ಸೌಮ್ಯಕೋಠಿ, ಮೈಸೂರು
ಕುರುಕ್ಷೇತ್ರ ಯುದ್ಧ ನಡೆಯುವಾಗ ಒಮ್ಮೆ ಭೀಷ್ಮ ‘ನಾನು ನಾಳೆ ಪಾಂಡವರನ್ನು ಸಂಹಾರ ಮಾಡಿಬಿಡುತ್ತೇನೆ’ ಎಂದು ಶಪಥ ಮಾಡಿಬಿಡುತ್ತಾರೆ. ಆ ದಿನ ರಾತ್ರಿ ಕೃಷ್ಣ ಪಾಂಚಾಲಿಯನ್ನು ಕರೆದು, ‘ನೋಡು ಹೋಗಿ ಭೀಷ್ಮ ಪಿತಾಮಹರ ಕಾಲಿಗೆ ನಮಸ್ಕರಿಸು’ ಎಂದು ಹೇಳುತ್ತಾರೆ. ಯುದ್ಧಕಾಲದಲ್ಲಿ ಇದು ಅವಶ್ಯವೇ ಎಂದು ಪಾಂಚಾಲಿ ಕೇಳಿದಾಗ, ಕೃಷ್ಣ ನಕ್ಕು ಹೌದು ಎನ್ನುತ್ತಾರೆ. ಕೃಷ್ಣನ ಮಾತಿನಂತೆ ಭೀಷ್ಮ ಪಿತಾಮಹರ ಕುಟೀರಕ್ಕೆ ಬಂದ ಪಾಂಚಾಲಿ ಭೀಷ್ಮರ ಕಾಲಿಗೆ ನಮಸ್ಕರಿಸುತ್ತಾಳೆ. ಆಗ ಭೀಷ್ಮ ಪಿತಾಮಹ ತಮಗೇ ಅರಿವಿಲ್ಲದೆ ‘ಸುಮಂಗಲಿ ಭಾವ’ ಎಂದು ಆಶೀರ್ವದಿಸುತ್ತಾರೆ. ಬಳಿಕ ಪಾಂಚಾಲಿ, ಏಕೆ ಈ ಸಮಯದಲ್ಲಿ ಬಂದೆ ಎಂದು ಭೀಷ್ಮರು ಕೇಳಿದಾಗ, ಪಾಂಚಾಲಿ ‘ನನ್ನ ಅಣ್ಣನಾದ ಕೃಷ್ಣ ನಿಮ್ಮ ಕಾಲಿಗೆ ನಮಸ್ಕರಿಸಲು ಹೇಳಿದರು, ಹಾಗಾಗಿ ಬಂದೆ ’ ಎನ್ನುತ್ತಾರೆ. ಪಾಂಡವರನ್ನು ಕೊಲ್ಲುತ್ತೇನೆ ಎಂದ ಭೀಷ್ಮ ಈಗ ಪಾಂಚಾಲಿಗೆ ಸುಮಂಗಲಿ ಭಾವ ಎಂದು ಆಶೀರ್ವದಿಸಿ, ಅವರನ್ನು ಕೊಲ್ಲಲು ಹೇಗೆ ಸಾಧ್ಯ? ಇದು ಕೃಷ್ಣ ತಂತ್ರವಾದರೂ ಆಶೀರ್ವಾದಕ್ಕಿರುವ ಶಕ್ತಿಯನ್ನು ತೋರುತ್ತದೆ.
