ಇದು ಸಂತ್ರಸ್ತ ಹೆಣ್ಣುಮಕ್ಕಳ ದನಿಯಾಗಿರುವ ‘ಒಡನಾಡಿ’ಯ ಒಡಲ ಮಾತು
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆಗಳು, ಅತ್ಯಾಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಯುತ ತನಿಖೆಗೆ ಆಗ್ರಹಿಸಿ ಹೊರಟ ಹೋರಾಟದ ಕಿಚ್ಚು ರಾಜ್ಯಾದ್ಯಂತ ವ್ಯಾಪಿಸಿದ್ದು, ವಿವಿಧ ಸಂಘಟನೆಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಇವೆ. ಇನ್ನೊಂದೆಡೆ ಧರ್ಮಸ್ಥಳದಲ್ಲಿ ಕೊಲೆ, ಅತ್ಯಾಚಾರಗಳೇ ನಡೆದಿಲ್ಲ. ವಿನಾಕಾರಣ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗುತ್ತಿದೆ ಎಂದು ಕೆಲ ಗುಂಪುಗಳು ಪ್ರತಿಹೋರಾಟಕ್ಕೆ ಇಳಿದಿವೆ.
ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಪೂರಕ ಎಂಬಂತೆ ಶವಗಳನ್ನು ನಿಯಮಬಾಹಿರವಾಗಿ ಹೂಳಲಾಗಿದೆ ಎಂಬ ವಿಚಾರದಲ್ಲಿ ಸತ್ಯಾಸತ್ಯತೆ ಪತ್ತೆಹಚ್ಚಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ನಡುದಾರಿಯಲ್ಲಿದೆ. ಈ ನಡುವೆ ದೂರುದಾರನಾಗಿದ್ದ ಚಿನ್ನಯ್ಯನನ್ನು ಎಸ್‌ಐಟಿ ವಶಕ್ಕೆ ಪಡೆಯುತ್ತಿದ್ದಂತೆಯೇ ಪ್ರಕರಣ ಮೂರನೇ ಆಯಾಮ ಪಡೆದುಕೊಂಡಿದ್ದು, ಧರ್ಮಸ್ಥಳಕ್ಕೆ ಅಂಟಿದ್ದ ಕಳಂಕ ತೊಳೆದುಹೋಯಿತು ಎಂಬುದು ಧರ್ಮದೊಳಗಿರುವವರ ವಾದ. ನಡುದಾರಿಯಲ್ಲಿರುವ ಎಸ್‌ಐಟಿ ತನಿಖೆ ಹಳ್ಳ ಹಿಡಿಸಲು ಷಡ್ಯಂತ್ರ ನಡೆಯುತ್ತಿದೆ. ನ್ಯಾಯ ಬದಿಗಿಟ್ಟು ಧರ್ಮದ ವಿಚಾರ ಮುನ್ನೆಲೆಗೆ ತಂದು ರಾಜಕೀಯ ವರಸೆ ತೆಗೆಯಲಾಗಿದೆ ಎಂಬುದು ಹೋರಾಟಗಾರರ ವಾದ. ಹೀಗಾಗಿ ಸೌಜನ್ಯ ಪ್ರಕರಣದಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ಒಡನಾಡಿ ಸೇವಾಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಅವರು ಇಡೀ ಪ್ರಕರಣದ ಬಗ್ಗೆ ಹಲವು ಒಳಹುಗಳನ್ನು ‘ಆಂದೋಲನ’ದೊಂದಿಗೆ ಹಂಚಿಕೊಂಡಿದ್ದಾರೆ
ಆಂದೋಲನ: ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನೇ ಎಸ್‌ಐಟಿ ವಶಕ್ಕೆ ಪಡೆದಿರುವುದರಿಂದ. ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಕೊಲೆ, ಅತ್ಯಾಚಾರ ಪ್ರಕರಣಗಳು ಹುಸಿ ಎಂದಾಗುತ್ತ ದೆಯೇ ಅಥವಾ ಇಡೀ ಪ್ರಕರಣದ ತನಿಖೆ ಪೂರ್ಣಗೊಂಡಂತೆ ಅನಿಸುತ್ತದೆಯೇ. ಒಟ್ಟಾರೆ ಪ್ರಕರಣದ ಸ್ಮೂಕ್ಷ್ಮತೆ ಬಗ್ಗೆ ನಿಮ್ಮ ಅನಿಸಿಕೆ ಏನು?
