ಲಕ್ಷ್ಮಿಕಾಂತ್ ಕೊಮಾರಪ್ಪ
ಬ್ರಿಟಿಷರ ಕಾಲದ ಕಬ್ಬಿಣದ ಸೇತುವೆ ತೆರವು; ನೂತನ ಸೇತುವೆ ನಿರ್ಮಾಣ ಕಾರ್ಯ ಶುರು
ಸೋಮವಾರಪೇಟೆ: ಮಡಿಕೇರಿ- ಹಾಸನ ನಡುವಿನ ರಾಜ್ಯ ಹೆದ್ದಾರಿಯಲ್ಲಿರುವ ಐಗೂರು ಬಳಿ ಕುಸಿಯುವ ಭೀತಿಯಲ್ಲಿದ್ದ ಬ್ರಿಟಿಷರ ಕಾಲದ ಕಬ್ಬಿಣದ ಸೇತುವೆಯನ್ನು ತೆರವುಗೊಳಿಸಿ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಈ ಐತಿಹಾಸಿಕ ಸೇತುವೆ ಇತಿಹಾಸದ ಪುಟ ಸೇರಿದೆ.
ಐಗೂರು ಗ್ರಾಮದ ಚೋರನ ಹೊಳೆಗೆ ಅಡ್ಡಲಾಗಿ ೧೮೩೭ರಲ್ಲಿ ಬ್ರಿಟಿಷರ ಆಡಳಿತದ ಅವಧಿಯ ಲಾರ್ಡ್ ಲೂಯಿಸ್ ಕಾಲದಲ್ಲಿ ಈ ಸೇತುವೆ ನಿರ್ಮಾಣಗೊಂಡಿತ್ತು. ಇದೀಗ ಈ ಸೇತುವೆಯನ್ನು ತೆರವುಗೊಳಿಸಿ ೧೦ ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಸೇತುವೆಯನ್ನು ಒಡೆಯಲು ಪ್ರಾರಂಭವಾಗಿ ೧೫ ದಿನಗಳು ಕಳೆದಿದ್ದು, ತೆರವು ಕಾರ್ಯವೇ ಆಮೆಗತಿಯಲ್ಲಿ ಸಾಗಿದೆ. ಕಬ್ಬಿಣ ಸೇತುವೆ ಗಟ್ಟಿಮುಟ್ಟಾಗಿದ್ದು, ಅದರ ತೆರವು ಕಾರ್ಯಾಚರಣೆ ಈಗ ಎಲ್ಲರನ್ನೂ ಸುಸ್ತು ಹೊಡೆಸಿದೆ.
ಕಬ್ಬಿಣದ ಸೇತುವೆ ಬಗ್ಗೆ ಗ್ರಾಮದ ಕೆಲವರಿಗೆ ಭಾವನಾತ್ಮಕ ನೆನಪುಗಳಿವೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಈಸೇತುವೆಗೆ ಅಳವಡಿಸಲಾದ ಕಬ್ಬಿಣದ ಸಾಮಗ್ರಿಗಳು ಇನ್ನೂ ತುಕ್ಕು ಹಿಡಿಯದೇ ಬಲಿಷ್ಠವಾಗಿವೆ. ಸೇತುವೆಗೆ ಅಳವಡಿಸಲಾ ಗಿರುವ ಎಲ್ಲ ಸಾಮಗ್ರಿಗಳನ್ನು ಕಟ್ಟರ್ ಮತ್ತು ಏರ್ ಕಂಪ್ರೆಷರ್ ನಿಂದ ತುಂಡರಿಸಲು ಬಹಳಷ್ಟು ಪ್ರಯಾಸಪಡಬೇಕಾಗಿದೆ.
ಭೇತ್ರಿ, ಹರದೂರು, ಬಲಮುರಿ, ಮಾದಾಪುರ, ಹಟ್ಟಿ ಹೊಳೆ, ಕೂಡಿಗೆ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ನಿರ್ಮಾಣಗೊಂಡ ನೂತನ ಸೇತುವೆ ಬಳಿ ಹಳೆಯ ಸೇತುವೆಯನ್ನು ಉಳಿಸಿಕೊಳ್ಳಲಾಗಿದೆ. ಹೀಗಾಗಿ ಇಲ್ಲಿಯೂ ಸರ್ಕಾರದ ಮಟ್ಟ ದಲ್ಲಿ ಸೇತುವೆಯ ಎರಡೂ ಬದಿಗಳಲ್ಲಿ ಜಾಗವನ್ನು ಹೊಂದಿರುವವರಿಗೆ ಸೂಕ್ತ ಪರಿಹಾರ ನೀಡಿ ಸೇತುವೆ ನಿರ್ಮಾಣ ಮಾಡ ಬಹುದಿತ್ತು. ಆದರೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಇಚ್ಛಾಶಕ್ತಿಯ ಕೊರತೆಯಿಂದ ಶತಮಾನದ ಸೇತುವೆ ಇತಿಹಾಸದ ಪುಟ ಸೇರಿದೆ.
ನೂತನ ಸೇತುವೆ ಕಾಮಗಾರಿ ಪ್ರಾರಂಭಿಸುವುದಕ್ಕೆ ಮೊದಲೇ ಸಂಬಂಧಪಟ್ಟ ಅಭಿಯಂತರರು ಮತ್ತು ಗುತ್ತಿಗೆದಾರರು ಪರ್ಯಾಯ ರಸ್ತೆ ಬಗ್ಗೆ ಗಮನಹರಿಸಿಲ್ಲ. ಕಾಜೂರು- ಯಡವಾರೆ ಮೂಲಕ ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳುವ ರಸ್ತೆಯನ್ನು ನಿರ್ವಹಣೆ ಮಾಡಲು ಮುಂದಾಗಿಲ್ಲ. ತೀರಾ ಇಕ್ಕಟ್ಟಾದ ಗುಂಡಿ ಬಿದ್ದ ಈರಸ್ತೆಯಲ್ಲಿ ವಾಹನ ಸವಾರರು ಸಂಚರಿಸಬೇಕಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು ನೂರು ವರ್ಷಗಳಿಗೂ ಹೆಚ್ಚು ಹಳೆಯ ಕಬ್ಬಿಣದ ಸೇತುವೆಯ ನಿರ್ವಹಣೆಯಲ್ಲಿನ ಲೋಪದಿಂದಾಗಿ ಅದನ್ನುಕಳೆದುಕೊಳ್ಳುವಂತಾಯಿತು. ವಾಸ್ತವವಾಗಿ, ಸೇತುವೆಯ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಪರ್ಯಾಯ ವ್ಯವಸ್ಥೆ ಮಾಡಿದ್ದರೆ, ಈ ಕಬ್ಬಿಣದ ಸೇತುವೆ ಇನ್ನೂ ಅರ್ಧ ಶತಮಾನಗಳ ಕಾಲ ಸುಸ್ಥಿತಿಯಲ್ಲಿ ಉಳಿದು ಜನರಿಗೆ ಅನುಕೂಲವಾಗುತ್ತಿತ್ತು. ಸೂಕ್ತ ನಿರ್ವಹಣೆ ಮತ್ತು ಮುಂಜಾಗ್ರತಾ ಕ್ರಮಗಳ ಕೊರತೆಯೇ ಈ ಹಳೆಯ ಸೇತುವೆಯ ಅಂತ್ಯಕ್ಕೆ ಕಾರಣವಾಗಿದೆ ಎಂಬುದು ಇಲ್ಲಿನ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
” ಸೋಮವಾರಪೇಟೆ ಪಟ್ಟಣದ ಕಕ್ಕೆಹೊಳೆ ಸೇತುವೆ ಮತ್ತು ಐಗೂರು ಕಬ್ಬಿಣದ ಸೇತುವೆ ಬಗ್ಗೆ ವಿಶೇಷ ಕಾಳಜಿ ವಹಿಸಿ ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಿ ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕಕ್ಕೆಹೊಳೆ ಸೇತುವೆ ಈಗಾಗಲೇ ಲೋಕಾರ್ಪಣೆಯಾಗಿದೆ. ಕಬ್ಬಿಣದ ಸೇತುವೆ ಕಾಮಗಾರಿ ಮುಂದಿನ ೬ ತಿಂಗಳೊಳಗೆ ಖಂಡಿತ ಪೂರ್ಣಗೊಳ್ಳಲಿದೆ.”
-ಡಾ.ಮಂಥರ್‌ಗೌಡ, ಶಾಸಕರು, ಮಡಿಕೇರಿ ಕ್ಷೇತ್ರ
ಇರ್ಂಬು ಪಾಲ(ಕಬ್ಬಿಣ ಸೇತುವೆ )ಎಂದೇ ಪ್ರಸಿದ್ಧ..!:
ಐಗೂರು ಗ್ರಾಮದಲ್ಲಿ ಮಲಯಾಳಂ ಹಾಗೂ ತಮಿಳು ಭಾಷಿಕರ ಪ್ರಾಬಲ್ಯ ಹೆಚ್ಚಿತ್ತು. ಮಲಯಾಳಂ ಭಾಷಿಕರಿಗೆ ಸೇರಿದ ಹೋಟೆಲ್ ಮತ್ತು ಅಂಗಡಿಗಳು ಇಲ್ಲಿ ಇದ್ದವು. ವ್ಯಾವಹಾರಿಕವಾಗಿ ಭಾಷೆಯನ್ನುಬಳಸುವಾಗ ಕಬ್ಬಿಣ ಸೇತುವೆ ಎಂಬ ಪದದ ಬದಲಾಗಿ ಇರ್ಂಬ್ ಪಾಲ (ಕಬ್ಬಿಣದ ಸೇತುವೆ) ಎಂದೇ ಕರೆಯುತ್ತಿದ್ದರು. ಇಂದಿಗೂ ಮಡಿಕೇರಿ ಡಿಪೋಗೆ ಸೇರಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣದ ಟಿಕೆಟ್‌ಗಳಲ್ಲಿ ಕಬ್ಬಿಣ ಸೇತುವೆ ಎಂದೇ ನಮೂದಾಗಿದೆ. ಇದೀಗ ಸೇತುವೆ ತೆರವಾಗುತ್ತಿದ್ದು, ಇರ್ಂಬು ಪಾಲ ಇನ್ನು ಕೇವಲ ನೆನಪು ಮಾತ್ರ
” ಹಳೆಯ ಸೇತುವೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಹೊಸ ಸೇತುವೆಯ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಆದರೂ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ನೂತನ ಸೇತುವೆಯುಕನಿಷ್ಠ ೫೦ ವರ್ಷಗಳ ದೀರ್ಘಾವಧಿಯವರೆಗೂ ಗಟ್ಟಿಯಾಗಿ ಉಳಿಯುತ್ತದೆಯೇ ಎಂಬ ಪ್ರಶ್ನೆಕಾಡುತ್ತಿದೆ. ಈಗಿನ ಗುತ್ತಿಗೆದಾರರು ಈ ಹಿಂದೆ ನಿರ್ಮಿಸಿದಂತಹ ಗಟ್ಟಿಮುಟ್ಟಾದ ಸೇತುವೆ ನಿರ್ಮಿಸಲು ಒತ್ತು ನೀಡಲಿ.”
-ಜಿ.ಕೆ.ಅವಿಲಾಶ್ ಕಾಜೂರು, ಐಗೂರು




