Mysore
16
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಚಳಿ ಇರುವಾಗಲೇ ದಿನಕ್ಕೊಂದು ‘ಅಗ್ನಿ ಕರೆ’

ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ ಕಾವಲಿಯಂತಾಗುತ್ತಿದೆ. ಇದರ ಮಧ್ಯೆ ಅಲ್ಲಲ್ಲಿ ಬೆಂಕಿ ಅವಘಡಗಳು ಘಟಿಸತೊಡಗಿವೆ. ಜಿಲ್ಲೆಯಲ್ಲಿ ಜನವರಿಯಲ್ಲಿ ಹೆಚ್ಚು ಕಡಿಮೆ ದಿನಕ್ಕೊಂದರಂತೆ ಒಟ್ಟು ೨೪ ‘ಅಗ್ನಿ ಕರೆಗಳು’ ಬಂದಿವೆ.

ಬೇಸಿಗೆಯ ದಿನಗಳಲ್ಲಿ ಅಗ್ನಿ ಅನಾಹುತ ತಡೆಗೆ ಜಿಲ್ಲೆಯ ಅಗ್ನಿಶಾಮಕ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರ ನಡುವೆಯೂ ಬೆಂಕಿ ಪ್ರಕರಣಗಳು ಒಂದರ ಹಿಂದೆ ಒಂದರಂತೆ ವರದಿಯಾಗುತ್ತಲೇ ಇವೆ.

ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿ ಬುಧವಾರ (ಜ.೨೮) ಮುಂಜಾನೆ ಸಂಭವಿಸಿದ ಬೆಂಕಿ ಪ್ರಕರಣದಲ್ಲಿ ೮೦ ಟ್ರಾಕ್ಟರ್ ಕಬ್ಬಿನ ಸಿಪ್ಪೆ ಭಸ್ಮವಾಗಿದೆ. ಬೆಲ್ಲ ಮಾಡಲು ಉರುವಲಾಗಿ ಬಳಸಲು ಈ ಸಿಪ್ಪೆಯನ್ನು ೪ ದೊಡ್ಡ ಮೆದೆಗಳಾಗಿ ಸಂಗ್ರಹಿಸಿ ಇಡಲಾಗಿತ್ತು. ಚಾಮರಾಜನಗರ ಅಗ್ನಿಶಾಮಕ ಠಾಣೆಯ ೯ ಮಂದಿ ಎರಡು ಜಲವಾಹನಗಳನ್ನು ಬಳಸಿಕೊಂಡು ಸುಮಾರು ೫ ಗಂಟೆ ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಜೆಸಿಬಿ ಯಂತ್ರದ ಸಹಾಯದಿಂದ ಸಿಪ್ಪೆಯನ್ನು ಪಕ್ಕಕ್ಕೆ ಸರಿಸಿ ಬೆಂಕಿಯ ತೀವ್ರತೆ ಕಡಿಮೆ ಮಾಡಲಾಗಿ ಆಲೆಮನೆ, ಇತರೆ ಬೆಲೆಬಾಳುವ ವಸ್ತುಗಳನ್ನು ಬೆಂಕಿ ಅನಾಹುತದಿಂದ ಪಾರು ಮಾಡಲು ಸಾಧ್ಯವಾಯಿತು.