ಸ್ಟ್ಯಾನ್ಲಿ: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಹಲವಾರು ಹತ್ಯೆ, ಅತ್ಯಾಚಾರ, ಅಪಹರಣ ಹಾಗೂ ಭೂಗಳ್ಳತನದ ಪ್ರಕರಣಗಳಿಗೆ ನಿಖರವಾದ ದಾಖಲೆಗಳಿರುವುದರಿಂದ ಇದನ್ನು ಯಾವುದೇ ರೀತಿಯಿಂದಲೂ ಅಲ್ಲಗೆಳೆಯಲಾಗುವುದಿಲ್ಲ. ಇಲ್ಲಿ ನಡೆದಿರುವ ಅಷ್ಟು ಕೊಲೆಗಳ ಹಿಂದೆ ಒಂದು ಅಪರಾಧಿಕ ಗುಂಪು ಕೃತ್ಯ ನಡೆಸಿರುವುದು ಸ್ಪಷ್ಟವಾಗಿದೆ. ಹಾಗೆಯೇ ಈ ಕೃತ್ಯ ಎಸಗಿದವರ ಗುಂಪು ಕಾನೂನಿನ ಗಮನಕ್ಕೆ ಇದುವರೆಗೂ ಬಾರದಿರುವುದು ಸ್ಪಷ್ಟ ಮತ್ತು ಸೋಜಿಗ! ಈ ಎಲ್ಲ ಕೃತ್ಯಗಳಲ್ಲಿ ಒಂದು ಬಲಿಷ್ಠವಾದ ಶಕ್ತಿ ಪಾಲ್ಗೊಂಡಿರುವುದು ಹಾಗೂ ಅದಕ್ಕೆ ಸ್ಥಳೀಯ ವ್ಯವಸ್ಥೆ ಬೆಂಬಲವಾಗಿ ನಿಂತಿರುವುದು ಮೇಲ್ನೋಟಕ್ಕೆ ಕಂಡು ಬರುವ ಸಂಗತಿ. ಸೌಜನ್ಯ ಅಪಹರಣ, ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲೂ ತನಿಖಾ ತಂಡ ಕಾನೂನಿನ ಮುಂದೆ ನಿಲ್ಲಿಸಿದ ವ್ಯಕ್ತಿ ಸಂಪೂರ್ಣ ಅಮಾಯಕ ಹಾಗೂ ಯಾವುದೇ ರೀತಿಯಲ್ಲಿ ಅಪರಾಧದ ಕೃತ್ಯದಲ್ಲಿ ಭಾಗಿಯಾಗಿರುವ ಲಕ್ಷಣವೇ ಇಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ ನಂತರ ನ್ಯಾಯಕ್ಕಾಗಿ ಒಂದು ಧ್ವನಿ ಕರ್ನಾಟಕದಾದ್ಯಂತ ಭುಗಿಲೆದ್ದಿರುವುದು ಈ ಶತಮಾನದ ಅತ್ಯಂತ ಮಹತ್ವಪೂರ್ಣವಾದ ಮಾನವೀಯ ಧ್ವನಿ ಎಂದೇ ಪರಿಗಣಿಸಬೇಕಾಗಿದೆ. ಹಾಗಾಗಿ ಒಂದು ಸಂಘಟಿತ ಹೋರಾಟದ ಫಲವಾಗಿ ಇಂದು ರಾಜ್ಯ ಸರ್ಕಾರದ ನಿರ್ಧಾರದ ಮೇರೆಗೆ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸುತ್ತಿದೆ. ಆದರೆ, ತನಿಖೆಯೇ ಪೂರ್ಣಗೊಳ್ಳದೆ ಅಲ್ಲಿ ಏನೂ ನಡೆದಿಲ್ಲ ಎನ್ನುವುದು ಇಂದಿನ ಬೆಳವಣಿಗೆ. ಇದು ಸರಿಯಲ್ಲ.
ಆಂದೋಲನ: ಈ ಪ್ರಕರಣದಲ್ಲಿ ಧರ್ಮಸ್ಥಳ ಕೇಂದ್ರಬಿಂದುವಾಗಿರುವುದರಿಂದ ಪಾರದರ್ಶಕ ತನಿಖೆಗೆ ಪೂರಕ ವಾತಾವರಣ ಇದೆ, ಎಸ್‌ಐಟಿ ತನಿಖೆ ಸರಿದಾರಿಯಲ್ಲಿ ನಡೆಯುತ್ತಿದೆ ಎಂದು ನಿಮಗೆ ಅನಿಸುತ್ತಿದೆಯೇ?
