ಶ್ರೀಧರ್ ಆರ್.ಭಟ್
ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ಹಿಂದಿನ ಸಿಬ್ಬಂದಿ ಬಿಡುಗಡೆ
ಹೊಸದಾಗಿ ನಿಯುಕ್ತಿಗೊಂಡವರ ಕಾರ್ಯನಿರ್ವಹಣೆಗೆ ತಡೆ
ನಂಜನಗೂಡು: ಇರುವವರು ಕೆಲಸ ಮಾಡುತ್ತಿಲ್ಲ, ಬಂದವರಿಗೆ ಕೆಲಸ ಮಾಡಲ ಬಿಡುತ್ತಿಲ್ಲ. ವಾರ್ಡನ್ ಇಲ್ಲದ ವಸತಿ ಶಾಲೆಯಲ್ಲಿನ ಮಕ್ಕಳ ರಕ್ಷಣೆ ಹೇಗೆ ಎಂಬುದು ಪೋಷಕರ ಪ್ರಶ್ನೆ. ಇಂತಹ ವಾರ್ಡನ್ ಇಲ್ಲದ ಬಾಲಕಿಯರ ವಸತಿ ಶಾಲೆ ಇರುವುದು ನಂಜನಗೂಡು ನಗರದಲ್ಲಿ.
ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಒಟ್ಟು ೧೧೧ ಮಕ್ಕಳಿದ್ದಾರೆ. ಆದರೆ ಇವರನ್ನು ನೋಡಿಕೊಳ್ಳಲು ವಾರ್ಡನ್ ಇಲ್ಲದಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೆಕ್ಕಾಧಿಕಾರಿ ಹಾಗೂ ವಾರ್ಡನ್ ಕೆಲಸವನ್ನೇ ಮಾಡದಿದ್ದರಿಂದ ಡಿಡಿಪಿಐ ಆದೇಶದ ಮೇರೆಗೆ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಯಿತು. ತೆರವಾದ ಆ ಸ್ಥಾನಗಳಿಗೆ ಖಾಸಗಿ ಸಂಸ್ಥೆಯೊಂದು ಬೇರೆಯವರನ್ನು ನೇಮಿಸಿತು. ಹೀಗೆ ನಿಯುಕ್ತಿಗೊಂಡ ಲೆಕ್ಕಾಧಿಕಾರಿ ಪಾವನಾ ಹಾಗೂ ವಾರ್ಡನ್ ಧನಲಕ್ಷ್ಮಿ, ಮುಖ್ಯಶಿಕ್ಷಕಿ ಕುಸುಮಾ ಅವರು ಶ್ರಮ ವಹಿಸಿ ನಂಜನಗೂಡು ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ಸುತ್ತಿ ೬ನೇ ತರಗತಿಗೆ ಈಗಾಗಲೇ ೨೭ ಮಕ್ಕಳನ್ನು ಕರೆತಂದು ದಾಖಲಾತಿ ಮಾಡಿಸಿದ್ದರಿಂದ ಮಕ್ಕಳ ಸಂಖ್ಯೆ ೧೧೧ಕ್ಕೇರಿತು.
ಈ ಮಧ್ಯೆ ರಾಜಕಾರಣ ನುಸುಳಿತು. ಕೆಲವರು ತಮ್ಮ ಪ್ರಭಾವ ಬಳಸಿ ಹೊಸದಾಗಿ ಬಂದವರ ಕರ್ತವ್ಯಕ್ಕೆ ತಡೆಯೊಡ್ಡಿದ್ದರಿಂದ ಈಗ ವಾರ್ಡನ್ ಇಲ್ಲದ ಬಾಲಕಿಯರ ಶಾಲೆ ಎಂಬ ಅಪಖ್ಯಾತಿಗೆ ಒಳಗಾಗುವಂತಾಗಿದೆ.
ಹಿಂದೆ ಇದ್ದ ಲೆಕ್ಕಾಧಿಕಾರಿ ಹಾಗೂ ವಾರ್ಡನ್ ಅವರಿಂದ ಸಹಕಾರ ಸಿಗುತ್ತಿಲ್ಲ ಎಂದು ಮುಖ್ಯಶಿಕ್ಷಕಿ ಕುಸುಮಾ ಜನವರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣಾಽಕಾರಿಗೆ ವರದಿ ನೀಡಿದ್ದರು. ಈ ಮಧ್ಯೆ ೬ನೇ ತರಗತಿಗೆ ದಾಖಲಾತಿ ಕಡಿಮೆಯಾಗಿದೆ ಎಂದು ಮೇ ೧೩ರಂದು ಇಲಾಖೆ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ ಮುಖ್ಯಶಿಕ್ಷಕಿ, ಇಬ್ಬರಿಂದಲೂ ಸಹಕಾರ ಸಿಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು.
