Mysore
25
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಮುಜಾಪ್ಫರ್‌ ಅಸ್ಸಾದಿ ಎಂಬ ಸಾರ್ವಜನಿಕ ಬುದ್ಧಿಜೀವಿ

ಡಾ. ಎ. ಎಸ್. ಪ್ರಭಾಕರ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕರ್ನಾಟಕದ ಆದಿವಾಸಿ, ರೈತ ಹೋರಾಟಗಳ ಕುರಿತು ನಾನು ಅಧ್ಯಯನ ಮಾಡುತ್ತಿದ್ದಾಗ ನನ್ನ ದೃಷ್ಟಿಕೋನವನ್ನು ಬದಲಿಸಿದ್ದು ಪ್ರೊ. ಮುಜಾಪ್ಛರ್ ಅಸ್ಸಾದಿ ಅವರು. ಅವರ Politics of Peasant Movement in Karnataka ಎಂಬ ಪುಸ್ತಕವು ಕರ್ನಾಟಕದ ಚಳವಳಿ ರಾಜಕಾರಣವನ್ನು ಅರ್ಥೈಸುವ ವಿಧಾನವನ್ನು ನನಗೆ ಹೇಳಿಕೊಟ್ಟಿತು.

ಮೈಸೂರಿನಿಂದ ಹಂಪಿ ದೂರ ಇದ್ದ ಕಾರಣಕ್ಕಾಗಿ ಅವರ ಜೊತೆಗೆ ನಿರಂತರ ಒಡನಾಟ ನನಗಿರಲಿಲ್ಲ. ಆದಿವಾಸಿಗಳ ಸ್ಥಳಾಂತರದ ಕುರಿತು ಅವರು ವರದಿಯೊಂದನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಅವರ-ನನ್ನ ಒಡನಾಟ ಗಾಢವಾಯಿತು. ಕರ್ನಾಟಕದ ಉಚ್ಚ ನ್ಯಾಯಾಲಯವು ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಸ್ಥಳಾಂತರಗೊಂಡ ಆದಿವಾಸಿಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಅಸ್ಸಾದಿಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿತ್ತು. ಈ ವರದಿಯ ಸಿದ್ಧತೆಯಲ್ಲಿ ಅಸ್ಸಾದಿಯವರು ನಮ್ಮ ವಿಭಾಗದ ಜೊತೆಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಅಸ್ಸಾದಿಯವರು ಈ ವರದಿಯನ್ನು ೨೦೧೪ರಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿನ ಸೋಲಿಗ, ಜೇನುಕುರುಬ, ಬೆಟ್ಟಕುರುಬ ಮತ್ತು ಯರವ ಸಮುದಾಯಗಳನ್ನು ೧೯೭೨ರಿಂದ ಇಲ್ಲಿಯವರೆಗೆ ನಿರಂತರವಾಗಿ ಅವರ ವಾಸದ ನೆಲೆಗಳಿಂದ ಒಕ್ಕಲೆಬ್ಬಿಸಲಾಗಿದೆ. ಆದಿವಾಸಿಗಳ ಸ್ಥಳಾಂತರವೆಂಬುದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ, ಭಾರತದಾದ್ಯಂತ ರಾಷ್ಟ್ರೀಯ ಉದ್ಯಾನ, ಗಣಿಗಾರಿಕೆ, ಅಣೆಕಟ್ಟೆ ನಿರ್ಮಾಣ ಮತ್ತು ವನ್ಯಜೀವಿ ಸಂರಕ್ಷಣೆಯ ನೆಪದಲ್ಲಿ ನಿರಂತರವಾಗಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗಿದೆ. ನಾಗರಹೊಳೆ ಉದ್ಯಾನ ವ್ಯಾಪ್ತಿಯಿಂದ ಒಕ್ಕಲೆಬ್ಬಿಸಿದ ಆದಿವಾಸಿಗಳ ಸ್ಥಿತಿಗತಿಗಳು ಮತ್ತು ಅವರ ಸಬಲೀಕರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಶಿಫಾರಸ್ಸು ಮಾಡುವುದಕ್ಕೆ ಅಸ್ಸಾದಿಯವರ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.