ಸ್ಟ್ಯಾನ್ಲಿ: ಎಸ್‌ಐಟಿ ರಚಿಸಬೇಕಾದರೆ ಸರ್ಕಾರಕ್ಕೆ ಒಂದು ಮಹತ್ತರವಾದ ಕಾರಣವಿರಲೇಬೇಕು. ಹಿಂದೆ ನಡೆದಿರಬಹುದಾದ ಅಷ್ಟೂ ಕೃತ್ಯಗಳನ್ನು ಪರಿಗಣಿಸಿ ನ್ಯಾಯಬದ್ಧ ಹೋರಾಟಗಳ ಹಕ್ಕೊತಾಯಕ್ಕೆ ಮಣಿದು ಸರ್ಕಾರ ಪರಿಣಿತ ದಕ್ಷ ಅಧಿಕಾರಿಗಳಿರುವ ಎಸ್‌ಐಟಿ ತಂಡ ರಚಿಸಿ ತನಿಖೆಗೆ ನಿಯೋಜಿಸಿದೆ. ಆದರೆ ಎಸ್‌ಐಟಿ ಸ್ವತಂತ್ರವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡುವ ವಾತಾವರಣವನ್ನು ಸರ್ಕಾರವು ನಿರ್ಮಾಣ ಮಾಡಿಕೊಡಬೇಕಾಗಿದೆ. ಆದರೆ ಸರ್ಕಾರದೊಳಗಿನ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ಮಂತ್ರಿಗಳು ತನ್ನದೇ ಕೂಸಿನ(ಎಸ್‌ಐಟಿ) ಅಸ್ತಿತ್ವವನ್ನು ಪ್ರಶ್ನಿಸುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ತನಿಖೆ ನಡೆಸಲು ಅಲ್ಲಿ ಏನೂ ಇಲ್ಲ ಎನ್ನುವ ರೀತಿಯಲ್ಲಿ ಹಲವಾರು ಜನಪ್ರತಿನಿಧಿಗಳು ಸದನದಲ್ಲಿ ನ್ಯಾಯಕ್ಕೆ ವಿರುದ್ಧವಾಗಿ ಸದನದ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ನಡೆದುಕೊಂಡಿರುವುದು ಹೋರಾಟಗಾರರ ಆತಂಕಕ್ಕೆ ಕಾರಣವಾಗಿದೆ. ಒಮ್ಮೆ ರಚನೆಯಾದ ಮೇಲೆ ಎಸ್‌ಐಟಿ ಸರ್ಕಾರದ ಸ್ವತ್ತಲ್ಲ. ಆರೋಪಿಗಳನ್ನು ಬೇಟೆಯಾಡಲು ನಿಯೋಜಿಸಿರುವ ಉತ್ಕ ಷ್ಟ ತನಿಖಾ ತಂಡವೆಂದೇ ಪರಿಭಾವಿಸುತ್ತೇವೆ. ಎಸ್‌ಐಟಿಯ ಮೇಲೆ ಹಾಗೂ ನ್ಯಾಯಿಕ ಪ್ರಕ್ರಿಯೆ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ. ಆದಾಗಿಯೂ ಪ್ರಸ್ತುತ ವ್ಯವಸ್ಥೆಯಲ್ಲಿ ಧರ್ಮ ರಾಜಕಾರಣ, ಪಕ್ಷ ರಾಜಕಾರಣವು ತನ್ನ ಪ್ರಭಾವವನ್ನು ಎಲ್ಲ ಕ್ಷೇತ್ರದಲ್ಲೂ ಬೀರುತ್ತಿರುವುದರಿಂದ ನಡೆಯುವುದೆಲ್ಲವೂ ಸಂವಿಧಾನಾತ್ಮಕವಾಗಿಯೇ ನಡೆಯಲಿದೆ ಎಂಬ ಭ್ರಮೆ ನಮಗಿಲ್ಲ. ಆದರೂ ಧನಾತ್ಮಕವಾಗಿ ಯೋಚಿಸುತ್ತಾ ಎಸ್‌ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವವರೆಗೆ ಸಾವಧಾನವಾಗಿ ಕಾಯ್ದು ನೋಡಬೇಕಾಗಿದೆ.
ಆಂದೋಲನ: ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದ ಚಿನ್ನಯ್ಯನನ್ನು ಎಸ್‌ಐಟಿ ಬಂಧಿಸಿರುವುದರಿಂದ ಆ ದಿಕ್ಕಿನ ತನಿಖೆ ಮೊಟಕಾದಂತಾಗುತ್ತದೆಯೇ?
ಸ್ಟ್ಯಾನ್ಲಿ: ಮುಸುಕುಧಾರಿಯನ್ನು ಎಸ್‌ಐಟಿ ತಂಡ ಬಂಧಿಸಿರುವುದು ಆಕ್ಷೇಪಾರ್ಹವಾದ ವಿಚಾರವೇನೂ ಅಲ್ಲ. ಅಪರಾಧಿಕ ಕೃತ್ಯದಲ್ಲಿ ತಾನು ಪಾಲ್ಗೊಂಡಿದ್ದೇನೆ ಎಂದು ಆತನೇ ನೀಡಿರುವ ಹೇಳಿಕೆ ಪ್ರಕಾರ ಇದು ನಡೆದಿದೆ ಹಾಗೂ ಇದರ ಆಧಾರದ ಮೇಲೆ ಮುಂದಿನ ತನಿಖೆಗಳು ನಡೆಯಲಿವೆ ಎಂದೇ ನಾವು ಅರ್ಥೈಸಿಕೊಳ್ಳಬೇಕಾಗಿದೆ. ಹಾಗೆಯೇ ಎಸ್‌ಐಟಿ ಈ ವಿಶೇಷ ಪ್ರಕರಣದಲ್ಲಿ ತನಗೆ ಲಭಿಸುವ ದಾಖಲೆಗಳು ಹಾಗೂ ಸಾಕ್ಷಿ ನುಡಿಯಲು ಬರುವ ವ್ಯಕ್ತಿಗಳನ್ನೇ ಆಧರಿಸಿ ಮುಂದುವರಿಯಬೇಕಾದ ಅನಿವಾರ್ಯತೆ ಇರುವುದರಿಂದ ಎಲ್ಲ ಸಾಕ್ಷಿಗಳಿಗೂ ಸಾಕ್ಷಿಗಳ ರಕ್ಷಣಾ ಅಧಿನಿಯಮದ ಪ್ರಕಾರ ಅತ್ಯುನ್ನತವಾದ ಜೀವ ಭದ್ರತೆ, ಗೌಪ್ಯತೆ, ಆರ್ಥಿಕ ಹಾಗೂ ಸಾಮಾಜಿಕ ರಕ್ಷಣೆಯನ್ನು ನೀಡಿ ಅವರ ಘನತೆಯುಕ್ತ ಜೀವನವನ್ನು ಕಾಪಾಡಬೇಕಾಗಿದೆ.
ಆಂದೋಲನ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಹೋರಾಟದ ಮುಂಚೂಣಿಯಲ್ಲಿ ಇದ್ದೀರಿ. ಇದೀಗ ಸಂಘ ಪರಿವಾರದ ಕೆಲವರು ನಿಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಅನ್ನಿಸುತಿದೆಯೇ?
ಸ್ಟ್ಯಾನ್ಲಿ: ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಕಾನೂನು ಎಲ್ಲರಿಗೂ ಒಂದೇ ಆದರೂ ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಕಷ್ಟ ಸಾಧ್ಯವಾದ ವಿಚಾರವೇ ಆಗಿದೆ. ಹಾಗೆಯೇ ನ್ಯಾಯಪರ ಧ್ವನಿಗಳನ್ನು ಅಡಗಿಸಲು ಧರ್ಮವನ್ನೇ ಗುರಾಣಿಯಾಗಿ ಬಳಸುವ ಹೊಲಸು ಕೆಲಸ ಹೊಸದೇನಲ್ಲ. ವೈಯಕ್ತಿಕವಾಗಿ ನಾನು ಬಾಳುತ್ತಿರುವ ಬಾಳ್ವೆ ಧರ್ಮಾತೀತವಾದದ್ದು ಹಾಗೂ ಮಾನವೀಯ ಧರ್ಮಕ್ಕೆ ಸೇರಿರುವುದರಿಂದ ಭಾರತೀಯ ಸಂವಿಧಾನವೇ ನಮ್ಮ ಆದ್ಯ ಗ್ರಂಥವಾಗಿರುವುದರಿಂದ ಹೋರಾಟವನ್ನು ವಿಫಲಗೊಳಿಸುವುದು ಕನಸೆಂದೇ ಅವರು ಭಾವಿಸಬೇಕಾಗಿದೆ.
