ಕೆ.ಎಂ.ಅನುಚೇತನ್
ಮೈಸೂರು: ಬಗೆ ಬಗೆಯ ಊಟ, ತಿಂಡಿಗಳ ಆಕರ್ಷಣೆ… ಹಸಿವನ್ನು ಇಮ್ಮಡಿಸುವ ಖಾದ್ಯಗಳ ಘಮಲು… ಸಸ್ಯಾಹಾರ, ಮಾಂಸಾಹಾರ ಸೇರಿದಂತೆ ಸ್ನ್ಯಾಕ್ಸ್, ಚಾಟ್‌ಗಳು, ಬೇಕರಿ ತಿನಿಸುಗಳ, ಭೋಜನಪ್ರಿಯರ ಬಾಯಲ್ಲಿ ನೀರೂರಿಸುವ ರಸದೌತಣ…
ಇವು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಮೊದಲ ದಿನವಾದ ಸೋಮವಾರ ಕಂಡುಬಂದ ದೃಶ್ಯಾವಳಿಗಳು. ಪ್ರತಿವರ್ಷದಂತೆ ಸಾರ್ವ ಜನಿಕರಿಗಾಗಿ ವಿಧವಿಧವಾದ ಆಹಾರವನ್ನು ಒಂದೆಡೆ ಸವಿಯಲು ಆಹಾರ ಮೇಳ ಆಯೋಜಿಸಿದ್ದು, ೧೫೮ ಆಹಾರ ಮಳಿಗೆಗಳಿವೆ. ಮೊದಲ ದಿನವೇ ಅಪಾರ ಜನಸ್ತೋಮ ಆಹಾರ ಮೇಳಕ್ಕೆ ಭೇಟಿ ನೀಡಿ, ತಿಂಡಿ, ಊಟ ಸವಿದು ಸಂಭ್ರಮಿಸಿದರು.
ಹೊರ ರಾಜ್ಯದ ಆಹಾರ: ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿ, ಮೇಲುಕೋಟೆ ಪುಳಿಯೋಗರೆ ಸೇರಿದಂತೆ ವಿವಿಧ ಬಗೆಯ ಆಹಾರಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ. ಇದರ ಜೊತೆಗೆ ಹೊರ ರಾಜ್ಯಗಳ ತಿಂಡಿ, ತಿನಿಸುಗಳು ಮೇಳದಲ್ಲಿ ಜನರನ್ನು ಆಕರ್ಷಿಸುತ್ತಿವೆ. ರಾಜಸ್ಥಾನಿ ಫುಡ್, ಮಧುರೈ ಫುಡ್, ಮಲೈ ರೋಟಿ, ಪಡ್ಡಿಂಗ್ಸ್ ನಂತಹ ಖಾದ್ಯಗಳು ಈ ಬಾರಿ ಆಹಾರ ಮೇಳದಲ್ಲಿ ಇವೆ. ಇದೇ ಮೊದಲ ಬಾರಿಗೆ ೭೦ ಮಂದಿ ಹೊಸಬರಿಗೆ ಮಳಿಗೆ ನೀಡಲಾಗಿದೆ. ಅಲ್ಲದೆ, ಲಸ್ಸಿ, ಮನೆಯಲ್ಲಿ ತಯಾರಿಸಿದ ಸಿಹಿ ಖಾದ್ಯಗಳು, ಐಸ್‌ಕ್ರೀಂ, ಡ್ರೈಫ್ರೂಟ್ಸ್, ಗೋಕಾಕ್‌ನ ಕರದಂಟು, ಬೆಳಗಾವಿ ಕುಂದಾ, ಧಾರವಾಡ ಪೇಡಾ, ಚಿಕ್ಕಮಗಳೂರಿನ ದೇಸಿ ಗಿಣ್ಣು, ಬೆಲ್ಲದ ಗಿಣ್ಣು, ದಾವಣಗೆರೆ ರೊಟ್ಟಿ, ವಿಶೇಷವಾಗಿ ಸಿರಿಧಾನ್ಯದ ಪಿಜ್ಜಾ, ಪಾಸ್ತಾ, ಮಿಲ್ಕ್ ಶೇಕ್, ಸಿಹಿ ತಿನಿಸು, ಉತ್ತರ ಕರ್ನಾಟಕ ಆಹಾರ, ಮುಳಬಾಗಿಲು ದೋಸೆ ಮುಂತಾದ ತಿಂಡಿತಿನಿಸುಗಳು ಇಲ್ಲಿ ಮೇಳೈಸಿವೆ.
ಪುಳಿಯೊಗರೆ, ಪೊಂಗಲ್ ಸವಿದ ಸಿಎಂ!: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಸಭಾ ಕಾರ್ಯಕ್ರಮಕ್ಕೂ ಮೊದಲು ಮೇಲುಕೋಟೆ ಪುಳಿಯೋಗರೆ ಮಳಿಗೆಗೆ ಭೇಟಿ ನೀಡಿ, ಟೇಪ್ ಕತ್ತರಿಸಿ ಉದ್ಘಾಟಿಸಿದರು. ಅಲ್ಲದೆ, ಪುಳಿಯೋಗರೆ, ಮೊಸರನ್ನ ಹಾಗೂ ಖಾರ ಪೊಂಗಲ್ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
” ಆಹಾರ ಮೇಳದಲ್ಲಿ ೧೫೦ಕ್ಕೂ ಹೆಚ್ಚಿನ ಆಹಾರ ಮಳಿಗೆಗಳಿದ್ದು, ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ವಿಧವಿಧವಾದ ಆಹಾರಗಳು ಹೆಚ್ಚು ಜನರನ್ನು ಆಕರ್ಷಿಸಲಿವೆ. ರಾಜ್ಯದಲ್ಲಿ ನಿತ್ಯ ೯೦ ಸಾವಿರ ಕೋಟಿ ರೂ.ಗಳಷ್ಟು ತಯಾರಾದ ಆಹಾರ ವ್ಯರ್ಥವಾಗುತ್ತಿದೆ. ಇದನ್ನು ನಿಯಂತ್ರಿಸಲು ಮುಂದಿನ ದಿನಗಳಲ್ಲಿ ಆಹಾರ ವ್ಯರ್ಥ ಮಾಡದಂತೆ ಕಾರ್ಯಕ್ರಮವೊಂದನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ.”
ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ





