Mysore
23
scattered clouds

Social Media

ಸೋಮವಾರ, 12 ಜನವರಿ 2026
Light
Dark

ರಾಜಕೀಯ ಬದುಕು ಬಟ್ಟೆ ಎರಡನ್ನೂ ಮಾರ್ಪಡಿಸಿದ ಮಾರ್ಗದರ್ಶಿ

ಆಂದೋಲನದೊಂದಿಗೆ  ಎಸ್‌ಎಂಕೆ ಒಡನಾಟದ ನೆನಪು ಹಂಚಿಕೊಂಡ ಡಿಕೆಶಿ

ಕರ್ನಾಟಕ ರಾಜಕಾರಣದಲ್ಲಿ ಎಸ್. ಎಂ. ಕೃಷ್ಣ ದೈತ್ಯ ಪ್ರತಿಭೆ. ಅವರ ಗರಡಿಯಲ್ಲಿ ಬೆಳೆದ ಡಿ. ಕೆ. ಶಿವಕುಮಾರ್ ಎಸ್‌ಎಂಕೆ ಅವರಿಂದ ರಾಜಕೀಯವಾಗಿ ಪ್ರಭಾವಿತರಾದವರು ಹಾಗೂ ಕೌಟುಂಬಿಕ ನೆಲೆಯಲ್ಲೂ ಸಂಬಂಧ ಹೊಂದಿರುವವರು. ಅಂಥ ಮೇರು ವ್ಯಕ್ತಿತ್ವದ ಎಸ್. ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ಹಾಲಿ ಕೆಪಿಸಿಸಿ ಅಧ್ಯಕ್ಷರೂ ಉಪಮುಖ್ಯಮಂತ್ರಿಗಳೂ ಆಗಿರುವ ಡಿಕೆಶಿ ಅವರಿಗೆ, ಎಸ್. ಎಂ. ಕೃಷ್ಣ ಅವರೊಂದಿಗಿನ ಒಡನಾಟವು ಅವರ ದಿರಿಸನ್ನು ತೊಡುವ ವಿಧಾನವನ್ನು ಬದಲಾಯಿಸಿದ್ದಷ್ಟೇ ಅಲ್ಲ ಅವರ ರಾಜಕೀಯದ ದಾರಿಯನ್ನೂ ಬದಲಾಯಿಸಿತು. ಡಿಕೆಶಿ ಆವರೇ ಹೇಳುವಂತೆ, ಎಸ್‌ಎಂಕೆ ತಮ್ಮ ಉಡುಗೆಯ ಶೈಲಿಯನ್ನು ಬದಲಾಯಿಸಲು ಸೂಚಿಸುವವರೆಗೂ ಡಿಕೆಶಿ ಯಾವಾಗಲೂ ಸಡಿಲವಾದ ಶರ್ಟ್‌ಗಳಲ್ಲಿಯೇ ಓಡಾಡುತ್ತಿದ್ದರು.

 

ನಿರೂಪಣೆ: ರಶ್ಮಿ ಕೋಟಿ
ಅದು ೧೯೯೯ರ ಸಮಯ. ನಾನು ಅದಾಗಲೇ ಮಂತ್ರಿಯಾಗಿದ್ದೆ. ಆದರೆ ಯಾವಾಗಲೂ ದೊಗಳೆ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆ. ಒಮ್ಮೆ ಎಸ್‌ಎಂಕೆ ಮೈಸೂರಿನ ತಮ್ಮ ಗೆಳೆಯ ಆರ್. ಟಿ. ನಾರಾಯಣ್ ಅವರನ್ನು ಕರೆಸಿ, ‘ರೀ, ಇವನಿಗೆ ಒಳ್ಳೇ ಬಟ್ಟೆ ಹೊಲಿಸಿ ಕೊಡಬೇಕು’ ಎಂದು ಹೇಳಿದರು. ಸಣ್ಣ ಸಣ್ಣ ವಿವರಗಳಿಗೂ ಗಮನ ಹರಿಸುವುದಕ್ಕೆ ಹೆಸರುವಾಸಿಯಾದ ಎಸ್‌ಎಂಕೆ, ತಮ್ಮ ವೈಯಕ್ತಿಕ ಟೈಲರ್‌ನ್ನು ಮುಂಬೈನಿಂದ ಬೆಂಗಳೂರಿಗೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದರು.

ಮುಂಬೈಯಿಂದ ದರ್ಜಿಯನ್ನು ಕರೆಸಿ ನನಗೆ ೧೦ ಜೊತೆ ಬಟ್ಟೆಗಳನ್ನು ಹೊಲಿಸಿಕೊಡುವ ಮೂಲಕ ನನ್ನ ವಾರ್ಡ್ರೋಬ್ ಅನ್ನೇ ಮಾರ್ಪಡಿಸಿಬಿಟ್ಟರು.

