Mysore
21
haze

Social Media

ಬುಧವಾರ, 24 ಡಿಸೆಂಬರ್ 2025
Light
Dark

ಸ್ವಾಭಿಮಾನಿಯ ಸಾಮರಸ್ಯದ ಬದುಕು; ಮಾಸದ ನೆನಪು

ಡಾ.ಎನ್.ಎಸ್.ಮೋಹನ್

ನಾಳೆ ರಾಜಕೀಯ ಮುತ್ಸದ್ಧಿ ವಿ.ಶ್ರೀನಿವಾಸ ಪ್ರಸಾದ್ ಅವರ ಸ್ಮರಣೆ

‘ನನಗೆ ರಾಜಕೀಯವು ಒಂದು ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯಾಗಿದೆ’ ಎನ್ನುವ ಮೂಲಕ ತಮ್ಮ ಬದುಕಿನ ಬಹುಭಾಗವನ್ನು ರಾಜಕೀಯದಲ್ಲೇ ಕಳೆದ ಹಿರಿಯ ರಾಜಕೀಯ ಮುತ್ಸದ್ದಿ ವಿ.ಶ್ರೀನಿವಾಸ ಪ್ರಸಾದ್. ಇವರು ಬದುಕಿದ್ದಷ್ಟೂ ದಿನಗಳು ವೈಜ್ಞಾನಿಕ ಚಿಂತನೆ ಮತ್ತು ಸಾಮರಸ್ಯದ ಮನೋಭಾವದಿಂದಲೇ ಸಮಾಜವನ್ನು ಪ್ರಭಾವಿಸಿದವರು.

ಶ್ರೀನಿವಾಸ ಪ್ರಸಾದ್ ಅವರು ಮೈಸೂರಿನ ಅಶೋಕಪುರಂನಲ್ಲಿ ೧೯೪೭ರ ಆಗಸ್ಟ್ ೬ರಂದು ಡಿ.ವಿ.ಪುಟ್ಟಮ್ಮ ಮತ್ತು ಎಂ.ವೆಂಕಟಯ್ಯ ದಂಪತಿಯ ಪುತ್ರರಾಗಿ ಜನಿಸಿದರು. ಇವರ ಪೂರ್ವಿಕರು ವೀಳ್ಯದೆಲೆ ಕೃಷಿಕರಾಗಿದ್ದವರು. ಬಡತನದ ನಡುವೆಯೂ ತಂದೆ ಮೆಟ್ರಿಕ್ಯುಲೇಷನ್ ಪಾಸ್ ಮಾಡಿ ರೆವಿನ್ಯೂ ಇನ್‌ಸ್ಪೆಕ್ಟರ್ ಆಗಿದ್ದವರು. ಹಾಗಾಗಿ ಪ್ರಸಾದ್ ಅವರಿಗೆ ಬಾಲ್ಯದಿಂದಲೇ ಉತ್ತಮ ಮಾರ್ಗದರ್ಶನ ದೊರಕಿತು. ಜೊತೆಗೆ ಇವರು ೧೯೬೨ರಿಂದ ೧೯೭೨ರವರೆಗೆ ಆರ್‌ಎಸ್‌ಎಸ್, ಜನಸಂಘ ಮುಂತಾದ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವುಗಳ ಪ್ರಭಾವವೂ ಇವರ ಮೇಲಾಯಿತು.

ಪ್ರಸಾದ್ ಅವರ ಕುಟುಂಬದ ಹಿನ್ನೆಲೆ ಮತ್ತು ಅವರಲ್ಲಿದ್ದ ಸಂಘಟನಾ ಮನೋಭಾವ ಹಾಗೂ ಬಾಲ್ಯದಿಂದಲೇ ರೂಢಿಸಿಕೊಂಡ ಮೌಲ್ಯಗಳಾದ ಸಮಾನತೆ ಮತ್ತು ಸಾಮ ರಸ್ಯವನ್ನು ಬದುಕಿನ ಕಟ್ಟಕಡೆಯವರೆಗೂ ಉಳಿಸಿಕೊಂಡು ಮುಂದಿನ ತಲೆಮಾರಿಗೂ ಸಾರಿ ಹೋದರು. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಸಜೀವ ದಹನ ಮಾಡಿದ ಘಟನೆಯನ್ನು ನೋಡಿದ ಪ್ರಸಾದ್ ಅವರು ಇಂತಹ ಘಟನೆಗಳು ಮರುಕಳಿಸಬಾರದು ಎಂಬ ದೃಷ್ಟಿಯಿಂದ ಬಂಡಾಯದ ಜೊತೆಗೆ ಸಾಮರಸ್ಯದ ಮನೋಭಾವ ಬೆಳೆಸಿಕೊಂಡರು.