ಇದು ಮಹಾಭಾರತದ ಒಂದು ಪ್ರಮುಖ ಸನ್ನಿವೇಶ. ಪ್ರಸ್ತುತದ ಸನ್ನಿವೇಶಕ್ಕೆ ಇದು ಬಹಳ ಅರ್ಥಪೂರ್ಣವಾಗಿದೆ. ಇತ್ತೀಚಿನ ಯುವ ಸಮೂಹ ಹಿರಿಯರನ್ನು ಗೌರವಿಸುವುದು, ಅವರ ಆಶೀರ್ವಾದ ಪಡೆಯುವುದು, ಸಲಹೆಗಳನ್ನು ಕೇಳುವುದನ್ನೇ ಮರೆತಿದೆ. ಹಿರಿಯರು ನಮಗೆ ಏನೂ ನೀಡಲು ಸಾಧ್ಯವಾಗದಿದ್ದರೂ ಕನಿಷ್ಠ ನಮ್ಮ ಎಲ್ಲ ಶುಭ ಕೆಲಸಗಳಿಗೂ ಆಶೀರ್ವದಿಸುತ್ತಾರೆ. ಈ ಆಶೀರ್ವಾದಗಳೇ ಅನೇಕ ಬಾರಿ ನಮಗೆ ಶ್ರೀರಕ್ಷೆ.
ಇತ್ತೀಚೆಗೆ ನಾನು ವೃದ್ಧಾಶ್ರಮವೊಂದಕ್ಕೆ ಭೇಟಿ ನೀಡಿದಾಗ ಅಲ್ಲಿದ್ದ ವೃದ್ಧರೊಬ್ಬರನ್ನು ಮಾತನಾಡಿಸಿದೆ. ಆಗ ಅಲ್ಲಿ ಆಶ್ರಯ ಪಡೆದಿರುವವರ‍್ಯಾರೂ ಅನಕ್ಷರಸ್ಥರಲ್ಲ, ಅವರ ಮಕ್ಕಳೂ ಕೂಡ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದಾರೆ ಎಂಬುದು ತಿಳಿಯಿತು. ಅಲ್ಲದೆ ಅಲ್ಲಿದ್ದ ಹಿರಿಯರೊಬ್ಬರು ‘ನಾನು ಶಕ್ತಿ ಇರುವವರೆಗೂ ನನ್ನ ಕುಟುಂಬಕ್ಕಾಗಿ ದುಡಿದೆ. ಈಗ ಮಕ್ಕಳು ನನ್ನನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮದಲ್ಲಿ ಬಿಟ್ಟಿದ್ದಾರೆ. ಇದು ನ್ಯಾಯವೇ?’ ಎಂದರು. ಈ ಪ್ರಶ್ನೆಗೆ ಉತ್ತರವಂತೂ ನನ್ನ ಬಳಿ ಇರಲಿಲ್ಲ.
ವೃದ್ಧಾಶ್ರಮಗಳಲ್ಲಿ ಹಿರಿಯರಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಇರುತ್ತವೆ. ಆದರೆ, ಕೇವಲ ಸೌಲಭ್ಯಗಳಿಂದ ಸಂತೋಷವಾಗಿರಲು ಸಾಧ್ಯವೇ? ಹಣದಿಂದ ಆನಂದ ದೊರಕಲು ಸಾಧ್ಯವೇ? ಖಂಡಿತ ಇಲ್ಲ. ಹಿಂದೆ ಹಿರಿಯರ ಸಲಹೆಯೊಂದಿಗೆ ನಡೆಯುತ್ತಿದ್ದ ಸಮಾಜ ಈಗ ಹಣದಿಂದ ನಡೆಯುತ್ತಿದೆ. ಪರಿಣಾಮ ಲಕ್ಷ ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುವ ಜನ ಹಣಕ್ಕೆ ಬೆಲೆ ನೀಡುತ್ತಾರೆಯೇವಿನಾ, ಅದು ತಂದೆ-ತಾಯಿಯೇ ಆಗಿರಲಿ ಪ್ರೀತಿಗೆ ಬೆಲೆ ನೀಡುವುದಿಲ್ಲ ಎಂಬುದು ಆ ವೃದ್ಧಾಶ್ರಮದಲ್ಲಿ ನನಗನಿಸಿದ್ದಂತೂ ನಿಜ.