ನಾನು ಹೊಸ ಬಟ್ಟೆ ಧರಿಸಿದಾಗ, ಅಭೂತಪೂರ್ವ ಆತ್ಮವಿಶ್ವಾಸವನ್ನು ಅನುಭವಿಸಿದೆ. ಅಂದು ಬದಲಾಗಿದ್ದು ನನ್ನ ದಿರಿಸು ಮಾತ್ರ ಅಲ್ಲ – ಅದು ನನ್ನ ಸಂಪೂರ್ಣ ನಡವಳಿಕೆಯನ್ನೇ ಬದಲಾಯಿಸಿತು. ಒಳಗಿನಿಂದ ಹೊರಹೊಮ್ಮಿದ ಆತ್ಮವಿಶ್ವಾಸದೊಂದಿಗೆ ನನ್ನನ್ನೇ ನಾನು ಹೊಸದಾಗಿ ಕಂಡುಕೊಂಡೆ.

ಆ ಕ್ಷಣದಿಂದ ವರ್ಷಗಳು ಕಳೆದಿವೆ, ಆದರೆ ನಾನು ಅವರಿಂದ ಕಲಿತ ಪಾಠವನ್ನು ಇನ್ನೂ ನೆನಪಿಸಿಕೊಳ್ಳುತ್ತೇನೆ. ನಿಜವಾದ ಸೊಬಗು ನಾವು ಏನನ್ನು ಹೇಗೆ ಧರಿಸುತ್ತೇವೆ ಎಂಬುದರ ಬಗ್ಗೆ ಮಾತ್ರವಲ್ಲ, ಆದರೆ ನಾವು ಇತರರನ್ನು ಹೇಗೆ ಭಾವಿಸುತ್ತೇವೆ ಎಂಬುದರ ಬಗ್ಗೆ. ಆದರೆ ಬಟ್ಟೆಗಿಂತ ಹೆಚ್ಚಾಗಿ ನನ್ನ ಹೃದಯವನ್ನು ಸ್ಪರ್ಶಿಸಿದ್ದು ಅವರು ನನ್ನ ಬಗ್ಗೆ ತೋರಿದ್ದ ಪ್ರೀತಿ ಮತ್ತು ಕಾಳಜಿ. ನಿಜವಾದ ನಾಯಕರು ಕೇವಲ ಮಾರ್ಗದರ್ಶನ ಮಾತ್ರ ನೀಡುವುದಿಲ್ಲ. ಅವರು ಕಾಳಜಿಯನ್ನೂ ವಹಿಸುತ್ತಾರೆ. ಅದಕ್ಕೆ ಎಸ್‌ಎಂಕೆ ಅವರ ನಡವಳಿಕೆ ಸಾಕ್ಷಿಯಾಗಿತ್ತು.