‘ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ, ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯ’ ಎನ್ನುವ ಬಸವಣ್ಣನವರ ವಚನದ ಸಾರವನ್ನು  ತಮ್ಮೊಳಗೆ ಅಳವಡಿಸಿ ಕೊಂಡಿದ್ದವರು. ಇದಕ್ಕೆ ಪೂರಕವಾಗಿ ಮೌಢ್ಯ ಮತ್ತು ಅನಿಷ್ಟ ಆಚರಣೆಗಳ ವಿರುದ್ಧ ವೈಜ್ಞಾನಿಕ ಚಿಂತನೆಗಳನ್ನು ಬಿತ್ತುತ್ತಿದ್ದ ಬಿ.ಬಸವಲಿಂಗಪ್ಪ ಅವರ ಸಾಮಾಜಿಕ ಹೋರಾಟದಿಂದ ಪ್ರೇರಣೆ ಗೊಂಡರು. ಅವರಿಂದ ಪ್ರಭಾವಿತರಾದ ಪ್ರಸಾದ್ ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುತ್ತಿದ್ದವರು.

‘ಬಹಳಷ್ಟು ಜನ ವಿದ್ವಾಂಸರು ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ. ಅಥವಾ ಅಂಬೇಡ್ಕರ್ ವಿಚಾರಗಳ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಅಂಬೇಡ್ಕರ್ ಹೇಳಿದ ವಿಚಾರಗಳನ್ನು ಮನದಟ್ಟು ಮಾಡಿಕೊಂಡು, ಬದುಕಿನಲ್ಲಿ ಅಳವಡಿಸಿಕೊಂಡು ಅದರಂತೆ ನಡೆದುಕೊಳ್ಳುವವರು ತೀರಾ ಕಡಿಮೆ’ ಎಂದು ನೊಂದುಕೊಳ್ಳುತ್ತಿದ್ದರು. ಪ್ರಸಾದ್ ಅವರು ಯಾವುದೇ ವೇದಿಕೆಯಲ್ಲಾಗಲಿ ಕವಿ ಸಿದ್ದಲಿಂಗಯ್ಯ ಅವರು ಬರೆದಿರುವ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ’ ಗೀತೆಯನ್ನು ಕೇಳುತ್ತಿದ್ದಂತೆ ಭಾವುಕರಾಗುತ್ತಿದ್ದರು. ಕಾರಣ ಬಾಬಾ ಸಾಹೇಬರ ಬದುಕು ಬರಹ ಸಂದೇಶ ಅದರಂತೆ ನಡೆಯದ ಭಾರತೀಯರ ನಡೆಗಳನ್ನು ನೆನೆದು ದುಃಖಿಸುತ್ತಿದ್ದರು. ಭಾರತೀಯರಲ್ಲಿ ಇರುವ ಲೋಪದೋಷಗಳನ್ನು ಸರಿಮಾಡಬೇಕು.

ಎಲ್ಲರೂ ಸಾಮರಸ್ಯದಿಂದ ಸಹಬಾಳ್ವೆಯ ಜೀವನ ನಡೆಸಬೇಕು ಎಂಬುದು ಬಾಬಾ ಸಾಹೇಬರ ನಿಲುವಾಗಿತ್ತು. ಇದನ್ನು ಅರ್ಥೈಸಿಕೊಂಡಿದ್ದ ಪ್ರಸಾದ್ ಅವರು ಆ ಸಂದೇಶದಂತೆ ಬದುಕಿ ಬಾಳಿದವರು. ಇವರು ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಆ ಸಂದರ್ಭದಲ್ಲಿ ‘ನನ್ನ ವೃತ್ತಿ ಶ್ರೇಷ್ಠ’ ಎಂಬ ವಿಚಾರ ಕುರಿತು ವಿಚಾರಸಂಕಿರಣ ಏರ್ಪಡಿಸಿ ವೈದ್ಯರು, ಇಂಜಿನಿಯರುಗಳು, ವಕೀಲರು, ರಾಜಕಾರಣಿಗಳು, ಕಾರ್ಮಿಕರು, ರೈತರ ವೃತ್ತಿಯ ಶ್ರೇಷ್ಠತೆಯ ಬಗ್ಗೆ ಜನರಿಗೆ ಮನದಟ್ಟಾಗುವಂತೆ ಮಾತನಾಡಿದ್ದರು. ಅಲ್ಲಿಂದ ಪ್ರಸಾದ್ ಅವರು ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಆ ವೃತ್ತಿಯನ್ನು ಶ್ರೇಷ್ಠವಾಗಿಯೇ ನಿರ್ವಹಿಸುತ್ತೇನೆ ಎಂದು ನಿರ್ಧಾರ ಮಾಡಿದರು. ಅದರಂತೆ ಸಾಧಿಸಿದರು.

ಸದಾ ಸಾಮರಸ್ಯಕ್ಕೆ ಅಂಬಲಿಸುತ್ತಿದ್ದ ಇವರು ‘ಸಾಮರಸ್ಯ’ ಎಂದರೆ ‘ನಾವೆಲ್ಲರೂ ಒಂದು’ ಎಂಬ ಭಾವನೆಯನ್ನು ಮೂಡಿ ಸುವುದು. ಇಂದು ಮನಸ್ಸುಗಳನ್ನು ಒಟ್ಟುಗೂಡಿಸುವುದು ಬಹಳ ಮುಖ್ಯವಾದ ಕೆಲಸ ಏಕೆಂದರೆ ಮನಸ್ಸುಗಳು ಹತ್ತಿರವಾದರೆ ಮಾತ್ರ ಅಲ್ಲಿ ಸಾಮರಸ್ಯ ನಿರ್ಮಾಣವಾಗುತ್ತದೆ ಎಂಬುದನ್ನು ಪ್ರಸಾದ್ ಅವರು ಅಂತಹ ಕೆಲಸಗಳನ್ನು ಬಿಡುವಿಲ್ಲದೆ ಮಾಡುತ್ತಿದ್ದರು.

ಪ್ರಸಾದ್ ಅವರು ಕಂದಾಯ ಸಚಿವರಾಗಿದ್ದಾಗ ಶಾಸಕರಾಗಿದ್ದ ಪುಟ್ಟಣ್ಣಯ್ಯ ಅವರು ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡುತ್ತಾ ‘ಎಲ್ಲ ಸಮುದಾಯದವರಿಗೂ ಜಾತಿವಾರು ಸ್ಮಶಾನ ಮಂಜೂರು ಮಾಡಬೇಕು’ ಎಂಬ ಬೇಡಿಕೆಯಿಡುತ್ತಾರೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್ ‘ನಾವು ಬದುಕಿರುವಾಗಲೂ ಜಾತಿಯ ಕಾರಣಕ್ಕೆ ಕೂಡಿ ಬಾಳುವುದಿಲ್ಲ, ಸತ್ತ ಮೇಲಾದರೂ ಜಾತಿ ಬಿಟ್ಟು ಒಂದಾಗೋಣ’ ಎಂದು ಜಾತಿವಾರು ಸ್ಮಶಾನದ ವಿರುದ್ಧ ಗುಡುಗಿದ್ದರಲ್ಲದೆ, ಎಲ್ಲ ವರ್ಗದ ಜನರು ಒಂದೇ ಸ್ಮಶಾನ ಉಪಯೋಗಿಸಬೇಕೆಂದು ಹೇಳಿದ್ದರು. ಆ ನಂತರವೇ ಸಾರ್ವಜನಿಕ ಸ್ಮಶಾನಗಳು ನಿರ್ಮಾಣವಾದವು. ಆ ಮೂಲಕ ಪ್ರಸಾದ್ ಅವರು ಸಮಾಜಕ್ಕೆ ಸಾಮರಸ್ಯದ ಸಂದೇಶ ರವಾನೆ ಮಾಡಿದ್ದರು. ಪ್ರಸಾದ್ ಅವರು ಕಂದಾಯ ಸಚಿವರಾಗಿದ್ದಾಗ ಅನೇಕ ಮಹತ್ವದ ಕಾರ್ಯಗಳನ್ನು ರೂಪಿಸಿದ್ದಾರೆ. ಕಂದಾಯ ಅದಾಲತ್, ಪಿಂಚಣಿ ಆದಾಲತ್, ಮನಸ್ವಿ ಮತ್ತು ಮೈತ್ರಿ ಯೋಜನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಶಾಸಕರಾಗಿ ಸೇವೆ ಸಲ್ಲಿಸಿದ ೮ ವರ್ಷಗಳಲ್ಲಿ ಒಂದೇ ಒಂದು ಜಾತಿ ಗಲಭೆಯೂ ಆಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಶಾಂತಿ ಸೌಹಾರ್ದತೆ ಮೂಡಿಸಿದ್ದರು. ಒಂದು ವೇಳೆ ಆ ರೀತಿಯ ಸಮಸ್ಯೆಯೇನಾದರು ಕಂಡುಬಂದರೆ ಗ್ರಾಮ ಮಟ್ಟದಲ್ಲೇ ಬಗೆಹರಿಸಿ ರಾಜಿ ಮಾಡಿ ಸುತ್ತಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಮೈಸೂರಿನ ಪಡುವಾರಹಳ್ಳಿಯಲ್ಲಿ ನಗರಾಭಿವೃದ್ಧಿಗೆ ಮೀಸಲಿಟ್ಟಿದ್ದ ಜಾಗವನ್ನು ಹೆಣ್ಣುಮಕ್ಕಳಿಗಾಗಿ ಕಾಲೇಜು ಮತ್ತು ವಸತಿಗೃಹಗಳನ್ನು ನಿರ್ಮಾಣ ಮಾಡಿಸಲು ಕಾರಣಕರ್ತರಾದರು.