ಕಬ್ಬಿನ ಸಿಪ್ಪೆ ಬಹುತೇಕ ಸುಟ್ಟು ಹೋಗಿದೆ. ಊರ ಮಗ್ಗುಲಲ್ಲೇ ಇರುವ ಗ್ರಾಮದ ಮಹದೇವಸ್ವಾಮಿ ಎಂಬವರಿಗೆ ಸೇರಿದ ಕಬ್ಬಿನ ಸಿಪ್ಪೆಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಎದ್ದ ಹೊಗೆ, ಬೆಂಕಿ ಗ್ರಾಮಸ್ಥರಲ್ಲಿ ಅಕ್ಷರಶಃ ಭಯ ಉಂಟು ಮಾಡಿತ್ತು. ಈ ಅವಘಡ ಕಿಡಿಗೇಡಿಗಳ ಕೃತ್ಯವೋ? ಆಕಸ್ಮಿಕವೋ ಎಂಬುದು ಗೊತ್ತಾಗಿಲ್ಲ. ಇತ್ತೀಚೆಗೆ ನಗರ ಹೊರವಲಯದ ಉತ್ತುವಳ್ಳಿಯಲ್ಲಿ ಬಣವೆಗೆ ಬೆಂಕಿ ಬಿದ್ದಿತ್ತು. ಹಾಗೆಯೇ, ಕಿಲಗೆರೆ -ಹುಲುಗಿನಮುರಡಿ ಬೆಟ್ಟದ ನಡುವೆ ಬೆಂಕಿ ಬಿದ್ದು ಐದತ್ತು ಎಕರೆಯಷ್ಟು ಬೆಟ್ಟದ ಕುರುಚಲು ಪ್ರದೇಶ ಸಂಕ್ರಾಂತಿ ಆದ ಮಾರನೇ ದಿನ ಸುಟ್ಟು ಹೋಯಿತು. ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆಯವರು ಹಾಗೂ ಅರಣ್ಯ ಇಲಾಖೆಯವರು ಹರಸಾಹಸ ಪಡಬೇಕಾಯಿತು. ಮೇಲಿನ ಈ ಪ್ರಕರಣ ಕೇವಲ ಉದಾಹರಣೆಯಷ್ಟೇ.

ಬೀಡಿ ಸೇದಿ ಬಿಸಾಡುವ ಒಂದು ಸಣ್ಣ ಕಿಡಿ ಬೇಸಿಗೆಯ ಈ ದಿನಗಳಲ್ಲಿ ಏನೆಲ್ಲಾ ಅನಾಹುತವನ್ನು ಮಾಡಬಹುದು? ಏನನ್ನಾದರೂ ನಾಶ ಮಾಡಿಬಿಡಬಹುದು. ಅದೂ ಅಲ್ಲದೇ, ಬಂಡೀಪುರ, ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಿಂದ ಕೂಡಿರುವ ಶೇ.೫೦ರಷ್ಟು ಅರಣ್ಯ ಪ್ರದೇಶವನ್ನು ತನ್ನ ಬಗಲಲ್ಲಿ ಹಾಕಿಕೊಂಡಿರುವ ಹೆಮ್ಮೆ ಹೊಂದಿದೆ. ಅರಣ್ಯದ ಆಸುಪಾಸಿನಲ್ಲಿ ವೈಯಕ್ತಿಕ ಬೆಂಕಿ ಕಾರ್ಯಗಳಿಂದ ಈ ದಿನಗಳಲ್ಲಿ ದೂರ ಇರುವ ಸಂಕಲ್ಪ ಮಾಡಬೇಕಿದೆ.

ಕಿಡಿ ನೂರ್ಮಡಿ ಹಾರುತ್ತದೆ ಎಚ್ಚರ…: 

