Mysore
25
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಚಾಮುಂಡಿಬೆಟ್ಟ ಪಾದದ ರಸ್ತೆಯಲ್ಲಿ ಕಸದ ರಾಶಿ

ಕೆ.ಪಿ.ಮದನ್

ತ್ಯಾಜ್ಯದ ದುರ್ನಾತಕ್ಕೆ ಮೂಗು ಮುಚ್ಚಿಕೊಂಡು ಓಡಾಡುವ ನಿವಾಸಿಗಳು

ಮೈಸೂರು: ನಗರದಿಂದ ಚಾಮುಂಡಿ ಬೆಟ್ಟ ಪಾದಕ್ಕೆ ಹೋಗುವ ರಸ್ತೆ ಬದಿ ಉದ್ದಕ್ಕೂ ಬಿದ್ದಿರುವ ಕಸದ ರಾಶಿ ಇಲ್ಲಿನ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿರುವುದಲ್ಲದೆ, ದುರ್ನಾತ ಬೀರುತ್ತಿದೆ.

ಚಾಮುಂಡಿ ಬೆಟ್ಟ ಪಾದದ ಮುಖ್ಯ ರಸ್ತೆ ಇದಾಗಿದ್ದು, ನಿರ್ಜನ ಪ್ರದೇಶದಂತಿದೆ. ಹೀಗಾಗಿ, ಸುತ್ತಮುತ್ತಲಿನ ಬಡವಾಣೆಗಳ ನಿವಾಸಿಗಳು ಮನೆಯ ಕಸವನ್ನು ಕವರ್‌ಗಳಲ್ಲಿ ಕಟ್ಟಿದ್ವಿಚಕ್ರವಾಹನಗಳಲ್ಲಿ ತಂದು ರಸ್ತೆ ಬದಿ ಹಾಗೂ ಪಾರ್ಕ್‌ಗಳಲ್ಲಿ ಬಿಸಾಡಿದರೆ, ರಸ್ತೆ ಬದಿಯ ಫಾಸ್ಟ್ ಫುಡ್ ಗಾಡಿಯವರು ರಾತ್ರಿ ವೇಳೆ ಉಳಿದ ಆಹಾರ ಪದಾರ್ಥ ಹಾಗೂ ತ್ಯಾಜ್ಯ ಸುರಿಯುವುದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೇ, ಪಾರ್ಕ್‌ಗಳಲ್ಲಿ ಪಾರ್ಟಿ ಮಾಡಿದ ಮದ್ಯದ ಬಾಟಲ್‌ಗಳು, ಕವರ್ ಗಳು, ಆಹಾರದ ಪ್ಲಾಸ್ಟಿಕ್ ಕವರ್‌ಗಳು ರಾಶಿಯಾಗಿ ಬಿದ್ದಿವೆ.

ಇನ್ನು ಕಟ್ಟಡ ತ್ಯಾಜ್ಯವನ್ನು ಟ್ರಾಕ್ಟರ್‌ಗಳಲ್ಲಿ ತಂದು ಸುರಿದರೆ, ಕೊಳೆತ ಹಣ್ಣು, ತರಕಾರಿಯನ್ನು ಚೀಲ ಗಳಲ್ಲಿ ತಂದು ಬಿಸಾಡುವುದರಿಂದ ಸೊಳ್ಳೆ ಹಾಗೂ ನೊಣಗಳು ಹೆಚ್ಚಾಗಿವೆ. ಮೇವು ಹುಡು ಕುತ್ತಾ ಬರುವ ಬಿಡಾಡಿ ದನಗಳು ಪ್ಲಾಸ್ಟಿಕ್ ಸಹಿತ ಆಹಾರವಾಗಿ ತಿನ್ನು ತ್ತಿವೆ. ಹಳೆಯ ಹಾಸಿಗೆ, ದಿಂಬು, ಮುರಿದ, ಹಾಳಾದ ಎಲೆ ಕ್ಟ್ರಾನಿಕ್ ಗೃಹೋಪಯೋಗಿ ವಸ್ತುಗಳು, ಗಾಜುಗಳನ್ನು ಬಿಸಾಡುವುದರಿಂದ ನಡೆದಾಡುವವರಿಗೆ ತುಂಬಾ ತೊಂದರೆಯಾಗಿದೆ. ಇದು ಚಾಮುಂಡಿಬೆಟ್ಟ ಪಾದದ ಮುಖ್ಯ ರಸ್ತೆಯಾಗಿರುವುದರಿಂದ ಬೆಟ್ಟಕ್ಕೆ ಹೋಗುವ ಭಕ್ತರು ಹಾಗೂ ವಾಯು ವಿಹಾರಿಗಳು ದುರ್ನಾತ ಸಹಿಸಲಾಗದೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.

ಇನ್ನು ಆಹಾರ ಪದಾರ್ಥವನ್ನು ತಂದು ಬಿಸಾಡುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಡೆದು ಹೋಗುವವರು ಬೀದಿ ನಾಯಿಗಳ ಹಾವಳಿಯಿಂದ ಜೀವ ಭಯದಲ್ಲಿ ಓಡಾಡುವಂತಾಗಿದೆ. ಕಸದ ರಾಶಿಯಿಂದ ಸೊಳ್ಳೆ, ನೊಣಗಳ ಹಾವಳಿ ಮಿತಿ ಮೀರಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ತ್ಯಾಜ್ಯ ಸಂಗ್ರಹಿಸುವ ವಾಹನವು ಪ್ರತಿದಿನ ಬೆಳಿಗ್ಗೆ ನಗರದ ಎಲ್ಲ ಬಡಾವಣೆಗಳ ಮನೆ ಬಳಿ ಬಂದರೂ ಕಸವನ್ನು ಗಾಡಿಗೆ ನೀಡದೆ ರಸ್ತೆ ಬದಿ ಬಿಸಾಡುತ್ತಾರೆ. ಕಸ ಸಂಗ್ರಹಕ್ಕೆ ಬರುವ ವಾಹನಗಳು ರಸ್ತೆ ಬದಿ ತ್ಯಾಜ್ಯವನ್ನು ಎತ್ತುವುದಿಲ್ಲ. ಆದ್ದರಿಂದ ರಸ್ತೆ ಬದಿ ಕಸ ದಿನೇ ದಿನೇ ಹೆಚ್ಚುತ್ತಲೇ ಇದೆ.

ಜನ ದಟ್ಟಣೆ ರಸ್ತೆ: ಚಾಮುಂಡಿ ಬೆಟ್ಟ ಪಾದ ಮತ್ತು ಗೌರಿಶಂಕರ ಬಡಾವಣೆ ಕಡೆಗೆ ಈ ರಸ್ತೆಯಲ್ಲೇ ಹೋಗಬೇಕು. ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಹೀಗಾಗಿ ಈ ರಸ್ತೆ ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತದೆ. ಅಲ್ಲದೇ, ಫುಟ್‌ಪಾತ್ ಇಲ್ಲದೇ ಇರುವುದರಿಂದ ರಸ್ತೆಯ ಅಂಚಿನಲ್ಲಿ ನಡೆಯುವಾಗ ತ್ಯಾಜ್ಯ ವನ್ನು ತುಳಿದುಕೊಂಡೆ ಹೋಗುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತ್ಯಾಜ್ಯ ತೆರವಿಗೆ ಕ್ರಮಕೈಗೊಂಡು ಇಲ್ಲಿನ ನಿವಾಸಿಗಳು ಹಾಗೂ ಸಾರ್ವಜನಿಕರಿಗಾಗುತ್ತಿರುವ ನರಕಯಾತನೆಯನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

” ಕಸದ ದುರ್ವಾಸನೆಯಿಂದ ರೋಗಗಳು ಹರಡುವ ಭೀತಿ ಎದುರಾಗಿದೆ. ನಾವೇ ಕಸ ಎಸೆದು, ನಾವೇ ಕಾಯಿಲೆಗಳನ್ನು ಬರಮಾಡಿಕೊಳ್ಳು ವಂತಾಗಿದ್ದರೂ, ಜನರಿಗೆ ಅರಿವು ಮಾತ್ರ ಮೂಡಿಲ್ಲ.”

– ಪ್ರಭಾಕರ್, ಸ್ಥಳೀಯ ನಿವಾಸಿ

ವಾಯು ವಿಹಾರಿಗಳಿಗೆ ನಾಯಿಗಳ ಭೀತಿ:  ಕಸದ ರಾಶಿಯಲ್ಲಿ ಆಹಾರ ಹೆಕ್ಕಿ ತಿಂದು ರೂಢಿಯಾಗಿರುವ ಬೀದಿ ನಾಯಿಗಳು, ಜನರು ಪ್ಲಾಸ್ಟಿಕ್ ಕವರ್‌ನಲ್ಲಿ ಅಥವಾ ಬ್ಯಾಗ್‌ನಲ್ಲಿ ಯಾವುದೇ ಪದಾರ್ಥ ತೆಗೆದುಕೊಂಡು ಹೋಗುತ್ತಿದ್ದರೂ ಹೊಂಚು ಹಾಕುತ್ತಾ, ಅವರ ಹಿಂದಿಯೇ ಬಂದು ದಾಳಿ ಮಾಡಿ ಕವರ್ ಕಿತ್ತು ತಿನ್ನುತ್ತವೆ. ರಸ್ತೆ ಬದಿ ಕಸದ ರಾಶಿ ಸುತ್ತಾಮುತ್ತಾ ಗುಂಪು ಗುಂಪಾಗಿ ಮಲಗುವ ನಾಯಿಗಳ ಹಾವಳಿಯಿಂದ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳುವ ಜನರು ಜೀವ ಭಯದಿಂದ ಓಡಾಡುವ ಪರಿಸ್ಥಿತಿ ಬಂದಿದೆ.

Tags:
error: Content is protected !!