ಮೈಸೂರಿನ ಸಿದ್ಧಾರ್ಥನಗರದಲ್ಲಿ ಹೊಸ ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣಗಳ ನಿರ್ಮಾಣಕ್ಕೆ ಪ್ರಮುಖ ಪಾತ್ರವಹಿಸಿದ್ದಾರೆ. ಮೈಸೂರಿನ ಮಧ್ಯ ಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಹಾರ್ಡಿಂಜ್ ವೃತ್ತದಲ್ಲಿ ಜಯಚಾಮರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಿಸಿದ್ದಾರೆ. ಬರಗಾಲದ ಸಂದರ್ಭದಲ್ಲೂ ದಸರಾವನ್ನು ವಿಜೃಂಭಣೆಯಿಂದ ನೆರವೇರಿಸಿ ಪ್ರಗತಿಪರ ರೈತರಾದ ಮಲಾರ ಪುಟ್ಟಯ್ಯ ಅವರಿಂದ ದಸರಾ ಉದ್ಘಾಟನೆ ಮಾಡಿಸಿ ರೈತ ಸಮುದಾಯಕ್ಕೆ ಗೌರವ ತಂದುಕೊಟ್ಟರು. ಅನಂತಕುಮಾರ್ ಹೆಗಡೆ ಮತ್ತು ಗೋ.ಮಧುಸೂದನ್ ಅವರು ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಹೇಳಿಕೆ ಕೊಟ್ಟಾಗ ಅದಕ್ಕೆ ಸಮರ್ಪಕವಾದ ಉತ್ತರವನ್ನು ವಿಧಾನಸೌಧದ ಅಧಿವೇಶನದಲ್ಲಿ ನೀಡಿದರು. ನಂಜನಗೂಡು ದೇವಸ್ಥಾನದ ಬಳಿ ವಾಲ್ಮೀಕಿ, ಉಪ್ಪಾರ, ಮೇದಾರ, ಮಡಿವಾಳ, ಮುಸ್ಲಿಂ… ಹೀಗೆ ಎಲ್ಲ ಸಮುದಾಯಗಳಿಗೂ ೧೦ ಗುಂಟೆ ಜಾಗವನ್ನು ಕೊಡಿಸಿ ಸಾಮರಸ್ಯಕ್ಕೆ ಅವಕಾಶ ಮಾಡಿಕೊಟ್ಟರು.