ಈ ಮಧ್ಯೆ ೬ನೇ ತರಗತಿಗೆ ದಾಖಲಾತಿ ಕಡಿಮೆಯಾಗಿದೆ ಎಂದು ಮೇ ೧೩ರಂದು ಬಂದ ಇಲಾಖೆಯ ನೋಟಿಸ್‌ಗೆ ಉತ್ತರಿಸಿದ ಮುಖ್ಯಶಿಕ್ಷಕಿ, ಇಬ್ಬರಿಂದಲೂ ಸಹಕಾರ ಸಿಗುತ್ತಿಲ್ಲ. ಇವರು ಕೆಲಸ ಮಾಡುವ ಹಾಗೆ ಮಾಡಿ, ಇಲ್ಲವೇ ಬದಲಿಯವರನ್ನು ನೇಮಿಸಿಕೊಡಿ ಎಂದು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಇಲಾಖೆಯ ಉಪನಿರ್ದೇಶಕರು, ಇಬ್ಬರನ್ನೂ ಬದಲಿಸುವಂತೆ ಸಿಬ್ಬಂದಿಗಳ ನೇಮಕದ ಜವಾಬ್ದಾರಿ ಹೊತ್ತಿರುವ ರಾಘವೇಂದ್ರ ಸಂಸ್ಥೆಗೆ ಸೂಚಿಸಿದರು. ಇದರ ಪರಿಣಾಮ ಆ ಸಂಸ್ಥೆ ಮೇ ೨೬ರಂದು ಪಾವನಾ ಹಾಗೂ ಧನಲಕ್ಷ್ಮಿ ಅವರನ್ನು ನೇಮಿಸಿತು.
ಡಿಡಿಪಿಐ ಅವರು ಈ ಕುರಿತು ಸಮಗ್ರ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಽಕಾರಿ ಮಹೇಶ್ ಅವರಿಗೆ ಸೂಚಿಸಿದರು. ಹಾಗಾಗಿ ಮಹೇಶ್ ಅವರು ಜೂ.೨ರಂದು ಶಾಲೆಗೆ ಭೇಟಿ ನೀಡಿ ಜೂ.೧೦ರವರೆಗೂ ಹೊಸಬರು ಕಾರ್ಯ ನಿರ್ವಹಿಸುವುದು ಬೇಡ. ಜೂ.೧೦ರ ನಂತರ ಈ ಕುರಿತು ತೀರ್ಮಾನಿಸೋಣ. ಅಲ್ಲಿಯವರೆಗೆ ಅಡುಗೆಯವರೇ ವಾರ್ಡನ್ ಕೆಲಸ ನಿರ್ವಹಿಸಲಿ ಎಂದು ಮುಖ್ಯ ಶಿಕ್ಷಕರಿಗೆ ಮೌಖಿಕವಾಗಿ ಆದೇಶ ನೀಡಿದ ಪರಿಣಾಮ ಹೊಸದಾಗಿ ನಿಯೋಜನೆಗೊಂಡವರ ಸ್ಥಿತಿ ಅತಂತ್ರವಾಗಿದೆ. ಜೊತೆಗೆ ವಾರ್ಡನ್ ಇಲ್ಲದ ವಸತಿ ಶಾಲೆಯಾಗಿ ಮಾರ್ಪಾಡಾಗಿದೆ.
ನಾವು ೧೦೦ ಮಕ್ಕಳಿಗೆ ಅಡುಗೆ ಮಾಡಬೇಕೆ ಅಥವಾ ಅವರನ್ನು ಕಾಯುವ ಕೆಲಸ ಮಾಡಬೇಕೇ? ವಾರ್ಡನ್ ಕೆಲಸ ನಮ್ಮಿಂದಾಗಲ್ಲ ಎಂದು ಅಡುಗೆ ಸಿಬ್ಬಂದಿ ಹೇಳುತ್ತಿದ್ದು, ಇದರಿಂದ ಮಕ್ಕಳ ಸ್ಥಿತಿ ಅಯೋಮಯವಾಗಿದೆ.
” ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಲೆಕ್ಕಾಧಿಕಾರಿ ಹಾಗೂ ವಾರ್ಡನ್ ದಾಖಲಾತಿ ಸಹಿತ ಯಾವುದೇ ಕೆಲಸಕ್ಕೆ ಸಹಕರಿಸದಿದ್ದರಿಂದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಕುರಿತು ಸಮಗ್ರವಾಗಿ ವಿವರ ನೀಡಲಾಗಿತ್ತು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಆಣತಿಯ ಮೇರೆಗೆ ಹೊಸದಾಗಿ ಬಂದವರಿಗೆ ವಾರದವರೆಗೂ ಕೆಲಸ ಮಾಡುವುದು ಬೇಡ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿದ್ದಾರೆ. ನಾನು ಹೇಗೆ ಕೆಲಸ ಮಾಡಬೇಕು?”
– ಕುಸುಮಾ, ಮುಖ್ಯೋಪಾಧ್ಯಾಯಿನಿ
” ಖಾಸಗಿ ಸಂಸ್ಥೆಯಿಂದ ನೇಮಕವಾದ ಧನಲಕ್ಷ್ಮಿ ಕುರಿತು ಆಕ್ಷೇಪಗಳಿದ್ದುದರಿಂದ ಶಾಸಕರೇ ಬಂದು ತೀರ್ಮಾನಿಸಲಿ ಎಂದು ವಾರದವರೆಗೆ ಇಬ್ಬರ ಕರ್ತವ್ಯವನ್ನು ತಡೆಹಿಡಿಯಲು ಮುಖ್ಯೋಪಾಧ್ಯಾಯರಿಗೆ ಸೂಚಿಸಿದ್ದೇನೆ.”
-ಮಹೇಶ, ಕ್ಷೇತ್ರ ಶಿಕ್ಷಣಾಧಿಕಾರಿ
” ಉಪ ನಿರ್ದೇಶಕರ ಆದೇಶವನ್ನು ತಡೆಹಿಡಿಯುವ ಅಽಕಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಇದೆಯೇ? ಬಾಲಕಿ ಯರೇ ಇರುವ ವಸತಿ ಶಾಲೆಯಲ್ಲಿ ವಾರ್ಡನ್ ಇಲ್ಲದೆ ಅನಾಹುತವಾದರೆ ಯಾರು ಜವಾಬ್ದಾರಿ?”
-ಶಂಕರಪುರ ಸುರೇಶ
” ವಸತಿ ಶಾಲೆಯಲ್ಲಿ ವಾರ್ಡನ್ ಇಲ್ಲದಿರುವುದರಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಉಂಟಾಗಿದೆ. ಮಕ್ಕಳನ್ನು ಅಲ್ಲಿ ಮುಂದುವರಿಸಬೇಕಾ ಬೇಡವಾ ಎಂದು ಯೋಚಿಸುತ್ತಿರುವೆ.”
-ಹೊಸವೀಡು ಬಸವರಾಜು, ಪೋಷಕರು
” ವಾರ್ಡನ್ ಇಲ್ಲದೆ ವಸತಿ ಶಾಲೆಯ ನಿರ್ವಹಣೆ ಸಾಧ್ಯವೇ ಇಲ್ಲ. ಇಲಾಖೆಯ ಮೇಲಧಿಕಾರಿಗಳ ಆದೇಶದ ಮೇರೆಗೆ ನಿಯೋಜನೆಗೊಂಡವರನ್ನು ಕೆಳ ಅಧಿಕಾರಿಗಳು ತಡೆಯಲಾಗದು. ಈಗಲೇ ವಾರ್ಡನ್ ವ್ಯವಸ್ಥೆ ಮಾಡಿ ಮಕ್ಕಳಿಗೆ ರಕ್ಷಣೆ ನೀಲಾಗುವುದು.”
-ಜವರೇಗೌಡ, ಡಿಡಿಪಿಐ
” ವಾರ್ಡನ್ ಇಲ್ಲದ ಶಾಲೆಗೆ ಮಕ್ಕಳನ್ನು ಸೇರಿಸುವುದು ಸಾಧ್ಯವಿಲ್ಲ. ನಾನಂತೂ ಮಗಳನ್ನು ಬೇರೆ ಶಾಲೆಗೆ ದಾಖಲಿಸಲು ಯೋಚಿಸುತ್ತಿದ್ದೇನೆ.”
-ಸಿಂಧುವಳ್ಳಿ ಮಹೇಶ, ಪೋಷಕ