ಜಮೀನು ಮತ್ತು ಮನೆ ಹತ್ತಿರ ಸಂಗ್ರಹ ಆಗುವ ತ್ಯಾಜ್ಯವನ್ನು ಸುಡುವ ಪರಿಪಾಠ ಈ ದಿನಗಳಲ್ಲಿ ಸೂಕ್ತವಲ್ಲ. ಗಾಳಿ ಬೀಸಿದರೆ ಬೆಂಕಿಯ ಕಿಡಿ ನೂರ್ಮಡಿ ಹಾರಿ ಇನ್ನೆಲ್ಲೋ ಅನಾಹುತ ಮಾಡಿ ಬಿಡುತ್ತದೆ. ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಲೈನ್‌ಗಳು ಇರುವ ಕಡೆ ಕಬ್ಬಿನ ಸೂಲಂಗಿ, ತೆಂಗಿನಗರಿ ಇದ್ದರೆ ಅಥವಾ ಬೇರೆ ಯಾವುದಾದರೂ ಬೆಳೆ ಇದ್ದರೆ ಎಚ್ಚರಿಕೆ ವಹಿಸಬೇಕು. ಲೈನಿಗೆ ಹೊಂದಿಕೊಂಡಂತೆ ಅಥವಾ ತಾಗುವಂತೆ ಬೆಳೆ ಇದ್ದರೆ ಅದನ್ನು ತೆಗೆಸುವುದು ಒಳ್ಳೆಯದು. ಬೀಡಿ, ಸಿಗರೇಟ್ ಸೇದುವ ಚಟ ಇದ್ದವರು ಸುರಕ್ಷಿತ ಸ್ಥಳದಲ್ಲಿ ಕುಳಿತು ಸೇದಬೇಕು. ಬೆಂಕಿ ಕಡ್ಡಿ ಮತ್ತು ಸೇದಿದ ತುಂಡನ್ನು ನೆಲಕ್ಕೆ ತಿಕ್ಕಿ ಕಿಡಿನಾಶ ಮಾಡಬೇಕು ಎನ್ನುತ್ತಾರೆ ಚಾಮರಾಜನಗರ ಅಗ್ನಿ ಶಾಮಕ ಠಾಣೆಯ ಸಹಾಯಕ ಅಗ್ನಿ ಶಾಮಕ ಠಾಣಾಽಕಾರಿ ಹೆಚ್.ಎನ್. ಹನುಮಂತಯ್ಯ ಅವರು.

ಶೇ.೩೮ರಷ್ಟು ಸಿಬ್ಬಂದಿ ಕೊರತೆ: 

ಜಿಲ್ಲೆಯಲ್ಲಿನ ಅಗ್ನಿಶಾಮಕ ಠಾಣೆಗಳಲ್ಲಿ ೧೦೮ ಹುದ್ದೆಗಳಿಗೆ ಮಂಜೂರಾತಿ ದೊರಕಿದ್ದರೂ ಕಾರ್ಯ ನಿರ್ವಹಿಸುತ್ತಿರುವವರು ೬೮ ಮಂದಿ ಮಾತ್ರ. ಒಟ್ಟಾರೆ ಶೇ.೩೮ರಷ್ಟು ಹುದ್ದೆ ಖಾಲಿ ಇರುವುದು ಬೇಸಿಗೆ ಸಂದರ್ಭದಲ್ಲಿನ ಕಾರ್ಯಾಚರಣೆಗೆ ತುಂಬಾ ತೊಡಕಾಗಿದೆ. ಅಗತ್ಯ ಇರುವಷ್ಟು ಬೆಂಕಿನಂದಕ ವಾಹನ ಮೊದಲಾದವು ಇಲ್ಲ ಎಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

” ಜನವರಿಯಲ್ಲೇ ೨೯ರ ಗುರುವಾರದ ತನಕ ೨೪ ಅಗ್ನಿಕರೆಗಳು ಜಿಲ್ಲೆಯಲ್ಲಿ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅರಿವು ಹಾಗೂ ಪ್ರಾತ್ಯಕ್ಷಿಕೆ ಕಾರ್ಯ ಕ್ರಮಗಳನ್ನು ಪ್ರತಿ ವಾರವೂ ನಡೆಸಲಾಗುತ್ತಿದೆ. ಅರಣ್ಯ ಇಲಾಖೆಯ ಎಲ್ಲಾ ವಲಯಗಳಲ್ಲಿಯೂ ಅಲ್ಲಿನ ವಾಚರ್ ಮತ್ತು ಉಪ ವಲಯ ಅರಣ್ಯಾಧಿಕಾರಿಗಳಿಗೆ ಬೆಂಕಿ ತಡೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಹೋಗುವ ಮುಂಚೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತರಬೇತಿ ವೇಳೆ ತಿಳಿಸಲಾಗುವುದು.”

-ಕೆ.ಬಿ.ಹರೀಶ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

Tags:
error: Content is protected !!