ಚಿಕಿತ್ಸೆಗಾಗಿ ಖಾಸಗಿ ಮಹಿಳಾ ವೈದ್ಯರೊಬ್ಬರ ಬಳಿಗೆ ಹೋಗುವ ಬಸವಲಿಂಗುಗೆ, ಆ ವೈದ್ಯರೇ ಡಾ.ತಿಮ್ಮಯ್ಯ ಅವರಲ್ಲಿಗೆ ಹೋಗುವಂತೆ ಶಿಫಾರಸ್ಸು ಮಾಡುತ್ತಾರೆ. ಬಡಪೆಟ್ಟಿಗೆ ಬಸವಲಿಂಗು ಒಪ್ಪುವುದಿಲ್ಲ. ಆದರೆ, ಕಣ್ಣಿನ ಬೇನೆ ಹೆಚ್ಚಾದಂತೆ ಸಹಿಸಲು ಸಾಧ್ಯವಾಗದೆ, ಡಾ.ತಿಮ್ಮಯ್ಯ ಅವರಲ್ಲಿಗೆ ಹೋಗುತ್ತಾನೆ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರ ಬಗ್ಗೆ ಬಸವಲಿಂಗುಗೆ ಇದ್ದ ಪೂರ್ವಗ್ರಹ ದೂರವಾಗುತ್ತದೆ. ಆತನ ಪತ್ನಿಯೂ ಜಾತಿ ಮನಸ್ಸನ್ನು ತೊರೆಯುತ್ತಾಳೆ.

ನಾಟಕದಲ್ಲಿ ಎಲ್ಲ ಪಾತ್ರಧಾರಿಗಳೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಿದ್ಲಿಂಗಿ ಪಾತ್ರ ನಿರ್ವಹಿಸಿದ ಮಹಿಳಾ ಸಿಬ್ಬಂದಿಯ ತುಳಸಿ ಅವರ ಅಭಿನಯ ಪ್ರೇಕ್ಷಕರ ಮನಗೆದ್ದಿತು. ಬಸವಲಿಂಗು ಪಾತ್ರಧಾರಿ ಗಣಪತಿ ಜಕಾರಿ, ಜಾತಿ ಪಾತ್ರಧಾರಿ ಶ್ರೀಧರ್ ಪೋತೆದಾರ್ ಅವರ ಅಭಿನಯ ಗಮನಾರ್ಹವಾಗಿತ್ತು. ಹುಚ್ಚನ ಪಾತ್ರಧಾರಿ ಹೇಳುವ ‘ಸಮಸ್ಯೆ ನನ್ನಲ್ಲೇ ಇದೆ. ಇನ್ನೆಲ್ಲೋ ಇಲ್ಲ’ ಎನ್ನುವ ಮಾತು. ಜಾತಿವಾದಿ ಮನಸ್ಸುಗಳಿಗೆ ನೀತಿ ಪಾಠ ಎನ್ನಬಹುದು. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಸಲಹೆಗಾರ ಬಸವರಾಜ ದೇವನೂರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಸಲಹೆಗಾರ ಡಾ.ಎಸ್.ತುಕಾರಾಮ್, ಜಂಟಿ ನಿರ್ದೇಶಕ ಬಿ.ರಂಗೇಗೌಡ, ಅಧಿಕಾರಿಗಳು, ವಿವಿಧ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು ಮುಂತಾದವರು ನಾಟಕವನ್ನು ವೀಕ್ಷಿಸಿದರು.

” ಜಾತಿ ರಹಿತ ಸಮಾಜ ನಿರ್ಮಾಣದಿಂದ ಮಾತ್ರ ಸಮ ಸಮಾಜದ ಕನಸು ನನ ಸಾಗುತ್ತದೆ. ಈ ನಾಟಕ ಇಡೀ ಸಮಾಜಕ್ಕೆ ಇಂತಹದೊಂದು ಸಂದೇಶ ನೀಡಿದೆ. ಪಿ. ಲಂಕೇಶರ ‘ಮುಟ್ಟಿಸಿ ಕೊಂಡವನು’ ಕಥೆಯ ಮೂಲವಾದ ಡಾ.ಬಿ.ಎನ್.ತಿಪ್ಪೇಸ್ವಾಮಿ ಅವರು ನಾನು ಎಂಬಿಬಿಎಸ್ ವ್ಯಾಸಂಗ ಮಾಡುವಾಗ ನನಗೆ ಗುರುಗಳಾಗಿದ್ದರು.”

-ಡಾ.ಎಚ್.ಸಿ.ಮಹದೇವಪ್ಪ, ಸಚಿವರು

Tags:
error: Content is protected !!