ಆಂದೋಲನ: ಧರ್ಮಸ್ಥಳದಲ್ಲಿ ನಡೆದಿರುವ ಕೊಲೆ, ಅತ್ಯಾಚಾರ ವಿಚಾರದಲ್ಲಿ ತನಿಖೆ ಹೇಗೆ ಸಾಗಬೇಕು? ಸರ್ಕಾರದ ಪಾತ್ರ ಹೇಗಿರಬೇಕು ಎಂಬ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸ್ಟ್ಯಾನ್ಲಿ: ಮೂರು ದಶಕಗಳಿಗೂ ಮಿಗಿಲಾಗಿ ಒಡನಾಡಿಯು ಪೊಲೀಸ್ ಇಲಾಖೆ ಹಾಗೂ ಅನೇಕ ಹಿರಿಯ, ಕಿರಿಯ ಅಧಿಕಾರಿಗಳ ಜೊತೆಯಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದೆ. ಎಸ್‌ಐಟಿಯಂತಹ ವಿಶೇಷ ಪಡೆಗಳು ಪ್ರತಿಯೊಂದನ್ನೂ ನ್ಯಾಯದ ಪರವಾಗಿ ಮಾಡುತ್ತದೆ. ಎಸ್‌ಐಟಿಗೆ ಅದರದ್ದೇ ಆದ ಕಾರ್ಯಸೂಚಿ, ಕಾರ್ಯವಿಧಾನ ಹಾಗೂ ಕಾರ್ಯತಂತ್ರವಿರುತ್ತದೆ. ಗೌಪ್ಯತೆಯನ್ನು ಕಾಯ್ದುಕೊಳ್ಳುವ ಬಾಧ್ಯತೆಯು ಇರುತ್ತದೆ. ಇದುವರೆಗೆ ಮಾಧ್ಯಮಕ್ಕೆ ಸಿಕ್ಕಿರುವ ಮಾಹಿತಿ ಎಸ್‌ಐಟಿಯಿಂದ ಲಭಿಸಿರುವ ಮಾಹಿತಿ ಎಂದು ಅನಿಸುವುದಿಲ್ಲ. ಒಂದು ವೇಳೆ ಎಸ್‌ಐಟಿ ಏನಾದರೂ ಮಾಹಿತಿಯನ್ನು ಸಾರ್ವಜನಿಕರಿಗೆ ಹರಿಯ ಬಿಟ್ಟಿದ್ದರೆ ಅದು ಕಾನೂನಾತ್ಮಕವಾದ ಎಡವಟ್ಟು ಎಂದೇ ಪರಿಗಣಿಸಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರ ಆಗಿಂದಾಗ್ಗೆ ತನಿಖೆಯ ದಿಕ್ಕನ್ನು ಪರಿಶೀಲನೆ ನಡೆಸಬೇಕಾಗುತ್ತದೆ. ಯಾವುದೇ ಪಟ್ಟಭದ್ರ ಹಿತಾಸಕ್ತಿಗೆ ಸರ್ಕಾರ ಮಣಿಯಬಾರದು.
ಆಂದೋಲನ: ಈ ಹಿಂದೆ ಅಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳು ಅಂತಿಮವಾಗಿ ಬಗೆಹರಿದಿವೆಯೆ? ಈಗಿನ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡಕ್ಕೆ ಸ್ಥಳೀಯ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಅನಿಸುತ್ತಿದೆಯೇ?