ಮೈಸೂರು, ಚಾಮರಾಜನಗರ, ಮತ್ತು ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ರಾಷ್ಟ್ರೀಯ ಉದ್ಯಾನ ಮತ್ತು ವನ್ಯ ಜೀವಿ ಸಂರಕ್ಷಣಾ ಯೋಜನೆಗಳಿಂದಾಗಿ ಒಕ್ಕಲೆಬ್ಬಿಸಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆದ ಸ್ಥಳಾಂತರ ಅತ್ಯಂತ ಅಮಾನವೀಯವಾದದ್ದು. ಹುಲಿ ಯೋಜನೆ, ಕಬಿನಿ ಮತ್ತು ತಾರಕ ಅಣೆಕಟ್ಟೆಗಳಿಂದಾಗಿ ಒಕ್ಕಲೆದ್ದ ಆದಿವಾಸಿಗಳನ್ನು ಕಾಡಂಚಿನಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಹಠಕ್ಕೆ ಬಿದ್ದು ಕಾಡಲ್ಲಿಯೇ ಉಳಿದ ಆದಿವಾಸಿಗಳನ್ನು ವನ್ಯಜೀವಿ ಸಂರಕ್ಷಕರು ಎಂದು ಹೇಳಿಕೊಳ್ಳುವವರು ಹಣದ ಆಮಿಷ ಒಡ್ಡಿ ಕಾಡಿನಿಂದ ಹೊರಹಾಕುತ್ತಿದ್ದಾರೆ. ಹೀಗೆ ಕಾಡಿನಿಂದ ಹೊರಗೆಸೆಯಲ್ಪಟ್ಟ ಆದಿವಾಸಿಗಳು ಅತಂತ್ರರಾಗಿದ್ದಾರೆ. ತಮ್ಮ ಮೂಲ ನೆಲೆಗಳ ಜೊತೆಗೆ ಅವರಿಗಿದ್ದ ಶತಮಾನಗಳ ಅವಿನಾಭಾವ ಸಂಬಂಧಗಳು ಇಲ್ಲವಾದ ಕೊರಗಿನಲ್ಲಿ ಇವರು ನರಳುತ್ತಿದ್ದಾರೆ. ಹಾಗೆಂದು ಇವರು ಕಾಡಿನಲ್ಲೇ ಇರಬೇಕು ಎಂದಲ್ಲ. ಕಾಡಿನ ನಿಜ ವಾರಸುದಾರರಾದ ಅವರು ತಾವು ಬದುಕುವ ಪರಿಸರವನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಅವರಿಗೆ ಕಲ್ಪಿಸಬೇಕಿದೆ. ಜೊತೆಗೆ ಕಾಡಿನಿಂದ ಹೊರತಂದ ಮೇಲೆ ಆದಿವಾಸಿಗಳನ್ನು ನಡೆಸಿಕೊಳ್ಳುವ ರೀತಿ ಮತ್ತು ಅನುಕೂಲಗಳನ್ನು ಕಲ್ಪಿಸುವ ವಿಧಾನಗಳು ಬದಲಾಗಬೇಕಿದೆ. ಆದರೆ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಕ್ಕಲೆದ್ದು ಪುನರ್ವಸತಿ ಪಡೆದು ಬದುಕುತ್ತಿರುವ ಆದಿವಾಸಿಗಳು ನೆಮ್ಮದಿಯಿಂದಿಲ್ಲ. ಕೊಡಗಿನ ಬುಡಕಟ್ಟುಗಳಲ್ಲಿ ಅದರಲ್ಲೂ ಸೋಲಿಗ ಫಣಿಯರವ, ಜೇನುಕುರುಬ ಮತ್ತು ಬೆಟ್ಟಕುರುಬ ಸಮುದಾಯಗಳು ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ಬದುಕುತ್ತಿವೆ. ಕೊಡಗಿನ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಈ ಬುಡಕಟ್ಟುಗಳು ಬಂದಿಗಳಂತೆ ಬದುಕುತ್ತಿವೆ. ಹೊರಜಗತ್ತಿಗೆ ಈ ಸಮುದಾಯಗಳು ಮುಕ್ತವಾಗಿಲ್ಲ. ಈ ಎಲ್ಲ ಸಂಗತಿಗಳನ್ನು ಮುಖ್ಯವಾಗಿಟ್ಟುಕೊಂಡು ಅಸ್ಸಾದಿಯವರು ತಮ್ಮ ವರದಿ ಸಿದ್ಧಪಡಿಸಲು ದಟ್ಟಾರಣ್ಯದಲ್ಲಿ ತಿರುಗಾಡಿದರು. ಸರ್ಕಾರ ಯಾವ ಸೌಲಭ್ಯಗಳನ್ನೂ ಒದಗಿಸದ ಸಂದರ್ಭದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರನ್ನು ಕಟ್ಟಿಕೊಂಡು ಕಾಡಲೆದರು. ಒಂದೆಡೆ ಸರ್ಕಾರದ ಉದ್ದೇಶಿತ ಅರಣ್ಯ ಸಂರಕ್ಷಣೆ, ಇನ್ನೊಂದೆಡೆ ಅರಣ್ಯದಲ್ಲಿನ ಆದಿವಾಸಿಗಳ ಅಸ್ತಿತ್ವದ ಪ್ರಶ್ನೆ.

ಅರಣ್ಯವನ್ನು ರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಸರ್ಕಾರದ ಉದ್ದೇಶಗಳಿಗೆ ಮತ್ತು ಆದಿವಾಸಿಗಳ ಅಸ್ತಿತ್ವಕ್ಕೆ ಯಾವತ್ತೂ ಸಂಘರ್ಷತ್ಮಾಕ ಮುಖಾಮುಖಿ ನಡೆಯುತ್ತಲೇ ಬಂದಿದೆ. ಅರಣ್ಯವನ್ನು ತಮ್ಮ ಜೀವನ ನಿರ್ವಹಣೆಗಾಗಿ ಯಾವತ್ತೂ ಅವಲಂಬಿಸಿಕೊಂಡು ಬಂದ ಆದಿವಾಸಿಗಳು ರಾಷ್ಟ್ರೀಯ ಉದ್ಯಾನ ಕಾಯ್ದೆಯ ಪ್ರಕಾರ ಅರಣ್ಯವನ್ನು ಯಾವ ಕಾರಣಗಳಿಗೂ ಬಳಸುವಂತಿಲ್ಲ. ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸುವ, ಅದನ್ನು ಮಾರಾಟ ಮಾಡುವ ಆದಿವಾಸಿಗಳ ಪಾರಂಪರಿಕ ಹಕ್ಕುಗಳನ್ನು ರಾಷ್ಟ್ರೀಯ ಉದ್ಯಾನ ನೀತಿ ಕಿತ್ತುಕೊಂಡಿತು. ಇದಲ್ಲದೆ ಅರಣ್ಯದಲ್ಲಿ ಜನವಸತಿಗಳಿರಕೂಡದು ಎಂದು ಆದಿವಾಸಿಗಳನ್ನು ರಾಷ್ಟ್ರೀಯ ಉದ್ಯಾನಗಳಿಂದ ಒಕ್ಕಲೆಬ್ಬಿಸುವುದು ಸರ್ವೇಸಾಮಾನ್ಯ ಸಂಗತಿಯಾಯಿತು. ಇದನ್ನು ಮನಗಂಡು ಅರಣ್ಯ ಮತ್ತು ಆದಿವಾಸಿಗಳನ್ನು ಜೊತೆಯಲ್ಲೇ ಅಬಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲು ಅನೇಕ ಆಯೋಗಗಳನ್ನು ಭಾರತ ಸರ್ಕಾರ ನೇಮಿಸಿದೆ. ಪಂಡಿತ್ ನೆಹರು ಕಾಲದಲ್ಲಿಯೇ ಮೊದಲ ಬಾರಿಗೆ ಅರಣ್ಯ ಮತ್ತು ಆದಿವಾಸಿಗಳ ಪಾರಂಪರಿಕ ಸಂಬಂಧದ ಕುರಿತು ವೈeನಿಕ ವರದಿಯನ್ನು ಸಿದ್ಧಪಡಿಸಲು ಧೇಬರ್ ಆಯೋಗವನ್ನು ನೇಮಿಸಲಾಯಿತು. ಆನಂತರ ಅನೇಕ ಆಯೋಗಗಳನ್ನು ಭಾರತ ಸರ್ಕಾರ ನೇಮಿಸಿದೆ.

ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಒಂದು ಸುವರ್ಣ ಮಧ್ಯಮ ಸೂತ್ರವೊಂದನ್ನು ಮಂಡಿಸುವ ಕಾರಣಕ್ಕಾಗಿ ಅಸ್ಸಾದಿಯವರ ವರದಿಗೆ ಒಂದು ವಿಶೇಷವಾದ ಆಯಾಮವಿದೆ. ಆದಿವಾಸಿಗಳು ಅರಣ್ಯದ ಜೊತೆ ಹೊಂದಿರುವ ಸಂಬಂಧ ಮತ್ತು ಈ ಕುರಿತು ಸರ್ಕಾರ ಈಗಾಗಲೇ ಅಂಗೀಕರಿಸಿರುವ ಅರಣ್ಯ ನೀತಿಯಲ್ಲಿ ಇರಬಹುದಾದ ಅಡೆತಡೆಗಳನ್ನು ಸರಿಪಡಿಸುವ ಕುರಿತು ಅಸ್ಸಾದಿಯವರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಅರಣ್ಯ ಮತ್ತು ಆದಿವಾಸಿಗಳ ನಡುವಿನ ಪಾರಂಪರಿಕ ಸಂಬಂಧಗಳನ್ನು ಕಾಪಾಡುವುದು, ಅರಣ್ಯದ ಉಪ ಉತ್ಪನ್ನಗಳ ಮೇಲೆ ಆದಿವಾಸಿಗಳಿಗೆ ಸಂಪೂರ್ಣ ಅಧಿಕಾರ ಹೊಂದಲು ಅವಕಾಶ ಮಾಡಿಕೊಡುವುದು, ಸಂಗ್ರಹಿಸಲ್ಪಟ್ಟ ಅರಣ್ಯದ ಉಪಉತ್ಪನ್ನಗಳಿಂದ ಬಂದ ಆದಾಯವನ್ನು ಆದಿವಾಸಿಗಳ ಮತ್ತು ಅರಣ್ಯಗಳ ಅಭಿವೃದ್ಧಿಗೆ ಉಪಯೋಗಿಸುವುದು ಮತ್ತು ಆದಿವಾಸಿಗಳನ್ನು ಅರಣ್ಯದ ಉಳಿವಿನ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವಂತೆ ಪ್ರೋತ್ಸಾಹಿಸುವುದು ಅಸ್ಸಾದಿಯವರ ಶಿಫಾರಸ್ಸುಗಳ ಮುಖ್ಯ ಆಶಯಗಳಾಗಿವೆ. ೨೦೦೬ರ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಅರಣ್ಯವಾಸಿ ಬುಡಕಟ್ಟುಗಳ ಪಾರಂಪರಿಕ ಹಕ್ಕುಗಳನ್ನು ರಕ್ಷಿಸುವುದು ಪ್ರಭುತ್ವದ ಕರ್ತವ್ಯವಾಗಿದೆ.

