ಚಿರಂಜೀವಿ ಸಿ.ಹುಲ್ಲಹಳ್ಳಿ
ಪೈಲ್ವಾನರ ಬೆನ್ನು ತಟ್ಟಿ ಪಂದ್ಯಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಮೈಸೂರು: ಪಟ್ಟಿಗೆ ಪ್ರತಿಪಟ್ಟು ಹಾಕಿದ ಪೈಲ್ವಾನರು, ಮೈಯನ್ನೆಲ್ಲ ಮಣ್ಣಾಗಿಸಿಕೊಂಡು ಗೆಲ್ಲುವ ಗುರಿ ಇಟ್ಟುಕೊಂಡು ಕಾದಾಡಿದರು, ಡಾವ್‌ಗಳನ್ನು ಹೊಡೆದು ಚಿತ್ ಬೀಳಿಸಿದವರ ಪರ ಜನಸ್ತೋಮ ಕೇಕೆ ಹಾಕಿದರು. ನಗರದ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ದಸರಾ ಮಹೋತ್ಸವದ ಆಹಾರ ಗತವೈಭವ ಸಾರುವ ಮೈಸೂರು ಪರಂಪರೆಯ ಪ್ರಮುಖ ಆಷರ್ಕಣೆಗಳಲ್ಲಿ ಒಂದಾದ ದಸರಾ ಕುಸ್ತಿ ಪಂದ್ಯಾವಳಿಯ ಮೊದಲ ದಿನದ ದೃಶ್ಯಗಳಿವು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುಸ್ತಿಪಟುಗಳ ಬೆನ್ನು ತಟ್ಟುವ ಮೂಲಕ ಕುಸ್ತಿಗೆ ಚಾಲನೆ ನೀಡಿದರು. ಅಲ್ಲದೆ, ಕುಸ್ತಿ ವೀಕ್ಷಿಸಿ ಪೈನ್ವಾಲರನ್ನು ಪ್ರೋತ್ಸಾಹಿಸಿದರು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಪೈಲ್ವಾನರು ಮಟ್ಟಿ ಮುಟ್ಟಿ ಜಟ್ಟಿತನ ಮೆರೆದರು.
ಒಂದೇ ನಿಮಿಷದಲ್ಲಿ ಚಿತ್: ಮಹಿಳಾ ಕುಸ್ತಿ ವಿಭಾಗದಲ್ಲಿ ಬೆಂಗಳೂರಿನ ಪುಷ್ಪ ಮತ್ತು ಬೆಳಗಾವಿಯ ನಂದಿನಿ ನಡುವೆ ನಡೆದ ಕುಸ್ತಿ ಒಂದೇ ನಿಮಿಷಕ್ಕೆ ಫಲಿತಾಂಶ ಕಂಡಿತು. ಕುಸ್ತಿ ಪ್ರಾರಂಭವಾಗುತ್ತಿದ್ದಂತೆ ಪುಷ್ಪ ಮೇಲೆ ಎರಗಿದ ನಂದಿನಿ ಕ್ಷಣಾರ್ಧದಲ್ಲಿ ಚಿತ್ ಮಾಡಿ ಗೆಲುವಿನ ನಗೆ ಬೀರಿದರು. ಅಥಣಿಯ ಪೈಲ್ವಾನ್ ಸುರೇಶ್ ಲಂಕೋಟಿ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಹನುಮಂತ ವಿಠಲ ಬೇವಿನಮರದ ನಡುವೆ ನಡೆದ ಕುಸ್ತಿ ರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರು ಕೂಡ ಕುತೂಹಲದಿಂದ ವೀಕ್ಷಿಸಿದರು. ಪಂದ್ಯದ ಪ್ರತಿ ಕ್ಷಣದಲ್ಲೂ ಚಪ್ಪಾಳೆ, ಶಿಳ್ಳೆ ಮೂಲಕ ಪ್ರೋತಾಹಿಸಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.
೪೧ ಸೆಕೆಂಡ್‌ಗಳಲ್ಲೇ ಎದುರಾಳಿ ಚಿತ್!:
ಮೈಸೂರು: ರೋಚಕತೆಯಿಂದ ಕೂಡಿದ ದಸರಾ ಮಹೋತ್ಸವದ ಮೊದಲ ದಿನದ ನಾಡ ಕುಸ್ತಿಯಲ್ಲಿ ಪೈ. ಶಿವು ಕೇವಲ ೪೧ ಸೆಕೆಂಡ್‌ಗಳಲ್ಲೇ ಎದುರಾಳಿಯನ್ನು ಚಿತ್ ಮಾಡುವ ಮೂಲಕ ಪರಾಕ್ರಮ ಮೆರೆದರು. ದಸರಾ ಕುಸ್ತಿಯ ಮೊದಲ ದಿನದ ಅತೀ ಕಡಿಮೆ ಅವಧಿಯಲ್ಲಿ ಚಿತ್ ಮಾಡಿದ ಹೆಗ್ಗಳಿಕೆಗೆ ಪೈ.ಶಿವು ಪಾತ್ರರಾದರು. ದಸರಾ ಕುಸ್ತಿ ಅಖಾಡದಲ್ಲಿ ಸೋಮವಾರ ಪೈ.ಶಿವು ತನ್ನ ಎದುರಾಳಿ ಅಬೂಬಕರ್ ಅವರನ್ನು ಕ್ಷಣಾರ್ಧದಲ್ಲೇ ಚಿತ್ ಮಾಡಿ ಜಟ್ಟಿತನ ಪ್ರದರ್ಶಿಸಿದರು. ಬೆಳಗಾವಿಯ ಪೈ.ಸಂಜು ಮತ್ತು ದಾವಣಗೆರೆ ಪೈ.ಬಸವರಾಜ್ ಪಾಟೀಲ್ ನಡುವೆ ಅರ್ಧಗಂಟೆ ನಿಗದಿಯಾಗಿದ್ದ ದಿನದ ಎರಡನೇ ದೊಡ್ಡ ಕುಸ್ತಿ ಸಮಬಲದಲ್ಲಿಯೇ ಅಂತ್ಯಗೊಂಡು ನಿರಾಸೆ ಮೂಡಿಸಿತು.