ಸ್ಟ್ಯಾನ್ಲಿ: ಎಸ್‌ಐಟಿ ತನಿಖೆಯನ್ನು ಸ್ಥಳೀಯ ಪೊಲೀಸರು ಸ್ವಾಗತಿಸಲಾರರು. ಸ್ಥಳೀಯ ಪೊಲೀಸರ ನ್ಯೂನ್ಯತೆ ಹಾಗೂ ಕೈವಾಡಗಳು ಸಾಕಷ್ಟಿದೆ. ಇಲ್ಲಿ ಎಸ್‌ಐಟಿ ತನಿಖೆ ಮಾಡಬೇಕಾಗಿರುವುದು ವೈಟ್ ಕಾಲರ್ ಅಪರಾಧಿಗಳ ಕುರಿತಾಗಿಯೂ ಕೂಡ. ದಕ್ಷ ಹಾಗೂ ಪ್ರಾಮಾಣಿಕ ಎಸ್‌ಐಟಿ ತನಿಖೆ ಅನೇಕ ಅಧಿಕಾರಿಗಳನ್ನು ಕಾನೂನಿನ ಕುಣಿಕೆಗೆ ತರಲಿದೆ. ಒಂದೇ ಒಂದು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸೋಣ. ಆನೆ ಮಾವುತನಾಗಿ ತನ್ನ ತಂದೆಯ ಕಾರ್ಯವನ್ನು ಮುಂದುವರಿಸುತ್ತಿದ್ದ ನಾರಾಯಣ ಸಫಲ್ಯ ಮತ್ತು ಆತನ ತಂಗಿ ಮಲಗಿದ್ದಲ್ಲೇ ಕೊಲೆಯಾಗುತ್ತಾರೆ. ಅವರಿದ್ದ ಮನೆಯೂ ನೆಲಸಮವಾಗಿದೆ. ಆ ಸ್ಥಳದಲ್ಲಿ ಬೃಹತ್ ಹೋಟೆಲ್ ಒಂದು ತಲೆ ಎತ್ತಿದೆ. ಆದರೂ ಇಂದಿಗೂ ಸಫಲ್ಯನ ಮಗನಿಗೆ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಕೊಲೆಯಾದರೂ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಲ್ಲ. ಇದು ಹೇಗೆ ಸಾಧ್ಯ ಎಂಬುದನ್ನು ಎಲ್ಲರೂ ಆಲೋಚಿಸಬೇಕಾಗಿದೆ. ಸ್ಥಳೀಯ ಪೊಲೀಸರು ಸೂಕ್ತ ಸಹಕಾರ ನೀಡಿದಲ್ಲಿ ಪ್ರಕರಣದ ತನಿಖೆಗೆ ವೇಗ ದೊರಕುತ್ತದೆ.
ಆಂದೋಲನ: ಈ ಪ್ರಕರಣದಲ್ಲಿ ಧರ್ಮಸ್ಥಳದ ವಿರುದ್ಧ ಷಢ್ಯಂತ್ರ ರೂಪಿಸಲಾಗುತ್ತಿದೆ, ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗುತ್ತಿದೆ ಎಂದು ಒತ್ತಿ ಹೇಳುತ್ತಿರುವುದು ಎಸ್‌ಐಟಿ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಅನ್ನಿಸುತ್ತದೆಯೆ?
ಸ್ಟ್ಯಾನ್ಲಿ: ಎಸ್‌ಐಟಿ ತನ್ನ ತನಿಖೆಯನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಹಸ್ತಕ್ಷೇಪ ಮಾಡುವುದು ಆಕ್ಷೇಪಾರ್ಥ ಹಾಗೂ ಕಾನೂನು ಬಾಹಿರ. ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಧಾರ್ಮಿಕ ಕಲಹಗಳನ್ನು ಉಂಟುಮಾಡುವುದು ಅಕ್ಷಮ್ಯ ಅಪರಾಧ. ತನಿಖೆಯನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುವುದು, ಸಾಮರಸ್ಯವನ್ನು ಕದಡುವ ಕೃತ್ಯ ನಡೆಸುವುದು ಗಂಭೀರವಾದ ಅಪರಾಧಗಳಲ್ಲಿ ಒಂದಾಗಿದೆ. ಅಲ್ಲದೆ ಸಂತ್ರಸ್ತರನ್ನು ಹಾಗೂ ಸಾಕ್ಷಿಗಳನ್ನು ಮುಂದೆ ಬರದ ಹಾಗೆ ತಡೆಯುವ ಹುನ್ನಾರಗಳಾಗಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಹಾಗೂ ಸಮರ್ಪಕವಾದ ರಕ್ಷಣೆಯನ್ನು ಹೋರಾಟಗಾರರಿಗೆ ಹಾಗೂ ಸಾಕ್ಷಿಗಳಿಗೆ ನೀಡಬೇಕಾಗಿದೆ.