ನಾನು ಕಂಡಂತೆ ಅವರು ಯಾರಿಗೂ ಕೆಟ್ಟದನ್ನು ಬಯಸಿದವರಲ್ಲ. ಯಾರನ್ನೂ ದ್ವೇಷಿಸಿದವರಲ್ಲ ಹಾಗೂ ಯಾವುದನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿದವರಲ್ಲ. ಅವರು ಪ್ರತಿಯೊಂದು ಮಾತನ್ನೂ ಬಹಳ ಆಲೋಚನೆ ಮಾಡಿ ತೂಕವಾಗಿ ಮಾತಾಡುತ್ತಿದ್ದರು. ಸದಾ ರಾಜ್ಯದ ಹಿತಚಿಂತನೆಯನ್ನೇ ಮಾಡುತ್ತಿದ್ದರು. ನಾನು ಅವರ ಐಟಿಬಿಟಿ ಕೊಡುಗೆಯನ್ನಷ್ಟೇ ನೆನೆಯುತ್ತಿಲ್ಲ, ಅವರು ಎಲ್ಲ ವರ್ಗಗಳವರ ಬಗ್ಗೆಯೂ ಯೋಚಿಸುತ್ತಿದ್ದರು. ಹಾಗಾಗಿಯೇ ಮಕ್ಕಳಿಗೆ ಬಿಸಿ ಊಟದ ಯೋಜನೆ, ಯಶಸ್ವಿನಿ ಯೋಜನೆ, ಭೂಮಿ ಯೋಜನೆಯ ಮೂಲಕ ರೈತರ ಪಹಣಿ ಜಾರಿಗೆ ತಂದು ಕ್ರಾಂತಿಯನ್ನೇ ಮಾಡಿದರು. ನಮ್ಮದು ಶ್ರೀಗಂಧದ ನಾಡು. ವೀರಪ್ಪನ್ ಕಾಡುಗಳ್ಳನಾಗಲು ಶ್ರೀಗಂಧವೇ ಮೂಲ ಕಾರಣವಾಗಿತ್ತು. ವರನಟ ರಾಜಕುಮಾರ್ ಅವರ ಅಪಹರಣ, ಪೊಲೀಸರು ಹಾಗೂ ಜನಸಾಮಾನ್ಯರ ಸಾವು-ನೋವುಗಳಿಗೆಲ್ಲಾ ನಾಂದಿಯಾಯಿತು. ಇದನ್ನು ಮನಗಂಡ ಕೃಷ್ಣ ಅವರು ಕೇವಲ ಸರ್ಕಾರಕ್ಕೆ ಮಾತ್ರ ಹಕ್ಕಿದ್ದ ಶ್ರೀಗಂಧದ ಮರಗಳನ್ನು ಬೆಳೆಸುವ ಅವಕಾಶವನ್ನು ಮೊಟ್ಟ ಮೊದಲ ಬಾರಿಗೆ ಸಾಮಾನ್ಯ ರೈತರಿಗೂ ಕಲ್ಪಿಸಿಕೊಟ್ಟರು. ರೈತರು ಬೆಳೆದು ಅರ್ಧ ಸರ್ಕಾರಕ್ಕೆ ನೀಡಿ ಉಳಿದದ್ದನ್ನು ತಾವು ಉಪಯೋಗಿಸಿ ಕೊಳ್ಳಬಹುದೆಂಬ ಕಾನೂನನ್ನೇ ರೂಪಿಸಿದರು.

ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರೆ, ಅದು ಯಾವುದೇ ಯೋಜನೆ ಇರಲಿ ಅದಕ್ಕೆ ತಕ್ಷಣ ಅನುಮತಿ ನೀಡುತ್ತಿದ್ದರು. ೨೦೦೦ದಲ್ಲಿ ನಾನು ಸಹಕಾರ ಮಂತ್ರಿಯಾಗಿದ್ದಾಗ ಸ್ತ್ರೀ ಶಕ್ತಿ ಸಂಘಗಳನ್ನು ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರಲ್ಲಿ ಮನವಿ ಮಾಡಿದ್ದೆ. ತಕ್ಷಣವೇ ಅವರು ಅದಕ್ಕೆ ಅನುಮತಿ ನೀಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಮೋಟಮ್ಮ ಅವರಿಗೆ ಅದರ ಮೇಲ್ವಿಚಾರಣೆಯನ್ನು ವಹಿಸಿದರು. ಹೀಗೆಯೇ ಗ್ರಾಮ ಪಂಚಾಯಿತಿಗಳಿಗೆ ಕೊಡುತ್ತಿದ್ದ ೧ ಲಕ್ಷ ರೂ. ಅನುದಾನವನ್ನು ೫ ಲಕ್ಷ ರೂ. ಗೆ ಏರಿಸಲಾಯಿತು. ನಂತರ ಒಂದು ಪಂಚಾಯಿತಿಗೆ ೨೫ ಲಕ್ಷ ರೂ. ಗಳಂತೆ ಕೊಡಲು ಪ್ರಾರಂಭಿಸಲಾಯಿತು.

ಹೀಗೆ ನಾನು ಹೇಳಿದ ಎಲ್ಲ ಸಲಹೆಗಳಿಗೂ ಒಪ್ಪಿಗೆ ಕೊಟ್ಟರು. ಒಂದೇ ಒಂದು ತೀರ್ಮಾನದ ವಿರುದ್ಧ ಹೋಗಿದ್ದು ಎಂದರೆ ೨೦೦೪ರಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗೆ ಒಟ್ಟಿಗೆ ಚುನಾವಣೆಗೆ ಹೋಗಿದ್ದು. ನಾವು ೬ ತಿಂಗಳ ಅವಧಿ ಮುಗಿದ ಮೇಲೆ ಚುನಾವಣೆಗೆ ಹೋಗೋಣ. ಲೋಕಸಭಾ ಚುನಾವಣೆ ಜೊತೆಯಲ್ಲಿ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಸುವುದು ಬೇಡ ಎಂದು ಹೇಳಿದ್ದರೂ ವಿಧಾನಸಭೆಯನ್ನು ವಿಸರ್ಜಿಸಿ ೬ ತಿಂಗಳು ಮುಂಚಿತ ವಾಗಿಯೇ ಚುನಾವಣೆ ಮಾಡಿದರು. ಆ ಚುನಾವಣೆ ಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತರು ಕೂಡ. ಸೋತಮೇಲೆ ಅವರ ಜೊತೆಯಲ್ಲಿ ಯಾರೂ ಇರಲಿಲ್ಲ. ನಾನು, ಜಯಚಂದ್ರ ಹಾಗೂ ಮತ್ತಿಬ್ಬರು ಮಾತ್ರ ಜೊತೆಯಲ್ಲಿದ್ದೆವು.

