Mysore
25
broken clouds

Social Media

ಶನಿವಾರ, 12 ಸೆಪ್ಟೆಂಬರ್ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ
ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ ನೋಡುವ, ಅವರ ಅಭಿಪ್ರಾಯಗಳಿಗೆ ಬೆಲೆ ಕೊಡುವ, ಮಗ ಪ್ರಪಂಚವನ್ನು ಅರಿಯುವಂತೆ ಮಾಡುವ, ತನ್ನ ಮಗನೂ ತನ್ನ ಬದುಕಿನಲ್ಲಿ ಒಂದಿಷ್ಟು ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುವ ಅಪ್ಪಂದಿರು ಅಪರೂಪವೇ.

ಅಂತಹ ಅಪರೂಪದ ಅಪ್ಪಂದಿರ ಸಾಲಿಗೆ ನನ್ನ ಅಪ್ಪನನ್ನೂ ಸೇರಿಸಬಹುದು. ಜೀವನದಲ್ಲಿ ಸಣ್ಣ ಸಣ್ಣ ಶಿಸ್ತುಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿದ್ದು ಅಪ್ಪ. ಅವುಗಳನ್ನು ರಸವತ್ತಾಗಿ ನನಗೆ, ನನ್ನ ತಮ್ಮನಿಗೆ ಹೇಳಿಕೊಡುತ್ತಿದ್ದರು. ಅವರ ಬರವಣಿಗೆ ಬಹಳ ಸುಂದರವಾಗಿತ್ತು, ಅದರ ಪ್ರಭಾವದಿಂದ ನನ್ನ ಅಕ್ಷರಗಳೂ ಸುಂದರವಾಗಿವೆ. ಚಿಕ್ಕ ವಯಸ್ಸಿನಲ್ಲಿ ಅಪ್ಪಂದಿರು ಮಾಡಿಸಿದ, ಹೇಳಿ ಕೊಟ್ಟ ವಿಷಯಗಳು ಬಹುಕಾಲ ನೆನಪಿನಲ್ಲಿ ಉಳಿದಿರುತ್ತವೆ. ಆಗೆಲ್ಲ ಮೆಟಾ ಆಗಲಿ, ಜೆಮಿನಿಯಾಗಲಿ, ಗ್ರಾಮರ್ಲಿ ಆಗಲಿ ಇಲ್ಲದಿದ್ದ ಕಾಲ. ನಮ್ಮ ಶಬ್ದ ಭಂಡಾರವನ್ನು ಹೆಚ್ಚಿಸಿಕೊಂಡು ವ್ಯಾಕರಣ ಬದ್ಧವಾಗಿ ಬರೆಯುವುದನ್ನು ನನ್ನ ಅಪ್ಪ ನನಗೆ ಹೇಳಿಕೊಟ್ಟರು. ಇಂಗ್ಲಿಷ್‌ನಿಂದ ಕನ್ನಡಕ್ಕೂ, ಕನ್ನಡದಿಂದ ಇಂಗ್ಲಿಷಿಗೂ ಚಿಕ್ಕ ಚಿಕ್ಕ ಭಾಷಾಂತರ ಮಾಡಿಸಿ ಭಾಷೆಯನ್ನು ಗಟ್ಟಿಗೊಳಿಸಿದರು. ಆರ್ಥಿಕವಾಗಿ ಸಾಕಷ್ಟು ಮುಗ್ಗಟ್ಟು ಇದ್ದರೂ ಮನೆಯ ತುಂಬ ಪುಸ್ತಕಗಳಿದ್ದವು. ಮನೆಯ ತುಂಬ ಪುಸ್ತಕಗಳಿದ್ದರೆ ಆ ಮನೆಯ ವಾತಾವರಣವೇ ಬೇರೆ.