೨೦೧೦ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಿದರೂ ಕರ್ನಾಟಕದಲ್ಲಿ ಈ ಕಾಯ್ದೆಯ ಜಾರಿಯಲ್ಲಿ ವಿಳಂಬವಾಗುತ್ತಲೇ ಇದೆ. ಇನ್ನು ಕೃಷಿಕೂಲಿಗಳಾಗಿ ದುಡಿಯುವ ಮತ್ತು ನಿಶ್ಚಿತ ಆದಾಯದ ಮೂಲಗಳೇ ಇಲ್ಲದ ಬುಡಕಟ್ಟು ಜನರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚು. ಈ ಗುಂಪಿಗೆ ಸೇರಿದ ಜನ ಇನ್ನೂ ಅಂತಂತ್ರರಾಗಿಯೇ ಬದುಕುತ್ತಿದ್ದಾರೆ. ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ೪೭. ೩% ಭಾಗದ ಜನ ಆದಿವಾಸಿಗಳೇ ಆಗಿದ್ದಾರೆ. ಪ್ರಭುತ್ವ ಈ ಜನರ ಮೇಲೆ ಹೆಚ್ಚು ಗಮನಹರಿಸಬೇಕಾಗಿದೆ. ನಿಶ್ಚಿತ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯವನ್ನು ಈ ಜನರಲ್ಲಿ ಉದ್ದೀಪಿಸುವಂತಾಗಬೇಕಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಭಿಕ್ಷೆಯ ರೂಪದಲ್ಲಿರಬಾರದು, ಬುಡಕಟ್ಟುಗಳನ್ನು ಆಮೂಲಾಗ್ರವಾಗಿ ಸಬಲೀಕರಿಸುವ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂಬುದನ್ನು ಅಸ್ಸಾದಿಯವರು ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ೨೦೧೪ರಲ್ಲಿ ಅಸ್ಸಾದಿಯವರು ತಮ್ಮ ಅಂತಿಮ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ ನಂತರ ಕೋರ್ಟ್ ಈ ವರದಿಯನ್ನು ಅಂಗೀಕರಿಸಿ ಸ್ಥಳಾಂತರಗೊಂಡ ಆದಿವಾಸಿಗಳ ಸಬಲೀಕರಣಕ್ಕಾಗಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಿತು. ಇದಾಗಿ ಹತ್ತು ವರ್ಷಗಳೇ ಕಳೆದಿವೆ. ಸರ್ಕಾರ ಈ ವರದಿಯ ಕುರಿತು ಯಾವ ಕ್ರಮಗಳನ್ನೂ ಜರುಗಿಸಲಿಲ್ಲ. ನಾನು ಅಸ್ಸಾದಿಯವರನ್ನು ಭೇಟಿ ಮಾಡಿದಾಗೆಲ್ಲ ಅವರೊಂದಿಗೆ ಈ ಹೈಕೋರ್ಟ್ ವರದಿಯ ಕುರಿತು ಪ್ರಸ್ತಾಪಿಸುತ್ತಿದ್ದೆ. ‘ನಾನು ಬದುಕಿರುವವರೆಗೂ ಆ ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಅಸ್ಸಾದಿಯವರು ತಮಾಷೆ ಮಾಡುತ್ತಿದ್ದರು. ಅವರ ಮಾತು ಈಗ ನಿಜವಾಗಿದೆ. ಅಸ್ಸಾದಿಯವರಂತಹ ಸಾರ್ವಜನಿಕ ಬುದ್ಧಿಜೀವಿಗೆ ಸರ್ಕಾರ ಬಾಯುಪಚಾರದ ಶ್ರದ್ಧಾಂಜಲಿ ಅರ್ಪಿಸಿದರೆ ಸಾಲದು. ಶ್ರಮವಹಿಸಿ ಸಿದ್ಧಪಡಿಸಿದ ಅವರ ವರದಿಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಮುಂದಾಗಬೇಕು. ಹೀಗಾದರೆ ಮಾತ್ರ ಸ್ಥಳಾಂತರಗೊಂಡು ದಿಕ್ಕೆಟ್ಟು ಹೋಗಿರುವ ಆದಿವಾಸಿಗಳಲ್ಲಿ ಹೊಸ ಭರವಸೆಗಳು ಮೂಡುತ್ತವೆ. ವರದಿ ಸಿದ್ಧಪಡಿಸಿದ ಅಸ್ಸಾದಿಯವರ ಶ್ರಮಕ್ಕೂ ಸಾರ್ಥಕತೆ ಪ್ರಾಪ್ತಿಯಾಗುತ್ತದೆ.

Tags:
error: Content is protected !!