ಹಣ ಕೊಟ್ಟು ಏನನ್ನು ಬೇಕಿದ್ದರೂ ಖರೀದಿಸ ಬಹುದು. ಆದರೆ, ಹಿರಿಯರ ಪ್ರೀತಿ, ಮನತುಂಬಿ ನಮಗೆ ಒಳಿತನ್ನು ಬಯಸಿ ಮಾಡುವ ಆಶೀರ್ವಾದವನ್ನು ಗಳಿಸಲು ಸಾಧ್ಯವೇ? ಖಂಡಿತ ಇಲ್ಲ. ವೃದ್ಧಾಶ್ರಮಗಳಲ್ಲಿ ಸಮಾನ ವಯಸ್ಕರು, ಸಮಾನ ಮನಸ್ಕರು ಇರುತ್ತಾರೆ. ಅವರೆಲ್ಲರನ್ನೂ ಮಾತನಾಡಿಸಿದಾಗ ಮನೆಗೆ ಆಧಾರವೇ ಹಿರಿಯರು ಅನಿಸುತ್ತದೆ. ಇಂತಹ ಆಧಾರವನ್ನೇ ವೃದ್ಧಾಶ್ರಮದಲ್ಲಿ ಬಿಟ್ಟರೆ, ಕುಟುಂಬಗಳು ನಡೆಯುವುದಾದರೂ ಹೇಗೆ?
ವರ್ಷಗಳೂ ಉರುಳಿದಂತೆ ಹಬ್ಬ ಆಚರಣೆಗಳು ಬದಲಾಗುತ್ತಿವೆ. ಇಂದು ಮಹಾಶಿವರಾತ್ರಿ, ನಾವು ಚಿಕ್ಕವರಿದ್ದಾಗ ಭಜನೆ, ದೇವರ ನಾಮ, ವಿಶಿಷ್ಟ ಆಚರಣೆಗಳಿಂದ ಹಬ್ಬ ಆಚರಿಸುತ್ತಿದ್ದೆವು. ಆದರೆ ಇಂದು ಟಿವಿ, ಸಿನಿಮಾಗಳನ್ನು ನೋಡುತ್ತ ಜಾಗರಣೆ ಹೆಸರಿನಲ್ಲಿ ಕಾಲ ಕಳೆಯುತ್ತಿದ್ದೇವೆ. ಕಾರಣವಿಷ್ಟೇ ಈ ಹಿಂದೆ ಹಬ್ಬಗಳು ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದವು. ಆದರೆ ಈಗ ಮನೆಯಲ್ಲಿ ಹಿರಿಯರೇ ಇಲ್ಲ. ಹಬ್ಬದ ನಿಯಮವೇ ಹೊಸ ಪೀಳಿಗೆಗೆ ಗೊತ್ತಿಲ್ಲ. ಹೀಗಿರುವಾಗ ಆಚರಣೆಗಳು ಬದಲಾಗುವುದು ಸಾಮಾನ್ಯ.
ಪ್ರತಿ ಮನೆಯಲ್ಲೂ ಹಿರಿಯರಿರ ಬೇಕು. ಅವರು ಮಕ್ಕಳು, ಮೊಮ್ಮಕ್ಕಳಿಗೆ ಮನಸಾರೆ ಹಾರೈಸಿ, ಉತ್ತಮ ಮಾರ್ಗ ದರ್ಶನ ನೀಡಿ ನೀತಿ ಪಾಠಗಳನ್ನು ಹೇಳಿ ಬೆಳೆಸಬೇಕು. ಆಶೀರ್ವದಿಸಿದ ಭೀಷ್ಮನೇ ತನ್ನ ಶಪತವನ್ನು ಬಿಟ್ಟು ಮಾತಿನ ಮೇಲೆ ನಿಂತರು ಎಂದ ಮೇಲೆ, ಮಕ್ಕಳು-ಮೊಮ್ಮಕ್ಕಳಿಗೆ ಹಿರಿಯರು ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ.