ಇಂದು ಹಲವು ಮನೆಗಳಿಗೆ ಹೋದಾಗ ಮನೆ ಏನೋ ವಿಶಾಲವಾಗಿದ್ದು, ಸ್ವಚ್ಛವಾಗಿರುತ್ತದೆ. ಆದರೆ, ಒಂದೇ ಒಂದು ಪುಸ್ತಕವೂ ಮನೆಯಲ್ಲಿ ಕಾಣುವುದಿಲ್ಲ. ನಾನು ೫ನೇ ತರಗತಿಯಲ್ಲಿ ಇದ್ದಾಗಲೇ ಬೆಂಗಳೂರಿಗೆ ನನ್ನ ದೊಡ್ಡಪ್ಪನ ಮನೆಗೆ ಓದಲು ಕಳುಹಿಸಿದರು. ಅಪ್ಪ, ಅಮ್ಮನನ್ನು ಬಿಟ್ಟಿರಲಾರದೆ ಸಂಕಟವನ್ನು ಅನುಭವಿಸಿದ ಜೀವ ನನ್ನದು. ಕೆಲಸದ ನಿಮಿತ್ತ ಒಂದೆರಡು ತಿಂಗಳಿಗೊಮ್ಮೆ ಊರಿನಿಂದ ಬರುತ್ತಿದ್ದ ಅಪ್ಪನ ಸಂಗಡ ಅಮ್ಮ ಕೋಡುಬಳೆ ಮತ್ತು ರವೆ ಉಂಡೆ ಮಾಡಿ ಕಳುಹಿಸುತ್ತಿದ್ದರು. ಅವೆರಡೂ ತಿನಿಸುಗಳನ್ನು ಅಮ್ಮ ಬಹಳ ರುಚಿಯಾಗಿ ಮಾಡುತ್ತಿದ್ದರು.

ಬೆಂಗಳೂರಿಗೆ ಬಂದಾಗ ಒಂದು ದಿನವನ್ನು ನನಗೇ ಮೀಸಲಿಟ್ಟು ಬೆಂಗಳೂರಿನ ಅನೇಕ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದರು. ಮಶ್ವರಂ ಗಾಂಽ ಸಾಹಿತ್ಯ ಸಂಘದಲ್ಲಿ ಸಿದ್ಧವನಹಳ್ಳಿ ಕೃಷ್ಣಶರ್ಮ, ರಾಜರತ್ನಂ ಅಂತಹವರ ಭಾಷಣ ಕೇಳಿದ್ದು ಇನ್ನೂ ನೆನಪಿದೆ. ಗಾಂಽ ಭವನಕ್ಕೆ ಹೋದಾಗ ದೊರೆಸ್ವಾಮಿ ಅವರಿಂದ ಹಿಡಿದು ಅನೇಕ ಸರ್ವೋದಯ ಕಾರ್ಯಕರ್ತರನ್ನು ನೋಡಿದ್ದು ಇನ್ನೂ ಹಸಿಯಾಗಿದೆ. ೧೯೭೦ರ ದಶಕದ ಸುಮಾರಿನಲ್ಲಿ ಜೆ. ಪಿ. ಅವರನ್ನು ಭೇಟಿ ಮಾಡಿದ್ದು. ಜೆಪಿ ಅವರು ಅವರ ಪತ್ನಿ ಪ್ರಭಾವತಿಯವರ ಬಳಿಗೆ ನನ್ನ ಕೈ ಹಿಡಿದು ಒಯ್ದು ‘ಏ ಸುರೇಂದ್ರ ಕಾ ಬೇಟಾ ಹೈ’ ಎಂದು ಪರಿಚಯಿಸಿದ ನೆನಪು ಗಾಢವಾಗಿದೆ.

