Mysore
26
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ತುರುಗನೂರು ಶಾಖಾ ನಾಲೆಗೆ ಆಧುನೀಕರಣದ ಸ್ಪರ್ಶ

ಎಂ.ನಾರಾಯಣ

೯೦ ಕೋಟಿ ರೂ. ಅನುದಾನ; ೨೨ ಕಿ.ಮೀ. ಉದ್ದದ ನಾಲೆಯ ಪೈಕಿ ೮ ಕಿ.ಮೀ.ವರೆಗೆ ಕಾಮಗಾರಿ ಪೂರ್ಣ

ತಿ.ನರಸೀಪುರ: ಮೈಸೂರು, ಮಂಡ್ಯ ಜಿಲ್ಲೆಗಳ ಗಡಿಭಾಗದ ಅಚ್ಚುಕಟ್ಟು ಭೂ ಪ್ರದೇಶಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿರುವ ವಿಶ್ವೇಶ್ವರಯ್ಯ ನಾಲೆಯ ತುರುಗನೂರು ಶಾಖಾ ನಾಲೆಗೆ ರಾಜ್ಯ ಸರ್ಕಾರದ ಕೋಟ್ಯಂತರ ರೂ. ಅನುದಾನದಲ್ಲಿ ಕಾಯಕಲ್ಪ ನೀಡುತ್ತಿದ್ದು, ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ.

ತಾಲ್ಲೂಕಿನ ಬನ್ನೂರು ಹೋಬಳಿಯ ಗ್ರಾಮಗಳಿಗೆ ಮುಂಗಾರು ಹಂಗಾಮು ಕೃಷಿಗೆ ಪೂರ್ಣ ಪ್ರಮಾಣದಲ್ಲಿ ನೀರು, ಬೇಸಿಗೆಯ ಖಾರಿಫ್ ಬೆಳೆಗೆ ಕಟ್ಟು ನೀರು ಕಲ್ಪಿಸುತ್ತಿದ್ದ ನಾಲೆಗೆ ಆಧುನೀಕರಣದ ಸ್ಪರ್ಶ ನೀಡಲಾಗುತ್ತಿದ್ದು, ಗಡಿ ಗ್ರಾಮಗಳಾದ ಕಾಡುಕೊತ್ತನಹಳ್ಳಿ ಹಾಗೂ ಯಾಚೇನಹಳ್ಳಿ ಗ್ರಾಮಗಳ ಬಳಿ ತುರುಗನೂರು ಶಾಖಾ (ಬ್ರಾಂಚ್) ನಾಲೆಯ ಆಧುನೀಕರಣ ಕಾಮಗಾರಿ ಭರದಿಂದ ಸಾಗಿದ್ದು, ಈಗಾಗಲೇ ನಾಲೆಯಲ್ಲಿ ೮ ಕಿ.ಮೀ.ವರೆಗೆ ಕಾಮಗಾರಿ ಮುಗಿದಿದೆ. ಪ್ರತಿನಿತ್ಯ ಏಕಕಾಲಕ್ಕೆ ೫ ಕಡೆ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.

ಕೆಆರ್‌ಎಸ್ ಅಣೆಕಟ್ಟೆಯ ವಿಶ್ವೇಶ್ವರಯ್ಯ ನಾಲೆಯ ೩೬ ಕಿ.ಮೀ.ನಲ್ಲಿ ಆರಂಭಗೊಳ್ಳುವ ಕಾವೇರಿ ಶಾಖಾ ನಾಲೆಯ ಕೊನೇಭಾಗದಿಂದ ಆರಂಭಗೊಳ್ಳುವ ವಿಶ್ವೇಶ್ವರಯ್ಯ ತುರಗನೂರು ಶಾಖಾ(ಬ್ರಾಂಚ್) ನಾಲೆಯನ್ನು ೧೯೪೩ರಲ್ಲಿ ಬ್ರಿಟಿಷ್ ಅಧಿಕಾರಿ ಇರ್ವಿನ್ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ೨೨ ಕಿ.ಮೀ. ಉದ್ದದ ನಾಲೆಯಿಂದ ೩೧,೫೦೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

ವರ್ಷದ ಮೊದಲ ಬೆಳೆಯಾಗಿ ಕಬ್ಬು ಹಾಗೂ ಭತ್ತವನ್ನು ಹೆಚ್ಚಾಗಿ ರೈತರು ಬೆಳೆಯುತ್ತಿದ್ದು, ಕಟ್ಟು ನೀರಿನಲ್ಲಿ ರಾಗಿ ಮುಂತಾದ ಅರೆಕಾಲಿಕ ಬೆಳೆಗಳನ್ನು ಬೆಳೆಯುತ್ತಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ೧೦೦ ಎಕರೆ, ತಿ.ನರಸೀಪುರ ತಾಲ್ಲೂಕಿನ ೨೦,೦೦೦ ಎಕರೆ ಹಾಗೂ ಮಳವಳ್ಳಿ ತಾಲ್ಲೂಕಿನ ೧೧,೪೦೦ ಎಕರೆ ಅಚ್ಚುಕಟ್ಟು ಭೂ ಪ್ರದೇಶ ನಾಲೆಯ ವ್ಯಾಪ್ತಿಯಲ್ಲಿದೆ. ೨೦೨೪ರಲ್ಲಿ ನಾಲೆಯ ಆಧುನೀಕರಣದ ಯೋಜನೆ ರೂಪಿಸಿದ್ದು, ರಾಜ್ಯ ಸರ್ಕಾರ ೯೦ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿತ್ತು. ೨೦೨೪ರ ನ.೧೩ರಂದು ಸಿಎಂ ಸಿದ್ದರಾಮಯ್ಯ ಅವರು ಹೊರಳಹಳ್ಳಿ ಫಾರಂ ಆವರಣದಲ್ಲಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ೨೦೨೫ರ ಜನವರಿ ೧೦ರಂದು ನಾಲೆಯಲ್ಲಿ ಅಧುನೀಕರಣ ಕಾಮಗಾರಿ ಆರಂಭಿಸಲಾಗಿದೆ.

ಕಾಮಗಾರಿ ಗುತ್ತಿಗೆಯನ್ನು ಮಂಡ್ಯದ ಸ್ಟಾರ್ ಬಿಲ್ಡರ್ಸ್ ಪಡೆದುಕೊಂಡಿದ್ದು, ಬನ್ನೂರು ಕಾವೇರಿ ನೀರಾವರಿ ನಿಗಮದ ತಾಂತ್ರಿಕ ವಿಭಾಗದ ಅಧಿಕಾರಿಗಳು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಯೋಜನೆಯಲ್ಲಿ ೨೨ ಕಿ.ಮೀ. ಉದ್ದದ ನಾಲೆಯ ಆಧುನೀಕರಣ ಜೊತೆಗೆ ೧೦ ಸಂಪರ್ಕ ಕಿರು ನಾಲೆಗಳ ಆಧುನೀಕರಣವನ್ನೂ ಸೇರ್ಪಡೆಗೊಳಿಸಲಾಗಿದೆ. ಆಧುನೀಕರಣ ಕಾಮಗಾರಿಯಿಂದ ನಾಲೆಯ ಎರಡೂ ಏರಿಗಳಲ್ಲೂ ಒತ್ತುವರಿ ತೆರವುಗೊಂಡು ವಿಶಾಲವಾದ ರಸ್ತೆ ನಿರ್ಮಾಣಗೊಳ್ಳುತ್ತಿದ್ದರೆ, ರೈತರ ಸಂಪರ್ಕ, ಸಂಚಾರದಲ್ಲಿ ಸುಧಾರಣೆ ತರಲು ಸಚಿವರ ಸೂಚನೆಯಂತೆ ಅರ್ಧ ಕಿ.ಮೀ. ಅಂತರದಲ್ಲಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲಲ್ಲಿ ಜಾನುವಾರುಗಳು ನೀರು ಕುಡಿಯಲು ಇಳಿಜಾರು, ಸೋಪಾನಕಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಏಪ್ರಿಲ್ ೧೫ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ಭರದಿಂದ ಕಾಮಗಾರಿ ನಡೆಸಲಾಗುತ್ತಿದೆ

” ನಾಲೆಗಳ ಆಧುನೀಕರಣದಿಂದ ಅಚ್ಚುಕಟ್ಟು ಪ್ರದೇಶದ ಕಡೇ ಭಾಗದ ರೈತನಿಗೂ ನೀರಾವರಿ ಸೌಲಭ್ಯವನ್ನು ತಲುಪಿಸಬೇಕೆಂಬ ಕ್ಷೇತ್ರದ ಶಾಸಕ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಕನಸು ಕೊನೆಗೂ ಸಾಕಾರಗೊಳ್ಳುತ್ತಿದೆ. ರಾಮಸ್ವಾಮಿ ಹಾಗೂ ಚಿಕ್ಕದೇವರಾಯ (ಸಿಡಿಎಸ್) ನಾಲೆಯ ಆಧುನೀಕರಣ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತುರುಗನೂರು ಶಾಖಾ ನಾಲೆಯ ಆಧುನಿಕರಣಕ್ಕೆ ಯೋಜನೆ ರೂಪಿಸಿ, ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದರು. ಶಾಸಕರಾದ ಬಳಿಕ ಅವರದೇ ಪಕ್ಷದ ಸರ್ಕಾರ ಅಽಕಾರಕ್ಕೆ ಬರುತ್ತಿದ್ದಂತೆ ನಾಲೆಯ ಆಧುನೀಕರಣಕ್ಕೆ ಚಾಲನೆ ನೀಡಿ, ನುಡಿದಂತೆ ನಡೆದಿದ್ದಾರೆ.”

” ಏಳೆಂಟು ದಶಕಗಳಷ್ಟು ಹಳೆಯದಾದ ವಿಶ್ವೇಶ್ವರಯ್ಯ ತುರುಗನೂರು ಶಾಖಾ (ಬ್ರಾಂಚ್) ನಾಲೆಯಲ್ಲಿ ಹೂಳು ತುಂಬಿಕೊಂಡು, ಎರಡೂ ಕಡೆಯ ಏರಿಗಳು ಶಿಥಿಲಗೊಂಡು ನೀರು ಹರಿಯುವಾಗ ಬಿರುಕು ಬಿಟ್ಟು ಪೋಲಾಗುತ್ತಿತ್ತು. ನಾಲೆಯ ಆಧುನೀಕರಣ ಕಾಮಗಾರಿಯಿಂದ ಕಟ್ಟ ಕಡೆಯ ರೈತರಿಗೂ ನೀರು ಸಿಗಲಿದೆ. ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ.”

-ನಂದೀಶ್ ಯಾಚೇನಹಳ್ಳಿ, ಅಚ್ಚುಕಟ್ಟು ಪ್ರದೇಶದ ರೈತ

” ವಿಶ್ವೇಶ್ವರಯ್ಯ ತುರಗನೂರು ಶಾಖಾ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ, ಕಾಮಗಾರಿಯ ನಿರ್ವಹಣೆ, ಹಗಲಿರುಳು ನೋಡಿಕೊಳ್ಳುತ್ತಿದ್ದೇವೆ. ನಾಲೆಯ ಮೊದಲ ಭಾಗಕ್ಕೆ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸುವುದರಿಂದ ೮ ಕಿ.ಮೀ ವರೆಗಿನ ಆಧುನೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ಆಧುನೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.”

-ಹೆಚ್.ಸಿ. ರತೀಶ್, ಎಇಇ, ಕಾವೇರಿ ನೀರಾವರಿ ಉಪವಿಭಾಗ, ಬನ್ನೂರು.

Tags:
error: Content is protected !!