ಆಂದೋಲನ: ಧರ್ಮಸ್ಥಳದಲ್ಲಿ ಸೌಜನ್ಯ ಅಷ್ಟೇ ಅಲ್ಲ ಬಹಳಷ್ಟು ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗಿದ್ದಾರೆ. ಕೆಲವರನ್ನು ಆಸ್ತಿಗಾಗಿ ಕೊಲೆ ಮಾಡಲಾಗಿದೆ ಎಂಬ ಸಾಕಷ್ಟು ಆರೋಪಗಳಿವೆ. ಕೆಲವರು ಅಲ್ಲಿ ಅಂತಹದ್ದೇನು ನಡೆದೇ ಇಲ್ಲ ಎಂದು ವಾದಿಸುತ್ತಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?
ಸ್ಟ್ಯಾನ್ಲಿ: ಪದ್ಮಲತಾ ಹಾಗೂ ವೇದವಲ್ಲಿ ಪ್ರಕರಣಗಳು, ಆನೆ ಮಾವುತ ನಾರಾಯಣ ಸಫಲ್ಯ ಹಾಗೂ ಆತನ ತಂಗಿ ಯಮುನಾ ಸಫಲ್ಯ ಜೋಡಿ ಕೊಲೆ ಪ್ರಕರಣ, ಕೇರಳದ ಕೃಷಿಕನೋರ್ವನನ್ನು ಅಪಘಾತದ ಮೂಲಕ ಹತ್ಯೆಗೈದ ಪ್ರಕರಣ. ಸೌಜನ್ಯಳ ಅಪಹರಣ, ಅತ್ಯಾಚಾರ, ಹತ್ಯೆ ಪ್ರಕರಣಗಳು ಕೇವಲ ಲೈಂಗಿಕ ತೃಷೆಗಾಗಿ ನಡೆದ ಪ್ರಕರಣಗಳೆಂದು ಅನ್ನಿಸುವುದಿಲ್ಲ. ಇಲ್ಲಿ ರಾಜಕೀಯ ಕಾರಣಗಳು ಭೂಕಬಳಿಕೆ ಹಾಗೂ ಜನರನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸೃಷ್ಟಿಸಿದ ಭಯದ ವಾತಾವರಣ ಎದ್ದು ಕಾಣುತ್ತಿವೆ. ಜೋಡಿ ಕೊಲೆಯ ಪ್ರಕರಣದಲ್ಲಿ ನಾರಾಯಣ ಸಫಲ್ಯನ ಮಡದಿ ನೀಡಿರುವ ದೂರು ಈ ವಿಚಾರಗಳನ್ನು ಅನಾವರಣಗೊಳಿಸಿದೆ. ದೂರಿನಲ್ಲಿ ನಮೂದಿಸಿದ ವ್ಯಕ್ತಿಗಳ ವಿರುದ್ಧ ಪೊಲೀಸರು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಹೋಗಿರುವುದು ಅಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರುತ್ತದೆ. ಅದೇ ರೀತಿ ಕೆಲವು ಪ್ರಕರಣಗಳಲ್ಲಿ ಹೆಣ್ಣು ಮಕ್ಕಳ ಶವಗಳನ್ನು ಅನಾಥ ಶವಗಳೆಂದು ಪರಿಗಣಿಸಿ ತರಾತುರಿಯಲ್ಲಿ ಪ್ರಕಾರಗಳನ್ನು ನಿಭಾಯಿಸುವ ಅಽಕಾರ ಇಲ್ಲದ ದಫೇದಾರರೇ ವಿಲೇವಾರಿ ಮಾಡಿರುವುದು ಕಂಡು ಬಂದಿದೆ. ಇವೆಲ್ಲವೂ ಕೂಡ ಯಾವುದೋ ಒಂದು ಶಕ್ತಿಯ ಅಥವಾ ಒಬ್ಬ ಪ್ರಭಾವಿ ವ್ಯಕ್ತಿಯ ಹಿತಾಸಕ್ತಿಗಾಗಿ ಆ ಪ್ರದೇಶದಲ್ಲಿ ನಡೆದಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ನಗ್ನ ಸತ್ಯ ಹಾಗೂ ಜನಾಭಿಪ್ರಾಯವೂ ಆಗಿದೆ.