೭೪-೭೫ರ ಸುಮಾರಿನಲ್ಲಿ ಕನ್ನಡದಲ್ಲಿ ಮಕ್ಕಳಿಗಾಗಿ ೭ ಸಂಪುಟಗಳ ವಿಶ್ವಕೋಶ ‘ಜ್ಞಾನಗಂಗೋತ್ರಿ’ ಬಂತು. ಅದನ್ನು ಕೊಳ್ಳಲು ಬ್ಯಾಂಕಿನವರು ಒಂದು ಸಾವಿರ ರೂಪಾಯಿ ಸಾಲ ಕೊಡುತ್ತಿದ್ದರು. ಅಪ್ಪ ನನ್ನ ಅನುಭವಕ್ಕೆ ಬರಲಿ ಎಂದು ಸಾಲ ಪಡೆದು ದಪ್ಪದಾದ ಏಳೂ ಸಂಪುಟಗಳನ್ನು ನನಗೆ ಕೊಡಿಸಿದ್ದರು. ಅವು ಇನ್ನೂ ನಮ್ಮ ಗ್ರಂಥಾಲಯದಲ್ಲಿವೆ. ಅವನ್ನು ನೋಡಿದಾಗಲೆಲ್ಲ ಅವುಗಳ ಬಿಡುಗಡೆಗೆ ಅಪ್ಪನ ಕೈ ಹಿಡಿದು ಬೆಂಗಳೂರಿನ ಟೌನ್ ಹಾಲ್‌ಗೆ ಹೋದದ್ದು ನೆನಪು ಬರುತ್ತದೆ. ಅಪ್ಪನೊಂದಿಗೆ ಬೆಂಗಳೂರಿನ ಮಿನರ್ವ ಚಿತ್ರ ಮಂದಿರದಲ್ಲಿ ಭಕ್ತ ಕುಂಬಾರ ಸಿನೆಮಾ ನೋಡಿ, ನಂತರ ಪಕ್ಕದ ಕಾಮತ್ ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿಂದದ್ದು , ಈಗಲೂ ಅತ್ತ ಹೋದಾಗ ಕೂಡಲೇ ನೆನಪಿಗೆ ಬರುತ್ತದೆ.

ನಮ್ಮ ಮನೆಯಲ್ಲಿ ನನ್ನ ವಯಸ್ಸಿನ ಹಲವಾರು, ಮುಖ್ಯವಾಗಿ ಅಂಗವಿಕಲ ಮಕ್ಕಳು ಇದ್ದರು. ಆ ಮಕ್ಕಳನ್ನು ನನ್ನ ಅಪ್ಪ ಅಮ್ಮ ಎಷ್ಟು ಸಹಜವಾಗಿ ನೋಡಿಕೊಳ್ಳುತ್ತಿದ್ದರೆಂದರೆ ನಮಗೂ ಆ ಮಕ್ಕಳಿಗೂ ಆರೈಕೆಯಲ್ಲಿ ಬಹಳ ವ್ಯತ್ಯಾಸವಿರಲಿಲ್ಲ. ಹೀಗಾಗಿ, ಈಗಲೂ ಕೂಡ ಮನೆಯ ತುಂಬ ಜನವಿದ್ದು, ಜಾತಿ ಧರ್ಮದ, ಹಣ, ಅಂತಸ್ತಿನ ಹಂಗಿಲ್ಲದೆ ಎಲ್ಲರನ್ನೂ ಸಮನಾಗಿ ನೋಡುವ ಸ್ವಭಾವ ನನಗೆ ಬಹಳ ಸಹಜವಾಗಿ ಹೋಗಿದೆ.

ನಮ್ಮ ಬದುಕಿನಲ್ಲೂ ಒಂದಿಷ್ಟು ಆದರ್ಶಗಳನ್ನು ರೂಢಿಸಿಕೊಳ್ಳುವಂತೆ ಮಾಡಿ ಸರಳವಾಗಿ, ಸರಿಯಾಗಿ ಬದುಕುವುದನ್ನು ಕಲಿಸಿದ ನಮ್ಮಪ್ಪ ನನಗೆಂದೂ ಒಂದು ಹಿಡಿಯಷ್ಟೂ ಆಸ್ತಿ, ಹಣ ಮಾಡದಿದ್ದರೂ ಅದು ನನಗೆ ಯಾವತ್ತೂ ಕೊರತೆಯಾಗಿ ಕಾಣಲೇ ಇಲ್ಲ. ಆದರ್ಶದ ಅಪ್ಪ ಜೀವನದಲ್ಲಿ ಬಹು ಮುಖ್ಯ.

Tags:
error: Content is protected !!