ಆಗ ಅವರು ರಾಜಕೀಯವನ್ನೇ ಬಿಟ್ಟುಬಿಡಬೇಕೆಂದು ಯೋಚಿಸಿದ್ದರು. ನಾನು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸಿದೆ. ನನ್ನ ಮಾತಿಗೆ ಬೆಲೆ ಕೊಟ್ಟು ಅವರು ಮತ್ತೆ ರಾಜಕೀಯಕ್ಕೆ ಬಂದರು. ೨೦೦೬ರಲ್ಲಿ ಅವರು ರಾಜ್ಯಸಭಾ ಸದಸ್ಯರಾದರು.

ನಾನು ವಿದ್ಯಾರ್ಥಿ ನಾಯಕನಾಗಿ ಬಂಗಾರಪ್ಪನವರೊಂದಿಗೆ ಗುರುತಿಸಿಕೊಂಡಿದ್ದೆ. ಬಂಗಾರಪ್ಪನವರೇ ನನ್ನನ್ನು ಎಸ್. ಎಂ. ಕೃಷ್ಣ ಅವರ ಬಳಿಗೆ ಕಳಿಸಿಕೊಟ್ಟರು. ಆವಾಗಿನಿಂದಲೇ ನಾನು ರಾಜಕೀಯದಲ್ಲಿ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು. ಕೃಷ್ಣ ಅವರಿಗೆ ಬೇಕಾದಷ್ಟು ಹವ್ಯಾಸಗಳಿದ್ದವು. ಆದರೆ ನನ್ನ ಬಳಿ ಯಾವಾಗಲೂ ರಾಜಕಾರಣವನ್ನೇ ಮಾತನಾಡುತ್ತಿದ್ದರು. ಬಿಡುವಿನ ಸಮಯದಲ್ಲೂ ಬರೀ ರಾಜಕೀಯವನ್ನೇ ಚರ್ಚಿಸುತ್ತಿದ್ದೆವು. ರಾಷ್ಟ್ರಮಟ್ಟ, ರಾಜ್ಯಮಟ್ಟದ ರಾಜಕೀಯದ ಕುರಿತು ಮಾರ್ಗದರ್ಶನ ಮಾಡುತ್ತಿದ್ದರು.

೨೦೦೪ರಲ್ಲಿ ಲೋಕಸಭಾ ಹಾಗೂ ರಾಜ್ಯಸಭಾ ಚುನಾವಣೆಗಳನ್ನು ಒಟ್ಟಿಗೆ ಮಾಡುವ ಅದೊಂದು ತೀರ್ಮಾನವನ್ನು ಬಿಟ್ಟರೆ, ಪ್ರತಿಯೊಂದು ರಾಜಕೀಯ ತೀರ್ಮಾನದಲ್ಲಿಯೂ ನನ್ನ ಮಾತಿನಲ್ಲಿ ನಂಬಿಕೆ ಇಟ್ಟು, ಗೌರವ ಕೊಟ್ಟು, ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆಯೇ ಕಂಡು ಪ್ರತಿ ಸಂದರ್ಭದಲ್ಲೂ ಅವರು ನನ್ನ ಮಾತನ್ನು ನಡೆಸಿಕೊಟ್ಟು ನನಗೆ ಆಶೀರ್ವಾದ ಮಾಡಿದ್ದಾರೆ. ಕಡೆಗೆ ಅವರ ಮನೆಗೆ ನನ್ನ ಮಗಳನ್ನು ಕೇಳಿದಾಗ ನಾನು ಇಲ್ಲ ಅನ್ನಲಾಗಲಿಲ್ಲ, ಅಂಥ ಬಾಂಧವ್ಯ ನಮ್ಮಿಬ್ಬರಲ್ಲಿತ್ತು. ಅದೇ ಬಾಂಧವ್ಯ ಇಂದಿಗೂ ಅವರ ಮನೆಯವರೊಂದಿಗೆ ಉಳಿದುಕೊಂಡು ಬಂದಿದೆ. – ಡಿ. ಕೆ. ಶಿವಕುಮಾರ್, ಡಿಸಿಎಂ

 

Tags:
error: Content is protected !!