೨೦೦೬ರಲ್ಲಿ ‘ಬದ್ಧನೆಡೆಗೆ ಮರಳಿ ಮನೆಗೆ’, ‘ಅಸ್ಪೃಶ್ಯತೆ ಹಿಂದೂ ಧರ್ಮಕ್ಕೆ ಅಂಟಿದ ಕಳಂಕ’ ಎಂಬ ಘೋಷವಾಕ್ಯದಡಿ ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಹೋರಾಟ ರೂಪಿಸಿದರು. ಮೈಸೂರಿನ ಅಶೋಕಪುರಂ ಮತ್ತು ಚಾಮರಾಜನಗರದಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಸಹಾಯ ಮಾಡಿದರು. ಸಂಸದರ ನಿಧಿಯಿಂದ ೨೦೦೨ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ ಸ್ಥಾಪಿಸಿದರು. ಬುದ್ಧ, ಬಸವ, ಅಂಬೇಡ್ಕರ್ ಹಚ್ಚಿದ ಸಾಮರಸ್ಯದ ಬೆಳಕನ್ನು ಎಲ್ಲ  ಸಮುದಾಯಗಳಿಗೂ ಪಸರಿಸಲು ಪ್ರಯತ್ನಪಟ್ಟರು. ಅದರಲ್ಲಿ ಯಶಸ್ವಿಯೂ  ಆದವರು. ಆದ್ದರಿಂದಲೇ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅವರು ‘ಶ್ರೀನಿವಾಸ ಪ್ರಸಾದ್ ಅವರು ಒಬ್ಬ ರಾಜಕಾರಣಿ ಅಷ್ಟೇ ಅಲ್ಲ ಒಬ್ಬ ರಾಷ್ಟ್ರಕಾರಣಿ ಕೂಡ’ ಎಂದಿದ್ದಾರೆ.ಹಾಗೆಯೇ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ‘ಶ್ರೀನಿವಾಸ ಪ್ರಸಾದ್ ಅವರು ಕಳಂಕ ರಹಿತ ರಾಜಕಾರಣಿ ಇವರಿಗೊಂದು ಸಲಾಂ’ ಎಂದು ಮೆಚ್ಚುಗೆಯ ಮಾತನ್ನು ಹೇಳಿದ್ದಾರೆ. ಜನಸಾಮಾನ್ಯರ ಬದುಕಿನಲ್ಲಿ ಪ್ರಬಲವಾದ ಬದಲಾವಣೆಗಳನ್ನು ಕಾಣಬೇಕೆಂದು ಬಯಸಿದ ಸ್ವಾಭಿಮಾನಿ ಪ್ರಸಾದ್ ಅವರು ತಮ್ಮ ರಾಜಕೀಯ ವೃತ್ತಿಯನ್ನು ಶ್ರೇಷ್ಠವಾಗಿಯೇ ನಿರ್ವಹಿಸಿ ಮುಂದಿನ ತಲೆಮಾರಿಗೆ ಮಾದರಿಯಾಗಿದ್ದಾರೆ. ಇಂತಹ ಧೀಮಂತ ನಾಯಕರ ಮೊದಲನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ ಇವರ ಸ್ವಾಭಿಮಾನದ ಸಾಮರಸ್ಯದ ಬದುಕು ಮಾಸದ ನೆನಪುಗಳಾಗಿ ಮುಂದಿನ ಪೀಳಿಗೆಗೂ ಆದರ್ಶವಾಗಲಿ.

ಯಾವುದೇ ಸಮುದಾಯವಾಗಲಿ ಶೋಷಣೆಗೆ ಒಳಗಾಗಿದೆ ಎಂದರೆ ಶೋಷಣೆ ಮತ್ತು ಅನ್ಯಾಯಕ್ಕೆ ಒಳಗಾದವರ ಪರ ಧ್ವನಿಯಾಗುತ್ತಿದ್ದರು. ಶೋಷಣೆ ಮಾಡುವವರನ್ನು ಅಥವಾ ಅನ್ಯಾಯ ಮಾಡುವವರನ್ನು ಪ್ರಶ್ನಿಸುವುದರ ಜೊತೆಗೆ ಅವರಿಗೆ ತಮ್ಮ ತಪ್ಪಿನ ಅರಿವನ್ನು ಮೂಡಿಸಿ ಪರಿವರ್ತನೆಯ ಮಾರ್ಗ ತೋರಿಸುತ್ತಿದ್ದರು. ಅನಾಗರಿಕತೆಯ ವಿರುದ್ಧ ದನಿ ಎತ್ತುತ್ತಿದ್ದ ಪ್ರಸಾದ್ ಅವರು ಸಮ ಸಮಾಜವನ್ನು, ಮೌಢ್ಯರಹಿತ ಸಮಾಜವನ್ನು, ವೈಜ್ಞಾನಿಕತೆಯ ಸಮಾಜವನ್ನು, ಮೌಲ್ಯಯುತ ಸಮಾಜವನ್ನು ಸೃಷ್ಟಿ ಮಾಡೋಣ. ಯಾರೇ ಆಗಲಿ ಯಾವ ಜಾತಿಯೇ ಆಗಲಿ ನಾವೆಲ್ಲರೂ ಮನುಷ್ಯರು ಮತ್ತು ಭಾರತೀಯರು ಎನ್ನುತ್ತಿದ್ದರು.

Tags:
error: Content is protected !!